Ad image

” ವಿಸ್ಕಿ ಲೈಬ್ರರಿ “.

Vijayanagara Vani

ನನ್ನಜ್ಜಿ ನಡೆದಂತೆ ವಾಹನದ ಓಟವಿತ್ತು
ಹಿಂದಿನ ಆಸನ ಎಡಗಡೆ ಕಿಟಕಿ ನನ್ನದಾಗಿತ್ತು
ವಾಹನದ ಶರವೇಗಕ್ಕೆ ನನ್ನ ಬೈಗುಳವು ಇತ್ತು
ಅನಿವಾರ್ಯ ಅದೊಂದೇ ಗತಿ
ಒಪ್ಪಿದರು ಒಪ್ಪದಿದ್ದರೂ ಅನಿವಾರ್ಯ ಅಸ್ತ್ರ
ಕೆಲವೊಮ್ಮೆ ಹಾಗೆ ಬೇಡದ್ದು ಮೈಗಂಟುವುದು
ಜೋತು ಬಿದ್ದ ಬೇತಾಳದಂತೆ ನನ್ನ ಗತಿ

ಇರಲಿ ವಿಷಯ ಅದಲ್ಲ
ಸುಮ್ಮನಿರದ ಕಣ್ಣುಗಳು ಅಲ್ಲಲ್ಲಿ ಇಣುಕಿತು
ಕಂಡಿತೊಂದು ನಾಮಫಲಕ ಹುಬ್ಬೆರಿಸುವಂತೆ
ಬಿಳಿಗೋಡೆಗೆ ಜೋತು ಬಿದ್ದು ನೇತಾಡುತಿತ್ತು
ವಿಸ್ಕಿ ಲೈಬ್ರರಿ ಇಲ್ಲು೦ಟು ಎಂದು
ಅಬ್ಬಾ.. ಎಂತಹ ವಿಜ್ಞಾನಿಯಿರಬೇಕು
ಸೋಸಿ ಶೋಧಿಸಿ ನಾಮವಿಟ್ಟವರು
ಬಲು ಚತುರ ಮೋಡಿಗಾರ ಇರಬಹುದು

ಒಮ್ಮೆ ದರ್ಶಿಸುವ ಆತುರ
ಆಗಾಗ್ಗೆ ಅದೇ ಗುಂಗು ಗುಯ್ಯಿಗುಡುತಿತ್ತು
ಕೊನೆಗೂ ಪರಮಾಪ್ತನ ದರ್ಶನ
ಮುಖಗವಸ ತೊಟ್ಟು ಬಲಗಾಲ ಇರಿಸಿದೆ
ಏನೋ ತಳಮಳ ಮೊದಲ ಭೇಟಿ ಭಯ
ಉಸಿರು ನೂರರ ಸರಾಸರಿಯಲ್ಲಿ
ಎದೆಬಡಿತ ದುಪ್ಪಟ್ಟು ಕೈ ಕಾಲಿಗೆ ಹಿಮಪಾತ
ಅಲ್ಲಲ್ಲಿ ಗಾಜಿನ ಕಪಾಟು ಬಳುಕುವ ಸೀಸೆಗಳು
ಎಲ್ಲವು ಭಿನ್ನ ವಿಭಿನ್ನ

ತರವೇರಿ ಬಣ್ಣಗಳು ಪುಸ್ತಕದ ಮುಖದಂತೆ
ಅಂದ ಚಂದದ ಬಟ್ಟೆ ತೊಟ್ಟ ಬಾಟಲಿಗಳು
ಆಕರ್ಷಕ ಬರಹಗಳು ರೂಪದರ್ಶಿಯ ಚಿತ್ರಗಳು
ಸಣ್ಣಗೆ ಮಿನುಗುವ ದೀಪ ತಾರೆಗಳು
ಅಲ್ಲಲ್ಲಿ ಸಂಗೀತದ ನಾದ ವಿನೋದ
ಮಾತು ಮಂಥನಕ್ಕೆ ಮೇಜಿನ ತಾಳ
ನೆಕ್ಕಲು ಸೊಂಡಿಗೆ ಉಪ್ಪಿನಕಾಯಿ
ಇಷ್ಟೆ… ವಿಸ್ಕಿ ಲೈಬ್ರರಿ ಗಮತ್ತು…

ಅನಾವರಣಗೊಂಡಿದ್ದು ಮೇಲ್ನೋಟವಷ್ಟೇ
ನಾಲಿಗೆ ಪುಟಗಳು ಕತೆಗಳ ಹೇಳಲಿವೆ
ಕಥೆ ಕವನ ಕಾದಂಬರಿ ಎಲ್ಲವೂ ಲಭ್ಯ
ಗ್ರಂಥದಲ್ಲಿ ಅಲ್ಲ ಬಾಯ್ದೆರೆ ಮಾತ್ರ
ಹಾಸ್ಯದ ಚುಟುಕು ವಿರಹದ ಗೀತೆ
ಬಣ್ಣವಿಲ್ಲದ ನಾಟಕ ಹೃದಯದ ಹಾಡು
ಬಡಿದಬ್ಬಿಸುವ ನೋವಿನ ಕೂಗು
ದಾಸರ ಭಾವ ವಚನಗಳ ಪರಿಷತ್ತು
ದ್ವಿಪದಿ ಚೌಪದಿ ಗಜಲ್ ಟಂಕಗಳ ಮೇಳ
ಕೂಡಿ ಸವಿದು ನಲಿದು ತೇಲಿವೆ

ಬುಡ್ಡಿ ದೀಪದ ಕೆಳಗೆ ರಸಿಕರ ಬಳಗ
ಸಂಗೀತ ಸುಧೆ ಮೇಜು ಕುರ್ಚಿಗಳ ತಾಳ
ಮಿಂಚುವ ಬೆಳಕಲ್ಲಿ ಸ್ವರ್ಗ ಸಗ್ಗದ ಕುಣಿತ
ಹರೆಯದ ಕಥೆಗಳು ಪ್ರೇಮದ ಕವನಗಳು
ಮೆಲ್ಲಗೆ ಹೊರಬಂದ ಕಾವ್ಯದ ಸಾಲುಗಳು
ಸೀಸೆಗಚ್ಚಿದ ಲಾವಣಿ ಬಂಡಾಯ ಬಾವುಟ
ಧೂಳು ಬಿದ್ದ ಮನ ಸಂತೈಸುವ ತಾಣ
ಗೊತ್ತು ಗೊತ್ತಿಲ್ಲದ ಆಸರೆನ್ನುವ ಭ್ರಮೆ
ಅರಿಯೋಣವೇ ಅದಾವುದೆಂದು
ಎದೆಗೆ ಬಿದ್ದು ಮನವ ಗೆದ್ದ ವಿಸ್ಕಿ ಲೈಬ್ರರಿ

ಚೌಡ್ಲಾಪುರ ಸೂರಿ ✍️

Share This Article
error: Content is protected !!
";