Ad image

ಬದುಕಿನ ಸವಾಲನ್ನು ಸ್ವೀಕರಿಸಿ ಗೆದ್ದ ಛಲಗಾತಿ

Vijayanagara Vani
ಬದುಕಿನ ಸವಾಲನ್ನು ಸ್ವೀಕರಿಸಿ ಗೆದ್ದ ಛಲಗಾತಿ
ಅದೊಂದು ಚೆಂದದ ಜೋಡಿ, ಆರತಿಗೊಬ್ಬ ಮಗಳು, ಕೀರ್ತಿಗೊಬ್ಬ ಮಗ ಕೈಯಲ್ಲೊಂದು ಉದ್ಯೋಗ ಕೂಡು ಕುಟುಂಬ ತುಂಬಾ ಚೆನ್ನಾಗಿಯೇ ಇತ್ತು. ಅದಾವ ಗಳಿಗೆಯಲ್ಲಿ ಆತ ಕುಡಿಯುವ ಚಟ ಕಲಿತನೋ ಗೊತ್ತಿಲ್ಲ…. ನಿಧಾನವಾಗಿ ಕುಡಿತದ ಚಟಕ್ಕೆ ಬಿದ್ದ ಆತ ಸಣ್ಣಪುಟ್ಟ ಕೈ ಸಾಲಗಳನ್ನು ಮಾಡಿಕೊಂಡ. ಚಟ ಕೈಮೀರಿ ಹೋಗಿ ಸಾಲ ಹೆಚ್ಚಾದಾಗ ಸಾಲ ಕೊಟ್ಟವರು ಮರುಪಾವತಿಗಾಗಿ ಬೆನ್ನು ಹತ್ತಿದರು.ಪುಟ್ಟ ಚಿನ್ನದ ಆಭರಣಗಳನ್ನು ತಯಾರಿಸುವ ಅಂಗಡಿಯನ್ನು ಹೊಂದಿದ್ದ ಆತ ಸಾಲ ಬಾಧೆ ತಾಳದೆ ಮನೆ ಬಿಟ್ಟು ಓಡಿ ಹೋದ.
ಆತನ ಚಿಕ್ಕ ವಯಸ್ಸಿನ ಪತ್ನಿ ಮತ್ತು ಎರಡು ಪುಟ್ಟ ಮಕ್ಕಳನ್ನು ಗಂಡನ ಮನೆಯವರು ಜೋಪಾನ ಮಾಡಲು ಆಸಕ್ತಿ ತೋರದೆ ಹೋದಾಗ, ತಮ್ಮ ಗಂಡು ಮಕ್ಕಳ ಸಲಹೆಯಂತೆ ಮಗಳು ಮತ್ತು ಮೊಮ್ಮಕ್ಕಳನ್ನು ತಮ್ಮ ಮನೆಗೆ ಕರೆ ತಂದರು ಅವರ ತಂದೆ.
ಅಕ್ಕ ಮತ್ತು ಅಕ್ಕನ ಮಕ್ಕಳ ಯೋಗಕ್ಷೇಮದ ಜವಾಬ್ದಾರಿಯನ್ನು ಹೊತ್ತು ತಮ್ಮಂದಿರು ಚೆನ್ನಾಗಿಯೇ ನಿಭಾಯಿಸಿದರು. ಇತ್ತ ಅಪ್ಪ ತನ್ನ ಅಳಿಯ ಮಾಡಿದ ಸಾಲವನ್ನು ತೀರಿಸಿ, ಮನೆ ಬಿಟ್ಟು ಓಡಿ ಹೋದ ಅಳಿಯನನ್ನು ಹುಡುಕಿಸಿ ಕರೆ ತಂದು, ತಾವಿದ್ದ ಊರಿನಲ್ಲಿಯೇ ಮನೆ ಮಾಡಿ ಕೊಟ್ಟು ತಮ್ಮದೇ ಅಂಗಡಿಯಲ್ಲಿ ಒಂದನ್ನು ಅವರಿಬ್ಬರಿಗೂ ಬಿಟ್ಟು ಕೊಟ್ಟು ಜೀವನ ನಿರ್ವಹಿಸಿ ಎಂದು ಸೂಚಿಸಿದರು. ಈಗಲಾದರೂ ಅಳಿಯ ಎನಿಸಿಕೊಂಡ ಆ ಮನುಷ್ಯ ಸುಧಾರಿಸಿದ್ದರೆ ತಾಪತ್ರಯವೇ ಇರುತ್ತಿರಲಿಲ್ಲ, ಮತ್ತೆ ತನ್ನ ದುಶ್ಚಟಗಳನ್ನು ಮುಂದುವರಿಸಿದ ಆತ ಅನಿವಾರ್ಯವಾಗಿ ಆತನ ಪತ್ನಿ ಮನೆ ಮತ್ತು ಅಂಗಡಿಯನ್ನು ತಾನೇ ಸಂಭಾಳಿಸತೊಡಗಿದಳು.
