Ad image

ಮತ್ತೆ ಒಳಿತಿನತ್ತ… ಹಿಮ್ಮುಖ ಪಯಣ

Vijayanagara Vani
ಮತ್ತೆ ಒಳಿತಿನತ್ತ… ಹಿಮ್ಮುಖ ಪಯಣ

ಜಗತ್ತಿನಲ್ಲಿ ಬದಲಾವಣೆಯೊಂದೇ ನಿರಂತರವಾಗಿರುವುದು. ಈ ಹಿಂದೆ ಕಾಲನಡಿಗೆಯಲ್ಲಿ

- Advertisement -
Ad imageAd image

ಮೈಲಿಗಟ್ಟಲೆ ನಡೆಯುತ್ತಿದ್ದ ಜನ ಸಾಕುಪ್ರಾಣಿಗಳನ್ನು ಬಳಸಲು ಆರಂಭಿಸಿ, ಮುಂದೆ ಎತ್ತಿನ ಗಾಡಿ ಕುದುರೆ ರಥ ಸಾರೋಟುಗಳ ಸವಾರಿ ಮಾಡಿದರೆ ಕಳೆದ ಶತಮಾನದಲ್ಲಿ ದ್ವಿಚಕ್ರ, ತ್ರಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳು ಬಂದವು. ಇದೀಗ ಜೆಟ್ ವೇಗದಲ್ಲಿ ಓಡಾಡುವ ಖಂಡಗಳನ್ನು ಸುತ್ತುವ ಸೂಪರ್ ಸಾನಿಕ್ ವೇಗದ ವಿಮಾನಗಳು, ರೈಲುಗಳು, ಜಲಾಂತರ್ಗಾಮಿ ವಾಹನಗಳು ಬಳಕೆಯಲ್ಲಿದ್ದು ಎಲ್ಲರಿಗೂ ಸುಲಭ ಲಭ್ಯವಾಗುತ್ತಿದೆ. ಕೇವಲ ಖಂಡಗಳನ್ನಷ್ಟೇ ಅಲ್ಲ, ಕೆಲವೇ ದಶಕಗಳ ಹಿಂದೆ ಚಂದ್ರನ ಮೇಲೆ ಕಾಲಿಟ್ಟ ಮನುಷ್ಯ ಇದೀಗ ಮಂಗಳನ ಅಂಗಳಕ್ಕೆ ಪಯಣ ಸಾಗಿಸಿದ್ದಾನೆ.

ಮನುಷ್ಯ ಜೀವನವೂ ಅಷ್ಟೇ… ದಿನಬಳಕೆಯ ವಸ್ತುಗಳಾದ ತಾಮ್ರ ಹಿತ್ತಾಳೆ ಕಂಚಿನ ಪಾತ್ರೆಗಳು ಕೆಲವರ ಮನೆಗಳಲ್ಲಿ ಅಟ್ಟ ಸೇರಿದ್ದರೆ, ಮತ್ತೆ ಕೆಲವರು ಪಾತ್ರೆ ಅಂಗಡಿಗೆ ಹಾಕಿ ತಮಗೆ ಬೇಕಾದ ಪಳಪಳಿಸುವ ಸ್ಟೀಲ್ ಪಾತ್ರೆಗಳನ್ನು ಕೊಂಡಿದ್ದಾರೆ, ಮನೆಯಲ್ಲಿ ಸ್ಥಳಾವಕಾಶ ಇರುವ ಸೌಂದರ್ಯ ಪ್ರಜ್ಞೆಯನ್ನು ಹೊಂದಿದ ಉಳಿದ ಜನ ಅವುಗಳನ್ನು ಅಲಂಕಾರಿಕ ವಸ್ತುಗಳಾಗಿ ಬಳಸಿದ್ದಾರೆ.

