ಚಿತ್ರದುರ್ಗ ಜೂನ್.24:
ಲಿಂಗತ್ವ ಅಲ್ಪಸಂಖ್ಯಾತರು ಭಿಕ್ಷಾಟನೆ ತೊರೆದು ಸ್ವಾಭಿಮಾನ ಹಾಗೂ ಸ್ವಾವಲಂಬಿ ಜೀವನ ನಡೆಸುವ ನಿಟ್ಟಿನಲ್ಲಿ ವಿವಿಧ ಉದ್ಯಮಗಳಲ್ಲಿ ತೊಡಗಬೇಕು. ಇದರಿಂದ ಉದ್ಯೋಗವು ಸೃಷ್ಟಿಯಾಗಲಿದೆ ಎಂದು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಜಿ.ಪದ್ಮಾವತಿ ಹೇಳಿದರು.
ಚಿತ್ರದುರ್ಗ ತಾಲ್ಲೂಕಿನ ಕೊಳಹಾಳ್ ಭರಮಸಾಗರದ ಮಡಿಲು ಸ್ವಾವಲಂಬಿ ಟ್ರಸ್ಟ್ನ ಮಂಗಳಮುಖಿಯರು ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಪ್ರಾಯೋಜಕತ್ವದಲ್ಲಿ ರೂ.21.23 ಲಕ್ಷ ವೆಚ್ಚದಲ್ಲಿ ಸ್ಥಾಪಿಸಿರುವ ಕುರಿ ಸಾಕಾಣಿಕೆ ಘಟಕವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳಾ ಅಭಿವೃದ್ಧಿ ನಿಗಮವು ಸಮಾಜದ ಕಟ್ಟ ಕಡೆಯ ಮಹಿಳೆ ಹಾಗೂ ದಮನಿತ ಮಹಿಳೆಯರ ಪರವಾಗಿದೆ. ಸಮಾಜದ ದುರ್ಬಲ ಹಾಗೂ ಶೋಷಿತ ಮತ್ತು ಅಸಹಾಯಕ ಮಹಿಳೆಯರನ್ನು ಆರ್ಥಿಕವಾಗಿ ಸಾಮಾಜಿಕವಾಗಿ ಸದೃಢಗೊಳಿಸುವ ನಿಟ್ಟಿನಲ್ಲಿ ನಿಗಮವು ಕಾರ್ಯಪ್ರವೃತ್ತವಾಗಿದೆ ಎಂದರು.
ಚಿತ್ರದುರ್ಗ ಭರಮಸಾಗರ ಸಮೀಪದ ಕೊಳಹಾಳ್ನಲ್ಲಿ ಲಿಂಗತ್ವ ಅಲ್ಪಸಂಖ್ಯಾತರು ಸ್ಥಾಪಿಸಲು ಉದ್ದೇಶಿಸಿದ ಕೋಳಿ ಮತ್ತು ಕುರಿ-ಮೇಕೆ ಸಾಕಾಣಿಕೆ ಘಟಕವನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ, ನಿಗಮದ ನಿರ್ದೇಶಕ ಮಂಡಳಿಯಲ್ಲಿ ಅನುಮೋದನೆಯ ನಂತರ, ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆಯಡಿ ರೂ.21.23 ಲಕ್ಷಗಳನ್ನು (ಶೇ.50ರಷ್ಟು ಸಾಲ ಮತ್ತು ಶೇ.50 ರಷ್ಟು ಸಹಾಯಧನ) ಅನುದಾನ ಬಿಡುಗಡೆ ಮಾಡಲಾಗಿದೆ ಎಂದರು.
ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಪ್ರಾಯೋಜಕತ್ವದಲ್ಲಿ ಮಡಿಲು ಸ್ವಾವಲಂಭಿ ಟ್ರಸ್ಟ್ ಕುರಿ ಘಟಕವನ್ನು ಸ್ಥಾಪಿಸಲಾಗಿದ್ದು, ತುಂಬಾ ಅತ್ಯುತ್ತಮವಾಗಿ ಹಾಗೂ ವಿಶಾಲವಾಗಿ ಕುರಿ ಸಾಕಾಣಿಕೆ ಘಟಕವನ್ನು ಸ್ಥಾಪಿಸಿರುವುದು, ಇಡೀ ರಾಜ್ಯಕ್ಕೆ ಮಾದರಿಯಾಗಿರುತ್ತಾರೆ. ಇವರನ್ನು ಪ್ರೇರಣೆಯಾಗಿ ತೆಗೆದುಕೊಂಡು ದುರ್ಬಲ ವರ್ಗದವರು ಹಾಗೂ ಸಮಾಜದಿಂದ ಶೋಷಣೆಗೆ ಒಳಗಾದವರು ಮುಖ್ಯವಾಹಿನಿಗೆ ಬರಬೇಕು ಎಂದು ಕೋರಿದರು.
ರಾಜ್ಯ ಸರ್ಕಾರವು ಅನೇಕ ಅಭಿವೃದ್ಧಿ ನಿಗಮಗಳನ್ನು ಸ್ಥಾಪಿಸಿದ್ದು, ನಿಗಮಗಳ ಮೂಲಕ ಕಟ್ಟಕಡೆಯ ವ್ಯಕ್ತಿಗಳಿಗೆ, ದಮನಿತರಿಗೆ, ಧ್ವನಿ ಇಲ್ಲದವರಿಗೆ ಸಾಲ-ಸೌಲಭ್ಯವನ್ನು ತಲುಪಿಸುವ ನಿಟ್ಟಿನಲ್ಲಿ ಯೋಜನೆಗಳನ್ನು ಜಾರಿಗೊಳಿಸಿದ್ದು, ಅಧಿಕಾರಿಗಳು ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಬೇಕು. ಈ ಕೆಲಸವನ್ನು ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಪುಷ್ಪಾಲತಾ ಅವರು ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಯಾವುದೇ ರಾಜಕೀಯ ಪ್ರಭಾವ ಇಲ್ಲದೇ, ಮಡಿಲು ಸ್ವಾವಲಂಭಿ ಟ್ರಸ್ಟ್ನ ಅರುಂಧತಿ ಅವರ ಶ್ರಮ ಹಾಗೂ ಗುರಿಯನ್ನು ಗುರುತಿಸಿ, ನಿಗಮವು ಸಾಲ-ಸೌಲಭ್ಯ ನೀಡಿದೆ. ಹಾಗಾಗಿ ನೀವುಗಳು ಇತರರಿಗೂ ದಾರಿದೀಪವಾಗಬೇಕು ಎಂದು ಸಲಹೆ ನೀಡಿದರು.
9211 ಲಿಂಗತ್ವ ಅಲ್ಪಸಂಖ್ಯಾತರಿಗೆ ಸೌಲಭ್ಯ: ಲಿಂಗತ್ವ ಅಲ್ಪಸಂಖ್ಯಾತರಿಗೆ( ಟ್ರಾನ್ಸ್-ಜೆಂಡರ್ಸ್) ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಿಂದ 2012-13ನೇ ಸಾಲಿನಿಂದ ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆಯಡಿ ಆದಾಯ ಉತ್ಪನ್ನ ಚಟುವಟಿಕೆ ಕೈಗೊಳ್ಳಲು ರೂ.30,000/- ಸಹಾಯಧನ ನೀಡಲಾಗುತ್ತಿದೆ. ಈ ಯೋಜನೆಯಡಿ ಈವರೆಗೂ ಒಟ್ಟು 9,211 ಲಿಂಗತ್ವ ಅಲ್ಪಸಂಖ್ಯಾತರಿಗೆ ಸಾಲಸೌಲಭ್ಯ ಹಾಗೂ ಸಹಾಯಧನ ನೀಡಲಾಗಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಒಟ್ಟು 136 ಲಿಂಗತ್ವ ಅಲ್ಪಸಂಖ್ಯಾತರಿಗೆ ಈ ಯೋಜನೆಯಡಿ ಸೌಲಭ್ಯ ನೀಡಲಾಗಿದೆ ಎಂದು ನಿಗಮದ ಅಧ್ಯಕ್ಷರು ತಿಳಿಸಿದರು.
