ಜಿಲ್ಲೆಯಲ್ಲಿನ ದೇವಸ್ಥಾನ, ಚರ್ಚ್ ಮತ್ತು ಮಸೀದಿಗಳಲ್ಲಿ ಬಾಲ್ಯ ವಿವಾಹ ನಡೆಯುವುದು ಕಂಡುಬಂದಲ್ಲಿ ನೇರವಾಗಿ ಮಖ್ಯಸ್ಥರ ಮೇಲೆ ಕ್ರಮಕೈಗೊಳ್ಳಲಾಗುವುದು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ವೆಂಕಟೇಶ್ ತಿಳಿಸಿದರು.
ಅವರು ಇಂದು ಜಿಲ್ಲಾ ಪಂಚಾಯತ್ ನ ಕಾವೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಬೆಂಗಳೂರು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಜಿಲ್ಲಾ ಮತ್ತು ತಾಲೂಕು ಮಟ್ಟದ ಬಾಲ್ಯ ವಿವಾಹ ನಿಷೇಧಾಧಿಕಾರಿಗಳೊಂದಿಗೆ ಆಯೋಜಿಸಲಾಗಿದ್ದ ಬಾಲ್ಯ ವಿವಾಹ ಮುಕ್ತ ಜಿಲ್ಲೆ ಘೋಷಣೆ ಕುರಿತು ಸಮಾಲೋಚನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸರ್ಕಾರಿ ಶಾಲೆಗಳಲ್ಲಿ ಬಾಲ್ಯ ವಿವಾಹ ನಿಷೇಧ ಕುರಿತು ಜಾಗೃತಿ ಜಾಥಾ, ಕಾರ್ಯಕ್ರಮಗಳನ್ನು ಆಯೋಜಿಸಿ ವಿದ್ಯಾರ್ಥಿನಿಯರು ಹಾಗೂ ಅವರ ಪೋಷಕರಿಂದ ಬಾಲ್ಯ ವಿವಾಹ ಪ್ರೊತ್ಸಾಹಿಸುವುದಿಲ್ಲ, ತಡೆಗಟ್ಟುತ್ತೇವೆ ಎಂದು ಪ್ರತಿಜ್ಞೆ ಮಾಡಿಸಿ ಎಂದು ಶಿಕ್ಷಣ ಇಲಾಖೆಗೆ ತಿಳಿಸಿದರು.
ಸರ್ಕಾರಿ ಪ್ರೌಢ ಶಾಲೆಗಳಲ್ಲಿ ವಿದ್ಯಾಬ್ಯಾಸ ಮಾಡುವ ವಿದ್ಯಾರ್ಥಿನಿಯರು ಹೆಚ್ಚಿನ ಸಂಖ್ಯೆಯಲ್ಲಿ ಬಾಲ್ಯ ವಿವಾಹದ ಪ್ರಕರಣದಲ್ಲಿ ಪತ್ತೆಯಾಗಿದ್ದು, ಸರ್ಕಾರಿ ಪ್ರೌಢ ಶಾಲೆಯ ಪ್ರಾಂಶುಪಾಲರು ಹೆಣ್ಣುಮಕ್ಕಳ ಗೈರು ಹಾಜರಾತಿ ಹಾಗೂ ಸುತ್ತ – ಮುತ್ತ ಉಂಟಾಗುವ ಬಾಲ್ಯ ವಿವಾಹ ಹಗರಣವನ್ನು ಗಮನಿಸಬೇಕು. ತಮ್ಮ ಶಾಲೆಯ ವಿದ್ಯಾರ್ಥಿನಿಯರನ್ನು ಬಾಲ್ಯ ವಿವಾಹದಿಂದ ರಕ್ಷಿಸಲು ಪ್ರೌಢ ಶಾಲೆಯ ಪ್ರಾಂಶುಪಾಲರು ಕ್ರಮಕೈಗೊಳ್ಳಿ ಎಂದು ಹೇಳಿದರು.
