Ad image

ಜೂನ್ 5 ವಿಶ್ವ ಪರಿಸರ ದಿನಾಚರಣೆ. ಹಸಿರಿನ ಮಹತ್ವವನ್ನು ಜಗತ್ತಿನೆಲ್ಲೆಡೆ ಸಾರುವ ದಿನ.

Vijayanagara Vani
ಜೂನ್ 5 ವಿಶ್ವ ಪರಿಸರ ದಿನಾಚರಣೆ. ಹಸಿರಿನ ಮಹತ್ವವನ್ನು ಜಗತ್ತಿನೆಲ್ಲೆಡೆ ಸಾರುವ ದಿನ.

ವಿಶ್ವ ಪರಿಸರ ದಿನಾಚರಣೆ

- Advertisement -
Ad imageAd image

                ಜೂನ್ 5 ರಂದು ವಿಶ್ವ ಪರಿಸರ ದಿನಾಚರಣೆಯನ್ನು ಪ್ರತಿ ವರ್ಷ ಆಚರಿಸಲಾಗುತ್ತದೆ. 1972ರಲ್ಲಿ ವಿಶ್ವ ಸಂಸ್ಥೆಯ ಮಹಾಸಭೆಯಲ್ಲಿ ನಿರ್ಧರಿಸಿದಂತೆ “ಪರಿಸರ ದಿನ” ವನ್ನು 1973 ಜೂನ್ 5ರಂದು ಮೊದಲ ಬಾರಿಗೆ ಆಚರಿಸಲಾಯಿತು.  ದಿನದ ವಿಷೇಶವೆಂದರೆ, ಪ್ರತಿಯೊಬ್ಬರಿಗೂ ಪರಿಸರದ ಬಗ್ಗೆ ಜಾಗೃತಿ ಮೂಡಿಸುವುದು.

                ಪ್ರತಿ ವರ್ಷವು ಪರಿಸರ ದಿನಾಚರಣೆ ಬರುತ್ತದೆ.  ಎಲ್ಲರೂ ಗಿಡ ನೆಡುವುದು, ಪರಿಸರ ರಕ್ಷಣೆ ಕುರಿತ ಭಾಷಣಗಳು, ಚರ್ಚಾಸ್ಪರ್ಧೆಗಳು ಹಾಗೆಯೇ ಸೆಮಿನಾರ್‌ಗಳು ಮೊಳಗುತ್ತವೆ.  ಮತ್ತೆ ಇವುಗಳು ನೆನಪಾಗುವುದು ಮುಂದಿನ ವರ್ಷದ ದಿನಾಚರಣೆ ಬಂದಾಗ ಮಾತ್ರ.  ಪರಿಸರ ದಿನಾಚರಣೆ ಸಾಂಕೇತಿಕವಾಗದೇ ನಿಜವಾದ ಪರಿಸರ ಕಾಳಜಿ ಬೆಳೆದಾಗ ಮಾತ್ರ ಪರಿಸರದ ಉಳಿವು ಸಾಧ್ಯ  ನಮ್ಮ ಮುಖ್ಯ ಸಂಪನ್ಮೂಲಗಳಾದ ನೀರು, ಗಾಳಿ, ಮಣ್ಣುಗಳ ದುರ್ಬಳಕೆ ಹೆಚ್ಚುತ್ತಲೇ ಇದೆ.  ಸಂಪನ್ಮೂಲಗಳ ಬಗ್ಗೆ ನಮಗೆ ಸ್ವಲ್ಪವೂ ಗೌರವವಿಲ್ಲ.  ಇದರಿಂದ ಅನೇಕ ದುಷ್ಪರಿಣಾಮಗಳು ಉಂಟಾಗುತ್ತವೆ.  ಹಸಿರು ಮನೆ ಪರಿಣಾಮ, ಕಲುಷಿತ ನೀರು ಮತ್ತು ಗಾಳಿಯಿಂದಾಗಿ ನಮ್ಮ ಹಾಗೂ ಮುಂದಿನ ಪೀಳಿಗೆಯ ಆರೋಗ್ಯದ ಬಗ್ಗೆ ಯಾರೂ ಯೋಚಿಸದಿರುವುದು ಬಹಳ ದುಖಃಕರ ಸಂಗತಿ.