ಈ ಹಿಂದೆ ಮನೆಯಲ್ಲಿ ಮಣ್ಣಿನ ಒಲೆಗಳು, ಗಚ್ಚಿನ ಹೊದಿಕೆ ಹಾಕಿದ ಒಲೆಗಳನ್ನು ಅಡುಗೆಗೆ, ನೀರು ಕಾಯಿಸಲು ಬಳಸಿದರು. ಇದೀಗ ಒಲೆಗಳು, ಸೀಮೆಎಣ್ಣೆ ಸ್ಟೋವ್, ಕರೆಂಟಿನ ಸ್ಟೋವ್ಗಳು ಕಣ್ಮರೆಯಾಗಿ ಗ್ಯಾಸ್ ಸ್ಟವ್ಗಳ ಅನೇಕ ವಿಧಗಳು ಲಭ್ಯವಾಗುತ್ತಿದ್ದು ಬಹುತೇಕ ಅವೇ ಬಳಕೆಯಲ್ಲಿವೆ… ಮತ್ತೆ ಕೆಲವರು ಮೈಕ್ರೋವೇವ್ ಓವನ್, ಓಟಿಜಿ, ಎಲೆಕ್ಟ್ರಿಕ್ ಓವನ್ಗಳನ್ನು ಅಡಿಗೆಗೆ ಬಳಸಿದರೆ ನೀರು ಕಾಯಿಸಲು ಈ ಹಿಂದೆ ಇರುತ್ತಿದ್ದ ಇಜ್ಜಲು ಒಲೆ, ಬತ್ತದ ಹೊಟ್ಟನ್ನು ತುಂಬಿ ಬಳಸುತ್ತಿದ್ದ ಒಲೆ, ಬಚ್ಚಲಿನಲ್ಲಿ ಹುಗಿದ ಹಂಡೆಯ ಒಲೆಗಳೆಲ್ಲ ಮಾಯವಾಗಿ ನಡುವೆ ಕೊಳವೆಯನ್ನು ಹೊಂದಿದ ಬಾಯ್ಲರ್ ನಂತಹ ನೀರು ಕಾಯಿಸುವ ಒಲೆಗಳನ್ನು ಕೂಡ ನಾವು ನೋಡಿದ್ದೇವೆ.ಇದೀಗ ಎಲೆಕ್ಟ್ರಿಕ್ ಗೀಸರ್, ಗ್ಯಾಸ್ ಗೀಜರ್ಗಳ ಕಾಲ. ಇನ್ನೂ ಹೇಳಬೇಕೆಂದರೆ ಇನ್ಸ್ ಟಾಂಟ್ ಗೀಜರ್ಗಳ ಕಾಲ.

