ನಮ್ಮೊಳಗಿನ ಬುದ್ಧನನ್ನು ಎಚ್ಚರಿಸಬೇಕಿದೆ

Vijayanagara Vani
ನಮ್ಮೊಳಗಿನ ಬುದ್ಧನನ್ನು ಎಚ್ಚರಿಸಬೇಕಿದೆ

ನಮ್ಮೊಳಗಿನ ಬುದ್ಧನನ್ನು ಎಚ್ಚರಿಸಬೇಕಿದೆ

ಬುದ್ಧ ಅಂದರೆ ಅದೊಂದು ಹೆಸರಲ್ಲ, ಅದೊಂದು
ಚಿಂತನಾ ಮಾರ್ಗ. ಬುದ್ಧ ಅಂದರೆ ಮನುಷ್ಯ
ಸಂಕುಲಕ್ಕೆ ಬೆಳಕು.
ಸರ್ವರಿಗೂ ಬುದ್ಧ ಪೂರ್ಣಿಮಾ ದಿನದ ಹಾರ್ದಿಕ ಶುಭಾಶಯಗಳು.
ನಮ್ಮವೊಳಗಿನ ಬುದ್ದನನ್ನು ಎಚ್ಚರಿಸಬೇಕಿದೆ
ಬುದ್ಧಂ ಶರಣಂ ಗಚ್ಛಾಮಿ
ಧರ್ಮಂ ಶರಣಂ ಗಚ್ಛಾಮಿ
ಸಂಘಂ ಶರಣಂ ಗಚ್ಛಾಮಿ
ಇಂದು ಬೌದ್ಧ ಮತೀಯರಿಗೆ ಬಹಳ ಪವಿತ್ರವಾದ ದಿನ. ವೈಶಾಖ ಶುದ್ಧ ಪೌರ್ಣಿಮೆ ಬುದ್ಧನ ಜನ್ಮ ದಿನ.

“ಬುದ್ಧ” ಎಂದರೆ ‘ಜ್ಞಾನ ಪಡೆದವನು’ ಎಂದರ್ಥ.
ಶುದ್ಧೋಧನ ಮತ್ತು ಮಾಯಾದೇವಿಯರ ಪುತ್ರನಾಗಿ ಹುಟ್ಟಿದ ರಾಜಕುಮಾರನೇ ಸಿದ್ದಾರ್ಥ. 16ನೇ ವಯಸ್ಸಿನಲ್ಲೇ ಯಶೋಧರೆ ಎಂಬ ಕನ್ಯೆಯೊಂದಿಗೆ ವಿವಾಹವಾಗಿ, ತಮಗೆ ಹುಟ್ಟಿದ ಮುದ್ದಿನ ಮಗನಿಗೆ ರಾಹುಲ ಎಂದು ಹೆಸರನಿಟ್ಟು ರಾಜ್ಯ, ಸಂಪತ್ತು, ಅಧಿಕಾರ, ಪತ್ನಿ, ಮಗು ಎನ್ನುತ್ತ ನೆಮ್ಮದಿಯಿಂದ ಕಾಲಕಳೆಯುತ್ತಿದ್ದ. ಒಮ್ಮೆ ನಗರ ಸಂಚಾರ ಮಾಡುತ್ತಿದ್ದ ರಾಜ ಸಿದ್ಧಾರ್ಥನಿಗೆ ಶವ, ರೋಗಿ ಮತ್ತು ವೃದ್ಧನನ್ನು ಕಂಡು, ಬದುಕಿನಲ್ಲಿ ಕಾಯಿಲೆ, ವೃದ್ಧಾಪ್ಯ, ಸಾವು ಎಲ್ಲರಿಗೂ ಅನಿವಾರ್ಯವೇ ಎಂಬ ಪ್ರಶ್ನೆ ಹುಟ್ಟಿ,
ಈ ಕುರಿತು ಸನ್ಯಾಸಿ ಒಬ್ಬರನ್ನು ಪ್ರಶ್ನಿಸಿದಾಗ ನಿನಗೆ ಈ ಬಗ್ಗೆ ತಿಳಿಯಬೇಕೆಂದರೆ ಮೊದಲು ಎಲ್ಲವನ್ನೂ ತೊರೆದು ವಿರಾಗಿಯಾಗು, ಜ್ಞಾನಗಳಿಸಿದ ಮೇಲೆ ನಿನಗೆ ಈ ಪ್ರಶ್ನೆಯ ಉತ್ತರ ದೊರಕುತ್ತದೆ ಎಂದು ಸಾಧು ಉತ್ತರಿಸಿದನು.

