ಕೊಪ್ಪಳ ಏಪ್ರಿಲ್ 08 : ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕುಕನೂರು ತಾಲೂಕಾ ಆರೋಗ್ಯಾಧಿಕಾರಿಗಳ ಕಛೇರಿ, ತಳಕಲ್ ಹೆರಿಗೆ ಆಸ್ಪತ್ರೆ ಹಾಗೂ ಗ್ರಾಮದ ಸರಕಾರಿ ವಸತಿಯುಕ್ತ ಮಾದರಿಯ ಪ್ರಥಮ ದರ್ಜೆ ಕಾಲೇಜು ತಳಬಾಲ್-ತಳಕಲ್ ಇವರ ಸಂಯುಕ್ತಾಶ್ರಯದಲ್ಲಿ ಸೋಮವಾರ ವಿಶ್ವ ಆರೋಗ್ಯ ದಿನಾಚರಣೆ ಕಾರ್ಯಕ್ರಮ ನಡೆಯಿತು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ವ್ಹಿ.ಪಿ. ಅವರು ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿ, ವಿಶ್ವದಾದ್ಯಂತ, ರಾಷ್ಟ್ರದಾದ್ಯಂತ ಹಾಗೂ ರಾಜ್ಯದಾದ್ಯಂತ “ವಿಶ್ವ ಆರೋಗ್ಯ ದಿನಾಚರಣೆ” ಕಾರ್ಯಕ್ರಮ ಆಚರಿಸಲಾಗುತ್ತದೆ. ಈ ಕಾರ್ಯಕ್ರಮ ಆಚರಿಸುವ ಉದ್ದೇಶ ಎಲ್ಲಾ ರಾಷ್ಟ್ರ ಮತ್ತು ರಾಜ್ಯಗಳಲ್ಲಿ ಆರೋಗ್ಯಕರ ಸಮಾಜ ನಿರ್ಮಾಣ ಮಾಡುವುದು, ಆರೋಗ್ಯದ ಬಗ್ಗೆ ಜನಜಾಗೃತಿ ಮೂಡಿಸುವುದಾಗಿದೆ. ಪ್ರತಿ ವರ್ಷ ಏಪ್ರಿಲ್-7 ರಂದು “ವಿಶ್ವ ಆರೋಗ್ಯ ದಿನಾಚರಣೆ” ಕಾರ್ಯಕ್ರಮವನ್ನು ಆಚರಿಸಲಾಗುತ್ತದೆ. “ಆರೋಗ್ಯಕರ ಆರಂಭಗಳು ಮತ್ತು ಭರವಸೆಯ ಭವಿಷಕ್ಕಾಗಿ” (Healthy Beginnings, Hopeful Future) ಎಂಬ ಘೋಷವಾಖ್ಯದೊಂದಿಗೆ ಈ ವರ್ಷದ ಕಾರ್ಯಕ್ರಮವನ್ನು ಆಚರಿಸಲಾಗುತ್ತಿದೆ. 1950ನೇ ಇಸವಿಯಿಂದ ನಿರಂತರವಾಗಿ ಏಪ್ರೀಲ್-7 ರಂದು ಈ ದಿನಾಚರಣೆಯನ್ನು ಒಂದೊಂದು ಘೋಷವಾಕ್ಯದೊಂದಿಗೆ ಆಚರಿಸಲಾಗುತ್ತದೆ. ಆರೋಗ್ಯವಂತ ಸಮಾಜ ನಿರ್ಮಾಣಕ್ಕಾಗಿ ಇಲಾಖೆ ಯೋಜನೆಗಳನ್ನು ಪಡೆದುಕೊಂಡು ದೇಶವನ್ನು ರೋಗಮುಕ್ತಗೊಳಿಸಿ, ಸುಂದರವಾದ ಅಥವಾ ಆರೋಗ್ಯಕರವಾದ ವಾತವರಣವನ್ನು ನಿರ್ಮಿಸಿ, ಎಲ್ಲರಿಗೂ ಆರೋಗ್ಯ ಎಲ್ಲೆಡೆಯೂ ಆರೋಗ್ಯ ಎಂಬ ಮಂತ್ರದೊಂದಿಗೆ ವಿದ್ಯಾರ್ಥಿಗಳು ತಮ್ಮ ತಮ್ಮ ಗ್ರಾಮಗಳಲ್ಲಿ ಆರೋಗ್ಯಕರ ಮಾಹಿತಿ ಕುರಿತು