Ad image

ಕಂದಾಯ ಸಚಿವರಿಂದ ಡಿ.ಸಿ.ಗಳೊಂದಿಗೆ ವೀಡಿಯೋ ಕಾನ್ಫರೆನ್ಸ್ ಮುಂದಿನ ಮೂರ್ನಾಲ್ಕು ದಿನ ಕಟ್ಟೆಚ್ಚರ ವಹಿಸಿ, ಪ್ರಕೃತಿ ವಿಕೋಪದಿಂದಾಗುವ ಅನಾಹುತ ತಡೆಯಲು ತಕ್ಷಣವೇ ಕ್ರಮವಹಿಸಲು ಸೂಚನೆ

Vijayanagara Vani
ಕಂದಾಯ ಸಚಿವರಿಂದ ಡಿ.ಸಿ.ಗಳೊಂದಿಗೆ ವೀಡಿಯೋ ಕಾನ್ಫರೆನ್ಸ್ ಮುಂದಿನ ಮೂರ್ನಾಲ್ಕು ದಿನ ಕಟ್ಟೆಚ್ಚರ ವಹಿಸಿ, ಪ್ರಕೃತಿ ವಿಕೋಪದಿಂದಾಗುವ ಅನಾಹುತ ತಡೆಯಲು ತಕ್ಷಣವೇ ಕ್ರಮವಹಿಸಲು ಸೂಚನೆ
ದಾವಣಗೆರೆ; ರಾಜ್ಯದ ಪಶ್ಚಿಮ ಘಟ್ಟ ಪ್ರದೇಶ ಸೇರಿದಂತೆ ಮಲೆನಾಡು, ಕರಾವಳಿಯಲ್ಲಿ ತೀವ್ರತರವಾದ ಮಳೆಯಾಗುತ್ತಿದ್ದು ಇದರಿಂದ ಉಂಟಾದ ರಸ್ತೆ ಸಂಪರ್ಕ ಕಡಿತ, ಶಾಲೆ ಹಾಗೂ ಅಂಗನವಾಡಿ ಸೋರುವಿಕೆ ಮತ್ತು ವಿದ್ಯುತ್ ಸಂಪರ್ಕ ಕಡಿತದ ದುರಸ್ಥಿಯನ್ನು ತಕ್ಷಣವೇ ಕೈಗೊಳ್ಳುವ ಮೂಲಕ ಯಥಾಸ್ಥಿತಿಯಂತೆ ನಿರ್ವಹಣೆ ಮಾಡಲು ಮುಂದಿನ ಮೂರು ದಿನಗಳ ಕಾಲ ಕಟ್ಟೆಚ್ಚರವಹಿಸುವಂತೆ ಕಂದಾಯ ಸಚಿವರಾದ ಕೃಷ್ಣಬೈರೇಗೌಡರವರು ಸೂಚಿಸಿದರು.
ಅವರು ಶುಕ್ರವಾರ ಮಲೆನಾಡು, ಕರಾವಳಿ, ಪಶ್ಚಿಮಘಟ್ಟಗಳಲ್ಲಿ ಸುರಿಯುತ್ತಿರುವ ಮಳೆಯಿಂದ ಬಾದಿತವಾದ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ವೀಡಿಯೋ ಕಾನ್ಫರೆನ್ಸ್ ನಡೆಸಿ ಮಾತನಾಡಿದರು. ದಾವಣಗೆರೆ ಜಿಲ್ಲೆಯಲ್ಲಿ ತುಂಗಭದ್ರಾ ನದಿ ಇದ್ದು ಮಲೆನಾಡಿನಲ್ಲಿ ಹೆಚ್ಚು ಮಳೆಯಾಗುತ್ತಿರುವುದರಿಂದ ತುಂಗಾ ಜಲಾಶಯ ಮತ್ತು ಭದ್ರಾ ಜಲಾಶಯದಿಂದ ನೀರು ಬಿಟ್ಟಾಗ ಹೊನ್ನಾಳಿ, ಹರಿಹರದ ಕೆಲವು ಭಾಗದಲ್ಲಿ ಪ್ರವಾಹ ಉಂಟಾಗಬಹುದು. ಪ್ರಸ್ತುತ ತುಂಗ ನದಿಯಿಂದ ಮಾತ್ರ 80 ಸಾವಿರ ಕ್ಯೂಸೆಕ್ಸ್ ನೀರು ಹರಿಯುತ್ತಿದ್ದು ತುಂಗಭದ್ರಾ ಜಲಾಶಯಕ್ಕೆ 1 ಲಕ್ಷ ಕ್ಯೂಸೆಕ್ಸ್ ನೀರು ಹರಿದು ಬರುತ್ತಿದೆ. ಭದ್ರಾ ಜಲಾಶಯ ಭರ್ತಿಯಾಗದ ಕಾರಣ ಇಲ್ಲಿಂದ ನೀರು ಬಿಟ್ಟಿರುವುದಿಲ್ಲ ಎಂದರು.