ಈ ಹಿಂದೆ ಕೆಲವೇ ಕೆಲವು ಬಾಣಲಿ,ತಪ್ಪಲೆ, ಗುಂಡಿ ಮತ್ತು ಅಲ್ಯುಮಿನಿಯಂ ಪಾತ್ರೆಗಳ ಜೊತೆ ಜೀವನ ಸಾಗಿಸುತ್ತಿದ್ದ ಹಸಿ ಸೌದೆ ಒಲೆಯಲ್ಲಿ ಊದುಗೊಳವೆಯಿಂದ ಉರಿಯನ್ನು ಹೆಚ್ಚಿಸುತ್ತ, ಕಟ್ಟಿಗೆ ಒಲೆಯ ಹೊಗೆಯಿಂದ ಉಂಟಾಗುವ ಕಣ್ಣುರಿಗೆ ಸೆರಗಿನಿಂದ ಮುಖ ಒರೆಸಿಕೊಂಡು, ಬರುತ್ತಿರುವ ಕೆಮ್ಮನ್ನು ಬಾಯಿಗೆ ಸೀರೆಯ ಸೆರಗನ್ನು ಅಡ್ಡ ಹಿಡಿದು ಅಡುಗೆ ಮಾಡುತ್ತಿದ್ದ ತಾಯಂದಿರು ಇದೀಗ ಅದ್ಯಾವ ಜನಗಳಿಲ್ಲದೆ ಅಡುಗೆ ಮಾಡುತ್ತಿದ್ದು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.ದಿನಸಿ ಅಂಗಡಿಯಲ್ಲಿ ಸಿಗುತ್ತಿದ್ದ ಡಬ್ಬಗಳನ್ನೇ ತಂದು ಅವುಗಳು ಖಾಲಿಯಾದ ಮೇಲೆ ದಿನಸಿ ಸಾಮಾನುಗಳನ್ನು ತುಂಬಿಡಲು ಬಳಸುತ್ತಿದ್ದರೆ ಮತ್ತೆ ಕೆಲವೊಮ್ಮೆ ಅಂಗಡಿಯಾತನನ್ನು ಕಾಡಿಬೇಡಿ ಆತನ ಅಂಗಡಿಯಲ್ಲಿ ಖಾಲಿಯಾದ ಡಬ್ಬಗಳನ್ನು ತಂದು ಸಾಮಾನುಗಳನ್ನು ಹಾಕಿಡುತ್ತಿದ್ದ ಹೆಣ್ಣು ಮಕ್ಕಳು ಇದೀಗ ಸುಸಜ್ಜಿತವಾದ ಕಿಚನ್ ನಲ್ಲಿ ಬಣ್ಣ ಬಣ್ಣದ ಪರ್ಲ್ ಪೆಟ್, ಟಪ್ಪರ್ ವೇರ್ ಪ್ಲಾಸ್ಟಿಕ್ ಡಬ್ಬಗಳನ್ನು, ಮಿರಿ ಮಿರಿ ಮಿಂಚುವ ಸ್ಟೀಲ್ ಮತ್ತು ಹೊಳೆಯುವ ಗಾಜಿನ ವಿಧವಿಧ ಬಾಟಲಿಗಳನ್ನು ಬಳಸುತ್ತಿದ್ದು ಅಡುಗೆ ಮನೆ ಒಂದು ಪುಟ್ಟ ಆಫೀಸಿನಂತೆ ಭಾಸವಾದರೆ ಅಚ್ಚರಿಯಿಲ್ಲ.
ಮೊದಲು ಮಣ್ಣಿನ ಪಾತ್ರೆ ಬಳಸುತ್ತಿದ್ದ ಜನರು ನಾಗರೀಕತೆ ಬೆಳೆದಂತೆ ಹಿತ್ತಾಳೆ ತಾಮ್ರದ ಪಾತ್ರೆಗಳಿಂದ ಅಲ್ಯೂಮಿನಿಯಂ ನಂತರ ಸ್ಟೀಲ್ ಗೆ ಇದೀಗ ಮತ್ತೆ ಮರಳಿ ಮಣ್ಣಿನ ಪಾತ್ರೆಗಳತ್ತ ಹೊರಳುತ್ತಿದ್ದಾರೆ ಎಂಬುದು ಕಾಲಚಕ್ರದ ಮಹಿಮೆ ಅಲ್ಲವೇ! ಈ ಹಿಂದಿನ ತಾಮ್ರ ಹಿತ್ತಾಳೆ ಕಂಚಿನ ಪಾತ್ರೆಗಳು ಅಲಂಕಾರಿಕ ಸಾಮಗ್ರಿಗಳಾಗಿ ಬಳಸಲ್ಪಡುತ್ತಿರುವುದು ವಿಶೇಷ.