ವೈಶಾಖ ಶುದ್ಧ ಪೌರ್ಣಿಮಿಯ ರಾತ್ರಿ ಸಿದ್ಧಾರ್ಥ ಬಿಟ್ಟು ಹೊರಟಿದ್ದು ಅರಮನೆಯನ್ನಲ್ಲ. ಸಹಜೀವಿಗಳೊಂದಿಗೆ ಬೆರೆಯಲಾಗದಂತೆ ಮೇಲು-ಕೀಳು ಎಂಬುದನ್ನು ಸೃಷ್ಟಿಸುವ ಅಧಿಕಾರದ ಗದ್ದುಗೆಯನ್ನು; ಪದವಿ, ಐಶ್ವರ್ಯಗಳಿಂದ ಸುಖ ಸಿಗುತ್ತದೆ ಎಂಬ ಭ್ರಾಂತಿಯನ್ನು ಮನುಷ್ಯನ ಮೂಲಭೂತ ಕೊರತೆಗಳನ್ನು ಅರಸೊತ್ತಿಗೆಯಿಂದ ನೀಗಿಸಲು ಸಾಧ್ಯವಿಲ್ಲ ಎಂಬುದನ್ನು ಸಿದ್ಧಾರ್ಥ ಗಮನಿಸುತ್ತಾನೆ.
ರಾಜಕುಮಾರನೆಂಬ ಭ್ರಮಾಕೋಶ ಕಳಚಿ ಜನರಲ್ಲಿಗೆ ಹೋದಾಗ ಮಾತ್ರ ಅವರ ದುಃಖವನ್ನು ತಾನು ಅರ್ಥಮಾಡಿಕೊಳ್ಳಬಲ್ಲೆ. ಮನುಕುಲಕ್ಕೆ ಸುಖ-ಸಂತೃಪ್ತಿ ದೊರಕುವ ಮಾರ್ಗ ಯಾವುದು ಎಂಬುದಕ್ಕೆ ಉತ್ತರವನ್ನು ಕಂಡುಕೊಳ್ಳಬಲ್ಲೆ ಎಂದು ಬೆಳದಿಂಗಳ ಆ ಇರುಳಿನಲ್ಲಿ ರಾಜ ಪದವಿ ತೊರೆದು ಜನರ ನಡುವೆಯೇ ಹುಡುಕ ಹೊರಟ ಈ ಸಿದ್ಧಾರ್ಥ.

ಮಾನವರ ದುಃಖವನ್ನು ದೂರಮಾಡುವ ಮುನ್ನ ಅದರ ಮೂಲವನ್ನು ಆತ ಅರಿಯ ಬೇಕಿತ್ತು. ಆ ಅರಿವಿನ ಹಾದಿ ಹುಡುಕುತ್ತ ಆತ ಮೊದಲು ದೇಹ ದಂಡಿಸಿಕೊಳ್ಳುತ್ತಾನೆ. ಎಷ್ಟೋ ದಿನ ಅನ್ನ, ನೀರು ತೊರೆದು ಪ್ರಕೃತಿಯ ಸರ್ವ ಕಾಠಿಣ್ಯವನ್ನು ತನ್ನನ್ನು ತೆರೆದುಕೊಂಡು ಸತ್ಯ ಅರಿಯಲು ಯತ್ನಿಸುತ್ತಾನೆ.
ಇಷ್ಟರಲ್ಲಿ ಬುದ್ಧನಿಗೆ ತಾನು ನಡೆಯಬೇಕಾದ ಹಾದಿ ಧ್ಯಾನ ಮಾರ್ಗವೆಂದು ಮನವರಿಕೆಯಾಗುತ್ತದೆ. ಜಗತ್ತಿನ ಆಗುಹೋಗುಗಳಿಗೆ, ಮನುಷ್ಯನ ತುಮುಲಗಳಿಗೆ ಕಾರ್ಯಕಾರಣ ಸಂಬಂಧದ ಎಳೆ ಹಿಡಿದು ಧ್ಯಾನಿಸಿ ಆತ ಕಂಡುಕೊಂಡದ್ದು ಅತ್ಯಂತ ಸರಳವೆಂದು ಕಾಣುವ ಆಸೆಯೇ ದುಃಖಕ್ಕೆ ಮೂಲ-ಎಂಬ ಸತ್ಯವನ್ನು.
ತನ್ನ ಹುಟ್ಟಿದ ದಿನವೂ ಆದ ಒಂದು ಪೌರ್ಣಮಿಯ ದಿನ ಬೋಧಿವೃಕ್ಷದ ಕೆಳಗೆ, ಜಗತ್ತು ಜ್ಞಾನೋದಯ ಎಂತ ಕರೆಯುವ ಅರಿವಿನ ಬೆಳದಿಂಗಳಿನಲ್ಲಿ ಮಿಂದು ಸಿದ್ದಾರ್ಥ ನಿರ್ಮೋಹಿ ಬುದ್ಧನಾದ.