ಬೇರೆ ಊರಿಗೆ ಹೋದರೆ ಗಂಡ ಸುಧಾರಿಸುತ್ತಾನೆ ಎಂದು ತನ್ನ ತವರಿನಿಂದ ತುಸು ದೂರದ ಊರಿನಲ್ಲಿ ಮನೆ ಮಾಡಿ ಆತನಿಗೆ ಉದ್ಯೋಗಾವಕಾಶ ಕಲ್ಪಿಸಿದಳು… ಅಲ್ಲಿಯೂ ಆತ ಸುಧಾರಿಸುವ ಲಕ್ಷಣಗಳು ಕಾಣದೇ ಹೋದಾಗ ಮತ್ತೆ ತವರಿನಲ್ಲಿ ತನಗೆ ವಾಸಕ್ಕೆ ಕೊಟ್ಟ ಮನೆಗೆ ಮರಳಿದಳು ಆಕೆ.
ಈ ಎಲ್ಲಾ ಕಠಿಣ ಪರಿಸ್ಥಿತಿಗಳಲ್ಲೂ ಆಕೆಗೆ ಇದ್ದ ಒಂದೇ ಸಮಾಧಾನವೆಂದರೆ ಆಕೆಯ ಮಕ್ಕಳು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಸದಾ ಮಂಚೂಣಿಯಲ್ಲಿ ಇದ್ದದ್ದು.
ತನಗೆ ಮುಂಚಿನಿಂದಲೂ ಆಸಕ್ತಿ ಇದ್ದ ಹೊಲಿಗೆ ಮತ್ತು ಕಸೂತಿ ಕೆಲಸಗಳಲ್ಲಿ ಹೆಚ್ಚಿನ ಪರಿಣತಿಯನ್ನು ತನ್ನ ಸ್ನೇಹಿತರ ಸಹಾಯದಿಂದ ಪಡೆದು ಮದುವೆ ರೇಷ್ಮೆ ಸೀರೆಗಳಿಗೆ ಡಿಸೈನರ್ ಬ್ಲೌಸ್ ಗಳನ್ನು ಹೊಲಿದು ಕೊಡುವ ಬೋಟಿಕ್ ಒಂದನ್ನು ಹತ್ತಿರದ ಜಿಲ್ಲಾ ಕೇಂದ್ರದಲ್ಲಿ ತೆರೆದ ಆಕೆ ಅಲ್ಲಿಯೇ ಮನೆ ಮಾಡಿದಳು. ನುರಿತ ಕೆಲಸಗಾರರನ್ನು ಕರೆತಂದು ಉದ್ಯೋಗಾವಕಾಶಗಳನ್ನು ಕಲ್ಪಿಸಿ ಕೊಟ್ಟಳು. ಇಲ್ಲಿಯೂ ಕೂಡ ಗಂಡ ಕೇವಲ ಅಂಗಡಿಯಲ್ಲಿ ಕುಳಿತು ನೋಡಿಕೊಂಡಿದ್ದರೆ ಸಾಕಿತ್ತು, ಆದರೆ ಕುಡಿದು ಬಂದು ವಿಪರೀತ ರಂಪಾಟ ಮಾಡುತ್ತಿದ್ದನಲ್ಲದೇ ಕುಡಿದ ಮತ್ತಿನಲ್ಲಿ ಆಕೆಯ ಮೇಲೆ ಹಲವಾರು ಬಾರಿ ಹಲ್ಲೆಗಳನ್ನು ಕೂಡ ಮಾಡಿದ್ದ ಆತನ ನಡೆಗೆ ಬೇಸತ್ತ ಆಕೆ ತುಂಬಾ ಚೆನ್ನಾಗಿ ನಡೆಯುತ್ತಿದ್ದ ಬೊಟಿಕ್ ವ್ಯಾಪಾರವನ್ನು ತನ್ನ ತವರಿಗೆ ಸ್ಥಳಾಂತರಿಸಿದಳು. ಮರಳಿ ಮನೆಗೆ ಬರಲೊಪ್ಪದ ಗಂಡ ತನ್ನ ತಂದೆಯ ಮನೆಯಲ್ಲಿ ವಾಸವಿದ್ದು ತನ್ನ ಚಟಗಳನ್ನು ಮುಂದುವರಿಸಿದಾಗ, ತನ್ನ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಉಳಿಸಿಕೊಳ್ಳುವ ಮತ್ತು ಮಕ್ಕಳ ಮೇಲೆ ಉಂಟಾಗಬಹುದಾದ ದುಷ್ಪರಿಣಾಮಗಳನ್ನು
ನಿವಾರಿಸುವ ನಿಟ್ಟಿನಲ್ಲಿ ಅನಿವಾರ್ಯವಾಗಿ ಆತನಿಂದ ವಿಚ್ಛೇದನವನ್ನು ಪಡೆದಳು.
