Ad image

ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ: ಆರೋಪಿಗೆ ಶಿಕ್ಷೆ

Vijayanagara Vani
ಕೊಪ್ಪಳ ಜೂನ್ 03 : ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಹಿನ್ನೆಲೆಯಲ್ಲಿ ಆರೋಪ ಸಾಭಿತಾಗಿ ಎಂದು ಗಂಗಾವತಿ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಆರೋಪಿಗೆ ಶಿಕ್ಷೆ ವಿಧಿಸಿದ್ದಾರೆ.
ಗಂಗಾವತಿ ಗ್ರಾಮೀಣ ಪೋಲಿಸ್ ಠಾಣೆ ವ್ಯಾಪ್ತಿಯ ಪಿರ್ಯಾಧಿದಾರರ ಮಗಳು 3ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, 2022ರ ಸೆಪ್ಟೆಂಬರ್ 8ರಂದು ಸಂಜೆ 4.30 ಗಂಟೆಗೆ ಮಗಳು ಮನೆಗೆ ಬಂದಾಗ ಹಾಲಿನ ಕೇಂದ್ರದಲ್ಲಿ ಹಾಲು ತರಲು ಕಳುಹಿಸಿದ್ದು, ಮಲ್ಲಾಪುರ ಗ್ರಾಮದ ಆಂಜಿನಪ್ಪ ಬಂಡಿ ಇತನ ಮನೆಯ ಮುಂದೆ ಬಾಧಿತ ಮಗು ಹೋಗುತ್ತಿದ್ದಾಗ ಆಂಜಿನಪ್ಪನು ಬಾಧಿತ ಮಗುವಿಗೆ ನಮಗೂ ಹಾಲು ತರುವಂತೆ ನೆಪ ಹೇಳಿ ತನ್ನ ಮನೆಯ ಒಳಗೆ ಕರೆದುಕೊಂಡು ಹೋಗಿ ಮಂಚದ ಮೇಲೆ ಮಲಗಿಸಿ ಮೈ ಮೇಲೆ ಬಿದ್ದಾಗ ಬಾಧಿತ ಮಗು ಚೀರಾಡಿದ ಶಬ್ದ ಕೇಳಿ ಓಣಿಯ ಜನರು ಬಂದು ಬುದ್ದಿವಾದ ಹೇಳಿ ಛೀಮಾರಿ ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಗಂಗಾವತಿ ಗ್ರಾಮೀಣ ಪೋಲಿಸ್ ಠಾಣೆಯ ಪಿ.ಐ ಮಂಜುನಾಥ ಎಸ್. ಅವರು ದೂರು ಸ್ವೀಕರಿಸಿ ಪ್ರಕರಣದ ತನಿಖೆ ನಿರ್ವಹಿಸಿ ಆರೋಪಿತನ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಈ ಪ್ರಕರಣವು ಸ್ಪೇ.ಎಸ್‌ಸಿ(ಪೋಕ್ಸೊ) ಸಂ: 12/2024 ರಲ್ಲಿ ದಾಖಲಾಗಿದ್ದು, ವಿಚಾರಣೆಯನ್ನು ನಡೆಸಿದ ನ್ಯಾಯಾಲಯವು ಆರೋಪಿ ಮಲ್ಲಾಪುರದ ಆಂಜಿನಪ್ಪ ಬಂಡಿ ಇತನ ಮೇಲಿನ ಆರೋಪಣೆಗಳು ಸಾಭೀತಾಗಿದೆ ಎಂದು 4 ವರ್ಷಗಳ ಜೈಲು ಶಿಕ್ಷೆ ಹಾಗೂ ರೂ. 60,000 ಗಳ ದಂಡವನ್ನು ಭರಿಸುವಂತೆ ಆದೇಶಿಸಿ ಗಂಗಾವತಿ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರಾದ ಸದಾನಂದ ನಾಗಪ್ಪ ನಾಯಕ ಅವರು 2025ರ ಮೇ 30ರಂದು ತೀರ್ಪು ಹೊರಡಿಸಿರುತ್ತಾರೆ.
ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಗೌರಮ್ಮ ದೇಸಾಯಿ ಅವರು ಪ್ರಕರಣ ನಡೆಸಿ ವಾದ ಮಂಡಿಸಿದ್ದರು. ಗಂಗಾವತಿ ಗ್ರಾಮೀಣ ಪೋಲಿಸ್ ಠಾಣೆಯ ಪೋಲಿಸ್ ಸಿಬ್ಬಂದಿ ವಿಶ್ವನಾಥ ಅವರು ನ್ಯಾಯಾಲಯದಲ್ಲಿ ಸಾಕ್ಷಿದಾರರನ್ನು ಸಕಾಲಕ್ಕೆ ಹಾಜರಪಡಿಸಿ ಆರೋಪ ಸಾಭೀತುಪಡಿಸಲು ಸಹಕರಿಸಿರುತ್ತಾರೆ ಎಂದು ಕೊಪ್ಪಳ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದ ವಿಶೇಷ ಸರ್ಕಾರಿ ಅಭಿಯೋಜಕರ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.

Share This Article
error: Content is protected !!
";