ಬುದ್ಧ ಹೇಳುವಂತೆ ಬದುಕೆಂಬುದು ಶುದ್ಧ ಬೆಳಕು. ಇಲ್ಲಿ ಯಾವುದೂ ಯಾರ ಸ್ವತ್ತೂ ಅಲ್ಲ. ಸುಖವನ್ನು ವಸ್ತುಗಳಲ್ಲಿ ಅರಸಲು ಹೋಗುವುದರಿಂದಲೇ ಮನುಷ್ಯ ದುಃಖಕ್ಕೀಡಾಗುತ್ತಾನೆ ಎಂದು ಗೌತಮಬುದ್ಧ ಹೇಳಿದ್ದರು. ಯಾವುದನ್ನೂ ಸ್ವಂತವೆಂದು ಪರಿಗಣಿಸದವನಿಗೆ ನೋವೂ ಇಲ್ಲ, ನಲಿವೂ ಇಲ್ಲ.

ಅಂತಹ ನಿರ್ಲಿಪ್ತ ಸಮಚಿತ್ತ ಮಾತ್ರ ಬುದ್ಧನ ನಗೆಯಂತಹ ಕಿರು ನಗೆಯನ್ನು ಹೊಳೆಯಬಹುದು. ಆ ನಿರ್ಮಲ ಧ್ಯಾನಸ್ಥ ಮಂದಹಾಸದಲ್ಲಿ ಆತ ಪೂರ್ಣಚಂದ್ರನಷ್ಟು ಶಾಂತ, ದೇದೀಪ್ಯಮಾನ. ತನ್ನ ಮಾತುಗಳು ಮನುಷ್ಯನ ಆಂತರಿಕ ಗುಣವನ್ನು ಕುರಿತು ಹೇಳುವುದರಿಂದ ಅವನ್ನು ಗ್ರಹಿಸುವುದು ಲೌಕಿಕದ ಲಾಲಸೆಗಳಲ್ಲಿ ಮುಳುಗಿರುವವರಿಗೆ ಸುಲಭವಲ್ಲ ಎಂದು ಗೌತಮನಿಗೆ ತಿಳಿದಿತ್ತು.

ಬಯಕೆಗಳ ಗಾಢಾಂಧಕಾರದಲ್ಲಿ ದಾರಿತಪ್ಪಿದವರಿಗೆ ತನ್ನ ಮಾತು ಪಥ್ಯವಾಗುವುದೆ? ಅಂಥವರಿಗೆ ಉಪದೇಶ ನೀಡಲು ಹೋಗಿ ತಾನು ದಣಿಯಲಾರೆನೆ? ಪ್ರಶ್ನೆಗಳು ಎದುರಾಗಿದ್ದವು. ಅದು ತರ್ಕದ ನಿಲುಕಿಗೆ ಮೀರಿದ್ದು. ಒಳಗಣ್ಣಿಗೆ ಮಾತ್ರ ಸ್ವಷ್ಟವಾಗುವಂಥದ್ದು ಅಂತ ತಿಳಿದಿದ್ದರೂ ಸಹಜೀವಿಗಳ ಬಗ್ಗೆ ಅಮಿತ ಕರುಣೆಯ ಬುದ್ಧ ಯಾರ ಆತ್ಮಗಳು ಸತ್ಯವನ್ನು ಕಾಣಲು ತೆರೆದಿರುತ್ತವೋ ಅಂಥವರಿಗೆ ನಾನು ಹೇಳುವುದು ಅರ್ಥವಾದೀತು ಎಂಬ ನಂಬಿಕೆಯಿಂದ ಜನರಲ್ಲಿ ಆತ್ಮಜ್ಞಾನದ ಬಗ್ಗೆ ಒಲವು ಮೂಡಿಸಿದ.