ತನ್ನ ವೈಯಕ್ತಿಕ ಶ್ರಮದ ದುಡಿಮೆ,ತಂದೆ ತಾಯಂದಿರ ಆಶೀರ್ವಾದ, ತಮ್ಮಂದಿರ ಮಾನಸಿಕ ಬೆಂಬಲದೊಂದಿಗೆ ತನ್ನಿಬ್ಬರು ಮಕ್ಕಳಿಗೂ ಒಳ್ಳೆಯ ಕಾಲೇಜುಗಳಲ್ಲಿ ಪ್ರವೇಶ ದೊರಕಿಸಿಕೊಟ್ಟಿರುವ ಆಕೆ ಕಳೆದ ಹತ್ತು ವರ್ಷಗಳಲ್ಲಿ ಹಲವಾರು ಸ್ಥಿತ್ಯಂತರಗಳನ್ನು ಅನುಭವಿಸಿ ಇದೀಗ ಬದುಕಿನಲ್ಲಿ
ಗಟ್ಟಿಯಾಗಿ ನೆಲೆಯೂರಿ ನಿಟ್ಟುಸಿರು ಬಿಟ್ಟಿದ್ದಾಳೆ.
ಚಿಕ್ಕ ವಯಸ್ಸಿನಲ್ಲಿ ವಿಚ್ಛೇದನ ಪಡೆದು ಎರಡು ಮಕ್ಕಳನ್ನು ತಾನೇ ದಿಕ್ಕಾಗಿ ಸಾಕಿ ಸಲಹುತ್ತಿರುವ ಮಗಳ ಬಗ್ಗೆ ತಂದೆ ತಾಯಿಗಳಿಗೆ,ಸಹೋದರರಿಗೆ ಮತ್ತು ಸ್ವತಃ ಆಕೆಯ ಮಕ್ಕಳಿಗೆ ಒಂದೆಡೆ ಹೆಮ್ಮೆ ಇದ್ದರೆ ಮತ್ತೊಂದೆಡೆ ಆಕೆಯೂ ಕೂಡ ಎಲ್ಲರಂತೆ ಮತ್ತೆ ವೈವಾಹಿಕ ಬದುಕಿನತ್ತ ಮುಖ ಮಾಡಲಿ ಎಂಬ ಆಶಯ ಅವರೆಲ್ಲರದ್ದು. ಮಕ್ಕಳಿಗೆ ತಂದೆಯ ಪ್ರೀತಿಯನ್ನು ಸವಿಯುವ ಬಯಕೆ, ಇನ್ನೂ ಚಿಕ್ಕ ವಯಸ್ಸಿನ ತಾಯಿ ಮರು ವಿವಾಹವಾಗಿ ತನಗೆ ಸಾಂಗತ್ಯವನ್ನು ಹೊಂದಲಿ ಮತ್ತು ತಮಗೆ ತಂದೆಯ ಪ್ರೀತಿಯನ್ನು ಕೊಡ ಮಾಡಲಿ ಎಂಬ ಒತ್ತಾಸೆ. ಇನ್ನೂ ಬಹಳ ದೊಡ್ಡದಾಗಿರುವ ಜೀವನದ ಹಾದಿಯನ್ನು ತಾಯಿ ಒಬ್ಬಳೇ ಸವೆಸುವುದು ಬೇಡ ಎಂಬ ಕಾಳಜಿಪೂರ್ವಕ ಒತ್ತಾಯಕ್ಕೆ ಮಣಿದ ಆಕೆ ವಿವಾಹಕ್ಕೆ ಸಮ್ಮತಿಯನ್ನು ಸೂಚಿಸಿದ್ದಾಳೆ.
