ಕೊಪ್ಪಳ ಜೂನ್ 30 : ಪತ್ನಿಯ ಕೊಲೆ ಮಾಡಿ 20 ವರ್ಷಗಳ ಕಾಲ ತಲೆಮರೆಸಿಕೊಂಡಿದ್ದ 73 ವರ್ಷದ ಆರೋಪಿಗೆ ಗಂಗಾವತಿಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರು ಜೀವಾವಧಿ ಶಿಕ್ಷೆ ಹಾಗೂ ದಂಡವನ್ನು ವಿಧಿಸಿ ತೀರ್ಪು ಪ್ರಕಟಿಸಿದೆ.
ಆರೋಗ್ಯ ಇಲಾಖೆಯಲ್ಲಿ ಕಿರಿಯ ಆರೋಗ್ಯ ಸಹಾಯಕನಾಗಿದ್ದ ಮಾನ್ವಿ ತಾಲ್ಲೂಕಿನ ಹಾಲ್ದಾಳ ಗ್ರಾಮದ ಹನುಮಂತಪ್ಪ ತಂದೆ ಹುಸೇನಪ್ಪ ಎಂಬ ವ್ಯಕ್ತಿಯು ಗಂಗಾವತಿಯ ಗುಂಡಮ್ಮ ಕ್ಯಾಂಪಿನಲ್ಲಿ ತನ್ನ ಮೂರನೇ ಹೆಂಡತಿಯಾದ ರೇಣುಕಮ್ಮಳೊಂದಿಗೆ ವಾಸವಾಗಿದ್ದನು. ತನ್ನ ಹೆಂಡತಿಯ ಶೀಲದ ಬಗ್ಗೆ ಸಂಶಯಪಟ್ಟು 2002ರ ಜೂನ್ 20 ರ ರಾತ್ರಿ ಆಕೆಯ ಮೇಲೆ ಕಬ್ಬಿಣದ ರಾಡ್‌ನಿಂದ ಹಲ್ಲೆ ಮಾಡಿ, ಕತ್ತು ಹಿಸುಕಿ ಕೊಲೆ ಮಾಡಿದ್ದನು. ನಂತರ ಸಾಕ್ಷಿ ನಾಶಪಡಿಸುವ ಸಲುವಾಗಿ ಬೇರೆ ಕಡೆ ಶವ ಸಾಗಿಸುವ ಉದ್ದೇಶದಿಂದ ಆಕೆಯ ಶವವನ್ನು ಗೋಣಿ ಚೀಲದಲ್ಲಿ ತುಂಬಿ ಅದನ್ನು ಗಂಗಾವತಿ ಬಸ್ ನಿಲ್ದಾಣದಿಂದ ಸಾರಿಗೆ ಬಸ್‌ನಲ್ಲಿ ಲಗೇಜ್ ರೂಪದಲ್ಲಿ ಶವವನ್ನು ಸಾಗಿಸಿದ್ದನು. ಕಂಪ್ಲಿ ಪಿಎಸ್‌ಐ ಸುಧಾಕರ ಅವರು ಕಂಪ್ಲಿ ಚೆಕ್‌ಪೋಸ್ಟ್ನಲ್ಲಿ ಬಸ್ ಚಕಿಂಗ್ ನಡೆಸಿದ್ದು, ಮೂಟೆಯಲ್ಲಿ ಶವವಿರುವುದು ಪತ್ತೆಯಾಗಿರುತ್ತದೆ. ಈ ಬಗ್ಗೆ ಬಸ್ ಚಾಲಕ ಗುರುದೇವ ಅವರು ಕಂಪ್ಲಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಅಂದಿನ ತನಿಖಾಧಿಕಾರಿಗಳಾದ ಹೊಸಪೇಟೆಯ ಗ್ರಾಮೀಣ ಸಿಪಿಐ(ಪ್ರಭಾರ) ಜಿ.ವಿಶ್ವನಾಥ, ಸಿಪಿಐ ಜಿ.ಜಿ.ಮರಿಬಾಶೆಟ್ಟಿ ಹಾಗೂ ಪ್ರಕರಣವನ್ನು ಸರಹದ್ದಿನ ಆಧಾರದ ಮೇಲೆ ಗಂಗಾವತಿ ನಗರ ಠಾಣೆಗೆ ವರ್ಗಾವಣೆಗೊಂಡಿದ್ದರಿಂದ ಅಂದಿನ ತನಿಖಾಧಿಖಾರಿ ಗಂಗಾವತಿ ನಗರಠಾಣೆಯ ಪಿಐ ಬಿ.ಎಸ್.ಶಾಂತಕುಮಾರ ಅವರು ಜಂಟಿಯಾಗಿ ಪ್ರಕರಣದ ತನಿಖೆ ನಡೆಸಿ ಆರೋಪಿಯ ವಿರುದ್ಧ ಆರೋಪ ಸಾಬೀತಾದ್ದರಿಂದ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ನ್ಯಾಯಾಲಯದ ವಿಚಾರಣೆಯಲ್ಲಿ ಅಪರಾಧ ಸಾಬೀತಾದ್ದರಿಂದ ಗಂಗಾವತಿಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಸದಾನಂದ ನಾಗಪ್ಪ ನಾಯ್ಕ ಅವರು, ಆರೋಪಿತನಿಗೆ ಭಾರತೀಯ ದಂಡ ಸಂಹಿತೆ ಕಲಂ 302 ಅಪರಾಧಕ್ಕೆ ಜೀವಾವಧಿ ಶಿಕ್ಷೆ ಹಾಗೂ ರೂ.10,000 ಗಳ ದಂಡವನ್ನು ವಿಧಿಸಿ, ತೀರ್ಪಿನ ದಿನಾಂಕದಿಂದ ಮೂರು ತಿಂಗಳೊಳಗೆ ದಂಡ ಕಟ್ಟದೇ ಇದ್ದಲ್ಲಿ 1 ವರ್ಷ ಸಾದಾ ಕಾರಾಗೃಹ ವಾಸದ ಶಿಕ್ಷೆಯನ್ನು ಅನುಭವಿಸುವಂತೆ ಹಾಗೂ ಕಲಂ 201 ಅಪರಾಧಕ್ಕೆ 3 ವರ್ಷಗಳ ಕಾರಾಗೃಹ ವಾಸದ ಶಿಕ್ಷೆ ಹಾಗೂ ರೂ.5000 ಗಳ ದಂಡವನ್ನು ಮೂರು ತಿಂಗಳೊಳಗೆ ಪಾವತಿಸುವಂತೆ, ತಪ್ಪಿದಲ್ಲಿ 3 ತಿಂಗಳ ಸಾದಾ ಕಾರಾಗೃಹ ವಾಸದ ಶಿಕ್ಷೆಯನ್ನು ಅನುಭವಿಸುವಂತೆ ಮತ್ತು ದಂಡದ ಮೊತ್ತ ರೂ.15,000 ಗಳನ್ನು ಸರ್ಕಾರಕ್ಕೆ ಭರಿಸುವಂತೆ ಆದೇಶಿಸಿ, ಜೂನ್ 27 ರಂದು ತೀರ್ಪು ಪ್ರಕಟಿಸಿದೆ ಎಂದು ಗಂಗಾವತಿಯ ಸರಕಾರಿ ಅಭಿಯೋಜಕರಾದ ನಾಗಲಕ್ಷ್ಮೀ ಎಸ್. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.