ಶಿವಮೊಗ್ಗ ನವೆಂಬರ್ 27; (): ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ಭೀಮಪ್ಪ ಬಿನ್ ಹನುಮಂತಪ್ಪ ಎಂಬುವವರು ಶ್ರೀರಾಮ್ ಜನರಲ್ ಇನ್ಸೂರೆನ್ಸ್, ಶಿವಮೊಗ್ಗ ಇವರ ಮೇಲೆ ವಿರುದ್ದ ಸೇವಾನ್ಯೂನ್ಯತೆ ಕುರಿತು ದಾಖಲಿಸಿದ್ದ ಪ್ರಕರಣದಲ್ಲಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಪರಿಹಾರ ನೀಡಲು ಆದೇಶಿಸಿದೆ.
ಭೀಮಪ್ಪ ಎಂಬುವವರ ಮಗ ಬಸವರಾಜು ಎಂಬುವವರು ಏಪ್ರಿಲ್ 2022ರಲ್ಲಿ ಮೋಟಾರ್ ಸೈಕಲ್ ಅಪಘಾತದಲ್ಲಿ ನಿಧನ ಹೊಂದಿದ್ದು, ಅವರ ವೈಯಕ್ತಿಕ ಅಪಘಾತ ಪರಿಹಾರವನ್ನು ಕೊಡುವಂತೆ ಅರ್ಜಿ ಸಲ್ಲಿಸಿದ್ದರು. ಆದರೆ ವಿಮಾ ಕಂಪನಿಯು ಅಪಘಾತ ಸಮಯದಲ್ಲಿ ಬಸವರಾಜು ಎಲ್.ಎಲ್.ಆರ್. ಹೊಂದಿದ್ದು ಡಿ.ಎಲ್ ಹೊಂದಿಲ್ಲವೆಂದ ಅರ್ಜಿಯನ್ನು ತಿರಸ್ಕರಿಸಿದ್ದನ್ನು ಆಯೋಗಕ್ಕೆ ತಿಳಿಸಿದ್ದರು.
ಈ ಪ್ರಕರಣವನ್ನು ಆಯೋಗವು ನೊಂದಣಿ ಮಾಡಿಕೊಂಡು ವಿಮಾ ಕಂಪನಿಗೆ ಅಂಚೆ ಮೂಲಕ ನೋಟಿಸ್ ಕಳುಹಿಸಿ ದೂರಿನ ಬಗ್ಗೆ ತಕರಾರು ಇದ್ದಲ್ಲಿ ಖುದ್ದು ಅಥವಾ ವಕೀಲರ ಮೂಲಕ ಸಲ್ಲಿಸುವಂತೆ ಸೂಚಿಸಲಾಗಿತ್ತು. ವಿಮಾ ಕಂಪನಿಯು ವಕೀಲರ ಮೂಲಕ ಚಾಲನ ಪರವಾನಿಗಿ ಇಲ್ಲದಿದ್ದರಿಂದ ಕ್ಲೇಮ್ನ್ನು ತಿರಸ್ಕರಿಸಿದ್ದು, ಸೇವಾ ನ್ಯೂನತೆಯಾಗಿರುವುದಿಲ್ಲ. ಕಾರಣ ದೂರನ್ನು ವಜಾ ಮಾಡಲು ಕೋರಿರುತ್ತಾರೆ.
