ಶಿವಮೊಗ್ಗ :ಡಿಸೆಂಬರ್ 02; ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ಶ್ರೀಮತಿ ಉಷಾಬಾಯಿ ಬಿನ್ ಬಿ.ಎಂ.ರವಿ ಎಂಬುವವರು ವಕೀಲರ ಮೂಲಕ ಆದಿತ್ಯ ಬಿರ್ಲಾ ಹೆಲ್ತ್ ಇನ್ಸೂರೆನ್ಸ್ ಕಂಪನಿ, ಮುಂಬೈ ಮತ್ತು ಫೈನಾನ್ಸ್ ಲಿಮಿಟೆಡ್, ಶಿವಮೊಗ್ಗ ಇವರ ವಿರುದ್ದ ಸೇವಾನ್ಯೂನ್ಯತೆ ಕುರಿತು ದಾಖಲಿಸಿದ್ದ ಪ್ರಕರಣದಲ್ಲಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಪರಿಹಾರ ನೀಡಲು ಆದೇಶಿಸಿದೆ.
ಶ್ರೀಮತಿ ಉಷಾಬಾಯಿ ಎಂಬುವವರು ಮುಂಬೈಯ ಅದಿತ್ಯ ಬಿಲಾ ಹೆಲ್ಸ್ ಇನ್ಸೂರೆನ್ಸ್ ಕಂಪನಿಯು ವಿತರಿಸಿದ 1.00 ಲಕ್ಷ ರೂ. ಕವರೇಜ್ ಹೊಂದಿರುವ ಗ್ರೂಪ್ ಆಕ್ಟೀವ್ ಹೆಲ್ತ್ ಮಾಸ್ಟರ್ ಪಾಲಿಸಿಯನ್ನು ಶಿವಮೊಗ್ಗದ ಫೈನಾನ್ಸ್ ಲಿ.ರ ಮೂಲಕ ಪಡೆದಿದ್ದು, ಪಾಲಿಸಿದಾರರು 2023ರ ಏಪ್ರಿಲ್‌ನಲ್ಲಿ ಚಂದ್ರಗಿರಿ ಆಸ್ಪತ್ರೆಯಲ್ಲಿ ಹರಿಯೋಪ್ಲಾಸ್ಟಿ ಸರ್ಜರಿಯನ್ನು ಮಾಡಿಸಿಕೊಂಡು, ಎಲ್ಲಾ ದಾಖಲೆಗಳನ್ನು ನೀಡಿ ರೂ. 75,469/- ಗಳ ವೈದ್ಯಕೀಯ ವೆಚ್ಚದ ಬಿಲ್‌ನ್ನು ಮರುಪಾವತಿಗಾಗಿ ಕಂಪನಿಗೆ ನೀಡಿರುತ್ತಾರೆ. ಆದರೆ ಕಂಪನಿಯವರು ಹಿಂದಿನ ಖಾಯಿಲೆಯನ್ನು ಮುಚ್ಚಿಟ್ಟು ವಿಮಾ ಪಾಲಿಸಿ ಪಡೆದಿರುತ್ತಾರೆಂದು ಮರುಪಾವತಿಯನ್ನು ತಿರಸ್ಕರಿಸುರತ್ತಾರೆಂದು ಆಯೋಗಕ್ಕೆ ದೂರು ನೀಡಿರುತ್ತಾರೆ.
ಈ ಪ್ರಕರಣವನ್ನು ಆಯೋಗವು ನೊಂದಣಿ ಮಾಡಿಕೊಂಡು ವಿಮಾ ಕಂಪನಿಗೆ ಅಂಚೆ ಮೂಲಕ ನೋಟಿಸ್ ಕಳುಹಿಸಿ ದೂರಿನ ಬಗ್ಗೆ ತಕರಾರು ಇದ್ದಲ್ಲಿ ಖುದ್ದು ಅಥವಾ ವಕೀಲರ ಮೂಲಕ ಸಲ್ಲಿಸುವಂತೆ ಸೂಚಿಸಲಾಗಿತ್ತು. ವಿಮಾ ಕಂಪನಿಯು ದೂರುದಾರರು 10 ವರ್ಷಗಳಿಂದ ಇದ್ದ ಖಾಯಿಲೆಯನ್ನು ಮುಚ್ಚಿಟ್ಟು ಪಾಲಿಸಿ ಮಾಡಿದ್ದಾರೆ ಎಂದು ಕ್ಲೇಮ್‌ನ್ನು ತಿರಸ್ಕರಿಸಿದ್ದು, ಸೇವಾ ನ್ಯೂನತೆಯಾಗಿರುವುದಿಲ್ಲ. ಕಾರಣ ದೂರನ್ನು ವಜಾ ಮಾಡಲು ಕೋರಿರುತ್ತಾರೆ.
