Ad image

World Food Day 2024 : ನೀವು ಬಿಸಾಡುವ ಆಹಾರವು ಇನ್ನೊಬ್ಬರ ಹೊಟ್ಟೆ ತುಂಬಿಸಲಿ

Vijayanagara Vani
World Food Day 2024 : ನೀವು ಬಿಸಾಡುವ ಆಹಾರವು ಇನ್ನೊಬ್ಬರ ಹೊಟ್ಟೆ ತುಂಬಿಸಲಿ
    • ಪ್ರತಿ ವರ್ಷ ಅಕ್ಟೋಬರ್ 16 ರಂದು ಜಗತ್ತಿನಾದ್ಯಂತ ‘ವಿಶ್ವ ಆಹಾರ ದಿನ’ವನ್ನಾಗಿ ಆಚರಿಸಲಾಗುತ್ತಿದೆ. ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಮಂಡಳಿಯು ಈ ದಿನವನ್ನು ಪ್ರಾರಂಭಿಸಿದೆ. ಹಸಿವಿನ ಸಮಸ್ಯೆ ಹಾಗೂ ಆರೋಗ್ಯಕರ ಆಹಾರದ ಸೇವನೆಯ ಕುರಿತು ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದೆ. ಹಾಗಾದರೆ ಈ ದಿನದ ಕುರಿತಾದ ಇನ್ನಷ್ಟು ಮಾಹಿತಿ ಇಲ್ಲಿದೆ

ತಿನ್ನುವ ಪ್ರತಿ ಅಗುಳಿನ ಮೇಲೆಯೂ ತಿನ್ನುವವನ ಹೆಸರು ಬರೆದಿದೆ ಎಂಬ ಮಾತಿದೆ. ಆದರೆ, ತಿಳಿವಳಿಕೆಯ ಕೊರತೆಯಿಂದಾಗಿ ಆಹಾರವನ್ನು ಚೆಲ್ಲುವವರೇ ಅಧಿಕವಾಗಿದ್ದಾರೆ. ಉಳ್ಳವರು ಉಳಿದ ಆಹಾರವನ್ನು ಬಿಸಾಡುತ್ತಿದ್ದರೆ, ಬಡತನದಿಂದ ನರಳುತ್ತಿರುವವರು ಒಂದ್ಹೊತ್ತಿನ ಊಟಕ್ಕೂ ಒದ್ದಾಡುತ್ತಿದ್ದಾರೆ. ಇಂದಿಗೂ ವಿಶ್ವದಾದ್ಯಂತ ಕೋಟ್ಯಂತರ ಜನರು ಹಸಿವಿನಿಂದ ಬಳಲುವವರ ಸಂಖ್ಯೆಯೂ ಹೆಚ್ಚಾಗುತ್ತಲೇ ಇದೆ. ಹೀಗಾಗಿ ಹಸಿವಿನ ಸಮಸ್ಯೆ ಹಾಗೂ ಆಹಾರದ ಸೇವನೆಯ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಅಕ್ಟೋಬರ್ 16 ರಂದು ವಿಶ್ವ ಆಹಾರ ದಿನವಾಗಿ ಆಚರಿಸಲಾಗುತ್ತಿದೆ.

ವಿಶ್ವ ಆಹಾರ ದಿನದ ಇತಿಹಾಸ
1945 ಅಕ್ಟೋಬರ್ 16ರಂದು ರೋಮ್‌ನಲ್ಲಿ ವಿಶ್ವ ಆಹಾರ ಮತ್ತು ಕೃಷಿ ಸಂಸ್ಥೆ (ಎಫ್‌ಎಒ) ಯೂ ಅಸ್ತಿತ್ವಕ್ಕೆ ಬಂದಿತ್ತು. ಆ ಬಳಿಕ ಸದಸ್ಯರಾಷ್ಟ್ರಗಳ ಸಾಮಾನ್ಯ ಸಭೆಯೊಂದರ ವೇಳೆ ಹಂಗೇರಿಯ ನಿಯೋಗದ ಮುಖ್ಯಸ್ಥರಾದ ಡಾ.ಪಾಲ್‌ ರೊಮೊಯ್‌, ಸಂಸ್ಥೆಯ ಸ್ಥಾಪನಾ ದಿನವನ್ನೇ ವಿಶ್ವ ಆಹಾರ ದಿನ’ವನ್ನಾಗಿ ಆಚರಿಸುವ ಬಗ್ಗೆ ಪ್ರಸ್ತಾಪ ಮಾಡಿದ್ದರು. ಆ ಬಳಿಕ ಅ.16ರಂದು ವಿಶ್ವ ಆಹಾರ ದಿನಾಚರಣೆಯ ನಿರ್ಣಯ ಕೈಗೊಳ್ಳಲಾಗಿದ್ದು,1981ರಿಂದ ವಿಶ್ವ ಆಹಾರ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.