ಈ ವೇಳೆ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿಯವರು ಮಾತನಾಡಿ ಜಿಲ್ಲೆಯಲ್ಲಿ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿಲ್ಲ, ಈಗಾಗಲೇ ಎಲ್ಲಾ ಗ್ರಾಮ ಪಂಚಾಯಿತಿವಾರು ಟಾಸ್ಕ್ ಪೋರ್ಸ್ ಸಮಿತಿ ಸಕ್ರಿಯಗೊಳಿಸಿದ್ದು ನದಿಯಲ್ಲಿ ಹರಿಯುತ್ತಿರುವ ನೀರಿನ ಮಾಹಿತಿಯನ್ನು ಸಾರ್ವಜನಿಕರಿಗೆ ತಲುಪಿಸುವ ಕೆಲಸ ಮಾಡಲಾಗಿದೆ. ಲಕ್ಷಕ್ಕಿಂತ ಅಧಿಕ ಕ್ಯೂಸೆಕ್ಸ್ ಬಂದಾಗ ಕೆಲವು ಕಡೆ ಮಾತ್ರ ಸಮಸ್ಯೆಯಾಗಲಿದ್ದು ಅಂತಹ ಕಡೆ 44 ಕುಟುಂಬಗಳನ್ನು ಗುರುತಿಸಲಾಗಿದೆ. ಮತ್ತು ವಿಪತ್ತು ನಿರ್ವಹಣಾ ತಂಡವನ್ನು ಸಹ ಸನ್ನದ್ದವಾಗಿಡಲಾಗಿದೆ ಎಂದು ತಿಳಿಸಿದರು.
ರಸ್ತೆ ದುರಸ್ಥಿ, ಶಾಲೆ, ಅಂಗನವಾಡಿಗಳ ದುರಸ್ಥಿಗಾಗಿ ಪ್ರಕೃತಿ ವಿಕೋಪ ನಿಧಿಯಡಿ ಅನುದಾನವನ್ನು ಜಿಲ್ಲಾಧಿಕಾರಿಗಳಿಗೆ ಬಿಡುಗಡೆ ಮಾಡಲಾಗುತ್ತಿದ್ದು ಎಲ್ಲೆಲ್ಲಿ ರಸ್ತೆ ಗುಂಡಿ ಬಿದ್ದಿವೆ, ಅಂತಹ ಕಡೆ ಒಂದು ಅಡಿ ಆಳ ತೆಗೆದು ಅದಕ್ಕೆ ಜಲ್ಲಿಕಲ್ಲುಗಳು ಮತ್ತು ಸಿಮೆಂಟ್ ವೆಟ್ ಮಿಕ್ಸಿಂಗ್ ಹಾಕಿ ತಾತ್ಕಾಲಿಕವಾಗಿ ಸರಿಪಡಿಸಬೇಕು. ಶಾಲಾ, ಅಂಗನವಾಡಿಗಳಿದ್ದಲ್ಲಿ ಸೋರದಂತೆ ಹೊದಿಕೆ ಹಾಕಲು ಕ್ರಮ ವಹಿಸಲು ಸೂಚಿಸಿ ತುರ್ತು ಕಾಮಗಾರಿಗಳನ್ನು ಕೈಗೊಂಡು ಮುಂದಿನ 15 ದಿನಗಳಲ್ಲಿ ಬಿಲ್ ಪಾವತಿಸಲು ಸೂಚನೆ ನೀಡಿದರು.
ಪ್ರವಾಸ ಕೈಗೊಳ್ಳಲು ಸೂಚನೆ; ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರತ್ಯೇಕವಾಗಿ ಪ್ರವಾಸ ಕೈಗೊಳ್ಳುವ ಮೂಲಕ ರಸ್ತೆ ದುರಸ್ಥಿ, ಶಾಲೆ, ಅಂಗನವಾಡಿ, ವಿದ್ಯುತ್ ಸಂಪರ್ಕ ಕಡಿತ ದುರಸ್ಥಿಯನ್ನು ಸ್ಥಳದಲ್ಲಿದ್ದು ಮಾಡಿಸಬೇಕು, ಪ್ರತಿಯೊಂದು ಕಾಮಗಾರಿಗಳ ವೀಕ್ಷಣೆ ಮಾಡಿದ ನಂತರವೇ ಅದರ ಬಿಲ್ ಪಾವತಿ ಮಾಡಲು ತಿಳಿಸಿದರು.
ವೀಡಿಯೋ ಕಾನ್ಫರೆನ್ಸ್ನಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂತ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್, ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್, ಉಪವಿಭಾಗಾಧಿಕಾರಿ ಅಭಿಷೇಕ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
Share This Article
error: Content is protected !!
";