                ಜನ ಸಂಖ್ಯೆಯ ಹೆಚ್ಚಳ ಹಾಗೂ ಬೃಹತ್ ಪ್ರಮಾದ ತಂತ್ರಜ್ಞಾನದ ಬಳಕೆಯಿಂದಾಗಿ ವಾಯು ಮಂಡಲದ ಪರಿಸ್ಥಿತಿಯಲ್ಲಿ ಬಹಳ ಬದಲಾವಣೆಗಳಾಗಿವೆ.  ವಾಯುಮಾಲಿನ್ಯ, ಜಲಮಾಲಿನ್ಯ, ಶಬ್ಧಮಾಲಿನ್ಯ, ಮಣ್ಣಿನ ಮಾಲಿನ್ಯ, ಅರಣ್ಯನಾಶ ಮುಂತಾದವುಗಳು ಪರಿಸರದಲ್ಲಿ ಉಂಟಾಗಿರುವ ಏರುಪೇರುಗಳು.  ನಮಗೆ ಅಭಿವೃದ್ಧಿ ಬಹಳ ಮುಖ್ಯ ಆದರೆ ಅದರ ಹೆಸರಲ್ಲಿ ಪರಿಸರ ನಾಶ ಸಲ್ಲದು.  ಇಂದಿಗೂ ಹಲವು ನಗರ ಪ್ರದೇಶಗಳಲ್ಲಿ  ಉಸಿರಾಡಲು ಶುದ್ಧ ಗಾಳಿ ದೊರೆಯುತ್ತಿಲ್ಲ.  ರಾಷ್ಟç ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯ ಅಲೆ ಅಪಾಯಕಾರಿ ಮಟ್ಟವನ್ನು ತಲುಪಿದ್ದು ನಮಗೆ ತಿಳಿದ ವಿಷಯ.  ಏರ್ ಕ್ವಾಲಿಟಿ ಅಂಡ್ ವೆದರ್ ಫೋರ್ ಕಾಸ್ಟಿಂಗ್ ಅಂಡ್ ರಿಸರ್ಚ್(ಎಸ್.ಎ.ಎಸ್.ಆರ್.) ಪ್ರಕಾರ ದೆಹಲಿಯಲ್ಲಿ ಉಸಿರಾಟಕ್ಕೆ ಅತೀವ ಅಪಾಯವಿದೆ ಎಂದು ಈಗಾಗಲೇ ಸಾಬೀತಾಗಿದೆ.  ಇಷ್ಟೆಲ್ಲಾ ಇದ್ದರೂ ಪರಿಸರ ಉಳಿಸುವ ಬಗ್ಗೆ ಸಾಮಾಜಿಕ ಕಾಳಜಿ ಇಲ್ಲದಿರುವುದು ನಮ್ಮ ಬೇಜಾವಾಬ್ದಾರಿತನಕ್ಕೆ ಸಾಕ್ಷಿಯಾಗಿದೆ. 

   

            ವಿಶ್ವ ಪರಿಸರ ದಿನಾಚರಣೆ ಸಂದರ್ಭದಲ್ಲಿ ಜೀವಿಗಳ ಮತ್ತು ಭವಿಷ್ಯದ ದೃಷ್ಠಿಯಿಂದ ಕೆಳಕಂಡ ಪರಿಸರ ಸ್ನೇಹಿ ಹೆಜ್ಜೆಗಳನ್ನು ನಾವೆಲ್ಲರೂ ಇಡುವುದು ಅನಿವಾರ್ಯವಾಗಿದೆ. 