ಅರಿವು ಮೂಡಿಸಬೇಕು ಎಂದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಕೆಲವು ಕ್ರಮಗಳನ್ನು ಕೈಗೊಂಡಿದ್ದು, ಆರೋಗ್ಯ ಸೇವೆಗಳನ್ನು ಬಲಪಡಿಸಲಾಗುವುದು ಮತ್ತು ಸುರಕ್ಷಿತ ಸೇವಾ ವ್ಯವಸ್ಥೆಗೆ ಆದ್ಯತೆ ನೀಡಲಾಗುವುದು. ಸ್ತ್ರೀರೋಗ ಮತ್ತು ಪ್ರಸೂತಿ ಕ್ಷೇತ್ರದಲ್ಲಿ ನಿರ್ಣಾಯಕ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು. ಆರೋಗ್ಯ ವೃತ್ತಿಪರರಿಗೆ ಪ್ರೋತ್ಸಾಹ ನೀಡಲಾಗುವುದು. ಆರೋಗ್ಯ ವಿತರಣಾ ವ್ಯವಸ್ಥೆಗಳನ್ನು ಅತ್ಯತ್ತಮವಾಗಿ ನಿಯಮಿತ ಲೆಕ್ಕ ಪರಿಶೋಧನೆಗಳನ್ನು ನಡೆಸಲಾಗುವುದು. ವಿಶೇಷ ನವಜಾತ ಶಿಶು ಆರೈಕೆ ಘಟಕಗಳು (ಎಸ್.ಎನ್.ಸಿ.ಯು) ಮತ್ತು ನವಜಾತ ಶಿಶು ತೀವ್ರ ನಿಗಾ ಘಟಕಗಳ (ಎನ್.ಐ.ಸಿ.ಯು) ಸೇರ್ಪಡೆಯ ಮೂಲಕ ನವಜಾತ ಶಿಶು ಮತ್ತು ತಾಯಿಯ ಆರೈಕೆಯನ್ನು ಹೆಚ್ಚಿಸಲಾಗುವುದ ಎಂದು ತಿಳಿಸಿದರು.
ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಸವಿತಾ ಅವರು ಅನಿಮಿಯಾ ಮುಕ್ತ ಪೌಷ್ಠಿಕ ಕರ್ನಾಟಕ ಕುರಿತು, ಮಾತನಾಡಿ, ಹದಿ-ಹರೆಯದವರು ಪೌಷ್ಠಿಕ ಆಹಾರ ಸೇವೆನೆ ಮಾಡಬೇಕು. ತರಕಾರಿ, ಮೊಳಕೆಕಾಲು, ಹಾಲು, ಹಣ್ಣು-ಹಂಪಲುಗಳನ್ನು ಹಾಗೂ ಹಸಿರು ಸೊಪ್ಪುಗಳನ್ನು ಹೆಚ್ಚಾಗಿ ದಿನನಿತ್ಯದ ಆಹಾರಗಳಲ್ಲಿ ಬಳಸಬೇಕು ಮತ್ತು ಪ್ರತಿವಾರ ಡಬ್ಲೂö್ಯ.ಐ.ಎಫ್.ಎಸ್ ಕಾರ್ಯಾಕ್ರಮದಡಿಯಲ್ಲಿ ನೀಡುವ ಪ್ರತಿ ಸೋಮವಾರದ ಕಬ್ಬಿಣಾಂಶದ ಮಾತ್ರೆ ಹಾಗೂ ಪ್ರತಿ 6 ತಿಂಗಳಿಗೊಮ್ಮೆ ಜಂತು ನಿವಾರಕ ಮಾತ್ರೆ ತೆಗೆದುಕೊಳ್ಳಬೇಕು ಮತ್ತು ಮುಟ್ಟಿನ ಸಮಯದಲ್ಲಿ ನೈರ್ಮಲ್ಯ ಕಾಪಡುವ ಬಗ್ಗೆ ವಿವರವಾಗಿ ತಿಳಿಸಿದರು. ನಂತರ ಎಲ್ಲಾ ವಿದ್ಯಾರ್ಥಿಗಳ ರಕ್ತಪರೀಕ್ಷೆ ಮಾಡಿ, ಕಡಿಮೆ ರಕ್ತದ ಪ್ರಮಾಣ ಹೊಂದಿದ ವಿದ್ಯಾರ್ಥಿಗಳಿಗೆ ಆಸ್ಪತ್ರೆಗೆ ಬರುವಂತೆ ತಿಳಿಸಿದರು.
