ರಾಹುಲ್ ಗಾಂಧಿ ಇಂದು ಮಣಿಪುರಕ್ಕೆ ಭೇಟಿ ನೀಡುವ ಮುನ್ನ ಅಸ್ಸಾಂನ ಸಿಲ್ಚಾರ್ ನಗರಕ್ಕೆ ಭೇಟಿ ನೀಡಿದ್ದಾರೆ. ಹಿಂಸಾಚಾರ ಪೀಡಿತ ಮಣಿಪುರಕ್ಕೆ ಹೋಗುವ ಮಾರ್ಗದಲ್ಲಿ ಅವರು ಸೋಮವಾರ ಅಸ್ಸಾಂನಲ್ಲಿ ಪ್ರವಾಹ ಪೀಡಿತ ಜನರನ್ನು ಭೇಟಿ ಮಾಡಿದ್ದಾರೆ.
ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾದ ನಂತರ ಈಶಾನ್ಯ ರಾಜ್ಯಗಳಿಗೆ ಭೇಟಿ ನೀಡುತ್ತಿದ್ದಾರೆ. ಅಸ್ಸಾಂ ಮತ್ತು ಮಣಿಪುರದಲ್ಲಿ ಪರಿಸ್ಥಿತಿ ವಿಕೋಪಕ್ಕೆ ಹೋಗಿದ್ದು, ಎರಡು ರಾಜ್ಯಗಳಲ್ಲಿ ಪರಿಸ್ಥಿತಿ ಅವಲೋಕಿಸಲಿದ್ದಾರೆ ರಾಹುಲ್ ಗಾಂಧಿ ಎಂದು ಪಕ್ಷದ ರಾಜ್ಯ ವಕ್ತಾರರು ತಿಳಿಸಿದ್ದಾರೆ.
ಅಸ್ಸಾಂನಲ್ಲಿ ಹಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆ, ಭೂಕುಸಿತ ಮತ್ತು ನದಿಗಳು ಉಕ್ಕಿ ಹರಿಯುತ್ತಿರುವ ಕಾರಣ ರಾಜ್ಯವು ಭೀಕರ ಪ್ರವಾಹವನ್ನು ಎದುರಿಸುತ್ತಿದೆ. ಇದೆ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಅಸ್ಸಾಂಗೆ ಭೇಟಿ ನೀಡುತ್ತಿದ್ದಾರೆ. 28 ಜಿಲ್ಲೆಗಳಲ್ಲಿ ಸುಮಾರು 22.70 ಲಕ್ಷ ಜನರು ಪ್ರವಾಹದಿಂದ ಸಂತ್ರಸ್ತರಾಗಿದ್ದಾರೆ.
ಸಂಸದ ರಾಹುಲ್ ಗಾಂಧಿ ಬೆಳಗ್ಗೆ ಅಸ್ಸಾಂನ ಕ್ಯಾಚಾರ್ ಜಿಲ್ಲೆಯ ಸಿಲ್ಚಾರ್‌ನಲ್ಲಿರುವ ಕುಂಭಿಗ್ರಾಮ್ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಅವರು ಲಖಿಪುರದ ಪ್ರವಾಹ ಪರಿಹಾರ ಶಿಬಿರಕ್ಕೆ ಭೇಟಿ ನೀಡಿ ಅಲ್ಲಿ ಆಶ್ರಯ ಪಡೆದಿರುವ ಜನರೊಂದಿಗೆ ಸಂವಾದ ನಡೆಸುವ ನಿರೀಕ್ಷೆಯಿದೆ ಎಂದು ವಕ್ತಾರರು ತಿಳಿಸಿದ್ದಾರೆ. ರಾಹುಲ್ ಗಾಂಧಿ ಮಣಿಪುರದ ಜಿರಿಬಾಮ್ ಜಿಲ್ಲೆಗೆ ತೆರಳುವ ಮಾರ್ಗದಲ್ಲಿ ನಿರಾಶ್ರಿತರ ಶಿಬಿರ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಪರಿಹಾರ ಶಿಬಿರಗಳಿಗೆ ಭೇಟಿ ನೀಡಿ ಸಂತ್ರಸ್ತರ ಜೊತೆ ಮಾತುಕತೆ ನಡೆಸಿದ ಬಳಿಕ ಸಂಸದ ರಾಹುಲ್ ಗಾಂಧಿ ಜಿರಿಬಾಮ್‌ನಿಂದ ಅಸ್ಸಾಂನ ಸಿಲ್ಚಾರ್ ವಿಮಾನ ನಿಲ್ದಾಣಕ್ಕೆ ಹಿಂತಿರುಗುತ್ತಾರೆ. ಬಳಿಕ ಮಣಿಪುರ ಪ್ರವಾಸಕ್ಕೆ ತೆರಳಲಿದ್ದು, ಅಲ್ಲಿಂದ ಇಂಫಾಲ್‌ಗೆ ಹಾರಲಿದ್ದಾರೆ. ಕಳೆದ ವರ್ಷ ಮೇ 3 ರಿಂದ, ಮಣಿಪುರದಲ್ಲಿ ಮೈತೇಯಿ ಮತ್ತು ಕುಕಿ ಸಮುದಾಯಗಳ ನಡುವೆ ಜನಾಂಗೀಯ ಹಿಂಸಾಚಾರ ನಡೆಯುತ್ತಿದೆ. ಇದುವರೆಗೆ 200 ಕ್ಕೂ ಹೆಚ್ಚು ಜನರು ಘರ್ಷಣೆಯಲ್ಲಿ ಸಾವನ್ನಪ್ಪಿದ್ದಾರೆ. ಅಸ್ಸಾಂ ಪ್ರವಾಹದಲ್ಲಿ 78 ಮಂದಿ ಬಲಿ ಇತ್ತ, ಅಸ್ಸಾಂನಲ್ಲಿ ಈ ವರ್ಷದ ಪ್ರವಾಹ, ಭೂಕುಸಿತ ಮತ್ತು ಚಂಡಮಾರುತದಲ್ಲಿ ಈವರೆಗೆ ಒಟ್ಟು 78 ಜನರು ಸಾವನ್ನಪ್ಪಿದ್ದಾರೆ. ಕಮ್ರೂಪ್, ನಾಗಾಂವ್, ಕ್ಯಾಚಾರ್, ಧುಬ್ರಿ, ಗೋಲ್ಪಾರಾ, ಮೊರಿಗಾಂವ್, ಹೈಲಕಂಡಿ, ಬೊಂಗೈಗಾಂವ್, ಸೌತ್ ಸಲ್ಮಾರಾ, ದಿಬ್ರುಗಢ್, ಕರೀಮ್‌ಗಂಜ್, ಲಖಿಂಪುರ, ಹೋಜೈ, ನಲ್ಬರಿ, ಚರೈಡಿಯೊ, ಬಿಸ್ವನಾಥ್, ಗೋಲಾಘಾಟ್, ಜೋರ್ಹತ್, ಬರ್ಪೆ, ಸೋಹರ್, ಸೋಹರ್, ಬರ್ಪೆತಾಜಿ, ಮಜುಲಿ, ಕಮ್ರೂಪ್ (ಮೆಟ್ರೋಪಾಲಿಟನ್), ದರ್ರಾಂಗ್, ಶಿವಸಾಗರ್, ಚಿರಾಂಗ್ ಮತ್ತು ಟಿನ್ಸುಕಿಯಾ ಪ್ರವಾಹ ಪೀಡಿತ ಜಿಲ್ಲೆಗಳು.
ಬ್ರಹ್ಮಪುತ್ರ, ಬರಾಕ್ ಮತ್ತು ಅದರ ಉಪನದಿಗಳು ಸೇರಿದಂತೆ ಒಂಬತ್ತು ನದಿಗಳು ರಾಜ್ಯದ ಹಲವೆಡೆ ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಬ್ರಹ್ಮಪುತ್ರದ ನೀರಿನ ಮಟ್ಟವು ನೇಮತಿಘಾಟ್, ತೇಜ್‌ಪುರ ಮತ್ತು ಧುಬ್ರಿಯಲ್ಲಿ ಅಪಾಯದ ಮಟ್ಟಕ್ಕಿಂತ ಹೆಚ್ಚಾಗಿ ಹರಿಯುತ್ತಿದೆ. ಆದರೆ, ಗುವಾಹಟಿಯಲ್ಲಿ ಬ್ರಹ್ಮಪುತ್ರದ ನೀರಿನ ಮಟ್ಟ ಕಡಿಮೆಯಾಗಿದೆ.