ಘಂಟೆ ಶಂಖನಾದ ಪೂಜೆಯೊಂದಿಗೆ ಈ ವರ್ಷದ ಚಾರ್ಧಾಮ್ ಯಾತ್ರೆ ಆರಂಭವಾಗಿದೆ. ಕೇದಾರನಾಥನ ಬಾಗಿಲು ಬೆಳಿಗ್ಗೆ 7 ಗಂಟೆಗೆ ತೆರೆಯಲಾಯಿತು. ಯಮುನೋತ್ರಿಯ ಬಾಗಿಲು 10.29 ಕ್ಕೆ ತೆರೆಯಲಾಯಿತು. ಗಂಗೋತ್ರಿಯ ಬಾಗಿಲು ಮಧ್ಯಾಹ್ನ 12.20 ಕ್ಕೆ ತೆರೆಯಲಾಗುತ್ತದೆ. ಚಾರ್ಧಾಮ್ ಎಂದು ಕರೆಯಲ್ಪಡುವ ಪ್ರಸಿದ್ಧ ಧಾಮಗಳಲ್ಲಿ ಸೇರಿಸಲಾದ ಮತ್ತೊಂದು ಶಿವಧಾಮವಾದ ಬದರಿನಾಥದ ಬಾಗಿಲುಗಳು ಮೇ 12 ರಂದು ಬೆಳಿಗ್ಗೆ ತೆರೆಯಲಾಗುತ್ತದೆ.
ಪ್ರವಾಸಿಗರನ್ನು ಆಹ್ವಾನಿಸಿದ ಸಿಎಂ ಕೇದಾರನಾಥ ದೇಗುಲದ ಬಾಗಿಲನ್ನು ಇಂದು ತೆರೆಯುವುದರಿಂದ ದೇವಸ್ಥಾನವನ್ನು ಹೂವಿನಿಂದ ಅಲಂಕರಿಸಲಾಗಿತ್ತು. ಇದಲ್ಲದೇ ಹೆಲಿಕಾಪ್ಟರ್ನಿಂದ ಪುಷ್ಪವೃಷ್ಟಿ ಮಾಡಲಾಯಿತು. ಇಂದು ಬಾಬಾರವರ ದೇವಸ್ಥಾನದ ಬಾಗಿಲು ತೆರೆದಾಗ, ಈ ಪ್ರದೇಶದಲ್ಲಿ ತಾಪಮಾನವು -1 ಡಿಗ್ರಿಯಲ್ಲಿ ದಾಖಲಾಗಿದೆ. ಬಾಗಿಲು ತೆರೆಯುವ ಸಂದರ್ಭದಲ್ಲಿ ಅಪಾರ ಭಕ್ತರು ನೆರೆದಿದ್ದರು. ಬಾಬಾ ಕೇದಾರನಾಥನ ಬಾಗಿಲು ತೆರೆದ ನಂತರ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಚಾರ್ಧಾಮ್ ಯಾತ್ರೆಗೆ ಜನರನ್ನು ಆಹ್ವಾನಿಸಿದರು.
“ಜೈ ಬಾಬಾ ಕೇದಾರ್! 2024 ರ ಚಾರ್ಧಾಮ್ ಯಾತ್ರೆಯಲ್ಲಿ ಎಲ್ಲಾ ಭಕ್ತರಿಗೆ ಹೃತ್ಪೂರ್ವಕ ಸ್ವಾಗತ ಮತ್ತು ಅಭಿನಂದನೆಗಳು. ಚಾರ್ಧಾಮ್ಗೆ ಬರುವ ವೃದ್ಧರು, ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗಾಗಿ ನಮ್ಮ ಸರ್ಕಾರದಿಂದ ವಿಶೇಷ ವ್ಯವಸ್ಥೆಗಳನ್ನು ಮಾಡಲಾಗಿದೆ. ಸ್ವಚ್ಛತೆಯ ಬಗ್ಗೆ ವಿಶೇಷ ಕಾಳಜಿ ವಹಿಸುವಂತೆ” ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಸಾಮಾಜಿಕ ಮಾಧ್ಯಮದಲ್ಲಿ ಮನವಿ ಮಾಡಿದರು.
