ಧಾರವಾಡ ಜೂನ್ 19: ಬೆಳಗಾವಿಯ ರಾಮದುರ್ಗದ ನಿವಾಸಿ ಭಾರತಿ ಕೋಟಿ ಎಂಬುವವರು ಎದುರುದಾರರು ಅಭಿವೃದ್ದಿಪಡಿಸುತ್ತಿದ್ದ ಚಿಕ್ಕಮಲ್ಲಿಗವಾಡ ಗ್ರಾಮದ ಲೇಔಟನಲ್ಲಿ ಪ್ಲಾಟ್ ನಂ.150 ನ್ನು ಖರೀದಿಸಲು ಇಚ್ಚಿಸಿದ್ದರು. ಇದರ ಬಗ್ಗೆ ಉಭಯತರ ಮಧ್ಯ ರೂ.3,96,000 ಗಳ ಖರೀದಿ ಕರಾರು ಒಪ್ಪಂದವಾಗಿತ್ತು. ಇದರ ಪೈಕಿ ದೂರುದಾರರು ರೂ.2,52,000 ಗಳನ್ನು ಮುಂಗಡ ಹಣ ಪಾವತಿಸಿದ್ದರು. ಹಣ ಪಾವತಿಸಿದ ದಿನದಿಂದ ಇವತ್ತಿನವರೆಗೂ ಎದುರುದಾರರು ದೂರುದಾರರಿಗೆ ಬಾಕಿ ಹಣ ಪಡೆದು ಖರೀದಿ ಕರಾರು ಮಾಡಿಕೊಟ್ಟಿರಲಿಲ್ಲ ಮತ್ತು ಮುಂಗಡ ಹಣವನ್ನೂ ಸಹ ಮರಳಿ ಕೊಟ್ಟಿರಲಿಲ್ಲ. ಎದುರುದಾರರು ಅಂತಹ ನಡಾವಳಿಕೆಯಿಂದ ತನಗೆ ಮೋಸವಾಗಿದೆ ಮತ್ತು ಅವರು ತನಗೆ ಸೇವಾ ನ್ಯೂನ್ಯತೆ ಎಸಗಿದ್ದಾರೆ ಅಂತಾ ಹೇಳಿ ದೂರುದಾರರು ಎದುರುದಾರರ ವಿರುದ್ಧ ಗ್ರಾಹಕರ ರಕ್ಷಣಾ ಕಾಯಿದೆ ಅಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ದಿ: 06/12/2024 ರಂದು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರನ್ನು ಸಲ್ಲಿಸಿದ್ದರು.
ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗ, ದೂರುದಾರಳಿಂದ ರೂ.2,52,000 ಗಳನ್ನು ಮುಂಗಡ ಹಣ ಪಡೆದುಕೊಂಡು ಪ್ಲಾಟನ್ನು ಅಭಿವೃದ್ದಿಪಡಿಸದೇ ಎದುರುದಾರರು ಗ್ರಾಹಕ ರಕ್ಷಣಾ ಕಾಯಿದೆಯಡಿ ಸೇವಾ ನ್ಯೂನತೆ ಎಸಗಿರುತ್ತಾರೆ ಅಂತಾ ಅಭಿಪ್ರಾಯಪಟ್ಟು, ದೂರುದಾರಳು ಪಾವತಿಸಿದ ಹಣದಜೊತೆಗೆ ಶೇ.10 ರಂತೆ ಬಡ್ಡಿ ಸೇರಿಸಿ ಆದೇಶವಾದ ಒಂದು ತಿಂಗಳೊಳಗಾಗಿ ಪಾವತಿಸುವಂತೆ ಎದುರುದಾರರಿಗೆ ನಿರ್ಧೇಶಿಸಿದೆ. ಅಲ್ಲದೇ ದೂರುದಾರಳಿಗೆ ಆಗಿರುವ ಅನಾನುಕೂಲ ಹಾಗೂ ಮಾನಸೀಕ ಹಿಂಸೆಗೆ ರೂ.50,000 ಪರಿಹಾರ ಹಾಗೂ ಪ್ರಕರಣದ ಖರ್ಚು ವೆಚ್ಚ ರೂ.10,000 ಕೊಡುವಂತೆ ಎದುರುದಾರರಾದ ಸಾಯಿ ಬಿಲ್ಡರ್ಸಗೆ ಆಯೋಗ ತನ್ನ ತೀರ್ಪಿನಲ್ಲಿ ಆದೇಶಿಸಿದೆ.