Ad image

ಕಡ್ಲಿಗಡಬ ಹುಣ್ಣಿಮೆಯ ಬೆಳದಿಂಗಳಲ್ಲಿ ಗುರು ಪೌರ್ಣಿಮೆ

Vijayanagara Vani
ಕಡ್ಲಿಗಡಬ ಹುಣ್ಣಿಮೆಯ ಬೆಳದಿಂಗಳಲ್ಲಿ ಗುರು ಪೌರ್ಣಿಮೆ

ಅರಸುತಿಹ ಬಳ್ಳಿ ಕಾಲ ಸುತ್ತಿತ್ತೆಂಬoತೆ
ಬಯಸುವ ಬಯಕೆ ಕೈ ಸಾರಿದಂತೆ
ಬಡವ ನಿಧಾನವ ನೆಡಹಿ ಕಂಡoತೆ
ನಾನರಸುತಲತ್ತ ಬಂದು
ಭಾವಕ್ಕಗಮ್ಯವಾದ ಮೂರ್ತಿಯ ಕಂಡೆ ನೋಡಾ
ಎನ್ನ ಅರಿವಿನ ಹರವ ಕಂಡೆ ನೋಡಾ
ಎನ್ನ ಒಳ ಹೊರಗೆ ಎಡೆದೆಂಹಿಲ್ಲದೆ
ಥಳಥಳ ಹೊಳೆಯುತಿಪ್ಪ
ಅಖಂಡ ಜ್ಯೋತಿಯ ಕಂಡೆ ನೋಡಾ
ಕುರು ಹಳಿದ ಕರಸ್ಥಲದ ನಿಬ್ಬೆರಗಿನ
ನೋಟವ ಎನ್ನ ಪರಮ ಗುರುವ
ಕಂಡು ಬದುಕಿದೆನು ಕಾಣಾ ಗುಹೇಶ್ವರಾ|……
ಈ ವಚನ ಅಲ್ಲಮನಿಗೆ ಗುರು ದೊರೆತ ಬಗೆಯನ್ನು ,ಗುರುವಿನ ಮಹತ್ವನ್ನು ತಿಳಿಸುತ್ತದೆ. ಇದು ಕೇವಲ ಅಲ್ಲಮನಿಗೆ ಸೀಮಿತವಲ್ಲ ಪ್ರತಿಯೊಬ್ಬ ವ್ಯಕ್ಕಿಯ ಜೀವನದಲ್ಲಿ ಗುರು ದೊರೆಯಲೇ ಬೇಕು, ಗುರುವಿನಿಂದಲೇ ಮಾನವ ಅರಿವಿನ ಹರವ ಪಡೆಯಲು ಸಾದ್ಯ ಈ ವಚನದ ಹಿನ್ನಲೆಯಲ್ಲಿ ನಾವಿಂದು ಸಮಾಜದಲ್ಲಿ ಗುರುವಿನ ಸ್ಥಾನವನ್ನು ವ್ಯಕ್ತಿಯ ವಿಕಸನದಲ್ಲಿ ಗುರುವಿನ ಪಾತ್ರವೇನು ಎಂಬುದನ್ನು ತಿಳಿಯೋಣ ಬನ್ನಿ, ಸಮಾಜ ನಿಂತ ನೀರಲ್ಲ; ಅದು ಹರಿಯುವ ಹೊಳೆ, ಕಾಲದಿಂದ ಕಾಲಕ್ಕೆ ಅದು ತನ್ನ ಮೈಯನ್ನು ಹಿಗ್ಗಿಸಿಕೊಳ್ಳುತ್ತಾ, ಸಾವಿರ ಕವಲುಗಳಾಗಿ ಹರಿಯುತ್ತಲೇ ಇರುತ್ತದೆ. ಒಂದು ಕಾಲಕ್ಕೆ ಪ್ರಾಣಿಗಳಂತೆ ಹಸಿ ಮಾಂಸ ತಿಂದು ಕಾಡಿನಲ್ಲಿ ಬದುಕಿದ್ದ ಮಾನವ ಇಂದು ಅತ್ಯಂತ ಸುಸಜ್ಜಿತ ಮನೆ ಕಟ್ಟಿಕೊಂಡು