ಕವಿತಾಳ: ಮಾರುಕಟ್ಟೆಯಲ್ಲಿ ತರಕಾರಿ ದರ ನಿರಂತರವಾಗಿ ಏರಿಕೆಯಾಗುತ್ತಿದ್ದು, ಜನಸಾಮಾನ್ಯರು ತರಕಾರಿ ಕೊಳ್ಳಲು ಯೋಚಿಸಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಹೌದು! ಈ ಬಾರಿ ವಾಡಿಕೆಗಿಂತ ಹೆಚ್ಚು ಮುಂಗಾರು ಮಳೆಯಾಗಿರುವುದರಿಂದ ಮಾರುಕಟ್ಟೆಗೆ ಬರುವ ತರಕಾರಿ ಪ್ರಮಾಣದಲ್ಲಿ ಕಡಿಮೆಯಾಗಿದೆ. ಹೆಚ್ಚಾದ ಮಳೆಯಿಂದಾಗಿ ತರಕಾರಿ ಕೊಳೆತು, ಇಳುವರಿ ಕಡಿಮೆಯಾಗುತ್ತಿದೆ. ಇದರಿಂದಾಗಿ ಉತ್ಪಾದನೆ ಕುಂಠಿತವಾಗಿದೆ. ವಾರದಿಂದ ವಾರಕ್ಕೆ ತರಕಾರಿ ಬೆಲೆಯಲ್ಲಿ ಏರಿಕೆ ಕಂಡು ಬರುತ್ತಿದೆ.
ತಿಂಗಳ ಹಿಂದೆ 1ಕೆ.ಜಿ. ಟೊಮ್ಯಾಟೋ 20 ರಿಂದ 30 ರೂ.ಗೆ ಮಾರಾಟವಾಗಿತ್ತು. ಈಗ ಪ್ರತಿ ಕೆಜಿ ರೂ.100 ಗೆ ಮಾರಾಟವಾಗುತ್ತಿದೆ. ಅದೇ ರೀತಿ ಬೀನ್ಸ್ ರೂ.200, ಆಲೂಗಡ್ಡೆ ರೂ.80, ಹಿರೇಕಾಯಿ ರೂ100, ಸೌತೆಕಾಯಿ ರೂ.100, ಬೆಂಡೆಕಾಯಿ ರೂ.80, ಬದನೆಕಾಯಿ 80, ಕೊತ್ತಂಬರಿ,ಮೆಂತೆ, ಪುಂಡಿ ಪಲ್ಯ,ಪಾಲಕ್ ರೂ.10 ಗೆ ಒಂದು ಕಟ್ಟು ಮಾರಾಟವಾಗುತ್ತಿದೆ.
ಬೇರೆ ಜಿಲ್ಲೆಗಳಿಂದ ಮಾರುಕಟ್ಟೆಗೆ ಬರುತ್ತಿದ್ದ ತರಕಾರಿ ಕಳೆದೆರಡು ವಾರಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ನಿರೀಕ್ಷಿತ ಪ್ರಮಾಣದಲ್ಲಿ ಬರುತ್ತಿಲ್ಲ. ಸ್ಥಳೀಯ ಜಮೀನಿನಲ್ಲಿ ಬೆಳೆದ ತರಕಾರಿಗಳು ಸದ್ಯಕ್ಕೆ ಬಂದಿಲ್ಲ. ಹೀಗಾಗಿ ಅಲ್ಪ ಪ್ರಮಾಣದಲ್ಲಿ ತರಕಾರಿ ಮಾರುಕಟ್ಟೆಗೆ ಬರುವುದರಿಂದ ಬೆಲೆಯಲ್ಲಿ ಬಾರೀ ವ್ಯತ್ಯಾಸವಾಗಿದೆ.
ತರಕಾರಿ ಬೆಲೆಗಳು ಗಗನಕ್ಕೇರಿದ್ದು, ಬಡವರು ಖರೀದಿಸಲಾಗದಂತಹ ಪರಿಸ್ಥಿತಿ ಇದೆ. ದುಡಿಯೋ ಹಣ ತರಕಾರಿ ಖರೀದಿಗೂ ಸಾಲುತ್ತಿಲ್ಲ. ವಾರದ ಸಂತೆಯಲ್ಲಿ ರೂ.200 ರಿಂದ 300 ರಲ್ಲಿ ತರಕಾರಿ ಖರೀದಿ ಮಾಡುತ್ತಿದ್ದೆವು. ಈಗ ರೂ.600 ಆದರೂ ಸಾಲುತ್ತಿಲ್ಲ ಎಂದು ಸ್ಥಳೀಯರಾದ ಸಂಗಮೇಶ ಸಾಲ್ಮನಿ ಹೇಳಿದರು.
ಸ್ಥಳೀಯ ಜಮೀನುಗಳಲ್ಲಿ ಬೆಳೆದ
ತರಕಾರಿ ಬರುವರೆಗೂ,ತರಕಾರಿ ದರ ಇಳಿಕೆಯಾಗುವ ಲಕ್ಷಣ ಇಲ್ಲ.
ಅನಿವಾರ್ಯವಾಗಿ ನಾವು ಬೇರೆ ಜಿಲ್ಲೆಗಳಿಂದ ತರಕಾರಿಗಳನ್ನು ತರಿಸಿ ಮಾರಾಟ ಮಾಡುತ್ತಿದ್ದೇವೆ. ಬೆಲೆ ಏರಿಕೆಯ ಜೊತೆಗೆ ಉತ್ತಮ ಗುಣಮಟ್ಟದ ತರಕಾರಿಗಳು ಸಿಗುತ್ತಿಲ್ಲ ಎಂದು ತರಕಾರಿ ವ್ಯಾಪಾರಿ ವೀರೇಶ್ ಹೇಳಿದರು.