ಗೌತಮ ‘ಬುದ್ಧ’ನಾಗಿದ್ದು ಕೇವಲ ಸರ್ವ ಸಂಗ ಪರಿತ್ಯಾಗದಿಂದ ಅಲ್ಲ. ತಾನು ಕಂಡ ಬದುಕಿನ ಸತ್ಯ ದರ್ಶನದಿಂದ. ಯಾವ ಕಷ್ಟಗಳೂ ಅರಿಯದಂತೆ ಬೆಳೆದ ಗೌತಮನಿಗೆ ಅದೊಂದು ಬಾರಿ ಜಗತ್ತಿನ ಪರಿತಾಪಗಳು, ಸಂಕೋಲೆಗಳು ಕಣ್ಣೆದುರು ಬಂದಿದ್ದರಿಂದಲೇ ಅದರ ಮೂಲ ಅರಿಯಲು ಹೊರಟದ್ದು. ಅಂತಿಮವಾಗಿ ‘ಆಸೆಯೇ ದುಃಖಕ್ಕೆ ಮೂಲ’ ಎಂಬುದನ್ನು ಅರಿತದ್ದು. ಹಾಗಂತ, ಬುದ್ಧನಿಗೆ ಹೊರ ಜಗತ್ತಿನ ಸಮಸ್ಯೆಗಳ ಮೂಲ ತಿಳಿದದ್ದು ಹೊರಗಿನಿಂದಲ್ಲ, ಒಳಗಿನಿಂದಲೇ.

ಬುದ್ಧನ ಜ್ಞಾನೋದಯ ಜಗತ್ತಿನ ಒಳಿತಿನ ಚಿಂತನೆಯಲ್ಲಿ  ಹುಟ್ಟಿದ್ದು. ಆದರೆ, ಪಾಮರರಾದ ನಮಗೆ ಕೇವಲ ನಮ್ಮ ಒಳಿತಿನ ಬಗೆ ತಿಳಿದರೂ ಸಾಕು. ಅದು ಮಹಾಜ್ಞಾನವಾಗುತ್ತದೆ. ನಮ್ಮ ಮನಸು ಅಪಾರ ಶಕ್ತಿಯ ಆಗರ. ಸಂಕಲ್ಪಿಸಿದ್ದನ್ನು ಸಾಧಿಸಬಲ್ಲತಾಕತ್ತನ್ನು ಹೊಂದಿರುವ ಸ್ಫೂರ್ತಿ ಸೆಲೆ. ಅದಕ್ಕೇ ಬುದ್ಧ ಹೇಳಿದ್ದು, ನೋವು ಎಲ್ಲರಿಗೂ ಇರುತ್ತದೆ, ಅದನ್ನು ಅನುಭವವಾಗಿಸಿಕೊಳ್ಳುವುದು, ಯಾತನೆಯಾಗಿಸಿಕೊಳ್ಳುವುದು ಅವರವರಿಗೆ ಬಿಟ್ಟದ್ದು ಅಂತ. ಇನ್ನೊಬ್ಬರಲ್ಲಿತಪ್ಪು ಹುಡುಕುವುದು ತುಂಬ ಸುಲಭ, ನಮ್ಮ ತಪ್ಪು ಸರಿ ಮಾಡಿಕೊಳ್ಳುವುದು ಕಷ್ಟ ಎನ್ನುವ ಬುದ್ಧನ ಮಾತಿನಲ್ಲಿಇನ್ನೊಬ್ಬರಲ್ಲೂನಮ್ಮನ್ನು ಕಾಣುವ ಗುಣವಿದೆ. ‘ನನ್ನನ್ನು ದ್ವೇಷಿಸುವವರನ್ನು ದ್ವೇಷಿಸಲು ನನಗೆ ಸಮಯವಿಲ್ಲ. ಯಾಕೆಂದರೆ, ಹಾಗೆ ಮಾಡುತ್ತಾ ಹೋದರೆ ನನ್ನನ್ನು ಪ್ರೀತಿಸುವವರನ್ನು ಪ್ರೀತಿಸಲು ನನಗೆ ಸಮಯವೇ ಸಿಗುವುದಿಲ್ಲ’ ಎನ್ನುತ್ತಾನೆ ಬುದ್ಧ. ಬುದ್ಧನಾಗಬೇಕೆಂದರೆ ಮನೆ ಬಿಡಬೇಕಿಲ್ಲ, ಅರಳಿ ಮರವೂ ಬೇಕಿಲ್ಲ. ನಮ್ಮನ್ನು ನಾವು, ಇನ್ನೊಬ್ಬರ ನೋವು ಅರ್ಥ ಮಾಡಿಕೊಂಡರಷ್ಟೇ ಸಾಕು.

