ನವದೆಹಲಿ, ಡಿಸೆಂಬರ್ 12: ಭಾರತದಲ್ಲಿ ‘ಒಂದು ರಾಷ್ಟ್ರ, ಒಂದು ಚುನಾವಣೆ’ ಕುರಿತು ಪರ ವಿರೋಧ ಚರ್ಚೆಗಳು ನಡೆಯುತ್ತಿವೆ. ಈ ಕುರಿತು ವರದಿ ನೀಡಲು ಕೇಂದ್ರ ಸರ್ಕಾರ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿಯನ್ನು ರಚನೆ ಮಾಡಿತ್ತು. ಸಮಿತಿ ಈಗಾಗಲೇ ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡಿದ್ದು, ಸಚಿವ ಸಂಪುಟ ಸಭೆಯಲ್ಲಿ ಒಂದು ರಾಷ್ಟ್ರ, ಒಂದು ಚುನಾವಣೆಗೆ ಅನುಮೋದನೆ ಕೊಡಲಾಗಿದೆ
ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಒಂದು ರಾಷ್ಟ್ರ, ಒಂದು ಚುನಾವಣೆಗೆ ಒಪ್ಪಿಗೆ ನೀಡಲಾಗಿದೆ. ಈಗ ಈ ಕುರಿತು ಮಸೂದೆಯನ್ನು ತಯಾರು ಮಾಡಿ, ಅದನ್ನು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಮಂಡನೆ ಮಾಡಿ ಒಪ್ಪಿಗೆ ಪಡೆಯಬೇಕಿದೆ.
ಸದ್ಯ ಸಂಸತ್ ಚಳಿಗಾಲದ ಅಧಿವೇಶನ ನಡೆಯುತ್ತಿದೆ. ಕಾವೇರಿದ ಚರ್ಚೆಗಳು ಆಗುತ್ತಿದೆ. ಮಾಹಿತಿಗಳ ಪ್ರಕಾರ ಈ ಅಧಿವೇಶನದಲ್ಲಿಯೇ ‘ಒಂದು ರಾಷ್ಟ್ರ, ಒಂದು ಚುನಾವಣೆ’ ನಡೆಸುವ ಕುರಿತು ಮಸೂದೆಯನ್ನು ಮಂಡಿಸಲಾಗುತ್ತದೆ. ಸಂಸತ್ನಲ್ಲಿ ಚರ್ಚೆಯ ಬಳಿಕ ಇದಕ್ಕೆ ಒಪ್ಪಿಗೆ ಸಿಗಲಿದೆಯೇ? ಕಾದು ನೋಡಬೇಕಿದೆ.
18 ಸಾವಿರ ಪುಟಗಳ ವರದಿ: ದೇಶದಲ್ಲಿ ಏಕಕಾಲಕ್ಕೆ ವಿಧಾನಸಭೆ, ಲೋಕಸಭೆ ಚುನಾವಣೆ ನಡೆಸುವ ಕುರಿತು ಪರಿಶೀಲಿಸಲು ಮತ್ತು ಶಿಫಾರಸು ಮಾಡಲು ಕೇಂದ್ರ ಸರ್ಕಾರ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿಯನ್ನು ರಚನೆ ಮಾಡಿತ್ತು. ಸಮಿತಿ ಕೇಂದ್ರ ಸರ್ಕಾರಕ್ಕೆ ಈ ಕುರಿತು 18,626 ಪುಟಗಳ ವರದಿಯನ್ನು ಸಲ್ಲಿಕೆ ಮಾಡಿದೆ.
ಭಾರತದಂತಹ ಅತಿ ದೊಡ್ಡ ಪ್ರಜಾಪ್ರಭುತ್ವ ಹೊಂದಿರುವ ದೇಶದಲ್ಲಿ ಏಕಕಾಲಕ್ಕೆ ವಿಧಾನಸಭೆ, ಲೋಕಸಭೆ ಚುನಾವಣೆ ನಡೆಸುವುದು ರಾಜಕೀಯವಾಗಿ ಬಹಳ ಮಹತ್ವದ ನಿರ್ಧಾರವಾಗಿದೆ. ಈ ಕುರಿತು ಪರ ವಿರೋಧ ಚರ್ಚೆಗಳು ಸಾಗಿವೆ. ಇಂತಹ ಹೊತ್ತಿನಲ್ಲಿಯೇ ಕೇಂದ್ರ ಸಚಿವ ಸಂಪುಟ ಇದಕ್ಕೆ ಅನುಮೋದನೆ ನೀಡಿದೆ.