ಈ ಹಿಂದೆ ವರ್ಷಕ್ಕೊಮ್ಮೆ ಯುಗಾದಿ ಇಲ್ಲವೇ ದೀಪಾವಳಿ ಹಬ್ಬಕ್ಕೆ ಒಂದೆರಡು ಜೊತೆ ಬಟ್ಟೆ ಖರೀದಿಸಿದರೆ ಅದೇ ದೊಡ್ಡ ಸಂಭ್ರಮ. ಮತ್ತೆ ಕೆಲವರಿಗೆ ಕುಂಡೆಯ ಮೇಲೊಂದು ಬಂಡೆಯ ಮೇಲೆ ಒಂದು ಬಟ್ಟೆ ಎನ್ನುವಂತೆ ಜೀವನ. ಆದರೆ ಇಂದು ಮಾಲ್ ಗೆ ಹೋಗಿ ಬೇಕಾಗಲಿ,ಬೇಡವಾಗಲಿ ಕಣ್ಣಿಗೆ ಕಂಡ ಅಂದವಾದ ಎಲ್ಲವನ್ನು ಖರೀದಿಸಿ ಮನೆಯಲ್ಲಿ ತಂದು ತುರುಕುವ ಸಂಭ್ರಮ. ಮನೆಯ ವಾರ್ಡ್ರೋಬ್, ಕಬ್ಬಿಣದ ಅಲಮಾರಿಗಳಲ್ಲಿ ಬಟ್ಟೆ ತುಂಬಿ ತುಳುಕುತ್ತಿದ್ದರೂ ಯಾವುದಾದರೂ ಸಮಾರಂಭಕ್ಕೆ ಹೋಗುವಾಗ ಯಾವುದನ್ನು ಉಡಬೇಕು? ಏನನ್ನು ತೊಡಬೇಕು? ಎಂದು ಯೋಚಿಸಿ ಕೊನೆಗೆ ಹೇಳುವುದು… ಅಯ್ಯೋ! ನನ್ ಹತ್ರ ಉಟ್ಕೊಳ್ಳೋಕೆ ಬಟ್ಟೆನೇ ಇಲ್ಲ ಅಂತ. ಅವರ ಮಾತು ಕೇಳಿ ಅಲಮಾರದಿಂದ ಬೀಳುತ್ತಿರುವ ಬಟ್ಟೆಗಳಿಗೆ ಬಾಯಿಯೇನಾದರೂ ಇದ್ದಿದ್ದರೆ ಗಹಗಹಿಸಿ ನಕ್ಕು ಬಿಡುತ್ತಿದ್ದವೇನೋ?
ಕೆಲ ಜನರು ಮಾತ್ರ ಮಿನಿಮಲಿಸಂ ಗೆ ಮೊರೆ ಹೋಗಿ ಮತ್ತೆ ಕೆಲವೇ ಬಟ್ಟೆಗಳಿಗೆ ಕೆಲವೇ ಜೀವನಾವಶ್ಯಕ ವಸ್ತುಗಳೊಂದಿಗೆ ಜೀವನ ಸಾಗಿಸುತ್ತಿರುವುದು ಸ್ವಾಗತಾರ್ಹ.

ಅಂದು ರುಜು ಹಾಕಬೇಕಾದರೆ ಹೆಬ್ಬಟ್ಟನ್ನು ಒತ್ತುತ್ತಿದ್ದ ಜನ ಇಂದು ಸಾಕ್ಷರರಾಗಿದ್ದಾರೆ ನಿಜ ಆದರೆ
ಸ್ಕ್ಯಾನ್ ಮಾಡಲು, ಕಚೇರಿ ಮತ್ತಿತರ ಔದ್ಯೋಗಿಕ ಸ್ಥಳಗಳಲ್ಲಿ ಒಳ ಪ್ರವೇಶಿಸಲು ಹೆಬ್ಬಟ್ಟನ್ನು ಬಳಸುವುದು ಸರ್ವೇಸಾಮಾನ್ಯವಾಗಿದೆ.ಆಧಾರ್ ಕಾರ್ಡ್, ರೇಷನ್ ಕಾರ್ಡ್ ಬಳಸುವ ಹಲವೆಡೆ ನಮ್ಮ ಹೆಬ್ಬೆಟ್ಟಿನ ಗುರುತು ಪಡೆಯುವುದು ಸಾಮಾನ್ಯವಾಗಿದೆ..

