ಕಳೆದ ವರ್ಷ ಮಳೆಯ ಪ್ರಮಾಣ ಕಡಿಮೆ ಇದ್ದಾಗ ನಮ್ಮ ಗ್ರಾಮೀಣ ಜನರು ಬಹುವಾಗಿ ಪರಿತಪಿಸಿದರು. ಮಳೆ ಬಾರದ ಇಂತಹ ಸಂದರ್ಭಗಳಲ್ಲಿ ನಮ್ಮ ಹಳ್ಳಿ ಜನರು ತಮ್ಮ ಮಿತಿಯಲ್ಲೇ ಏನು ಸಾಧ್ಯವೋ ಅವುಗಳನ್ನು ಮಾಡುತ್ತಾರೆ. ಅದರಲ್ಲಿ ಒಂದು ಕಪ್ಪೆಗಳ ಮದುವೆ,ಮತ್ತೊಂದು ಊರ ಮುಂದಿನ ಹಳ್ಳ/ಕೆರೆ ಯಿಂದ ಕಪ್ಪೆಯನ್ನು ತಂದು ಅದನ್ನು ಗಡಿಗೆಯೊಳಗೆ ಇಟ್ಟುಕೊಂಡು ಅದರಲ್ಲಿ ನೀರು ಹಾಕಿ, ಅದನ್ನು ಬೇವಿನ ಸೊಪ್ಪಿನಿಂದ ಮುಚ್ಚಿ ಮಕ್ಕಳೆಲ್ಲಾ ಸೇರಿಮನೆ_ಮನೆಯ ಮುಂದೆ ಕಪ್ಪೆ_ಕಪ್ಪೆ ಕೊರವಣ್ಣ, ಡೋಣಿ_ಡೋಣಿ ಸುರುವಣ್ಣ_ ಎಂದು ಮಕ್ಕಳೆಲ್ಲಾ ಕೂಗುತ್ತಾ ಸಂಭ್ರಮದಿoದ ಊರೆಲ್ಲಾ ತಿರುಗುತ್ತಾರೆ ಮಕ್ಕಳು, ಆಗ ಮನೆಯ ಮಂದಿ ಆ ಮಕ್ಕಳು ಹೊತ್ತ ಗಡಿಗೆಗೆ ನೀರು ಸುರಿಯುತ್ತಾರೆ, ಗಡಿಗೆ ತುಂಬಿ ನೀರು ಹುಡುಗನ ಮೇಲು ಸುರಿದು ಹೋಗಿ ತೋದು ಹೋಗುತ್ತಾನೆ. ಮಳೆ ಬಂದಾಗಿನ ಒಂದಷ್ಟು ವಾತಾವರಣ ಒಂದು ಕ್ಷಣ ಸೃಷ್ಟಿಯಾಗುತ್ತದೆ. ಮಕ್ಕಳ ಕರೆಗೆ ದೇವರು ಓಗೊಡುತ್ತಾನೆ ಎಂಬ ನಂಬಿಕೆಯಿoದ ನಮ್ಮ ಜನರು ಇದ್ದರು.ಇವುಗಳಿಗೆ ವೈಜ್ಞಾನಿಕ ಕಾರಣಗಳಿಲ್ಲದಿದ್ದರೂ ಪರಿಸರದಲ್ಲಿ ಕಪ್ಪೆಯ ಪಾತ್ರವೇನು?, ಕಪ್ಪೆಗಳಿಗೂ ಮಳೆಗೂ ಇರುವ ನಂಟನ್ನು ಅರಿತಿದ್ದರು ಎಂಬುದು ತಿಳಿದು ಬರುತ್ತದೆ.