ಸಮುದಾಯ ಆರೋಗ್ಯಾಧಿಕಾರಿ ಮಹೇಶ್ ಅವರು, ಸಾಂಕ್ರಾಮಿಕ, ಅಸಾಂಕ್ರಾಮಿಕ ರೋಗಗಳ ನಿಯಂತ್ರಣ ಕುರಿತು ವಿವರವಾಗಿ ಮಾತನಾಡಿದರು.
ಪ್ರಾಂಶುಪಾಲರಾದ ಡಾ. ಶುಭಾ ಅವರು ಮಾತನಾಡಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಹಮ್ಮಿಕೊಳ್ಳುವ ಕಾರ್ಯಕ್ರಮಗಳು ಇಂದಿನ ವಿದ್ಯಾರ್ಥಿಗಳಿಗೆ ಬಹಳ ಪ್ರಯೋಜನಕಾರಿಯಾಗಿದೆ. ಜೊತೆಗೆ ವಿವಿಧ ಸಾಂಕ್ರಾಮಿಕ, ಅಸಾಂಕ್ರಾಮಿಕ ರೋಗಗಳ ಬಗ್ಗೆ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡು ತಮ್ಮ ತಮ್ಮ ಗ್ರಾಮಗಳಲ್ಲಿ, ವಾರ್ಡ್ಗಳಲ್ಲಿ ಹಾಗೂ ಸುತ್ತ ಮುತ್ತಲಿನ ಸಾರ್ವಜನಿಕರಿಗೆ ಅರಿವು ಮೂಡಿಸುವಂತೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಪ್ರಾ.ಆ.ಸು ಅಧಿಕಾರಿ ಸರಸ್ವತಿ, ಆರೋಗ್ಯ ನಿರೀಕ್ಷಣಾಧಿಕಾರಿ ಪ್ರಧೀಪ ಕುಮಾರ, ಸಹಾಯಕ ಪ್ರಾಧ್ಯಾಪಕರಾದ ಈ.ಆರ್.ಲಗಳೂರು, ಸುರೇಶಕುಮಾರ, ಪುಷ್ಪಾವತಿ ಕೊನಸಾರಿ, ಉಪನ್ಯಾಸಕರಾದ ಸಂತೋಷ ಕುಮಾರ ಜಾವಿ, ಮಲ್ಲಪ್ಪ ಸತ್ತೂರು, ಗ್ರಂಥಪಾಲಕರಾದ ವಸುಧಾ ಬಿ.ಎಚ್., ದೈಹಿಕ ನಿರ್ದೇಶಕರಾದ ಲಕ್ಷ್ಮೀದೇವಿ ಡಿ., ಆಶಾ ಕಾರ್ಯಕರ್ತೆಯರು ಹಾಗೂ ಇತರೆ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.