  • ಮಾಲಿನ್ಯ ಮಿತಿ ಮೀರಿದರೆ ನಮಗೆ ಪರಿಸರದಲ್ಲಿ ಜೀವಿಸುವುದು ಅಸಾಧ್ಯವೆನಿಸುತ್ತದೆ. ಅದುದರಿಂದ ಪರಿಸರ ಮಾಲಿನ್ಯವನ್ನು ತಡೆಗಟ್ಟಲು ಜವಾಬ್ದಾರಿ ನಮ್ಮದಾಗಿದೆ.  ಮುಂದಿನ ಪೀಳಿಗೆಗೆ ಪರಿಸರ ಉಳಿಯಬೇಕಾದರೆ ಇಂದಿನಿ0ದಲೇ ಒಳ್ಳೆಯ ಬದಲಾವಣೆಯನ್ನು ಮಾಡಬೇಕಿದೆ.
  • ನಾವು ನಮ್ಮ ಸ್ವಾರ್ಥಕ್ಕಾಗಿ ಮರಗಿಡಗಳನ್ನು ಕಡಿದುಹಾಕುತ್ತಿದ್ದೇವೆ. ಇದರಿಂದಾಗಿ ಹಸಿರು ವಿರಳವಾಗಿ ಸುನಾಮಿ, ಬರ, ಮಹಾಪೂರದಂತಹ ಪ್ರಕೃತಿ ವಿಕೋಪಗಳಿಗೆ ತುತ್ತಾಗುವುದಲ್ಲದೇ ಆಮ್ಲಜನಕ ಕೊರತೆಯನ್ನು ಕೂಡ ಅನುಭವಿಸಬೇಕಾದ ಪರಿಸ್ಥಿತಿ ಬರುತ್ತದೆ.
  • ವಿನಾಶಕಾರಕ ಕ್ರಿಮಿ-ಕೀಟಗಳು ಮತ್ತು ಅನಾವಶ್ಯಕವಾಗಿ ಬೆಳೆಯುವ ಕಳೆಗಳ ನಿರ್ಮೂಲನೆಗಾಗಿ ಬಳಸುವ ಕೀಟನಾಶಕಗಳು ಮತ್ತು ಕಳೆನಾಶಕ ವಸ್ತುಗಳಿಂದ ಮಣ್ಣಿಗೆ ಹಾನಿಯಾಗುವುದನ್ನು ತಡೆಯಬೇಕು.
  • ಕಾಡುಗಳನ್ನು ಬೆಳೆಸುವುದು, ಜೀವವೈವಿದ್ಯ ಉಳಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.
  • ಕೆರೆ ಕುಂಟೆಗಳ ಪುನಶ್ಚೇತನ ನಿರ್ಮಿಸುವುದು ನಮ್ಮ ಆಧ್ಯತೆಯಾಗಬೇಕು. ಏಕೆಂದರೆ ಮಳೆ ನೀರು ಸಂರಕ್ಷಿಸಲು ಇದು ಉತ್ತಮ ವಿಧಾನ.
  • ನೀರಾವರಿ ವಿಪರೀತವಾಗದಂತೆ ನೋಡಿಕೊಳ್ಳಬೇಕು ಇಲ್ಲದಿದ್ದರೆ ಮಣ್ಣಿನ ಗುಣಧರ್ಮ ಹಾಳಾಗಿ ಇಳುವರಿ ಕಡಿಮೆಯಾಗುತ್ತದೆ.
  • ರಸ್ತೆಯ ಬದಿಯಲ್ಲಿ ಮರಗಳನ್ನು ಬೆಳೆಸುವುದರಿಂದ ವಾಹನಗಳು ಹೊರಹಾಕುವ ಅನಿಲಗಳಿಂದ ಸ್ಪಲ್ಪ ಪ್ರಮಾಣದಲ್ಲಿ ಮಾಲಿನ್ಯ ತಡೆಗಟ್ಟಬಹುದು.
  • ಮಾಲಿನ್ಯ ತಡೆಗಟ್ಟಲು ಪರ್ಯಾಯ ಮೂಲಗಳಾದ ಸಿ.ಎನ್.ಜಿ. ಸೌರಶಕ್ತಿಯನ್ನು ಬಳಸಿಕೊಳ್ಳುವುದು.
  • ಮಲಿನಗೊಂಡ ನೀರು ಕಾಲರ, ಕ್ಷಯ, ಅಮಶಂಕೆ, ಟೈಫಾಯಿಡ್ ಮುಂತಾದ ಸಾಂಕ್ರಾಮಿಕ ರೋಗಗಳನ್ನು ಹರಡುತ್ತವೆ. ಇದರ ಬಗ್ಗೆ ಗ್ರಾಮೀಣ ಭಾಗದಲ್ಲಿ ಜಾಗೃತಿ ಮೂಡಿಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದೆ. 
  • ತಮ್ಮ ಲಾಭಕ್ಕಾಗಿ ಪ್ರಕೃತಿಯನ್ನು ನಾಶಮಾಡುವ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.
  • ಪ್ರಕೃತಿ ವಿಕೋಪಗಳಿಗೆ ಕಾರಣವಾಗುವ ವಿಷಯಗಳ ಬಗ್ಗೆ ಜಾಗೃತಿಯನ್ನು ಮೂಡಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ.
  • ಶಾಲೆಗಳಲ್ಲಿ ಇಕೋಕ್ಲಬ್ ಗಳು, ಸಂಘ ಸಂಸ್ಥೆಗಳಿ0ಪರಿಸರ ಜಾಗೃತಿಯನ್ನು ವಿದ್ಯಾರ್ಥಿದೆಸೆಯಿಂದ ಮೂಡಿಸಿದರೆ, ಅವರಿಗೆ ಪರಿಸರದ ಮೇಲೆ ಪ್ರೀತಿ ಮೂಡಿ ಜವಾಬ್ದಾರಿ ಹೆಚ್ಚುತ್ತದೆ.
  • ಪರಿಸರ ನಮಗಾಗಿ ಅಲ್ಲ, ನಾವು ಪರಿಸರಕ್ಕಾಗಿ ಎಂಬ ಅಂಶವನ್ನು ಮನಗಾಣಬೇಕು.
  • ಪ್ರತಿದಿನ ಪ್ಲಾಸ್ಟಿಕ್ ಬಳಕೆ ಹೆಚ್ಚುತ್ತಿದ್ದು, ಅದು ಕೊಳೆಯಲಾರದ ವಸ್ತುವಾಗಿದ್ದರಿಂದ ಮಣ್ಣಿಗೆ ಹಾನಿಯಾಗಿ ಇಳುವರಿ ಕಡಿಮೆ ಮಾಡುತ್ತದೆ. ಅಲ್ಲದೇ ಅನೇಕ ರೋಗಗಳನ್ನು ಉಂಟುಮಾಡುತ್ತದೆ.