ಹಳ್ಳಿಗಳಲ್ಲಿ ಬೇಸಿಗೆಯು ಮುಗಿಯುವ ಕಾಲಕ್ಕೆ ಊರ ಹೊರಗಿನ ತಿಪ್ಪೆಯಲ್ಲಿದ್ದ ಸೆಗಣಿಯ ಗೊಬ್ಬರವನ್ನು ರೈತರು ತಮ್ಮ ತಮ್ಮ ಹೊಲಗಳಿಗೆ ಹಾಕುತ್ತಿದ್ದರು, ತಿಪ್ಪೆಗುಂಡಿಗಳು ಖಾಲಿಯಾದಾಗ ನಂತರ ಮಳೆ ಬಂದ ತಕ್ಷಣ ಬಂದಾಗ ನೀರೆಲ್ಲಾ ತುಂಬಿದಾಗ ಊರ ಮುಂದೆ ರಾತ್ರಿ ಕಪ್ಪೆಗಳ ವಟ ಗುಟ್ಟುವಿಕೆ ಊರೆಲ್ಲಾ ಕೇಳುತ್ತಿತ್ತು. ಧ್ವನಿ ಜೋರಾಗಿ ಕೇಳಿ ಬರುತ್ತಿತ್ತು ಕೆಲವರು ಇದನ್ನು ಕಪ್ಪೆಗಳ ಆರ್ಕೆಸ್ಟಾ ಎನ್ನುತ್ತಾರೆ ಯಾಕೆಂದರೆ ಮಳೆಗಾಲದ ಈ ಕಪ್ಪೆಗಳ ಸಂಗೀತಕ್ಕೆ ಬೇರೆ ಬೇರೆ ಕೀಟಗಳ ಧ್ವನಿಯೂ ಸೇರುತ್ತಿತ್ತು. ಅದು ಮಳೆಯ ಸಮೃದ್ದಿಗೆ ಸಾಕ್ಷಿಯಾಗುತ್ತಿತ್ತು. ಇಂದು ಕಪ್ಪೆಗಳ ದ್ವನಿ ಕೇಳುವುದು ಕಡಿಮೆಯಾಗಿದೆ.ಅಂದರೆ ಕಪ್ಪೆಗಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಅರ್ಥ.ಕಪ್ಪೆಗಳು ಭೂಮಿಯ ಮೇಲೆ ಕಡಿಮೆಯಾದರೆ ಜೀವ ವೈವಿದ್ಯತೆಯ ಮೇಲೆ ಪೆಟ್ಟು ಬಿದ್ದು ಪರಿಸರ ಏರು_ಪೇರಾಗಿ ಮಾನವ ಸಂತತಿಗೇ ಧಕ್ಕೆಯಾಗುತ್ತದೆ ಎಂದು ವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದಾರೆ.
ಮಾನವ ಮತ್ತು ಕಪ್ಪೆಯ ನಂಟು: ಮಾನವ ದುರಾಸೆ, ಪ್ರಕೃತಿ ವಿಕೋಪ ಮತ್ತು ವಿವಿಧ ಕಾರಣಗಳಿಂದ ಉಭಯಚರ ಜೀವಿ ಕಪ್ಪೆಗಳು ಸಾಯುತ್ತಿವೆ.ಕಪ್ಪೆಯ ಅದೆಷ್ಟೋ ತಳಿಗಳು ನಾಶವಾಗಿವೆ, ಜೊತೆಗೆ ಕೆಲವು ಅವಸಾನದ ಹಂತಕ್ಕೆ ಸೇರಿವೆ.ಪರೋಕ್ಷವಾಗಿ ಮನುಷ್ಯನ ಆರೋಗ್ಯವನ್ನು ಕಾಪಾಡುವ ಕಪ್ಪೆಗಳು ಮರೆಯಾಗುತ್ತಿರುವುದು ನಮ್ಮ ಪಾಲಿಗೆ ಎಚ್ಚರಿಕೆಯ ಗಂಟೆ ಎಂದು ತಜ್ಞರು ಅಭಿಪ್ರಾಯ ಪಡುತ್ತಿದ್ದಾರೆ.