Ad image

ಜಿಲ್ಲೆಯಲ್ಲಿ ಹೆಚ್ಚಿನ ಮಳೆ ಜನ-ಜಾನುವಾರು ಹಾಗೂ ಆಸ್ತಿಪಾಸ್ತಿ ರಕ್ಷಣೆಗೆ ಮುಂದಾಗಿ: ವೆಂಕಟ್ ರಾಜಾ

Vijayanagara Vani
ಜಿಲ್ಲೆಯಲ್ಲಿ ಹೆಚ್ಚಿನ ಮಳೆ ಜನ-ಜಾನುವಾರು ಹಾಗೂ ಆಸ್ತಿಪಾಸ್ತಿ ರಕ್ಷಣೆಗೆ ಮುಂದಾಗಿ: ವೆಂಕಟ್ ರಾಜಾ
ಮಡಿಕೇರಿ ಜು.19-ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ಜನ-ಜಾನುವಾರು ಹಾಗೂ ಆಸ್ತಿಪಾಸ್ತಿ ರಕ್ಷಣೆಗೆ ಮುಂದಾಗುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಸೂಚಿಸಿದ್ದಾರೆ.
ಪ್ರಾಕೃತಿಕ ವಿಕೋಪ ನಿರ್ವಹಣೆ ಸಂಬಂಧಿಸಿದಂತೆ ವಿಡಿಯೋ ಸಂವಾದ ಮೂಲಕ ಶುಕ್ರವಾರ ಮಾತನಾಡಿದ ಅವರು ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಇನ್ನೂ ಎರಡು ಮೂರು ದಿನ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ. ಆದ್ದರಿಂದ ಈಗಾಗಲೇ ನಿಯೋಜಿಸಿರುವ ನೋಡಲ್ ಅಧಿಕಾರಿಗಳು ತಮ್ಮ ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಅಗತ್ಯ ಮುನ್ನೆಚ್ಚರ ವಹಿಸುವಂತೆ ಜಿಲ್ಲಾಧಿಕಾರಿ ಅವರು ಸೂಚಿಸಿದರು.
ಸಾರ್ವಜನಿಕರ ರಕ್ಷಣೆ ಮಾಡುವುದು ಅತಿಮುಖ್ಯ. ಆ ನಿಟ್ಟಿನಲ್ಲಿ ಅಧಿಕಾರಿಗಳು ಕರ್ತವ್ಯ ನಿಷ್ಠೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಅವರು ತಾಕೀತು ಮಾಡಿದರು.
ಜಿಲ್ಲೆಯ 103 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಟಾಸ್ಕ್ಪೋರ್ಸ್ ಸಮಿತಿಯನ್ನು ರಚಿಸಿ ಪ್ರವಾಹ, ಬರೆಕುಸಿತ ಮತ್ತಿತರ ಪ್ರದೇಶಗಳಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು ಎಂದರು.
ಪ್ರಾಕೃತಿಕ ವಿಕೋಪ ಸಂಬಂಧ ಯಾವುದೇ ರೀತಿಯ ವ್ಯತ್ಯಯ ಉಂಟಾಗದಂತೆ ಎಲ್ಲಾ ಹಂತದ ಅಧಿಕಾರಿಗಳು ತಂಡವಾಗಿ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಅವರು ಸೂಚಿಸಿದರು.
ಪ್ರವಾಹ ಪೀಡಿತ ಪ್ರದೇಶದವರನ್ನು ಸ್ಥಳಾಂತರಿಸಲು ಕಾಳಜಿ ಕೇಂದ್ರ ತೆರೆಯಬೇಕು. ಕಾಳಜಿ ಕೇಂದ್ರದಲ್ಲಿ ವಿದ್ಯುತ್, ಶೌಚಾಲಯ, ಇತರ ಮೂಲ ಸೌಲಭ್ಯಗಳು ಇರುವಂತೆ ಗಮನಹರಿಸಬೇಕು ತಹಶೀಲ್ದಾರರು, ತಾ.ಪಂ.ಇಒಗಳು ಇತರರು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು ಎಂದರು.
ಕಾಳಜಿ ಕೇಂದ್ರದಲ್ಲಿ ಆರೋಗ್ಯ ಸೇವೆ ಕಲ್ಪಿಸಬೇಕು. ಆಂಬ್ಯುಲೆನ್ಸ್ ಸೇವೆ ಸಿದ್ಧವಾಗಿರಬೇಕು. ಸಂತ್ರಸ್ತರಿಗೆ ತಕ್ಷಣವೇ ಸ್ಪಂದಿಸುವ ಕಾರ್ಯ ಆಗಬೇಕು. ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಎಷ್ಟು ಹಾಸಿಗೆಗಳು ಇವೆ ಎಂದು ವರದಿ ನೀಡುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಅವರು ಸೂಚಿಸಿದರು.
ಮಡಿಕೇರಿ-ಮಂಗಳೂರು ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಯಾವುದೇ ರೀತಿ ತೊಂದರೆಯಾಗದಂತೆ ಗಮನಹರಿಸಬೇಕು. ಜಿಲ್ಲಾಡಳಿತದಿಂದ ಕಾಲಕಾಲಕ್ಕೆ ಹೊರಡಿಸುವ ಆದೇಶವನ್ನು ಚಾಚುತಪ್ಪದೆ ಪಾಲಿಸಬೇಕು. ಸುಳ್ಯ ಕಡೆಯಿಂದ ಬರುವ ವಾಹನಗಳಿಗೆ ಮಾಹಿತಿ ಫಲಕ ಅಳವಡಿಸಬೇಕು ಎಂದು ಹೆದ್ದಾರಿ ವಿಭಾಗದ ಎಂಜಿನಿಯರ್ಗೆ ಸೂಚಿಸಿದರು.
ಬರೆಕುಸಿತ, ರಸ್ತೆಗೆ ಮಣ್ಣು ಬೀಳುವುದು, ಮರ ಬೀಳುವುದು, ವಿದ್ಯುತ್ ಕಂಬ ಬೀಳುವುದು ಇಂತವನ್ನು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಕೂಡಲೇ ತೆರವುಗೊಳಿಸಲು ಮುಂದಾಗಬೇಕು ಎಂದರು.
ಶಾಲಾ-ಕಾಲೇಜು ರಜೆ ಇದೆ ಎಂದು ಸಿಬ್ಬಂದಿಗಳು ಗೈರು ಆಗಬಾರದು. ಸಿಬ್ಬಂದಿಗಳು ಶಾಲಾ-ಕಾಲೇಜಿಗೆ ಹಾಜರಾಗಬೇಕು. ಪ್ರಾಕೃತಿಕ ವಿಕೋಪವನ್ನು ಸಮರ್ಥವಾಗಿ ನಿಭಾಯಿಸಬೇಕು ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.
ಡೆಂಗ್ಯೂ ಪ್ರಕರಣ ಸಂಬಂಧಿಸಿದಂತೆ ಮಾಹಿತಿ ಪಡೆದ ಜಿಲ್ಲಾಧಿಕಾರಿ ಅವರು ಪ್ರಾಕೃತಿಕ ವಿಕೋಪ ಜೊತೆ ಡೆಂಗ್ಯೂ ನಿಯಂತ್ರಣ ಬಗ್ಗೆ ಗಮನಹರಿಸಬೇಕು. ಅಗತ್ಯ ಔಷಧಿಗಳನ್ನು ದಾಸ್ತಾನು ಮಾಡಿಕೊಂಡು, ಆರೋಗ್ಯ ಸೇವೆ ಕಲ್ಪಿಸಬೇಕು ಎಂದು ಸೂಚಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಮಾತನಾಡಿ ಹೆದ್ದಾರಿಯಲ್ಲಿ ಸಾರಿಗೆ ಸಂಪರ್ಕಕ್ಕೆ ಯಾವುದೇ ರೀತಿ ತೊಂದರೆ ಆಗದಂತೆ ಗಮನಹರಿಸಲಾಗಿದೆ. ಪ್ರಾಕೃತಿಕ ವಿಕೋಪ ನಿರ್ವಹಣೆ ಸಂಬಂಧ ಅಗತ್ಯ ಮುನ್ನೆಚ್ಚರ ವಹಿಸಲಾಗಿದೆ ಎಂದರು.
ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ ಅವರು ಪ್ರಾಕೃತಿಕ ವಿಕೋಪ ನಿರ್ವಹಣೆಯಲ್ಲಿ ಜಿಲ್ಲಾ ಪಂಚಾಯತಿ, ತಾಲ್ಲೂಕು ಪಂಚಾಯಿತಿ ಹಾಗೂ ಗ್ರಾ.ಪಂ.ವ್ಯಾಪ್ತಿಯಲ್ಲಿ ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗಿದ್ದು, ಜಿಲ್ಲಾಡಳಿತ ಜೊತೆ ಸದಾ ಕೈಜೋಡಿಸಲಿದೆ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್ ಅವರು ಪ್ರವಾಹ ಪೀಡಿತ ಸಂತ್ರಸ್ತರ ಆರೋಗ್ಯ ಕಾಳಜಿ ಬಗ್ಗೆ ಗಮನಹರಿಸಲಾಗಿದೆ. ಹಾಗೆಯೇ ಸರ್ಕಾರದ ನಿರ್ದೇಶನದಂತೆ ಡೆಂಗ್ಯೂ ನಿಯಂತ್ರಣಕ್ಕೆ ಹೆಚ್ಚಿನ ಮುತುವರ್ಜಿ ವಹಿಸಲಾಗಿದೆ ಎಂದು ಹೇಳಿದರು.
ತಾ.ಪಂ.ಇಒಗಳಾದ ಶೇಖರ್ ಮತ್ತು ಅಪ್ಪಣ್ಣ ಅವರು ಮಾತನಾಡಿ ಗ್ರಾ.ಪಂ.ಮಟ್ಟದಲ್ಲಿ ತುರ್ತು ಸಭೆಯನ್ನು ನಡೆಸಿ ಸ್ಥಳೀಯ ಮಟ್ಟದಲ್ಲಿ ಅಗತ್ಯ ಕ್ರಮ ಕೈಗೊಳ್ಳಲು ತಿಳಿಸಲಾಗಿದೆ. ಹಾಗೆಯೇ ತಾಲ್ಲೂಕು ಮಟ್ಟದಲ್ಲಿ ಟಾಸ್ಕ್ಪೋರ್ಸ್ ಸಭೆಯನ್ನು ನಡೆಸಲಾಗಿದೆ ಎಂದು ಮಾಹಿತಿ ನೀಡಿದರು.
ತಹಶೀಲ್ದಾರ್ ಪ್ರವೀಣ್ ಕುಮಾರ್, ಕಿರಣ್ ಗೌರಯ್ಯ, ರಾಮಚಂದ್ರ ಅವರು ಸ್ಥಳೀಯ ಮಟ್ಟದಲ್ಲಿ ಕಾಳಜಿ ಕೇಂದ್ರ ತೆರೆಯುವುದು, ಆಹಾರ ಕಿಟ್ಗಳ ವಿತರಣೆಗೆ ಕ್ರಮ ಮತ್ತಿತರ ಬಗ್ಗೆ ಮಾಹಿತಿ ನೀಡಿದರು.
ಪ್ರಾದೇಶಿಕ ಸಾರಿಗೆ ಅಧಿಕಾರಿ ನಾಗರಾಜಾಚಾರಿ, ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ನೋಡಲ್ ಅಧಿಕಾರಿಗಳು, ಇತರರು ವಿಡಿಯೊ ಸಂವಾದದಲ್ಲಿ ಪಾಲ್ಗೊಂಡಿದ್ದರು.
ವಿಡಿಯೊ ಸಂವಾದ ಬಳಿಕ ಜಿಲ್ಲೆಯಲ್ಲಿ ಒಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಶಾಲಾ ಕಟ್ಟಡಗಳ ಸ್ಥಿತಿಗತಿ ಬಗ್ಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕರಾದ ರಂಗಧಾಮಪ್ಪ ಅವರಿಂದ ಮಾಹಿತಿ ಪಡೆದರು.
ಬಳಿಕ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಅವರ ಜತೆ ನಡೆದ ವಿಡಿಯೊ ಸಂವಾದದಲ್ಲಿ ಪಾಲ್ಗೊಂಡು ಕೊಡಗು ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪ ನಿರ್ವಹಣೆ ಬಗ್ಗೆ ಮಾಹಿತಿ ನೀಡಿದರು. ಪ್ರವಾಹ ಪೀಡಿತ ಸಂತ್ರಸ್ತರ ಸ್ಥಳಾಂತರ, ಕಾಳಜಿ ಕೇಂದ್ರ ಸ್ಥಾಪನೆ ಮತ್ತಿತರ ಬಗ್ಗೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಮಾಹಿತಿ ನೀಡಿದರು.

Share This Article
error: Content is protected !!
";