ವಿದ್ಯಾರ್ಥಿಗಳಿಗೆ ಶಾಲೆ, ಕುಟುಂಬ ಮತ್ತು ಸಮಾಜದಿಂದ ಉಂಟಾಗುವ ಸಮಸ್ಯೆ ಮತ್ತು ಅವರ ಅಗತ್ಯತೆಗಳನ್ನು ತಿಳಿಯಲು ಶಾಲೆ ಮತ್ತು ವಿದ್ಯಾರ್ಥಿನಿಲಯಗಳಲ್ಲಿ ದೂರು ಸಲಹಾ ಪೆಟ್ಟಿಗೆಯನ್ನು ಕಡ್ಡಾಯವಾಗಿ ಇರಿಸಿ ಎಂದರು.
ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗಿ ಬಾಲ್ಯ ವಿವಾಹ ಸಂಭವಿಸುವ ಸಾಧ್ಯತೆಯಿರುವುದರಿಂದ ಗ್ರಾಮೀಣ ಮಹಿಳೆಯರಿಗೆ ಜಾಗೃತಿ ಮೂಡಿಸುವ ಸಲುವಾಗಿ ಸ್ವ – ಸಹಾಯ ಸಂಘಗಳಲ್ಲಿ ಸಮಾವೇಶ ನಡೆಸಿ ಹಾಗೂ ಬಾಲ್ಯ ವಿವಾಹದ ದುಷ್ಪರಿಣಾಮ ಕುರಿತು ಒಂದು ಸಾಕ್ಷ್ಯ ಚಿತ್ರ ತಯಾರಿಸಿ ಹಳ್ಳಿಗಳ್ಳಲ್ಲಿ ಪ್ರದರ್ಶಿಸಿ ಎಂದರು.
ಜಿಲ್ಲಾ ಕಾನೂನು ಸೇವೆ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಧೀಶರಾದ ಆನಂದ್ ಅವರು ಮಾತನಾಡಿ ಪ್ರತಿ ತಿಂಗಳು ಶಾಲೆ ಮತ್ತು ಪದವಿ ಪೂರ್ವ ಕಾಲೇಜಿನಲ್ಲಿ ಪೋಷಕರ ಸಭೆ ನಡೆಸಿ ಬಾಲ್ಯ ವಿವಾಹ ಮತ್ತು ಬಾಲ ಕಾರ್ಮಿಕ ಪದ್ಧತಿಗಳಿಂದ ಉಂಟಾಗುವ ಪರಿಣಾಮ, ಸರ್ಕಾರದಿಂದ ವಿಧಿಸುವ ದಂಡ, ಶಿಕ್ಷೆ ಹಾಗೂ ಪೋಕ್ಸೋ ಕಾಯ್ದೆ ಕುರಿತು ಜಾಗೃತಿ ಮೂಡಿಸಿ ಎಂದರು.
ಕಾರ್ಮಿಕರಿರುವ ಸ್ಥಳ, ಸ್ಲಮ್, ಗಾರ್ಮೆಂಟ್ಸ್ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಬಾಲ್ಯ ವಿವಾಹ ಪ್ರೋತ್ಸಾಹಿಸಿದರೆ ವಿಧಿಸಲಾಗುವ ಶಿಕ್ಷೆ, ಸಹಾಯ ವಾಣಿ ಸಂಖ್ಯೆ, ಪೋಕ್ಸೋ ಕಾಯ್ದೆಗಳನ್ನು ಒಳಕೊಂಡಂತೆ ಜಾಗೃತಿ ಫಲಕಗಳನ್ನು ಇರಿಸಿ ಎಂದರು.
ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ರಾಜಾಮೂರ್ತಿ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ -1 (ಆಡಳಿತ) ಎಂ. ಬಾಬು ಹಾಗೂ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರಶ್ಮಿ ಅವರು ಹಾಜರಿದ್ದರು.