ಪರಿಸರದ ಸಮತೋಲನದ ಮೂಲಕ ನಮ್ಮನ್ನು ಕಾಪಾಡುವ ಕಪ್ಪೆಗಳು ಮಾನವನ ಆರೋಗ್ಯ (ಮಲೇರಿಯಾದಂತ ರೋಗ) ಕಾಪಾಡಲು ಔಷಧಿಯಾಗಿ ಕಪ್ಪೆಗಳು ಸಹಕಾರಿಯಾಗಿವೆ.ಕಪ್ಪೆಗಳು “ಆಲ್ಗೆ” ಎಂದು ಕರೆಯಲ್ಪಡುವ ಬಂಡೆಗಳಿಗೆ ಅಂಟಿಕೊ0ಡಿರುವ ಸೂಕ್ಷö್ಮ ಸಸ್ಯಗಳನ್ನು ತಿನ್ನುತ್ತವೆ, ಅಲ್ಲಿ ತೆರವಾದ ಸ್ಥಳದಲ್ಲಿ ಅನೇಕ ಮೃದ್ವಂಗಿಗಳ ಆವಾಸಸ್ಥಾನವಾಗುತ್ತವೆ, ಈ ವಿದ್ಯಮಾನವು ಮೀನುಗಳ ಅಭಿವೃದ್ದಿಗೂ ನೇರವಾದ ಸಂಬoಧವಿದೆ.ಮಾತ್ರವಲ್ಲ ಉಭಯವಾಸಿಗಳ ಚರ್ಮದಲ್ಲಿರುವ ಔಷಧಿಯ ಗುಣಗಳು ಮನುಷ್ಯನಿಗೆ ಬಹುಉಪಯೋಗಿಯಾದುವಾಗಿವೆ.ತಜ್ಞರ ಪ್ರಕಾರ ಕಪ್ಪೆಗಳು ಅಳಿಯುವುದು ಎಂದರೆ ಮನುಷ್ಯನ ಅಳಿವಿಗೆ ಬರೆಯುತ್ತಿರುವ ಮುನ್ನಡಿ.
ಆಧುನಿಕತೆಯ ದಾಳಿ,ತಂತ್ರಜ್ಞಾನದ ಗೀಳು, ಬರಿದಾಗುತ್ತಿರುವ ಹಸಿರು ಕಪ್ಪೆಗಳ ಸಂತತಿ ಕಡಿಮೆಯಾಗಲು ಕಾರಣವಾಗಿವೆ.ಮನುಷ್ಯನ ಆರೋಗ್ಯವಷ್ಟೇ ಅಲ್ಲ ಪರಿಸರದ ಆರೋಗ್ಯದ ಬಗ್ಗೆ ಸೂಚನೆ ನೀಡುವ ಕಪ್ಪೆಗಳು ನೈಸರ್ಗಿಕ ಕೀಟ ನಿಯಂತ್ರಗಳೂ ಹೌದು.ಕೆಲವು ಕಪ್ಪೆಗಳಲ್ಲಿ ಕೆಲವು ಕಳೆನಾಶಕಗಳಾದರೆ,ಮತ್ತೆ ಕೆಲವು ಕೀಟನಾಶಕಗಳು,ಇನ್ನೂ ಕೆಲವು ಔಷಧಿ ಗುಣಹೊಂದಿವೆ.ಇoತಹ ಕಪ್ಪೆಗಳು ಮಾಯವಾಗುತ್ತಿವೆ ಎಂದರೆ ಪರಿಸರ ಹದಗೆಟ್ಟಿದೆ ಎಂದು ಅರ್ಥ.ರೈತೋಪಯೋಗಿ ಮತ್ತು ಜೀವ ವೈವಿಧ್ಯತೆಯ ಪ್ರತೀಕವಾದ ಕಪ್ಪೆಗಳ ಸಂತತಿ ಅಳಿಯುತ್ತಿದೆ. ಅಳಿದುಳಿದಿರುವ ಕೆಲವು ಪ್ರಬೇಧದ ಒಂದಿಷ್ಟು ಕಪ್ಪೆಗಳನ್ನು ಉಳಿಸಿಕೊಳ್ಳುವ ಜರೂರತ್ತು ಇಂದು ಅಗತ್ಯವಾಗಿದೆ, ಇದಕ್ಕಾಗಿ ದೇಶದಲ್ಲಿ ಜಾಗೃತಿ ಮೂಡಿಸಲು ಪರಿಸರವಾದಿಗಳು ಸಿದ್ಧರಾಗಿದ್ದಾರೆ, ಅದರಲ್ಲೂ ಕರ್ನಾಟಕದಲ್ಲಿ “ಕಪ್ಪೆಗಳ ಹಬ್ಬ” ಆಚರಿಸಲು ತೀರ್ಮಾನಿಸಿದ್ದಾರೆ.
ಕಪ್ಪೆಗಳ ಪ್ರಬೇಧಗಳು: ಹಾರುವ ಕಪ್ಪೆ,ಚಿಮ್ಮುವ ಕಪ್ಪೆ, ನೂರಾರು ಬಣ್ಣದ ಕಪ್ಪೆಗಳು,ವಿಚಿತ್ರವಾಗಿ ವೈವಿಧ್ಯಮಯವಾಗಿ ವಟಗುಟ್ಟುವ ಕಪ್ಪೆಗಳು ನಮ್ಮ ನಡುವೆ ಇದ್ದವು,ಭಾರತದಲ್ಲಿ 340 ಪ್ರಬೇಧದ ಕಪ್ಪೆಗಳಿವೆ, ಇವುಗಳಲ್ಲಿ 78 ಪ್ರಬೇಧಗಳು ಅಪಾಯದ ಅಂಚಿನಲ್ಲಿವೆ, ಇವುಗಳಲ್ಲಿ 17 ಪ್ರಬೇಧಗಳಂತು ತೀವ್ರ ಸಂಕಷ್ಟದಲ್ಲಿವೆ,ಮಾತ್ರವಲ್ಲ ಉಳಿದಂತೆ 32 ಅಳಿವಿನಂಚಿನಲ್ಲಿದ್ದರೆ, 22 ಪ್ರಬೇಧಗಳು ಅಳಿವಿನಂಚಿನ ಪ್ರಬೇಧದಗಳಾಗುವ ಹಾದಿಯಲ್ಲಿವೆ.ಕಪ್ಪೆಗಳು ಅಳಿವಿಂಚಿಗೆ ಸಾಗುತ್ತಿರುವ ಸಂಗತಿ ನಿನ್ನೆ_ಮೊನ್ನೆಯದಲ್ಲ.1980 ರಿಂದಲೇ ಕಪ್ಪೆಗಳ ಸಂತತಿ ಅಳಿವಿಗೆ ವೇಗಪಡೆದಿದೆ –ಎಚಿದು ವಿಜ್ಞಾನಿಗಳು ಹೇಳುತ್ತಾರೆ.1989ರಲ್ಲಿ ನಡೆದ ಮೊದಲ ಉರಗಶಾಸ್ತ (ಸರೀಸೃಪ ಶಾಸ್ತç) ಕಾಂಗ್ರೆಸ್‌ನಲ್ಲಿ ಈ ಬಗ್ಗೆ ದೊಡ್ಡ ಚರ್ಚೆ ಆರಂಭಿಸಿದರು.ಅಮೇರಿಕ, ಆಸ್ಟೆಲಿಯಾ, ಭಾರತ ಹೀಗೆ ವಿಶ್ವದ ಎಲ್ಲೆಡೆಯೂ ಸರೀಸೃಪ ತಜ್ಞರು ಕಪ್ಪೆ ಪ್ರಬೇಧಗಳು ಕಾಣೆಯಾಗುತ್ತಿದ್ದರ ಬಗ್ಗೆ ಎಚ್ಚರಿಸಿದರು. ವಿಶ್ವದ ಸುಮಾರು 5000 ಪ್ರಬೇಧಗಳ ಪಟ್ಟಿಯಲ್ಲಿ ಶೇಖಡ 30ರಷ್ಟು ಅಳಿವಿನಂಚಿಗೆ ಸಾಗುತ್ತಿವೆ ಎಂಬ ಅಚ್ಚರಿ ವಿಷಯವನ್ನು ವಿಜ್ಞಾನಿಗಳು ತಿಳಿಸಿದರಲ್ಲದೆ, ಪ್ರಾಣಿ ಮತ್ತು ಪಕ್ಷಿಗಳಿಗಿಂತ ಹೆಚ್ಚು ವೇಗವಾಗಿ ಉಭಯವಾಸಿಗಳು ಅಳಿಯುತ್ತಿವೆ ಎಂಬ ಆತಂಕಕಾರಿ ವಿಷಯವನ್ನು ಜಗತ್ತಿಗೆ ತಿಳಿಸಿದರು.