ವಿಶ್ವ ಆಹಾರ ದಿನದ ಮಹತ್ವ ಹಾಗೂ ಥೀಮ್
ಹಸಿವು ಮತ್ತು ಅಪೌಷ್ಟಿಕತೆಯ ವಿರುದ್ಧದ ಹೋರಾಟದಲ್ಲಿ ವಿಶ್ವ ಆಹಾರ ದಿನವು ಪ್ರಮುಖ ಪಾತ್ರವಹಿಸುತ್ತದೆ. ಜಗತ್ತಿನಲ್ಲಿ ಹಸಿವನ್ನು ನಿರ್ಮೂಲನೆ ಮಾಡುವುದು ಹಾಗೂ ಹಸಿವಿನ ಸಮಸ್ಯೆಯನ್ನು ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ವ್ಯಕ್ತಿಗಳಿಗೆ ಗೌರವ ಸಲ್ಲಿಸುವ ಸಲುವಾಗಿ ಈ ದಿನವು ಮಹತ್ವದ್ದಾಗಿದೆ. ಈ ಬಾರಿ ಉತ್ತಮ ಜೀವನ ಮತ್ತು ಉತ್ತಮ ಭವಿಷ್ಯಕ್ಕಾಗಿ ಆಹಾರದ ಹಕ್ಕು‘ ಎಂಬುದು ಥೀಮ್ ನಡಿಯಲ್ಲಿ ವಿಶ್ವ ಆಹಾರ ದಿನವನ್ನು ಆಚರಿಸಲಾಗುತ್ತಿದೆ. ಈ ದಿನದಂದು ಪ್ರಪಂಚದಾದಂತ್ಯ ಅಭಿಯಾನಗಳು, ಜಾಗೃತಿ ಅಭಿಯಾನಗಳು ಹಮ್ಮಿಕೊಳ್ಳಲಾಗುತ್ತದೆ.

ಆಹಾರ ತ್ಯಾಜ್ಯವನ್ನು ಕಡಿಮೆ ಮಾಡುವುದು ಹೇಗೆ?
* ದಿನನಿತ್ಯ ಸೇವಿಸಲು ಆರೋಗ್ಯಕರ ಆಹಾರವನ್ನು ಆಯ್ಕೆ ಮಾಡಿಕೊಳ್ಳಿ. ಇದರಿಂದ ಆರೋಗ್ಯ ಹಾಗೂ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬಹುದು.


* ಆಹಾರ ಉತ್ಪನ್ನಗಳನ್ನು ಆಯ್ಕೆ ಮಾಡುವ ಮೊದಲು ಲೇಬಲ್‌ಗಳು ಮತ್ತು ಪ್ಯಾಕೇಜಿಂಗ್ ಅನ್ನು ಓದುವುದನ್ನು ಮರೆಯದಿರಿ.
* ಆಹಾರ ಸಂಗ್ರಹಿಸುವುದರೊಂದಿಗೆ ವ್ಯರ್ಥವಾಗದಂತೆ ನೋಡಿಕೊಳ್ಳಿ. ಆಹಾರವನ್ನು ಮರುಬಳಕೆ ಮಾಡಿ.
* ಉಳಿದ ಆಹಾರದಿಂದ ಗೊಬ್ಬರ ತಯಾರಿಸುವ ಮೂಲಕ ಸಣ್ಣ ರೈತರು ಮತ್ತು ಸ್ಥಳೀಯ ಉತ್ಪಾದಕರನ್ನು ಬೆಂಬಲ ನೀಡಿ ✍️✍️ ಎನ್.ನಂದೀಶ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಭೈರಾಪುರ ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲೂಕು

Share This Article
error: Content is protected !!
";