ಐಷಾರಾಮಿ ಜೀವನ ಕಳೆಯುತ್ತಿದ್ದಾನೆ. ಕಲೆ-ವಿಜ್ಞಾನ-ತಂತ್ರಜ್ಞಾನ ಶಿಕ್ಷಣ-ವೈದ್ಯಕೀಯ ಇತ್ಯಾದಿ ಕ್ಷೇತ್ರದಲ್ಲಿ ಪ್ರಗತಿ ಕಂಡುಕೊoಡಿದ್ದಾನೆ, ಹಕ್ಕಿಯಂತೆ ಆಕಾಶದಲ್ಲಿ ಹಾರಾಡ ಬಲ್ಲವನಾಗಿದ್ದಾನೆ; ಮೀನಿನಂತೆ ನೀರಿನಲ್ಲೂ ಬದುಕ ಬಲ್ಲವನಾಗಿದ್ದಾನೆ. ಸಾಮಾಜಿಕ, ಆರ್ಥಿಕ, ರಾಜಕೀಯ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದ್ದಾನೆ. ಮಾನವನ ಈ ಎಲ್ಲಾ ಸಾಧನೆಯ ಹಿಂದೆ ಗುರುವಿನ ಮಾರ್ಗದರ್ಶನವಿದೆ. ಗುರು ಬ್ರಹ್ಮನಾಗಿ ವಿಷ್ಣುವಾಗಿ ಮಹೇಶ್ವರನಾಗಿ ಈ ಜಗದ ಬೆಳವಣಿಗೆಗೆ ಕೊಟ್ಟ ಕಾಣ್ಕೆ ಅತ್ಯಂತ ಮಹತ್ವದ್ದಾಗಿದೆ. ಸೂರ್ಯನಿಲ್ಲದೆ ಹಗಲನ್ನು ಚಂದ್ರನಿಲ್ಲದೆ ಬೆಳದಿಂಗಳನ್ನು ಕಾಣಲು ಹೇಗೆ ಸಾದ್ಯವಿಲ್ಲವೋ ಹಾಗೆ ಗುರುವಿಲ್ಲದೆ ಸಮಾಜದ ಪ್ರಗತಿಯನ್ನು ವ್ಯಕ್ತಿಯ ಆತ್ಮೋನ್ನತಿಯನ್ನು ಕಾಣಲು ಸಾದ್ಯವಿಲ್ಲ. ಶ್ರೀಗುರು ತಂದೆಯಾಗಿ, ತಾಯಿಯಾಗಿ ಬಂಧುವಾಗಿ, ಬಳಗವಾಗಿ ಸಮಾಜವನ್ನು ಪೊರೆದಿದ್ದಾನೆ ಹಾದಿ ತಪ್ಪುವ ಸಮಾಜವನ್ನು ಕಾವಲುಗಾರನಾಗಿ ಕಾಯ್ದಿದ್ದಾನೆ. ಇಂತಹ ಗುರುವನ್ನು ನೆನಯಲು ಮತ್ತು ಅವರ ಆಶೀರ್ವಾದ ಪಡೆಯಲು ಆಷಾಢ ಮಾಸದ ಪೌರ್ಣಿಮೆಯನ್ನು ಗುರು ಪೂರ್ಣಿಮೆ ಎಂದು ಈ ನಾಡು ಆಚರಿಸುತ್ತಾ ಬಂದಿದೆ. ಈ ದಿನ ಪ್ರತಿಯೊಬ್ಬರು ತಮ್ಮ ಗುರುವನ್ನು ನೆನೆಪಿಸಿಕೊಂಡು ಅವರಿಗೆ ಗೌರವ ಸಮರ್ಪಿಸುವುದು ವಾಡಿಕೆ ಅಂತಯೇ ನನ್ನ ಈ ಅಕ್ಷರ ನಮನವನ್ನು ನನ್ನ ಗುರುವೃಂದದ ಪಾದ ಪದ್ಮಗಳಿಗೆ ಸಮರ್ಪಿಸುವೆ.