ಚಾರ್ಧಾಮ್ ಯಾತ್ರೆ: ಕೇದಾರನಾಥ ಉತ್ತರಾಖಂಡ ರಾಜ್ಯದ ಅತ್ಯಂತ ಪವಿತ್ರವಾದ ಯಾತ್ರಾ ಸ್ಥಳಗಳಲ್ಲಿ ಒಂದಾಗಿದೆ. ಹಿಂದೂಗಳ ತೀರ್ಥಯಾತ್ರಾ ಸ್ಥಳವಾಗಿರುವ ಕೇದಾರನಾಥ ಚೋಟಾ ಚಾರ್ ಧಾಮ್ ಯಾತ್ರೆಯ ಒಂದು ಭಾಗವಾಗಿದೆ. ಕೇದಾರನಾಥ ಎಂಬ ಹೆಸರಿನಿಂದ ಕರೆಯಲ್ಪಡುವ ಮಹಾಶಿವನು ಇಲ್ಲಿ ನೆಲೆಸಿದ್ದಾನೆ.ಈ ಚೋಟಾ ಚಾರ್ ಧಾಮ್ ಆಲಯಗಳನ್ನು ಕೇವಲ 6 ತಿಂಗಳು ಮಾತ್ರ ತೆರೆಯಲ್ಪಡುತ್ತದೆ. ಉತ್ತರಾಖಂಡದ ರುದ್ರಪ್ರಯಾಗ ಜಿಲ್ಲೆಯಲ್ಲಿರುವ ಕೇದಾರನಾಥವು ಪ್ರತಿ ವರ್ಷ ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸುವ ವಿಶೇಷ ಸ್ಥಳವಾಗಿದೆ. ನಮ್ಮ ಭಾರತದಲ್ಲಿರುವ 12 ಶಿವನ ಜ್ಯೋತಿರ್ಲಿಂಗಗಳಲ್ಲಿ ಕೇದಾರನಾಥ ಪ್ರಮುಖವಾದುದು. ಈ ಕಾರಣದಿಂದಲೇ ಹಿಂದೂಗಳು ಜೀವನದಲ್ಲಿ ಒಮ್ಮೆಯಾದರೂ ಸಂದರ್ಶಿಸಬೇಕು ಎಂದು ಬಯಸುತ್ತಾರೆ. ಪುರಾಣಗಳ ಪ್ರಕಾರ, ಕೇದಾರನಾಥ ದೇವಾಲಯವನ್ನು 8 ನೇ ಶತಮಾನದಲ್ಲಿ ಆದಿ ಗುರು ಶಂಕರಾಚಾರ್ಯರು ನಿರ್ಮಿಸಿದರು ಎಂದು ಹೇಳಲಾಗುತ್ತದೆ.
ಚೋಟಾ ಚಾರ್ ಧಾಮ್ ಯಾತ್ರೆ ಎಂದೇ ಜನಪ್ರಿಯವಾಗಿರುವ ಯಾತ್ರೆಯಲ್ಲಿ ಗಂಗೋತ್ರಿ, ಯಮನೋತ್ರಿ, ಕೇದಾರನಾಥ ಹಾಗು ಬದರಿನಾಥ ಅಲಯಗಳಿವೆ. ಹಿಂದೂಗಳು ತಮ್ಮ ಜೀವಿತಾವಧಿಯಲ್ಲಿ ಒಮ್ಮೆ ಈ ಯಾತ್ರೆಯನ್ನು ಕೈಗೊಳ್ಳಲು ಬಯಸುತ್ತಾರೆ. ವರ್ಷಕ್ಕೆ 6 ತಿಂಗಳು ಮಾತ್ರ ಭಕ್ತರಿಗೆ ಈ ಆಲಯಗಳು ತೆರೆಯಲ್ಪಡುತ್ತವೆ. ಈ ನಾಲ್ಕು ಯಾತ್ರೆಗಳು 1,607 ಕಿ.ಮೀ ದೂರವನ್ನು ಹೊಂದಿದೆ. ಕಳೆದ ವರ್ಷ 45 ಲಕ್ಷಕ್ಕೂ ಅಧಿಕ ಯಾತ್ರಿಕರನ್ನು ಸ್ವಾಗಸಿದ್ದು, ಈ ವರ್ಷ ಇನ್ನು ಹೆಚ್ಚಿನ ಭಕ್ತರು ಆಗಮಿಸುವ ಸಾಧ್ಯತೆಯ ಬಗ್ಗೆ ಉತ್ತರಾಖಂಡ ಸರ್ಕಾರ ಭರವಸೆ ಹೊಂದಿದೆ.
ಭಾರತದ 12 ಜ್ಯೋತಿರ್ಲಿಂಗಗಳು ಮತ್ತು ಪಂಚ ಕೇದಾರಗಳಲ್ಲಿ ಒಂದಾದ ಉತ್ತರಾಖಂಡದಲ್ಲಿರುವ ಕೇದಾರನಾಥ ಧಾಮದ ಬಾಗಿಲು ಶುಕ್ರವಾರ ಬೆಳಗ್ಗೆ 7 ಗಂಟೆಗೆ ತೆರೆಯಲಾಗಿದೆ. ಚಳಿಗಾಲದಲ್ಲಿ ಆರು ತಿಂಗಳ ಕಾಲ ಮುಚ್ಚಲ್ಪಡುವ ಈ ದೇವಾಲಯದ ಬಾಗಿಲನ್ನು ಅಕ್ಷಯ ತೃತೀಯ ಹಬ್ಬದಂದು ಭಕ್ತರಿಗಾಗಿ ತೆರೆಯಲಾಗಿದೆ.ಸಂಪೂರ್ಣ ಧಾರ್ಮಿಕ ವಿಧಿ ವಿಧಾನಗಳು ಮತ್ತು ವೇದ ಮಂತ್ರಗಳ ಪಠಣಗಳ ನಡುವೆ ಭಕ್ತರಿಂದ ‘ಹರ ಹರ ಮಹಾದೇವ್’ ಘೋಷಣೆಯೊಂದಿಗೆ ಕೇದಾರನಾಥ ಧಾಮದ ಬಾಗಿಲು ತೆರೆಯಲಾಯಿತು. ದೇವಸ್ಥಾನದ ಬಾಗಿಲು ತೆರೆಯುವ ವೇಳೆ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರ ಪತ್ನಿ ಗೀತಾ ಧಾಮಿ ಅವರು ಬಾಬಾನ ದರ್ಶನಕ್ಕೆ ಹಾಜರಿದ್ದರು.