ಕಪ್ಪೆಗಳ ಅವಸಾನದ ಅಚ್ಚರಿ ವಿಷಯಗಳು: 2005 ರಲ್ಲಿ ರ‍್ಯಾಬ್ಸ್ ಫ್ರಾಗ್” ಎಂದು ಕರೆಯುವ ಒಂದು ಪ್ರಬೇಧದ ಕಪ್ಪೆಗಳನ್ನು ಪತ್ತೆ ಹಚ್ಚು ಸಮಯಕ್ಕೆಲ್ಲಾ ಬಹುತೇಕ ನಾಶವಾಗಿದ್ದವು.ಸಿಕ್ಕ ಕೆಲವನ್ನು ಸಂರಕ್ಷಿಸಲು ಅಟ್ಲಾಂಟಾಗೆ ತಂದಿಟ್ಟು ವಂಶ ಮೂಂದುವರೆಸಲು ಯತ್ನಿಸಿದರು,ಆದರೆ 2009ಕೊನೆಯ ಹೆಣ್ಣು ಕಪ್ಪೆ ಸತ್ತು ಹೋಯಿತು. ಅದೇ ರೀತಿ 2012 ರಲ್ಲಿ ಒಂದು ಗಂಡು ಕಪ್ಪೆ ಸತ್ತುಹೋಯಿತು ಅದರೊಂದಿಗೆ ಆ ಪ್ರಬೇಧದ ಸಂತತಿ ಮುಗಿದೆಹೋಯ್ತು. ಟಫ್ಫಿ ಎಂಬ ಕಪ್ಪೆಯನ್ನು ಬದುಕಿಸಲು ವಿಜ್ಞಾನಿಗಳು 2005 ರಿಂದ ಶ್ರಮಪಟ್ಟರು, ಆದರೆ 2012ರ ಸೆಪ್ಟಂಬರ್ 26 ರಂದು ಟಫ್ಫಿ ಎಂಬ ಗಂಡು ಕಪ್ಪೆ ಸತ್ತು ಹೋಯಿತು.ಇದರ ಸಾವಿನೊಂದಿಗೆ ಮರಗಪ್ಪೆಗಳ ಒಂದು ಪ್ರಬೇಧವೇ ಕೊನೆಗೊಂಡಿತು.
ಅಳಿವಿಗೆ ಕಾರಣಗಳು: ಪರಿಸರ ಮಾಲಿನ್ಯ, ಜಾಗತಿಕ ತಾಪಮಾನ, ಕೈಗಾರೀಕರಣ, ನಗರೀಕರಣ, ನದಿಗಳಿಗೆ ಸೇರುತ್ತಿರುವ ಚರಂಡಿ ನೀರು, ಕೃಷಿಯಲ್ಲಿ ಬಳೆಸುವ ರಾಸಾಯನಿ ಗೊಬ್ಬರ ಹಾಗು ಕ್ರಿಮಿನಾಶಕಗಳು ಹೀಗೆ ಸಾಲು ಸಾಲು ಅವಘಡಗಳು ಕಪ್ಪೆಗಳ ಸಂತತಿಗೆ ಮಾರಕವಾಗಿವೆ.ಆದರೆ ಮತ್ತೊಂದು ಘೋರವಾದ ವಿಷಯ ಒಂದಿದೆ ಅದೆಂದರೆ ಕಪ್ಪೆಗಳಿಗೆ ಮಾರಕವಾಗಿ ಕಾಡಿದ ಫಂಗಸ್ ಕಾಯಿಲೆ. ಕಪ್ಪೆಗಳಿಗೆ ವಿಶ್ವವ್ಯಾಪಿ ಬ್ಯಾಟ್ರಚೊಚಿಟ್ರಿಯಮ್ ಡೆನಡ್ರೊಬ್ಯಾಟಿಡಿಸ್ ಎಂಬ ಫಂಗಸ್ ಕಾಡುತ್ತಿದೆ, ಕಪ್ಪೆಗಳಂತ ಉಭಯವಾಸಿಗಳ ಚರ್ಮಕ್ಕೆ ಈ ಫಂಗಸ್ ಅಂಟಿಕೊoಡು ಅವುಗಳ ನಾಶಕ್ಕೆ ಕಾರಣವಾಗುತ್ತದೆ,ಉಭಯವಾಸಿಗಳ ಮಟ್ಟಿಗೆ ಚರ್ಮ ಎಂದರೆ ದೇಹವನ್ನು ರಕ್ಷಿಸುವ ಹೊರಭಾಗವಷ್ಟೆ ಅಲ್ಲ.ಅದು ಅವುಗಳಿಗೆ ಉಸಿರಾಟ ಮತ್ತು ವಿಸರ್ಜನಾಂಗವೂ ಹೌದು.ಮನುಷ್ಯನಲ್ಲಿ ಶ್ವಾಸಕೋಶಕ್ಕೆ, ಮೂತ್ರಜನಾಂಗ ಮತ್ತು ಚರ್ಮಕ್ಕೆ ಏಕಕಾಲದಲ್ಲಿ ಕಾಯಿಲೆ ಬಂದoತೆ.
