Ad image

ಕಡಲೆಕಾಳು ಖರೀದಿ ಕೇಂದ್ರಕ್ಕೆ ಜಿಲ್ಲಾಧಿಕಾರಿಗಳ ಭೇಟಿ, ಪರಿಶೀಲನೆ

Vijayanagara Vani
ಕಡಲೆಕಾಳು ಖರೀದಿ ಕೇಂದ್ರಕ್ಕೆ ಜಿಲ್ಲಾಧಿಕಾರಿಗಳ ಭೇಟಿ, ಪರಿಶೀಲನೆ

 

ಧಾರವಾಡ () ಫೆ.08: ಕೇಂದ್ರ ಸರಕಾರದ ಬೆಂಬಲ ಬೆಲೆ ಯೋಜನೆಯಡಿ ಬ್ಯಾಹಟ್ಟಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಆರಂಭಿಸಿರುವ ಕಡಲೆ ಕಾಳು ಉತ್ಪನ್ನ ಖರೀದಿ ಕೇಂದ್ರಕ್ಕೆ ನಿನ್ನೆ (ಫೆ.7) ಸಂಜೆ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಭೇಟಿ ನೀಡಿ, ಖರೀದಿ ಪ್ರಕ್ರಿಯೆ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ರೈತರನ್ನು ಮತ್ತು ಸಿಬ್ಬಂದಿಗಳನ್ನು ಉದ್ದೇಶಿಸಿ ಮಾತನಾಡಿ, ರೈತರಿಗೆ ಸಕಾಲದಲ್ಲಿ ಅನುಕೂಲವಾಗಲು ಸರಕಾರ ಬೆಂಬಲ ಬೆಲೆ ಯೋಜನೆಯಡಿ ಪ್ರತಿ ಕ್ವಿಂಟಲ್‍ಗೆ ರೂ. 5,650 ದರ ನೀಡಿ ಖರೀದಿಸುತ್ತಿದೆ. ಬ್ಯಾಹಟ್ಟಿ ಸೇರಿದಂತೆ ಸುತ್ತಲಿನ ಗ್ರಾಮಗಳ ರೈತರಿಗೆ ಇಲ್ಲಿನ ಖರೀದಿ ಕೇಂದ್ರದ ಬಗ್ಗೆ ಮಾಹಿತಿ ತಲುಪಬೇಕು ಮತ್ತು ರೈತರಿಗೆ ಖರೀದಿ ನೋಂದಣಿಗೆ ಅಗತ್ಯ ದಾಖಲೆಗಳು, ಕೊನೆಯ ದಿನಾಂಕ, ಖರೀದಿ ಕೇಂದ್ರ ತೆರೆಯುವ ಸಮಯ ಕುರಿತು ಡಂಗುರ ಸಾರುವ ಮೂಲಕ ಗ್ರಾಮಗಳಲ್ಲಿ ಮಾಹಿತಿ ನೀಡಬೇಕೆಂದು ಅವರು ತಿಳಿಸಿದರು.

ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಖರೀದಿ ಕೇಂದ್ರಗಳ ಬಗ್ಗೆ ವ್ಯಾಪಕ ಪ್ರಚಾರ ಮಾಡಬೇಕೆಂದು ಜಿಲ್ಲಾಧಿಕಾರಿಗಳು ಸೂಚಿಸಿದರು.

ರೈತರ ಉತ್ಪನ್ನವನ್ನು ಸರಕಾರವು ಖರೀದಿ ಕೇಂದ್ರಗಳ ಮೂಲಕ ನೇರ ಖರೀದಿ ಮಾಡುತ್ತಿದೆ. ರೈತರು ಮದ್ಯವರ್ತಿಗಳಿಗೆ ನೀಡದೆ, ಖರೀದಿ ಕೇಂದ್ರಕ್ಕೆ ನೀಡಬೇಕು. ರೈತರಿಗೆ ಮೋಸವಾಗದಂತೆ ಜಾಗೃತಿ ವಹಿಸಬೇಕೆಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಅಧಿಕಾರಿಗಳಿಗೆ ತಿಳಿಸಿದರು.