ಪರಿಸರ ನಮ್ಮ ಜೀವನದ ಅವಿಭಾಜ್ಯ ಅಂಗ, ಪರಿಸರವಿಲ್ಲದೇ ನಾವು ಜೀವಿಸುವುದಕ್ಕೆ

ಆಗುವುದಿಲ್ಲ

ಸತ್ಯವನ್ನು ನಾವು ಅರಿಯಬೇಕಿದೆ.  “ಮಾಡಿದ್ದುಣ್ಣೋ ಮಾರಾಯ”  ಎಂಬ ಗಾದೆ ಮಾತಿನಂತೆ ಇಂದು ನಾವು ಪರಿಸರವನ್ನು ಹಾಳು ಮಾಡಿದರೆ ಅದರ ಫಲವನ್ನು ನಾವೇ ಅನುಭವಿಸಬೇಕಾಗುತ್ತದೆ.  ಮನುಷ್ಯನ ನಿರಂತರವಾದ ಹಾಗೂ ಮಿತಿಮೀರಿದ ಪರಿಸರದ ಶೋಷಣೆಯಿಂದ ಅನೇಕ ಸಮಸ್ಯೆಗಳು ತಲೆದೋರುತ್ತವೆ.  ಪರಿಸರ ಮತ್ತು ಮಾನವ ಚಟುವಟಿಕೆಗಳ ಬಗ್ಗೆ ಸಮತೋಲನವಿರಬೇಕು.  ಇಲ್ಲದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ.  ಪರಿಸರದ ದುರುಪಯೋಗ ಅಥವಾ ವಿನಾಶ ಮಾಡುವುದು ನಮ್ಮ ತಲೆಯ ಮೇಲೆ ನಾವೇ ಕಲ್ಲು ಎತ್ತಿ ಹಾಕಿಕೊಂಡಂತೆ ಎಂಬ ಸತ್ಯವನ್ನು ಅರಿಯಬೇಕಿದೆ.  ಪರಿಸರ ದಿನಾಚರಣೆ ಕೇವಲ ಒಂದು ದಿನಕ್ಕೆ ಸೀಮಿತವಾಗದೇ ನಾವೆಲ್ಲರೂ ಪರಿಸರ ಉಳಿಸುವ ಸಲುವಾಗಿ ಪ್ರತಿಜ್ಞೆ ಮಾಡೋಣ.  ಬರೀ ಹಕ್ಕುಗಳನ್ನು ಕೇಳುವ ನಾವು ನಮ್ಮ ಕರ್ತವ್ಯ ಮರೆಯಬಾರದಲ್ಲವೇ… !

 

 

ಲೇಖಕರು : ಎಸ್.ಎಂ.ಹಿರೇಮಠ

ಸಹ ಶಿಕ್ಷಕರು

ಸರ್ಕಾರಿ ಪದವಿಪೂರ್ವ ಕಾಲೇಜು

(ಪ್ರೌಢಶಾಲಾ ವಿಭಾಗ),

 ಮೋಕ.  ಬಳ್ಳಾರಿ ಪೂರ್ವ

               

                        

Share This Article
error: Content is protected !!
";