ಇದನ್ನು ಮಸೂದೆ ರೂಪದಲ್ಲಿ ಲೋಕಸಭೆ, ರಾಜ್ಯಸಭೆಯಲ್ಲಿ ಮಂಡನೆ ಮಾಡಲಾಗುತ್ತದೆ. ಏಕಕಾಲಕ್ಕೆ ವಿಧಾನಸಭೆ, ಲೋಕಸಭೆ ಚುನಾವಣೆ ನಡೆಸುವ ಕುರಿತು ಚರ್ಚೆಗಳು ನಡೆದು ಉಭಯ ಸದನಗಳಲ್ಲಿ ಇದು ಅನುಮೋದನೆಗೊಂಡ ಬಳಿಕ ರಾಷ್ಟ್ರಪತಿಗಳ ಒಪ್ಪಿಗೆಗೆ ಹೋಗಲಿದೆ. ಆ ಬಳಿಕ ಈ ಕುರಿತು ಅಂತಿಮ ತೀರ್ಮಾನವಾಗಲಿದೆ. ಕೇಂದ್ರ ಸರ್ಕಾರ ರಾಮನಾಥ್ ಕೋವಿಂದ್ ಅವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿಯನ್ನು ಸೆಪ್ಟೆಂಬರ್ 2, 2023ರಲ್ಲಿ ರಚನೆ ಮಾಡಿತ್ತು. ಈ ಸಮಿತಿ ರಾಜಕೀಯ ಪಕ್ಷಗಳು ಸೇರಿದಂತೆ ವಿವಿಧ ಭಾಗೀದಾರರ ಜೊತೆ ವಿವರವಾದ ಚರ್ಚೆಯನ್ನು ನಡೆಸಿ ಮಾರ್ಚ್ 14, 2024ರಂದು ಸರ್ಕಾರಕ್ಕೆ ವರದಿಯನ್ನು ಸಲ್ಲಿಕೆ ಮಾಡಿತ್ತು. ಪ್ರತಿಪಕ್ಷವಾದ ಕಾಂಗ್ರೆಸ್ ಈಗಾಗಲೇ ‘ಒಂದು ರಾಷ್ಟ್ರ, ಒಂದು ಚುನಾವಣೆ’ ಪ್ರಸ್ತಾಪಕ್ಕೆ ವಿರೋಧ ವ್ಯಕ್ತಪಡಿಸಿದೆ. ಅಲ್ಲದೇ ಈ ಕುರಿತು ‘ಇಂಡಿಯಾ’ ಮೈತ್ರಿಕೂಟದ 20ಕ್ಕೂ ಹೆಚ್ಚು ಪಕ್ಷಗಳು ಒಗ್ಗಟ್ಟಿನಲ್ಲಿವೆ. ಆದ್ದರಿಂದ ಲೋಕಸಭೆಯಲ್ಲಿ ಮಸೂದೆ ಮಂಡನೆ ಮಾಡಿದರೆ ಈ ಕುರಿತು ಸುಧೀರ್ಘ ಚರ್ಚೆ ನಡೆಯಬೇಕಿದೆ.
5 ವರ್ಷಕ್ಕೊಮ್ಮೆ ಲೋಕಸಭೆ ಚುನಾವಣೆ ನಡೆಯುತ್ತದೆ. ಆದರೆ ಪ್ರತಿವರ್ಷ ಒಂದಲ್ಲ ಒಂದು ರಾಜ್ಯದ ವಿಧಾನಸಭೆ ಚುನಾವಣೆ ನಡೆಯುತ್ತಲೇ ಇರುತ್ತದೆ. 2024ರಲ್ಲಿ ಲೋಕಸಭೆ ಚುನಾವಣೆ ನಡೆದಿದೆ. ಹರ್ಯಾಣ, ಮಹಾರಾಷ್ಟ್ರ, ಜಮ್ಮು ಮತ್ತು ಕಾಶ್ಮೀರ, ಜಾರ್ಖಂಡ್ ಹೀಗೆ ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣೆಯೂ ನಡೆದಿದೆ. ಆದ್ದರಿಂದ ಎಲ್ಲಾ ಚುನಾವಣೆಯನ್ನೂ ಒಟ್ಟಿಗೆ ನಡೆಸಲು, ಜನರ ತೆರಿಗೆ ಹಣ ಉಳಿಸಲು ‘ಒಂದು ರಾಷ್ಟ್ರ, ಒಂದು ಚುನಾವಣೆ’ ಪ್ರಸ್ತಾವನೆ ಸಿದ್ಧಗೊಳಿಸಲಾಗಿದೆ. ಉನ್ನತ ಮಟ್ಟದ ಸಮಿತಿಯು 6 ರಾಷ್ಟ್ರೀಯ ಪಕ್ಷಗಳು, 33 ರಾಜ್ಯ ಪಕ್ಷಗಳು ಮತ್ತು 7 ನೋಂದಾಯಿತ ಗುರುತಿಸದ ಪಕ್ಷಗಳಿಗೆ ಒಂದು ರಾಷ್ಟ್ರ ಒಂದು ಚುನಾವಣೆ ಕುರಿತು ಸಲಹೆಗಳನ್ನು ಆಹ್ವಾನಿಸಿ ಪತ್ರಗಳನ್ನು ಕಳುಹಿಸಿತ್ತು. ಒನ್ ನೇಷನ್ ಒನ್ ಎಲೆಕ್ಷನ್ ಕುರಿತು ಅಭಿಪ್ರಾಯ ತಿಳಿಸಲು ವೆಬ್ಸೈಟ್ ಸಹ ಅಭಿವೃದ್ಧಿಪಡಿಸಲಾಗಿದೆ. ಭಾರತದಲ್ಲಿ ಏಕಕಾಲಿಕ ಚುನಾವಣೆಗಳ ಕುರಿತು ಸಲಹೆಗಳು ಮತ್ತು ದೃಷ್ಟಿಕೋನಗಳನ್ನು ಸ್ವೀಕಾರ ಮಾಡಿ ವರದಿಯನ್ನು ಸರ್ಕಾರಕ್ಕೆ ವರದಿ ಸಲ್ಲಿಸಲಾಗಿತ್ತು.