ಖರೀದಿ ಕೇಂದ್ರದ ಉಸ್ತುವಾರಿ ಆಗಿರುವ ಸಂಘದ ಕಾರ್ಯದರ್ಶಿ ಸುಭಾಸ ಗಿಡ್ನವರ ಮಾತನಾಡಿ, ಬ್ಯಾಹಟ್ಟಿ ಕಡಲೆ ಕಾಳು ಖರೀದಿ ಕೇಂದ್ರ ವ್ಯಾಪ್ತಿಗೆ ಬ್ಯಾಹಟ್ಟಿ, ಸುಳ್ಳ ಮತ್ತು ಕುಸುಗಲ್ಲ ಗ್ರಾಮಗಳ ಸುಮಾರು 1,400 ರೈತರು ಬರುತ್ತಾರೆ. ಈಗಾಗಲೇ ಈ ಹಳ್ಳಿಗಳಲ್ಲಿ ಕರಪತ್ರ ಹಂಚಿ, ಬ್ಯಾನರ್ ಅಳವಡಿಸಿ ಖರೀದಿ ಕೇಂದ್ರದ ಬಗ್ಗೆ ಜಾಗೃತಿ ಮೂಡಿಸಲಾಗಿದೆ. ಜನವರಿ 30, 2025 ರಿಂದ ರೈತರಿಂದ ಕಡಲೆಕಾಳು ಖರೀದಿಗೆ ನೋಂದಣಿ ಮತ್ತು ಖರೀದಿ ಆರಂಭಿಸಲಾಗಿದೆ. ಎಪ್ರೀಲ್ 12 ನೋಂದಣಿಗೆ ಕೊನೆಯ ದಿನ ಮತ್ತು ಖರೀದಿಗೆ ಎಪ್ರೀಲ್ 22, 2025 ಅಂತಿಮ ದಿನವಾಗಿದೆ. ಆಧಾರ ಕಾರ್ಡ, ಪಹಣಿ ಪತ್ರಿಕೆ, ಬ್ಯಾಂಕ್ ಪಾಸ್‍ಬುಕ್ ಮತ್ತು ಎಫ್‍ಐಡಿ ಸಂಖ್ಯೆಗಳು ರೈತರ ನೋಂದಣಿಗೆ ಅಗತ್ಯ ದಾಖಲೆ ಆಗಿವೆ. ಈಗಾಗಲೇ 3 ಜನ ರೈತರು ತಮ್ಮ ಹೆಸರು ನೋಂದಾಯಿಸಿದ್ದು, ಹಲವಾರು ರೈತರು ಮಾಹಿತಿ ಪಡೆದುಕೊಂಡಿದ್ದಾರೆ ಎಂದು ತಿಳಿಸಿದರು.

ಪ್ರಾ.ಕೃ.ಪ.ಸ. ಸಂಘದ ಅಧ್ಯಕ್ಷ ಬಸನಗೌಡ ಬ.ಪಾಟೀಲ ಮಾತನಾಡಿ, ಖರೀದಿ ಕೇಂದ್ರಕ್ಕೆ ಬಹಳಷ್ಟು ರೈತರು ಬರುತ್ತಿದ್ದಾರೆ. ಹೊರಗಿನ ಮಾರ್ಕೆಟದಲ್ಲಿ ಸ್ವಲ್ಪ ದರ ಹೆಚ್ಚಿಗೆ ಇರುವದರಿಂದ ಅಲ್ಲಿಗೂ ಹೊಗುತ್ತಿದ್ದಾರೆ. ಕಡಲೆ ರಾಶಿ ಈಗ ಆರಂಭವಾಗಿರುವದರಿಂದ ನಮ್ಮ ಭಾಗದ ರೈತರಿಗೆ ಈ ಖರೀದಿ ಕೇಂದ್ರ ಹೆಚ್ಚು ಅನುಕೂಲ ಮತ್ತು ಉಪಯೋಗವಾಗಲಿದೆ ಎಂದು ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.

ಈ ಸಂದರ್ಭದಲ್ಲಿ ಹುಬ್ಬಳ್ಳಿ ತಹಶೀಲ್ದಾರ ಜೆ.ಬಿ.ಮಜ್ಜಗಿ, ಬ್ಯಾಹಟ್ಟಿ ಗ್ರಾಮ ಪಂಚಾಯಿತಿಯ ಪಿಡಿಓ ರೇಣುಕಾ ಚಿತ್ತಾಪುರ, ಕಂದಾಯ ನಿರೀಕ್ಷಕ ಐ.ಎಫ್. ಅಯ್ಯನಗೌಡ್ರ, ಗ್ರಾಮ ಆಡಳಿತ ಅಧಿಕಾರಿ ಎಂ.ಆರ್. ನಿಟ್ಟೂರ, ಗ್ರಾಮದ ರೈತರಾದ ಮನೋಹರ ಮರಿಗೌಡ, ರುದ್ರಗೌಡ ಮಳಲಿ, ಯಲ್ಲಪ್ಪ ನವಲೂರ, ಗ್ರಾಮ ಪಂಚಾಯತ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.

**

Share This Article
error: Content is protected !!
";