ಚಿತ್ರದುರ್ಗ ಜಿಲ್ಲೆಯಲ್ಲಿ ಒಟ್ಟು 8,18,613 ಮಹಿಳೆಯರು ಇದ್ದು, ಇದರಲ್ಲಿ ಪ್ರಸ್ತುತ 232 ದೇವದಾಸಿ ಮಹಿಳೆಯರು, 2,850 ದಮನಿತ ಮಹಿಳೆಯರು ಇದ್ದಾರೆ ಎಂದರು.
ನಿಗಮದ ವತಿಯಿಂದ ಜಿಲ್ಲೆಯಲ್ಲಿ ಉದ್ಯೋಗಿನಿ ಯೋಜನೆಯಡಿ 3,066 ಫಲಾನುಭವಿಗಳು, ಚೇತನ 115, ಧನಶ್ರೀ 121, ಲಿಂಗತ್ವ ಅಲ್ಪಸಂಖ್ಯಾತರು 129, ದೇವದಾಸಿ ಪುನರ್ವಸತಿ ಯೋಜನೆಯಡಿ 311, ಕಿರುಸಾಲ ಯೋಜನೆಯಡಿ 120 ಫಲಾನುಭವಿಗಳಿಗೆ ಸಾಲ ಸೌಲಭ್ಯ ಹಾಗೂ ಸಹಾಯಧನ ನೀಡಲಾಗಿದೆ ಎಂದರು.
ಲಿಂಗತ್ವ ಅಲ್ಪಸಂಖ್ಯಾತರನ್ನು ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ರಾಜೀವ್ ಗಾಂಧಿ ವಸತಿ ನಿಗಮದ ಮೂಲಕ ಆದ್ಯತೆ ಮೇರೆಗೆ ಮನೆಗಳನ್ನು ನಿರ್ಮಿಸಲಾಗುವುದು. ಈ ನಿಟ್ಟಿನಲ್ಲಿ 3,403 ಮನೆಗಳನ್ನು ಸರ್ಕಾರದಿಂದ ಮಂಜೂರು ಮಾಡಲಾಗಿದೆ. ಪರಿಶಿಷ್ಟ ಜಾತಿ ಹಾಗೂ ಪಂಗಡಕ್ಕೆ ಸೇರಿದವರಿಗೆ ಡಾ.ಬಿ.ಆರ್.ಅಂಬೇಡ್ಕರ್ ನಿವಾಸ್ ಯೋಜನೆಯಡಿ ಹಾಗೂ ಇತರೆ ವರ್ಗಗಳಿಗೆ ದೇವರಾಜ ಅರಸು ವಸತಿ ಯೋಜನೆಯಡಿ ಪರಿಗಣಿಸಿಕೊಂಡು ವಸತಿ ಯೋಜನೆ ಅನುಷ್ಠಾನಗೊಳಿಸಲು ಕ್ರಮವಹಿಸಲಾಗಿದ್ದು, ಚಿತ್ರದುರ್ಗ ಜಿಲ್ಲೆಯಲ್ಲಿ 90 ಗುರಿ ಇದ್ದು, ಇದುವರೆಗೂ 86 ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ಮಾಹಿತಿ ನೀಡಿದರು.
ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಪುಷ್ಪಲತಾ ಮಾತನಾಡಿ, ಮಡಿಲು ಸ್ವಾವಲಂಬಿ ಟ್ರಸ್ಟ್ನ ಅರುಂಧತಿ ಅವರು ಸ್ವಾಭಿಮಾನ ಹಾಗೂ ಸ್ವಾವಲಂಬಿ ಜೀವನ ನಡೆಸುವ ಮೂಲಕ ಬದುಕು ಕಟ್ಟಿಕೊಂಡಿದ್ದಾರೆ. ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಲಿಂಗತ್ವ ಅಲ್ಪಸಂಖ್ಯಾತರ ಯೋಜನೆಯಡಿ ಸಾಲ ಸೌಲಭ್ಯ, ಸಹಾಯಧನ ನೀಡಲಾಗಿದೆ. ಅರುಂಧತಿ ತಂಡದವರು ಕುರಿ ಸಾಕಾಣಿಕೆ ಜತೆ ಜತೆಗೂ ಕೋಳಿ ಸಾಕಾಣಿಕೆಯನ್ನೂ ಮಾಡಿದ್ದಾರೆ. ಈ ಕುರಿತು ನಿಗಮದ ವತಿಯಿಂದ ಮುಂದಿನ ದಿನಗಳಲ್ಲಿ ಅಗತ್ಯ ತರಬೇತಿಯನ್ನೂ ನೀಡಲಾಗುವುದು ಎಂದು ತಿಳಿಸಿದರು.
ಮಡಿಲು ಸ್ವಾವಲಂಬಿ ಟ್ರಸ್ಟ್ನ ಅರುಂಧತಿ ಮಾತನಾಡಿ, ಆತ್ಮಹತ್ಯೆ ಮಾಡಿಕೊಳ್ಳುವಂತಹ ಸಂಕಷ್ಟದ ಪರಿಸ್ಥಿತಿಯ ಸಂದರ್ಭದಲ್ಲಿ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವು ನೆರವು ಹಾಗೂ ಅಗತ್ಯ ಸಹಕಾರವನ್ನೂ ನೀಡಿದೆ. ನಿಗಮ ವತಿಯಿಂದ ಕುರಿ ಸಾಕಾಣಿಕೆ ಘಟಕಕ್ಕೆ ಸಾಲ ಸೌಲಭ್ಯ ಹಾಗೂ ಸಹಾಯಧನ ನೀಡಲಾಗಿದೆ. ಇದರಿಂದ ನನ್ನ ಜೀವನಕ್ಕೆ ದಾರಿದೀಪವಾಗಿ ಬೆಳಕು ನೀಡಿದಂತಾಗಿದೆ ಎಂದು ಹೇಳಿದರು.
ಸಮಾಜದಲ್ಲಿ ಮಂಗಳಮುಖಿಯರು ಕೇವಲ ಭಿಕ್ಷಾಟನೆ ಹಾಗೂ ಲೈಂಗಿಕತೆಗೆ ಮಾತ್ರ ಸೀಮಿತವಾಗಿದ್ದಾರೆ ಎಂಬ ಪರಿಕಲ್ಪನೆ ದೂರವಾಗಬೇಕು. ಈ ನಿಟ್ಟಿನಲ್ಲಿ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವು ಲಿಂಗತ್ವ ಅಲ್ಪಸಂಖ್ಯಾತರಿಗೆ ಹೆಚ್ಚಿನ ಸಾಲಸೌಲಭ್ಯ ಹಾಗೂ ಸಹಾಯಧನ ನೀಡುವ ಮೂಲಕ ಮುಖ್ಯವಾಹಿನಿಗೆ ಬರಲು ಶ್ರಮಿಸಬೇಕು ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಚಿತ್ರದುರ್ಗ ತಹಶೀಲ್ದಾರ್ ಡಾ.ನಾಗವೇಣಿ, ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಪ್ರಧಾನ ವ್ಯವಸ್ಥಾಪಕರಾದ ಇಂದಿರಾ, ಅಕ್ಕಮಹಾದೇವಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಪವಿತ್ರ, ಜಿಲ್ಲಾ ನಿರೂಪಣಾಧಿಕಾರಿ ವಿಜಯ್ ಕುಮಾರ್, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಎನ್.ಸುಧಾ, ವೀಣಾ ಸೇರಿದಂತೆ ಮಡಿಲು ಸ್ವಾವಲಂಬಿ ಟ್ರಸ್ಟ್ನ ಪದಾಧಿಕಾರಿಗಳು ಇದ್ದರು.