ಧಾರವಾಡ ಜು.18: ಕಲಘಟಗಿಯ ಭೋವಿ ಓಣಿಯ ನಿವಾಸಿ ಸೂರಜ್ ಬಾಳಿಕಾಯಿ ಎನ್ನುವವರು ಎದುರುದಾರರ ಹುಬ್ಬಳ್ಳಿಯ ಡೀಲರ್ ಆದ ಪೈ ಇಂಟರ್ ನ್ಯಾಶ್ನಲ್ ಇಲೆಕ್ಟ್ರಾನಿಕ್ಸ ಇವರಲ್ಲಿ ಫ್ರಿಜ್ನ್ನು 2018 ರಲ್ಲಿ ಖರೀದಿಸಿದ್ದರು. ಅದು 10 ವರ್ಷದ ವಾರಂಟಿ ಮತ್ತು ಕಾಂಪ್ರೆಸರ್ ಮೇಲೆ 9 ವರ್ಷದ ವಾರಂಟಿಯನ್ನು ಹೊಂದಿತ್ತು. 2024 ರಲ್ಲಿ ದೂರುದಾರರ ಫ್ರಿಜ್ ತಂಪಾಗದೇ ಸರಿಯಾಗಿ ಕೆಲಸ ಮಾಡುತ್ತಿಲ್ಲದ ಕಾರಣ ದೂರುದಾರರು ಹಲವು ಬಾರಿ ಎದುರುದಾರರಿಗೆ ವಿನಂತಿಸಿದರೂ ಎದುರುದಾರರು ಫ್ರಿಜ್ ದುರಸ್ತಿಯ ಬಗ್ಗೆ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ. ಎದುರುದಾರರ ಅಂತಹ ನಡಾವಳಿಕೆ ಗ್ರಾಹಕರ ರಕ್ಷಣ ಕಾಯಿದೆಯಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಹೇಳಿ ಅವರ ವಿರುದ್ದ ಕ್ರಮ ಕೈಗೊಳ್ಳಲು ಕೋರಿ ದೂರುದಾರರು ದಿ: 25/11/2024 ರಂದು ಆಯೋಗಕ್ಕೆ ದೂರು ಸಲ್ಲಿಸಿದ್ದರು.
ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ. ಭೂತೆ ಹಾಗೂ ವಿಶಾಲಾಕ್ಷಿ. ಅ. ಬೋಳಶೆಟ್ಟಿ ಸದಸ್ಯರು, ದೂರುದಾರರು ಎದುರುದಾರರಿಂದ ರೂ.25,400 ಹಣಕೊಟ್ಟು ಫ್ರಿಜ್ ಖರೀದಿಸಿದ್ದಾರೆ. ಅದರ ಮೇಲೆ 9 ಹಾಗೂ 10 ವರ್ಷಗಳ ವಾರಂಟಿ ಇದೆ. ವಾರಂಟಿಯ ಅವದಿಯಲ್ಲಿಯೇ ಆ ಫ್ರಿಜ್ನಲ್ಲಿ ದೋಷ ಕಂಡುಬಂದಿದೆ. ಅದರ ಕಾಂಪ್ರೆಶರ್ ಹಾಳಾಗಿದೆ ಅಂತಾ ಗೊತ್ತಾಗಿದೆ. ಆ ಕಾಂಪ್ರೆಶರ್ ಮೇಲೆ 9 ವರ್ಷದ ವಾರಂಟಿ ಇದ್ದರೂ ಎದುರುದಾರರು ಆ ಬಿಡಿ ಭಾಗ ತಮ್ಮ ಕಂಪನಿಯಲ್ಲಿ ಲಭ್ಯವಿಲ್ಲ ಕಾರಣ ಫ್ರಿಜನ್ನು ದುರಸ್ತಿ ಮಾಡಲಾಗುವುದಿಲ್ಲ ಅನ್ನುತ್ತಿದ್ದಾರೆ. ವಾರಂಟಿ ಅವದಿ ಮುಗಿಯುವರಗೆ ಆ ಫ್ರಿಜ್ನಎಲ್ಲ ಬಿಡಿ ಭಾಗಗಳನ್ನು ಕಾಯ್ದಿಟ್ಟುಕೊಳ್ಳುವ ಹೊಣೆಗಾರಿಕೆ ಮತ್ತು ಜವಬ್ದಾರಿ ಆ ಫ್ರಿಜ್ ತಯಾರಿಸಿದ ಎದುರುದಾರರ ಮೇಲೆ ಇದೆ. ಆದರೆ ಎದುರುದಾರರು ತಮ್ಮ ಹೊಣೆಗಾರಿ ನಿಭಾಯಿಸುವಲ್ಲಿ ವಿಫಲರಾಗಿದ್ದಾರೆ. ಅಂತಹ ಎದುರುದಾರರ ನಡಾವಳಿಕೆ ಗ್ರಾಹಕ ರಕ್ಷಣಾ ಕಾಯಿದೆಯಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಆಯೋಗ ಅಭಿನಿಯ ಪಟ್ಟು ತೀರ್ಪು ನೀಡಿದೆ. ತೀರ್ಪು ನಿಡಿದ ಒಂದು ತಿಂಗಳೊಳಗಾಗಿ ಫ್ರಿಜ್ನ ಸದ್ಯದ ಮೌಲ್ಯ ರೂ.12,700 ಮತ್ತು ಅದರ ಮೇಲೆ ಶೇ.8 ಬಡ್ಡಿ ಹಾಕಿ ದೂರುದಾರರಿಗೆ ಸಂದಾಯ ಮಾಡುವಂತೆ ಎದುರುದಾರ ವರ್ಲ್ ಪೂಲ್ ಇಂಡಿಯಾ ಕಂಪನಿಗೆ ಆಯೋಗ ನಿರ್ದೇಶಿಸಿದೆ. ದೂರುದಾರರಿಗೆ ಆಗಿರುವ ಅನಾನುಕೂಲ ಹಾಗೂ ಮಾನಸಿಕ ತೊಂದರೆಗಾಗಿ ರೂ.25,000 ಪರಿಹಾರ ಮತ್ತು ರೂ.5,000 ಪ್ರಕರಣದ ಖರ್ಚು ವೆಚ್ಚಕೊಡುವಂತೆ ಆಯೋಗ ಎದುರುದಾರರಿಗೆ ಸೂಚಿಸಿದೆ.