- Advertisement -
Ad imageAd image

ಕಡ್ಲಿಗಡಬ ಹುಣ್ಣಿಮೆಯ ವಿಶೇಷತೆ
ಚಾಂದ್ರಮಾನ ಕಾಲಗಣೆನೆಯ ಪ್ರಕಾರ ಆಷಾಢ ಶುಧ್ದದಲ್ಲಿ ಬರುವ ಈ ಹುಣ್ಣಿಮೆಗೆ ಕಡ್ಲೆಗಡಬಿನ ಹುಣ್ಣಿಮೆ ಎಂದು ಕರೆಯುತ್ತಾರೆ, ಈ ಹೆಸರು ಹೇಗೆ ಬಂತು ಎಂಬುದು ನಿಖರವಾಗಿ ಹೇಳುವುದು ಕಷ್ಟ. ಇದು ತುಳು ಭಾಷೆಯ ಕೋಡಿಹುಣ್ಣಿಮೆ ಎಂಬ ಪದದಿಂದ ಬಂದಿದೆ. ಆಷಾಢ ಮಾಸದಲ್ಲಿ ಹೊಳೆ ಹಳ್ಳಗಳು ಹರಿದು ಕಡಲನ್ನು ಕೋಡಿಯ ಮೂಲಕ ಸೇರುವುದರಿಂದ ಇದಕ್ಕೆ ಕಡಲಕೋಡಿ ಹುಣ್ಣಿಮೆ ಎಂಬ ಹೆಸರು ಬಂದಿದೆ. ಅದು ಜನರ ಬಾಯಲ್ಲಿ ಅಪಭ್ರಂಶಗೊoಡು ಕಡ್ಲಿಗಡಬ ಹುಣ್ಣಿಮೆ ಎಂದಾಗಿರಬಹುದೆoದು ಜನಪದ ತಜ್ಞರು ಅಭಿಪ್ರಾಯ ಪಡುತ್ತಾರೆ. ಇನ್ನೊಂದು ನಂಬಿಕೆಯ ಪ್ರಕಾರ ಹೇಳುವುದಾದರೆ ಈ ಮಾಸವನ್ನು ಅನ್ನದೇವಿಯ ಆರಾಧನೆಯ ಕಾಲವೆನ್ನುತ್ತಾರೆ. ಈ ಸಮಯದಲ್ಲಿ ಒಟ್ಟಿದ ಬಣವೆ, ಕಾಳನ್ನು ಸಂಗ್ರಹಿಸಿಟ್ಟ ಹಗೆವು ಬರಿದಾಗುತ್ತವೆ ಆ ಸಮಯದಲ್ಲಿ, ಹೆಣ್ಣುಮಕ್ಕಳು ರೈತರು ಬಿತ್ತಿ ಉಳಿದ ಬೀಜಗಳನ್ನೆಲ್ಲವನ್ನು ಸೇರಿಸಿ ಹಿಟ್ಟು ಮಾಡಿಕೊಂಡು ಒಲೆ ಮುಂದೆ ಕುಳಿತು ದೋಸೆಯನ್ನು ಹೊಯ್ಯತ್ತಾರೆ, ಅವು ಕಡುಬಿನಂತೆ ದಪ್ಪವಾಗಿದ್ದರಿಂದ ಆ ದೋಸೆಯನ್ನು ಕಡ್ಲಿಗಡಬು ಎಂದಿದ್ದಾರೆ ಬಹುಶಃ ಆ ಹೆಸರೆ ಈ ಹುಣ್ಣಿಮೆಗೆ ಬಂದಿರಬೇಕು ಎನ್ನುವುದು ಕೆಲವು ವಿದ್ವಾಂಸರ ಅಭಿಮತ. ಅದೇನೆ ಇರಲಿ ಈ ಹುಣ್ಣಿಮೆಯ ದಿನ ಮನೆ ಮಂದಿಯಲ್ಲಾ ದೋಸೆ ಸವಿಯುವ ಪರಿಯೇ ಸೋಜಿಗ. ದೋಸೆ ಹಾಕುವ ಹಂಚಿಗೆ ಕೊರೆದ ಉಳ್ಳಾಗಡ್ಡಿಯನ್ನು ತಿಕ್ಕಿ ಬಹಳಷ್ಟು ಎಣ್ಣೆಯನ್ನು ಬಳಸದೆ ದೋಸೆ ತಯಾರಿಸುತ್ತಾರೆ. ಮೊದಲ ದೋಸೆಯನ್ನು ಮನೆ ಮಕ್ಕಳಿಗೆ ನೆದರು ತೆಗೆದು, ಅದನ್ನು ಮುಷ್ಠಿಯಲ್ಲಿ ಹಿಡಿದು ಅವರ ಬೆನ್ನಿಗೆ ಅದರಿಂದ ಗುದ್ದಿ, ಹೊರಬಂದು ಮಾಳಿಗೆ ಮೇಲೆ ಒಗೆಯುತ್ತಾರೆ. ಇದರ ಹಿನ್ನೆಲೆ ಪಶು ಪಕ್ಷಿಗಳಿಗೆ ಅದು ಆಹಾರವಾಗಲಿ, ಅಥವಾ ಅದರಲ್ಲಿ ಏನಾದರು ದೋಷವಿದ್ದರೆ ಅದು ಪಶು ಪಕ್ಷಿಗಳ ಮೂಲಕ ಗೊತ್ತಾಗಲಿ ಎಂದಿರಬಹುದು. ಈ ಕ್ರಿಯೆ ಮುಗಿದ ನಂತರವೇ ದೋಸೆ ತಿನ್ನಲು ಅನುಮತಿ, ಹಿರಿಯರಿಂದ ಕಿರಿಯರವರೆಗೆ ದೋಸೆಯನ್ನು ಆಲೂಗಡ್ಡೆ ಇಲ್ಲವೆ ಉಳ್ಳಾಗಡ್ಡಿಯಿಂದ ಮಾಡಿದ ಪಲ್ಯವನ್ನೆ ಸೇರಿಸಿ ಹೊಟ್ಟೆ ಬಿರಿಯುವಂತೆ ಸವಿಯುತ್ತಾರೆ. ಕೆಲವರು ಸಿಹಿಯಿಂದ ಕೂಡಿದ ಚೊಂಚಲ ಎಂಬ ವಿಶೇಷ ಭಕ್ಷವನ್ನು ಕೂಡಾ ಇದರೊಂದಿಗೆ ಸವಿಯುತ್ತಾರೆ. ಕುದಿಯುವ ನೀರಿನಲ್ಲಿ ಬೆಲ್ಲವನ್ನು ಹಾಕಿ ಅದು ಕರಗಿದ ನಂತರ ಅದರೊಂದಿಗೆ ಗೋಧಿ ಹಿಟ್ಟನ್ನು, ಶುಂಟಿ, ಯಾಲಕ್ಕಿಯನ್ನು ಹಾಕಿ ಕಲುಕಿದರೆ ಸಾಕು ಚೊಂಚಲ ತಯಾರು. ಇದು ಗಿಣ್ಣದಂತಿರುತ್ತದೆ. ಕೆಲವರು ಮೊಸರು ಚಟ್ನಿ ಇಲ್ಲವೇ ಶೇಂಗಾ ಚಟ್ನಿಯನ್ನು ಸೇರಿಸಿ ತಿನ್ನುತ್ತಾರೆ.

ವ್ಯಾಸ ಪೌರ್ಣಿಮೆ ಅಥವಾ ಗುರುಪೌರ್ಣಿಮೆ


ವೇದದಲ್ಲಿನ ಬ್ರಹ್ಮತತ್ವವನ್ನು ಅರಿತಿದ್ದ ವಿಷ್ಣುವಿನ ಅವತಾರವೆಂದೇ ಕರೆಯಲ್ಪಡುವ ಶ್ರೀ ವೇದವ್ಯಾಸರು ಜನಿಸಿದ ಆಷಾಢ ಮಾಸದ ಹುಣ್ಣಿಮೆಯನ್ನು ಗುರು ಪೂರ್ಣಿಮೆಯಂದು ಆಚರಿಸುತ್ತೇವೆ. ಲೋಕಗುರು ಪರಮಗುರು ಎಂದೇ ಪ್ರಖ್ಯಾತರಾಗಿದ್ದ ವ್ಯಾಸರು ವೇದಗಳನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಿದ್ದರಿoದ ಇವರನ್ನು ವೇದವ್ಯಾಸರೆಂದು ಕರೆದರು. ಇಡೀ ಮಾನವ ಕುಲಕ್ಕೇ ಒಳಿತಾಗಲೆಂದು ಮತ್ತು ವೇದಗಳ ರಹಸ್ಯ ಸಾಮಾನ್ಯರೂ ಅರಿಯುವಂತಾಗ ಬೇಕೆಂದು ಅವರು ನಮಗಾಗಿ ಮಹಾಭಾರತವೆಂಬ ಲಕ್ಷ್ಯ ಶ್ಲೋಕಗಳಿರುವ ಪಂಚಮ ವೇದವನ್ನು ರಚಿಸಿ ಕೊಟ್ಟರು. ಜೊತೆಗೇ ಭಾಗವತವನ್ನೂ ಮತ್ತು ಹದಿನೆಂಟು ಪುರಾಣಗಳನ್ನೂ ರಚಿಸಿಕೊಟ್ಟರು. ಇಂತಹ ಪುಣ್ಯಾತ್ಮರೇ ವೇದವ್ಯಾಸರು. ಆದ್ದರಿಂದಲೇ ಅವರನ್ನು ಲೋಕ ಗುರುವೆಂದು ಕರೆದು ಅವರ ಜನ್ಮದಿನವಾದ ಈ ದಿನವನ್ನು ಗುರುಪೂರ್ಣಿಮೆ ಎಂಬ ಹೆಸರಿನಲ್ಲಿ ಶ್ರದ್ಧೆ ಹಾಗೂ ಭಕ್ತಿಯಿಂದ ಆಚರಿಸುತ್ತಾ ಬರಲಾಗಿದೆ.
ಗುರು ಎನ್ನುವವರನ್ನು ಒಬ್ಬ ವ್ಯಕ್ತಿ ಎಂದು ನೋಡದೆ ಅವರನ್ನು ನಾವು ಒಂದು ಶಕ್ತಿ ಎಂದು ಅರ್ಥೈಸಿ ಕೊಂಡರೆ ನಮಗೆ ಗುರುವಿನ ಮಹತ್ವ ಇನ್ನೂ ಹೆಚ್ಚು ಆಳವಾಗಿ ತಿಳಿಯುತ್ತದೆ. ಬೇರೆ ಬೇರೆ ಗುರುಗಳು ಭೌತಿಕ ಶರೀರದಿಂದ ಅಂದರೆ ಹೊರಗಿನಿಂದ ನೋಡಲು ವ್ಯತ್ಯಾಸವಾಗಿದ್ದರೂ ಅವರೆಲ್ಲರ ಒಳಗಿನ ಗುರುತತ್ವ ಮಾತ್ರ ಒಂದೇ ಆಗಿರುತ್ತದೆ.

 ಅವೆರೆಲ್ಲರೂ ಹೊರ ಹೊಮ್ಮಿಸುವ, ಪಸರಿಸುವ ಲಹರಿಗಳು ತುಂಬಾ ಚೈತನ್ಯದಾಯಕವಾಗಿರುತ್ತದೆ. ಗುರುವಿಗೆ ಯಾವಾಗಲೂ ಶಿಷ್ಯನ ಉನ್ನತಿಯೇ ಪರಮ ಧ್ಯೇಯವಾಗಿರುತ್ತದೆ. ನಮ್ಮ ಉಪನಿಷತ್ತು, ಪುರಾಣ, ವೇದ, ಶಾಸ್ತçಗಳೆಲ್ಲದರಲ್ಲೂ ಗುರುವಿಗೆ ಅತ್ಯಂತ ಮಹತ್ವದ ಸ್ಥಾನವಿದೆ. ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಅರ್ಜುನರ ಸಂಬ0ಧ ಮತ್ತು ರಾಮಾಯಣದಲ್ಲಿ ಶ್ರೀರಾಮ ಹನುಮರ ಸಂಬoಧಗಳು ಗುರು ಶಿಷ್ಯರ ಸಂಬoಧಕ್ಕೆ ಅತಿ ಸೂಕ್ತವಾದ ನಿದರ್ಶನಗಳಾಗಿವೆ. ಗುರು ಶಿಷ್ಯರ ಅತ್ಯಂತ ನಿಕಟ ಸಂಬoಧವು ಕಲಿಯುಗದಲ್ಲೂ ಮುಂದುವರೆದು ಚಾಣುಕ್ಯ ಚಂದ್ರಗುಪ್ತ, ವಿದ್ಯಾರಣ್ಯ ಹಕ್ಕ-ಬುಕ್ಕರ ಗುರು ಶಿಷ್ಯ ಸಂಬ0ಧವನ್ನು ಇತಿಹಾಸದಲ್ಲೂ, ವ್ಯಾಸರಾಯ ಕನಕ-ಪುರಂದರ ಗುರು ಶಿಷ್ಯ ಪರಂಪರೆಯನ್ನು ಸಾಹಿತ್ಯ ಕ್ಷೇತ್ರದಲ್ಲೂ ಕಾಣಬಹುದಾಗಿದೆ.