ಆದರೆ ಆಯೋಗವು ಪ್ರಮಾಣ ಪತ್ರ ಮತ್ತು ದಾಖಲೆಗಳನ್ನು ಪರಿಶೀಲಿಸಿ, ಮತ್ತು ವಕೀಲರ ವಾದಗಳನ್ನು ಆಲಿಸಿ, ಕಂಪನಿಯು ಅಪಾದಿಸಿರುವ ಕಾರಣಕ್ಕೆ ಯಾವುದೇ ಪೂರಕವಾದ ದಾಖಲೆಗಳನ್ನು ಹಾಜರುಪಡಿಸಿರುವುದಿಲ್ಲವೆಂದು, ಕ್ಲೇಮ್ ತಿರಸ್ಕರಿಸುವುದು ಯಾವುದೇ ಕಾನೂನಿನಡಿಯಲ್ಲಿ ಬರುವುದಿಲ್ಲವೆಂದು ತೀರ್ಮಾನಿಸಿ ಫರ‍್ಯಾದನ್ನು ಭಾಗಶಃ ಪುರಸ್ಕರಿಸಿ ಇನ್ಸೂರೆನ್ಸ್ ಕಂಪನಿಯು ಸೇವಾ ನ್ಯೂನ್ಯತೆ ಎಸಗಿರುತ್ತಾರೆ ಎಂದು ತೀರ್ಮಾನಿಸಿದೆ.
ಆದ್ದರಿಂದ ಅರ್ಜಿದಾರರಿಗೆ ವೈದ್ಯಕೀಯ ವೆಚ್ಚದ ಮೊತ್ತ ರೂ. 73,370/-ಗಳನ್ನು (ವೈದ್ಯಕೀಯ ಬಿಲ್‌ಗಳ ಪ್ರಕಾರ) ವಿಮಾ ಕಂಪನಿಯು ಅರ್ಜಿಯನ್ನು ತಿರಸ್ಕರಿಸಿದ ದಿನಾಂಕದಿಂದ ವಾರ್ಷಿಕ ಶೇ.9% ರ ಬಡ್ಡಿಯೊಂದಿಗೆ ಈ ಆದೇಶವಾದ 45 ದಿನಗಳೊಳಗೆ ಪಾವತಿಸುವಂತೆ, ತಪ್ಪಿದ್ದಲ್ಲಿ ಈ ಆದೇಶದ ದಿನಾಂಕದಿಂದ ರೂ. 73,370/-ಗಳಿಗೆ ವಾರ್ಷಿಕ ಶೇ 10% ರ ಬಡ್ಡಿಯನ್ನು ಪೂರಾ ಹಣ ನೀಡುವವರೆಗೂ ಪಾವತಿಸಲು ಹಾಗೂ ಎದುರುದಾರರ ಸೇವಾ ನ್ಯೂನ್ಯತೆಯಿಂದ ಫರ‍್ಯಾದಿದಾರರಿಗೆ ಉಂಟಾದ ಮಾನಸಿಕ ವ್ಯಥೆಗೆ ರೂ. 20,000/-ಗಳನ್ನು ಹಾಗೂ ರೂ. 10,000/- ಗಳನ್ನು ವ್ಯಾಜ್ಯದ ಖರ್ಚು-ವೆಚ್ಚಗಳ ಬಾಬ್ತು ಎಂದು ನೀಡಬೇಕೆಂದು ನಿರ್ದೇಶಿಸಿ, ಶಿವಮೊಗ್ಗ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಶ್ರೀ ಟಿ.ಶಿವಣ್ಣ, ಮಹಿಳಾ ಸದಸ್ಯರಾದ ಶ್ರೀಮತಿ ಸವಿತಾ ಬಿ. ಪಟ್ಟಣಶೆಟ್ಟಿ ಮತ್ತು ಸದಸ್ಯರಾದ ಬಿ.ಡಿ.ಯೋಗಾನಂದ ಭಾಂಡ್ಯ ಇವರ ಪೀಠವು ನ.28 ರಂದು ಆದೇಶಿಸಿದೆ.
———————