ಶಿವಮೊಗ್ಗ, ಜುಲೈ 21) : ದೂರುದಾರರಾದ ಶಿವಮೊಗ್ಗದ ದುರ್ಗಿಗುಡಿ ಆನಂದಮೂರ್ತಿ ಡಿ.ಹೆಚ್. ಎಂಬುವವರು ಸ್ಟಾರ್ ಹೆಲ್ತ್ ಅಲಯನ್ಸ್ ಇನ್ಷೂರನ್ಸ್, ಶಿವಮೊಗ್ಗ ಇವರ ವಿರುದ್ಧ ಸೇವಾನ್ಯೂನ್ಯತೆ ಎಸಗಿದ್ದಾರೆ ಎಂದು ವಕೀಲರ ಮೂಲಕ ಸಲ್ಲಿಸಿದ ದೂರನ್ನು ಆಲಿಸಿದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ವಿಮಾ ಕಂಪೆನಿಯು ದೂರುದಾರರಿಗೆ ಸೂಕ್ತ ಪರಿಹಾರ ನೀಡುವಂತೆ ತೀರ್ಪು ನೀಡಿದೆ.
ದೂರುದಾರ ಆನಂದಮೂರ್ತಿಯವರು ಸ್ಟಾರ್ ಹೆಲ್ತ್ ಅಲಯನ್ಸ್ ಇನ್ಷೂರನ್ಸ್, ಶಿವಮೊಗ್ಗ ಇವರಿಂದ ವೈದ್ಯಕೀಯ ವಿಮಾ ಪಾಲಿಸಿಯನ್ನು ಪಡೆದಿದ್ದು, ಮೇ 2024 ರಂದು ಹೃದಯ ಸಂಬAಧಿತ ಕಾಯಿಲೆಗೆ ಚಿಕಿತ್ಸೆ ಪಡೆದು, ಚಿಕಿತ್ಸೆ ವೆಚ್ಚ ರೂ. 2.50 ಲಕ್ಷಗಳ ಬಿಲ್‌ಗಳನ್ನು ಸಲ್ಲಿಸಿ ಕ್ಲೇಮ್ ಮೊತ್ತವನ್ನು ನೀಡಲು ಕೋರಿರುತ್ತಾರೆ. ಆದರೆ ಎದುರುದಾರ ಇನ್ಷೂರನ್ಸ್ ಕಂಪನಿಯು ಪಾಲಿಸಿ ಪಡೆಯುವಾಗ ದೀರ್ಘಕಾಲದ ಕಾಯಿಲೆಯಿರುವುದನ್ನು ಮರೆಮಾಚಿರುತ್ತಾರೆ ಎಂಬ ಕಾರಣ ನೀಡಿ ವಿಮಾ ಹಣವನ್ನು ನೀಡಲು ನಿರಾಕರಿಸಿರುತ್ತಾರೆ ಎಂದು ದೂರು ಸಲ್ಲಿರುತ್ತಾರೆ.
ಆಯೋಗವು ದೂರನ್ನು ದಾಖಲಿಸಿಕೊಂದು, ಎದುರುದಾರರಿಗೆ ನೀಡಿದ ನೋಟಿಸ್‌ಗೆ ಎದುರುದಾರರು ವಕೀಲರ ಮೂಲಕ ಹಾಜರಾಗಿ ಫೆ. 2025 ರಂದು ಅರ್ಹದಾಯಕ ವೈದ್ಯಕೀಯ ವೆಚ್ಚವನ್ನು ಮರುಪಾವತಿಸಲಾಗಿದೆ ಹಾಗೂ ತಮ್ಮಿಂದ ಯಾವುದೇ ಸೇವಾ ನ್ಯೂನತೆಯಾಗಿರುವುದಿಲ್ಲವಾದ ಕಾರಣ ದೂರನ್ನು ವಜಾ ಮಾಡಬೇಕಾಗಿ ವಿನಂತಿಸಿರುತ್ತಾರೆ.
ದೂರುದಾರರು ಮತ್ತು ಎದುರುದಾರರು ಸಲ್ಲಿಸಿರುವ ಪ್ರಮಾಣ ಪತ್ರ ಮತ್ತು ದಾಖಲೆಗಳನ್ನು ಪರಿಶೀಲಿಸಿ ಮತ್ತು ಉಭಯ ಪಕ್ಷಗಾರರ ವಕೀಲರ ವಾದವನ್ನು ಆಲಿಸಿ ಮತ್ತು ದೂರುದಾರರು ಆಯೋಗಕ್ಕೆ ದೂರು ಸಲ್ಲಿಸಿದ ನಂತರ ವೈದ್ಯಕೀಯ ವೆಚ್ಚವನ್ನು ಮರುಪಾವತಿಸಿರುವುದರಿಂದ ಎದುರುದಾರರು ಸೇವಾ ನ್ಯೂನತೆ ಎಸಗಿರುವುದಾಗಿ ಪರಿಗಣಿಸಿ ದೂರುದಾರರು ಸಲ್ಲಿಸಿರುವ ದೂರನ್ನು ಪುರಸ್ಕರಿಸಿ, ವೈದ್ಯಕೀಯ ವೆಚ್ಚದ ಮೊತ್ತ ರೂ.2,28,018 ಗಳಿಗೆ ವಾರ್ಷಿಕ ಶೇ.9 ರಂತೆ ಬಡ್ಡಿಯನ್ನು ದಿ: 27/06/2024 ರಿಂದ ದಿ:13/02/2025ರವರೆಗೆ ಈ ಆದೇಶವಾದ 45 ದಿನಗಳೊಳಗಾಗಿ ಪಾವತಿಸಲು, ತಪ್ಪಿದಲ್ಲಿ ವಿಮಾ ಮೊತ್ತಕ್ಕೆ ಶೇ.12 ರಂತೆ ಬಡ್ಡಿ ಸೇರಿಸಿ, ಈ ಆದೇಶವಾದ ದಿನದಿಂದ ಪೂರ್ತಿ ಹಣ ಪಾವತಿಸುವವರೆಗೆ ನೀಡುವುದು ಹಾಗೂ ರೂ.27,000/- ಗಳನ್ನು ಮಾನಸಿಕ ಹಿಂಸೆಗಾಗಿ ಮತ್ತು ವ್ಯಾಜ್ಯದ ಖರ್ಚಾಗಿ ನೀಡಬೇಕೆಂದು, ತಪ್ಪಿದಲ್ಲಿ ವಿಮಾ ಮೊತ್ತಕ್ಕೆ ಶೇ.12 ರಂತೆ ಬಡ್ಡಿ ಸೇರಿಸಿ, ಈ ಆದೇಶವಾದ ದಿನದಿಂದ ಪೂರ್ತಿ ಹಣ ಪಾವತಿಸುವವರೆಗೆ ನೀಡುವಂತೆ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಟಿ.ಶಿವಣ್ಣ ಮತ್ತು ಸದಸ್ಯರಾದ ಬಿ.ಡಿ.ಯೋಗಾನಂದ ಭಾಂಡ್ಯ ಇವರನ್ನೊಳಗೊಂಡ ಪೀಠವು ಜು.07 ರಂದು ಆದೇಶಿಸಿದೆ ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸಹಾಯಕ ರಿಜಿಸ್ಟಾçರ್ ಗಂಗಾಧರ ನಾಯ್ಕ್ ತಿಳಿಸಿದ್ದಾರೆ.