ಗುರು ಅರಿಯದವನೇ ಮರುಳ
ಉಪನಿಷತ್ತಿನ ಪ್ರಕಾರ ಗು ಎಂದರೆ ಅಂಧಕಾರವೆoದೂ ರು ಎಂದರೆ ದೂರೀಕರಿಸುವವ ಅಥವಾ ಅಜ್ಞಾನದ ಅಂಧಕಾರವನ್ನು ನಿವಾರಿಸಿ ಜ್ಞಾನದ ಹಾದಿಗೆ ನಡೆಸುವವ ಎಂಬ ಅರ್ಥಬರುತ್ತದೆ. ಸಂಸ್ಕೃತದಲ್ಲಿ ಗುರು ಪದಕ್ಕೆ ಭಾರವಾದ, ದೊಡ್ಡದಾದ ಎನ್ನುವ ಅರ್ಥವೂ ಇದೆ. ಯಾರು ಜ್ಞಾನದಿಂದ ಭಾರವಾಗಿರುವನೋ ತಾಳ್ಮೆಯಿಂದ ದೊಡ್ಡವನಾಗಿರುವನೋ ಅವನೇ ಗುರು ಎಂದು ಅರ್ಥೈಸಬಹುದು ನಮಗೆ ಸುಂದರ ಶರೀರ, ಅಪಾರ ಅಂತಸ್ತು, ಕೀರ್ತಿ, ಸಂಸಾರ ಎಲ್ಲವೂ ಇದ್ದರೂ ಗುರುವಿನ ಚರಣಗಳಲ್ಲಿ ಭಕ್ತಿ ಶ್ರದ್ಧೆ ಇಲ್ಲದವನಿಗೆ ಮೋಕ್ಷವಿಲ್ಲ. ವೇದ, ಶಾಸ್ತç ಪಾರಂಗತನಾಗಿ ಅನೇಕ ವಿದ್ಯೆಗಳನ್ನು ತಿಳಿದವನಾಗಿದ್ದರೂ ಕೂಡ ಸದ್ಗುರುವಿನ ಚರಣಗಳಲ್ಲಿ ನಿಷ್ಠೆ ಇಡದಿದ್ದರೆ ಮುಕ್ತಿಯಿಲ್ಲ. ವಿದೇಶಗಳಲ್ಲಿ ತುಂಬಾ ಹೆಸರು ಮಾಡಿ, ಸ್ವದೇಶದಲ್ಲಿ ಆಚಾರ ಪಾಲಿಸಿ, ಎಲ್ಲರಿಗಿಂತ ಶ್ರೇಷ್ಠ ವ್ಯಕ್ತಿ ಎಂಬ ಹೆಸರು ಪಡೆದಿದ್ದರೂ ಸಹ ಗುರುಚರಣಗಳಲ್ಲಿ ಭಕ್ತಿ ಇಲ್ಲದವನ ಜೀವನ ನಿರರ್ಥಕ. ಭೂಮಂಡಲದಲ್ಲಿ ಅನೇಕರಿಂದ ಪಾದ ಪೂಜಿಸಿ ಕೊಳ್ಳುವಂತಹ ವ್ಯಕ್ತಿಯಾಗಿದ್ದರೂ ಕೂಡ ತನ್ನ ಗುರುಗಳ ಪಾದ ಪೂಜಿಸದವನು ಮೇರು ವ್ಯಕ್ತಿತ್ವದವನಾಗಿದ್ದರೂ ವ್ಯರ್ಥವೇ. ಅನೇಕ ದಾನ ಧರ್ಮಗಳನ್ನು ಮಾಡಿ ಇಡೀ ಜಗತ್ತನ್ನೇ ಗೆದ್ದಿರುವೆನೆಂದು ಕೊಂಡರೂ ಅವನು ತನ್ನ ಗುರುವಿನ ಅನುಗ್ರಹಕ್ಕೆ ಪಾತ್ರನಾಗದಿದ್ದರೆ ಎಲ್ಲವೂ ತೃಣ ಮಾತ್ರವೇ. ಲೌಕಿಕದ ಎಲ್ಲಾ ವ್ಯಾಪಾರಗಳಲ್ಲಿ ಆಸಕ್ತಿ ತೊರೆದಿದ್ದರೂ ಕೂಡ ಆ ವ್ಯಕ್ತಿಯ ಮನಸ್ಸು ಅಚಲವಾಗಿ ಗುರು ಚರಣಗಳಲ್ಲಿ ಶ್ರದ್ಧೆ ಹೊಂದಿರದಿದ್ದರೆ ಅವನ ವೈರಾಗ್ಯ ಉಪಯೋಗವಿಲ್ಲದ್ದು, ಅಂಥವರು ಮೋಕ್ಷವನ್ನು ಹೊಂದಲಾರರು. ಸಮಸ್ತವನ್ನೂ ತ್ಯಜಿಸಿ, ಅರಣ್ಯದಲ್ಲಿ ವಾಸಿಸಿದರೂ ಕೂಡ, ಗುರುಚರಣಗಳಿಗೆ ಶರಣಾಗತನಾಗದಿದ್ದರೆ ಆತ ಸಂಸಾರ ಬಂಧನದಿoದ ಮುಕ್ತನಾಗುವುದು ಸುಳ್ಳು. ಹೀಗೆ ನಾವು ಬದುಕಿನಲ್ಲಿ ಏನೆಲ್ಲಾ ಸಾಧಿಸಿದ್ದರೂ, ಗುರುವಿನ ಕರುಣೆಯಿಲ್ಲದೆ ಎಲ್ಲವೂ ವ್ಯರ್ಥ, ಗುರುವಿನ ಪಾದಗಳಲ್ಲಿ ಮನಸ್ಸನ್ನು ನಿಲ್ಲಿಸದಿದ್ದರೆ ನಮ್ಮ ಸಾಧನೆ ಕಷ್ಟಸಾಧ್ಯ ಗುರು ಅರಿಯದವನು ಮರುಳನಾಗುತ್ತಾನೆ ಎಂದು ಗುರುವಿನ ಮಹತ್ವವನ್ನು ವಿದ್ವಾಂಸರು ವಿವರಿಸುತ್ತಾರೆ.

ಅರಿವಿನ ದಾರಿ ತೋರಿದ ಗುರುವೇ ನಿಮಗಿದೋ ಶರಣು
ಜಗತ್ತಿನಲ್ಲಿ ಗುರುವಿಗಿಂತಲು ಅಧಿಕರಾದವರು ಯಾರು ಇಲ್ಲ ದೇವರು ನಮಗೆ ಗುರುವನ್ನು ತೋರಿಸಲಿಲ್ಲ ಆದರೆ ಗುರು ದೇವರನ್ನು ತೋರಿಸಿದ. ಕತ್ತಲಲ್ಲಿದ್ದ ನಮಗೆ ಬೆಳಕು ತೋರಿ ತಾನೇ ರವಿಯಾದ. ಬದುಕಿಗೆ ನೆಲೆಯೊದಗಿಸಿ ತಾನೆ ಭೂಮಿಯಾದ. ಮನದ ಪಾಪ ತೊಳೆಯುವ ಪವಿತ್ರ ಜಲವಾದ. ಜಾತಿ-ಮತ-ಪಂಥ-ಧರ್ಮ-ದೇಶ-ಭಾಷೆ ಈ ಬಂಧನಕ್ಕೆ ಸಿಲಿಕಿಸದೆ ನಮ್ಮನ್ನು ವಿಶಾಲ ಆಕಾಶವಾಗಿಸಿದ. ಕಾಮ-ಕ್ರೋದ-ಮೋಹ-ಮದ-ಮತ್ಸರ ಸುಡುವ ಅಗ್ನಿಯಾದ. ಒಟ್ಟಾರೆ ನಮ್ಮ ಬದುಕನ್ನು ತಿದ್ದಿ ತೀಡಿ ಒಂದು ಸುಂದರ ಶಿಲ್ಪವಾಗಿಸಿದ..