ಮಕ್ಕಳ ಅಪೇಕ್ಷೆ, ಪಾಲಕರ ಒತ್ತಾಸೆ ಮತ್ತು ಸಹೋದರರ ಆಶಯದ ಮೇರೆಗೆ ಸುದೈವವಶಾತ್ ಆಕೆಯ ಜೀವನದ ರೀತಿಯಲ್ಲಿಯೇ ಬದುಕಿನಲ್ಲಿ ನೋವನ್ನುಂಡ ದೂರದ ಸಂಬಂಧಿಯನ್ನು ಆಕೆಯ ಮನೆಯವರು ಆಯ್ಕೆ ಮಾಡಿದ್ದು, ಆಕೆಯು ಕೂಡ ಆತನೊಂದಿಗೆ ಮುಂದಿನ ಬದುಕಿನ ಕುರಿತು ಸ್ಪಷ್ಟ ಮಾತುಕತೆಯನ್ನು ನಡೆಸಿ ಈ ವಿವಾಹಕ್ಕೆ ಒಪ್ಪಿಗೆಯನ್ನು ಸೂಚಿಸಿದ್ದಾಳೆ. ಇನ್ನೇನು ಕೆಲವೇ ದಿನಗಳಲ್ಲಿ ಮಕ್ಕಳ ಸಮ್ಮುಖದಲ್ಲಿ ಆಕೆ ಹಸೆ ಮಣೆ ಏರಲಿದ್ದು ಆಕೆಯ ದಾಂಪತ್ಯ ಜೀವನ ಸುಖವಾಗಿರಲಿ ಎಂಬ ಆಶಯ,
ಸ್ನೇಹಿತರೆ, ಬದುಕಿನ ವೈಚಿತ್ರ್ಯಗಳು ಹೀಗೆಯೇ ಏನೋ?
ಒಮ್ಮೆ ನಗಿಸಿ ಮರುಕ್ಷಣವೇ ಅಳಿಸುವ, ಒಮ್ಮೆ ನೋಯಿಸಿ ಮತ್ತೆ ನಲಿವನ್ನು ಕೊಡುವ, ಸಂತಸದ ತುತ್ತ ತುದಿಯಲ್ಲಿರುವಾಗ ನಿರಾಶೆಯ ಕಡಲಿಗೆ ದೂಡುವ ಬದುಕು ಹಲವಾರು ಏರಿಳಿತಗಳನ್ನು ಹೊಂದಿದ್ದು ತನ್ನದೇ ಗತಿಯಲ್ಲಿ ಸಾಗುತ್ತಿರುತ್ತದೆ. ಎಷ್ಟೋ ಬಾರಿ ನಾವು ಆಯ್ಕೆ ಮಾಡಿಕೊಂಡ ಬದುಕು ನಮ್ಮದಾಗಿರುವುದಿಲ್ಲ, ಭಗವಂತನ ಆಯ್ಕೆಯೇ ಬೇರೆಯಾಗಿರುತ್ತದೆ. ಹೀಗೆ ಬದುಕು ಒಡ್ಡಿದ ಎಲ್ಲಾ ಸವಾಲುಗಳನ್ನು ಒಬ್ಬಂಟಿಯಾಗಿ ಎದುರಿಸಿ ತನ್ನ ಮತ್ತು ತನ್ನ ಮಕ್ಕಳ ಬದುಕನ್ನು ಹಸನಾಗಿಸಿಕೊಂಡ ಪುಟ್ಟ ಸ್ನೇಹಿತೆ ಇದೀಗ ತುಸು ಸಂತಸ,ಕೊಂಚ ಆತಂಕ (ಸಹಜವಾದ) ಮನದಲ್ಲಿಟ್ಟುಕೊಂಡು ಕೆಲವೇ ದಿನಗಳಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾಳೆ. ಆಕೆಯ ಜೀವನ ಸುಖಕರವಾಗಿ ಸಾಗಲಿ ಎಂದು ಪ್ರೀತಿಪೂರ್ವಕ ಹಾರೈಸುವ
ವೀಣಾ ಹೇಮಂತಗೌಡ ಪಾಟೀಲ್ ಮುಂಡರಗಿ ಗದಗ್
Share This Article
error: Content is protected !!
";