ಬುದ್ಧನಿಗೆ ಜ್ಞಾನೋದಯವಾದ ದಿನ, ಹುಟ್ಟಿದ ದಿನ ಹಾಗೂ ನಿರ್ವಾಣ ಹೊಂದಿದ ಈ ದಿನವನ್ನೂ ಭಾರತಾದ್ಯಂತ ಬುದ್ಧ ಪೂರ್ಣಿಮಾ ಎಂದು ಆಚರಿಸಲಾಗುತ್ತದೆ. ಇದನ್ನು ಕೆಲವು ದೇಶಗಳ ಬುದ್ಧನ ಅನುಯಾಯಿಗಳು ಈ ದಿನವನ್ನು ವೆಸಕ ಎಂದು ಕರೆಯುತ್ತಾರೆ. ವೆಸೆಕ ಎಂದರೆ ಎಪ್ರಿಲ್‌- ಮೇ ತಿಂಗಳ ಪವಿತ್ರ ದಿನ ಎಂದರ್ಥ.
ಪ್ರಪಂಚದೆಲ್ಲೆಡೆಯೂ ಗೌತಮ ಬುದ್ಧನ ಮಂದಿರಗಳಿವೆ , ಅನೇಕ ದೊಡ್ಡ ದೊಡ್ಡ ಧ್ಯಾನಾಸಕ್ತ ಬುದ್ಧನ ಅನೇಕ ಬಗೆಯ ಮೂರ್ತಿಗಳಿವೆ , ಹಾಂಗ್ ಕಾಂಗ್, ಥೈಲ್ಯಾಂಡ್, ಚೀನಾ, ಬರ್ಮಾ, ಶ್ರೀಲಂಕಾ ಮುಂತಾದ ದೇಶಗಳಲ್ಲಿ ಇವತ್ತಿಗೂ  ಬುದ್ಧನ ಅನುನಾಯಿಗಳೇ ಹೆಚ್ಚಾಗಿದ್ದಾರೆ.
ಪ್ರಸ್ತುತ ಕಾಲಘಟ್ಟದಲ್ಲಿ  ನಾವುಗಳು ಬುದ್ಧನ ತತ್ವ ಗಳನ್ನು ಅಚರಿಸಿ ಎಂದು ಹೇಳುವುದಕ್ಕಿಂತ ಮೊದಲು ನಮ್ಮವೊಳಗಿನ ಬುದ್ಧನನ್ನು ಎಚ್ಚರಿಸಬೇಕಿದೆ,ಹಾಗಾದಾಗ ಮಾತ್ರ ಸಮುದಾಯ, ಸಮಾಜ, ಮತ್ತು  ದೇಶ ಸಮಾನತೆ ಸಮತ್ವಯಡೆಗೆ  ಸಾಗಲು ಸಾಧ್ಯವಾಗುತ್ತದೆ.

ಡಾ.ಗುರುಪ್ರಸಾದ ರಾವ್  ಹವಾಲ್ದಾರ್

WhatsApp Group Join Now
Telegram Group Join Now
Share This Article
error: Content is protected !!