ವರ್ಣ ಮಾತ್ರಂ ಕಲಿಸಿದಾತಂ ಗುರು. ಹಾಗಾಗಿ ನಮ್ಮ ಬದುಕಿನಲ್ಲಿ ಒಳ್ಳೆಯದು ಆಗಿದೆ ಅಂದರೆ ಅದಕ್ಕೆ ಗುರು ಕಾರಣ್ಯವೇ ಇದೆ ಎಂದು ಅರ್ಥ. ಆಷಾಢ ಮಾಸದ ಹುಣ್ಣಿಮೆಯ ದಿನ ನಾವು ಆಚರಿಸುವ, ಶ್ರೇಷ್ಠವಾದ ಹಬ್ಬವೆಂದರೆ ಗುರು ಪೂರ್ಣಿಮೆ ಈ ದಿನ ನಾವು ನಮ್ಮ ಗುರುಗಳಿಗೆ ವಂದನೆ ಸಲ್ಲಿಸುವ ದಿನ. ಗುರು ನಮಗೆ ಜೀವನದಲ್ಲಿ ಸರಿಯಾದ ದಿಕ್ಕು ಸೂಚಿಸುವ, ನಮ್ಮ ಕೈ ಹಿಡಿದು ನಡೆಸುವ, ಪರಮಾತ್ಮನ ಅರಿವನ್ನು ತಿಳಿಯಲು ನಮ್ಮೊಳಗಿರುವ ನಮ್ಮ ಆತ್ಮವನ್ನು ಜಾಗೃತಿಗೊಳಿಸುವ ಮಹತ್ವದ ವ್ಯಕ್ತಿ. ಆಧ್ಯಾತ್ಮದ ಹಾದಿಯಲ್ಲಿ ನಮ್ಮನ್ನು ನಡೆಸಿ, ನಮ್ಮ ಗುರಿ ಮುಟ್ಟಲು ಸಹಾಯ ಮಾಡುವವನೇ ಗುರು. ನಾವು ಗುರುವಿನ ಮುಖಾಂತರವೇ ಪರಮಾತ್ಮನ ಅರಿವು ಅರಿಯಬೇಕಾಗಿರುವುದರಿಂದ, ನಾವು ಆಷಾಢದ ಪೌರ್ಣಮಿಯಂದು ಮಾತ್ರ ಗುರುವನ್ನು ಪೂಜಿಸದೆ.. ಅನು ದಿನ, ಅನು ಕ್ಷಣ, ಗುರುವನ್ನು ಅಂತರoಗದಲ್ಲೇ ಪೂಜಿಸುತ್ತಾ ನಮ್ಮನ್ನು ನಾವು ಸಮರ್ಪಿಸಿಕೊಳ್ಳಬೇಕು. ಹೀಗೆ ನನ್ನದೇನೂ ಇಲ್ಲವೆಂಬ ಭಾವ ನಮ್ಮಲ್ಲಿ ಸದಾ ಜಾಗೃತವಾಗಿಟ್ಟುಕೊಂಡು, ಗುರುವಿನಲ್ಲಿ ಶರಣಾದರೆ ಮಾತ್ರ ನಮ್ಮ ಗುರಿ ಮುಟ್ಟುವ ಪ್ರಯತ್ನ ಸಫಲವಾಗುತ್ತದೆ. ಇಂತಹ ಪರಮ ಗುರುವನ್ನು ಯಾವತ್ತೂ ಮರೆಯದೆ ಅವರನ್ನು ಸದಾ ಸ್ಮರಿಸೋಣ ಗುರುವನು ನೆನದರೆ ಮುಳ್ಳು ಹೂವಾದೀತು. ವಿಷ ಅಮೃತವಾದೀತು. ಜಗದ ಅರಿವಿಗೆ ದಾರಿ ತೋರಿದ ಶ್ರೀಗುರುವೆ ನಿಮಗೆ ಶರಣು ಶರಣಾರ್ಥಿ.
-ಲೇ: ಎ.ಎಂ.ಪಿ ವೀರೇಶಸ್ವಾಮಿ ಹೊಳಗುಂದಿ. ದೂ;-9008527708

Share This Article
error: Content is protected !!
";