ಈ ಹಿಂದೆ ಹತ್ತಿಯಿಂದ ನೂಲನ್ನು ತೆಗೆದು ಆ ನೂಲಿನಿಂದ ಬಟ್ಟೆಗಳನ್ನು ತಯಾರಿಸಿ ನಮ್ಮ ಪೂರ್ವಜರು ಧರಿಸುತ್ತಿದ್ದರು. ನಂತರ ಹತ್ತಿಯ ಬಟ್ಟೆಗಳು ಬೇಗನೆ ಸವೆಯುತ್ತವೆ, ಹರಿದು ಹೋಗುತ್ತದೆ ಎಂಬ ಕಾರಣಕ್ಕೆ ಪಾಲಿಯೆಸ್ಟರ್, ಟೆರಿಲಿನ್, ರೇಯಾನ್ ಮುಂತಾದ ಹಲವಾರು ವಿಧದ ಬಟ್ಟೆಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದರೂ ಇದೀಗ ಮತ್ತೆ ನಮ್ಮ ಸುತ್ತಣ ವಾತಾವರಣ ಮತ್ತು ಕಾಟನ್ ಬಟ್ಟೆಗಳ ಬಳಕೆಯಿಂದ ದೇಹಕ್ಕೆ ಉಂಟಾಗುವ ಆರಾಮದಾಯಕ ಅನುಭವಗಳಿಂದ ಜನರು ಮತ್ತೆ ಹತ್ತಿ ಬಟ್ಟೆಗಳನ್ನು ಧರಿಸಲು ಮುಂದಾಗಿದ್ದಾರೆ.
ರೈತಾಪಿ ಕೆಲಸಗಳು ಮತ್ತು ಅದಕ್ಕೆ ಸಂಬಂಧಪಟ್ಟ ಗುಡಿ ಕೈಗಾರಿಕೆಗಳು ಶ್ರಮದಾಯಕ ಮತ್ತು ಅನಾಾಕರ್ಷಕ ಎಂಬ ಕಾರಣದಿಂದ ಅವುಗಳನ್ನು ದೂರವಿಟ್ಟು ಓದಿ ವೈದ್ಯಕೀಯ,ಇಂಜಿನಿಯರಿಂಗ್, ಕಾನೂನು,ಐ ಐ ಟಿ, ಎನ್ ಐ ಟಿ ಗಳಲ್ಲಿ ಪದವಿ ಪಡೆದು ಒಳ್ಳೆಯ ನೌಕರಿ ಮಾಡುತ್ತಿದ್ದು ಕೆಲಸದ ಒತ್ತಡ ಭರಿಸಲಾಗದೆ ಪ್ರಕೃತಿಯ ಜೊತೆಯಲ್ಲಿ ಜೀವಿಸುವ ಆಶಯದಿಂದ ಸಾವಯವ ಕೃಷಿಗೆ ಮನಸ್ಸು ಮಾಡಿರುವುದು ಹೈನುಗಾರಿಕೆಯಲ್ಲಿ ನೆಮ್ಮದಿ ಕಾಣಲು ಬಯಸುವವರ ಸಂಖ್ಯೆ ಇಂದು ಹೆಚ್ಚಾಗಿದೆ.
ಈ ಹಿಂದೆ ನಮ್ಮ ಹಿರಿಯರು ದಿನಕ್ಕೆ ಎರಡು ಹೊತ್ತು ಮಾತ್ರ ಆಹಾರ ಸೇವಿಸುತ್ತಿದ್ದು ಬದಲಾದ ಕಾಲಘಟ್ಟದಲ್ಲಿ ದಿನದ ಮೂರು ಹೊತ್ತು ಆಹಾರ ಸೇವನೆ, ಸದಾ ಏನನ್ನಾದರೂ ತಿನ್ನುವುದು ಚಹಾ ಕಾಫಿ ಸತತವಾಗಿ ಕುಡಿಯುವುದು ರೂಢಿಯಾಗಿತ್ತು ಪರಿಣಾಮವಾಗಿ ಆರೋಗ್ಯದಲ್ಲಿ ವಿಪರೀತ ಏರಿಳಿತಗಳನ್ನು ಕಾಣುತ್ತಿರುವ ಜನರು ಇದೀಗ ಮತ್ತೆ ಇಂಟರ್ಮಿಟೆಂಟ್ ಫಾಸ್ಟಿಂಗ್ ಎಂಬ ಹೆಸರಿನಲ್ಲಿ ನಮ್ಮ ಪೂರ್ವಜರು ಸೇವಿಸುತ್ತಿದ್ದ ರೀತಿಯಲ್ಲಿಯೇ ಆಹಾರ ಸೇವನೆಗೆ ಮುಂದಾಗಿದ್ದಾರೆ. ಕ್ಯಾನ್ ಗಳಲ್ಲಿ ಸಂಗ್ರಹಿಸಲ್ಪಟ್ಟ, ತಂಗಳುಪೆಟ್ಟಿಗೆಗಳಲ್ಲಿ ಇಡಲ್ಪಟ್ಟ
ಆಹಾರ ಪದಾರ್ಥಗಳು ಸೇವಿಸಲು ಯೋಗ್ಯವಲ್ಲ ಎಂಬ ಕಾರಣದಿಂದ ಅವುಗಳನ್ನು ಸಂಗ್ರಹಿಸಿ ಇಡುವುದನ್ನು ತಪ್ಪಿಸಲು ಅವಶ್ಯವಿದ್ದಷ್ಟೇ ಅಡುಗೆ ಮಾಡುವುದನ್ನು ರೂಢಿಸಿಕೊಂಡಿದ್ದಾರೆ.