ಕಪ್ಪೆ ಬೇಯಿಸುವ ಉಪಖ್ಯಾನ: ಉಭಯವಾಸಿಯಾಗಿರುವ ಕಪ್ಪೆ ಒಂದು ಶೀತರಕ್ತ ಪ್ರಾಣಿ, ವಾತಾವರಣದ ಉಷ್ಣತೆಗೆ ತಕ್ಕಂತೆ ತನ್ನ ದೇಹದ ಉಷ್ಣತೆಯನ್ನು ಹೊಂದಿಸಿಕೊಳ್ಳುತ್ತದೆ_ನಿಜ ಆದರೆ ಅತಿಯಾದರೆ ಸಾಯುವುದು ನಿಶ್ಚಿತ. ಅದಕ್ಕೆ ಉದಾಹರಣೆ ಹೇಳುತ್ತಾರೆ ಅದೇನೆಂದರೆ ಒಂದು ಪಾತ್ರೆಯಲ್ಲಿ ನೀರು ಹಾಕಿ ಅದರಲ್ಲಿ ಕಪ್ಪೆಯೊಂದನ್ನು ಇಟ್ಟು ಸ್ಟೌವ್ ಮೇಲಿಟ್ಟು ಬಿಸಿ ಮಾಡುತ್ತಾ ಹೋದರೆ ಆರಂಭದಲ್ಲಿ ಬಿಸಿಯಾದ ನೀರಿನ ಬಿಸಿಯನ್ನು ಗ್ರಹಿಸಿ ಹೊಂದಾಣಿಕೆ ಮಾಡಿಕೊಳ್ಳುತ್ತದೆ ಆದರೆ ಉಷ್ಣ ಹೆಚ್ಚಾದಂತೆಲ್ಲ ಕಪ್ಪೆ ನಿಧಾನವಾಗಿ ಸಾಯುತ್ತದೆ-ಇದು ಕೇವಲ ಉಪಮೆ(ಪ್ರಾಯೋಗಿಕವಾಗಿ ಮಾಡಿ ನೋಡುವುದಲ್ಲ) ಮಾತ್ರ.ಆದರೆ ಇಂದಿನ ಜಾಗತಿಕ ತಾಪಮಾನ ಕಪ್ಪೆಗೆ ಬಿಸಿ ನೀರಿನ ಸ್ಥಿತಿ ತಂದಿದೆ.ಸಹಜವಾಗಿ ಕಪ್ಪೆಗಳು ವಾಸಿಸುವ ಆವಾಸ ಸ್ಥಾನದ ನೀರು ಬಿಸಿ ಏರುತ್ತಿವೆ.ಕಪ್ಪೆಗಳು ತಮಗರಿವಿಲ್ಲದಂತೆ ಸಾಯುತ್ತಿವೆ.
ಡಾ|| ಯು.ಶ್ರೀನಿವಾಸ ಮೂರ್ತಿ
ಉಪನ್ಯಾಸಕರು
“ವಿಚಾರಕುಟೀರ”
ರಾಮನಗರ 1 ನೇ ಕ್ರಾಸ್, ಹವಂಬಾವಿ
ಬಳ್ಳಾರಿ_583101ಫೋ:9731063950