ಆದರೆ ಆಯೋಗವು ಪ್ರಮಾಣ ಪತ್ರ ಮತ್ತು ದಾಖಲೆಗಳನ್ನು ಪರಿಶೀಲಿಸಿ, ಮತ್ತು ವಕೀಲರ ವಾದಗಳನ್ನು ಆಲಿಸಿ, ಉಚ್ಛನ್ಯಾಯಾಲಯ, ಬೆಂಗಳೂರು ಮತ್ತು ಸರ್ವೋಚ್ಛ ನ್ಯಾಯಾಲಯ, ನವದೆಹಲಿ ಹಾಗೂ ದೇಶದ ವಿವಿಧ ಉಚ್ಛ ನ್ಯಾಯಾಲಯಗಳಲ್ಲಿ ಆದ ಆದೇಶಗಳಲ್ಲಿ ಎಲ್.ಎಲ್.ಆರ್. ಹೊಂದಿರುವ ಮೋಟಾರ್ ಸೈಕಲ್ ಸವಾರರು ಸಹ ವಾಹನವನು ಚಲಾಯಿಸಲು ಚಾಲನೆಯಲ್ಲಿರುವ ಎಲ್.ಎಲ್.ಆರ್. ಸಹ ಸರಿಯಾದ ಚಾಲನಾ ಪರವಾನಗಿಯಾಗಿರುತ್ತದೆ ಎಂದು ನೀಡಿರುವ ಆದೇಶವನ್ನು ಪರಿಗಣಿಸಿ ಶ್ರೀರಾಮ್ ಜನರಲ್ ಇನ್ಸೂರೆನ್ಸ್ ಕಂಪನಿಯು ಸೇವಾ ನ್ಯೂನ್ಯತೆ ಎಸಗಿರುತ್ತಾರೆ ಎಂದು ತೀರ್ಮಾನಿಸಿದೆ.
ಆದ್ದರಿಂದ ಅರ್ಜಿದಾರರಿಗೆ ವೈಯಕ್ತಿಕ ಅಪಘಾತದ ಮೊತ್ತ ರೂ. 15.00 ಲಕ್ಷ ಪರಿಹಾರವನ್ನು ವಿಮಾ ಕಂಪನಿಯು ಅರ್ಜಿಯನ್ನು ತಿರಸ್ಕರಿಸಿದ ದಿನಾಂಕದಿಂದ ವಾರ್ಷಿಕ ಶೇ.9% ರ ಬಡ್ಡಿಯೊಂದಿಗೆ ಈ ಆದೇಶವಾದ 45 ದಿನಗಳೊಳಗೆ ಪಾವತಿಸುವಂತೆ, ತಪ್ಪಿದ್ದಲ್ಲಿ ಈ ಆದೇಶದ ದಿನಾಂಕದಿಂದ ರೂ. 15.00 ಲಕ್ಷಗಳಿಗೆ ವಾರ್ಷಿಕ ಶೇ 12% ರ ಬಡ್ಡಿಯನ್ನು ಪೂರಾ ಹಣ ನೀಡುವವರೆಗೂ ಪಾವತಿಸಲು ಹಾಗೂ ಎದುರುದಾರರ ಸೇವಾ ನ್ಯೂನ್ಯತೆಯಿಂದ ಫರ್ಯಾದಿದಾರರಿಗೆ ಉಂಟಾದ ಮಾನಸಿಕ ವ್ಯಥೆಗೆ ರೂ. 20,000/-ಗಳನ್ನು ಹಾಗೂ ರೂ. 10,000/- ಗಳನ್ನು ವ್ಯಾಜ್ಯದ ಖರ್ಚು-ವೆಚ್ಚಗಳ ಬಾಬ್ತು ಎಂದು ನೀಡಬೇಕೆಂದು ನಿರ್ದೇಶಿಸಿ, ಶಿವಮೊಗ್ಗ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಶ್ರೀ ಟಿ.ಶಿವಣ್ಣ, ಮಹಿಳಾ ಸದಸ್ಯರಾದ ಶ್ರೀಮತಿ ಸವಿತಾ ಬಿ. ಪಟ್ಟಣಶೆಟ್ಟಿ ಮತ್ತು ಸದಸ್ಯರಾದ ಬಿ.ಡಿ.ಯೋಗಾನಂದ ಭಾಂಡ್ಯ ಇವರ ಪೀಠವು ನ.20 ರಂದು ಆದೇಶಿಸಿದೆ.