ಈ ಹಿಂದೆ ಮಣ್ಣಿನಲ್ಲಿ ಕೆಸರಿನಲ್ಲಿ, ಹೊಲಗದ್ದೆಗಳಲ್ಲಿ ಕೆರೆ ಬಾವಿಗಳಲ್ಲಿ ತಾವು ಚಿಕ್ಕವರಿದ್ದಾಗ ಆಟವಾಡುತ್ತಿದ್ದ ಪಾಲಕರೇ ತಮ್ಮ ಮಕ್ಕಳಿಗೆ ಬಿಸಿಲಿಗೆ ಹೋದರೆ ಬಣ್ಣ ಸುಡುತ್ತದೆ, ಹೊರಗೆ ಆಡಿದರೆ ಕೈಕಾಲಿಗೆ ಪೆಟ್ಟು ಮಾಡಿಕೊಳ್ಳಬಹುದು, ಈಜಲು ಹೋದರೆ ನೀರಲ್ಲಿ ಮುಳುಗಬಹುದು ಎಂಬ ನೆವಗಳನ್ನು ಒಡ್ಡಿ ಮಕ್ಕಳನ್ನು ಮನೆಯ ನಾಲ್ಕು ಗೋಡೆಗಳಲ್ಲಿ ಕೂಡಿಹಾಕಿ ಅಯ್ಯೋ! ಯಾಕಾದ್ರೂ ರಜೆ ಬರುತ್ತೋ ಮಕ್ಕಳು ಮನೆಯಲ್ಲಿ ಕಾಡುತ್ತಾರೆ ಎಂದು ಹೇಳುತ್ತಾರೆ. ಇದೀಗ ಅದೇ ಪಾಲಕರು ವಿಲೇಜ್ ರೆಸ್ಟೋರೆಂಟ್, ಹಳ್ಳಿ ಮನೆ, ಗ್ರಾಮೀಣ ಬದುಕಿನ ಚಿತ್ರಣಗಳನ್ನು ನೋಡಲು ತಮ್ಮ ಮಕ್ಕಳನ್ನು ಕರೆದೊಯ್ಯುತ್ತಿದ್ದಾರೆ. ಮಕ್ಕಳಿಗೆ ಕೆಸರಿನಲ್ಲಿ ಆಡಿದರೆ ಇನ್ಫೆಕ್ಷನ್ ಆಗುತ್ತಿದೆ ಎಂದು ಗೋಳಾಡುತ್ತಿದ್ದವರು ಇದೀಗ ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗಲು, ಇಮ್ಯುನಿಟಿ ಬೆಳೆಯಲು ಮಣ್ಣಿನ ಆಟ ಆಡಲು ಪ್ರೋತ್ಸಾಹಿಸುತ್ತಿರುವುದು ತುಸು ಒಳ್ಳೆಯ ಬೆಳವಣಿಗೆ.

ಅವಿಭಕ್ತ ಕುಟುಂಬಗಳಿಂದ ವಿಭಕ್ತ ಕುಟುಂಬಗಳಾಗಿ ಬದುಕುತ್ತಿರುವ ಹಲವಾರು ಕುಟುಂಬಗಳು ತಮ್ಮ ಹಿರಿಯರೊಂದಿಗೆ ಒಳ್ಳೆಯ ಬಾಂಧವ್ಯವನ್ನು ಇಟ್ಟುಕೊಳ್ಳುತ್ತಿರುವುದು ಸಾಮಾಜಿಕವಾಗಿ ಒಳ್ಳೆಯ ಬೆಳವಣಿಗೆಯಾಗಿದೆ.

ತುಸು ಹೆಚ್ಚಿರಲಿ ಕಡಿಮೆ ಇರಲಿ ಪರವಾಗಿಲ್ಲ ಹಿಮ್ಮುಖ ಬೆಳವಣಿಗೆ ಆಶಾದಾಯಕವಾಗಿರಲಿ ಎಂದು ಆಶಿಸುತ್ತಾ

ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್

Share This Article
error: Content is protected !!
";