ತೀವ್ರ ಅತಿಸಾರ ಭೇದಿ ನಿಯಂತ್ರಣಕ್ಕೆ ಓಆರ್‌ಎಸ್, ಜಿಂಕ್ ಮಾತ್ರೆ ಪರಿಣಾಮಕಾರಿ

Vijayanagara Vani
ಚಿತ್ರದುರ್ಗ
ತೀವ್ರ ಅತಿಸಾರ ಭೇದಿ ನಿಯಂತ್ರಣಕ್ಕೆ ಓಆರ್‌ಎಸ್ ದ್ರಾವಣ ಮತ್ತು ಜಿಂಕ್ ಮಾತ್ರೆ ಪರಿಣಾಮಕಾರಿಯಾದ ಚಿಕಿತ್ಸೆಯಾಗಿದೆ ಎಂದು ಮಾರುತಿ ನಗರ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ.ಯಶಸ್ ಹೇಳಿದರು.
ಚಿತ್ರದುರ್ಗ ನಗರದ ವಾರ್ಡ್ ಸಂಖ್ಯೆ 20ರ ನಗರ ಆರೋಗ್ಯ ಕೇಂದ್ರ ಮಾರುತಿ ನಗರ ಆರೋಗ್ಯ ಕೇಂದ್ರದ ಸಭಾಂಗಣದಲ್ಲಿ ನಗರಸಭೆ, ಆರೋಗ್ಯ ಇಲಾಖೆ ಸಹಯೋಗದೊಂದಿಗೆ ಡಯೇರಿಯಾ ತಡೆಗಟ್ಟುವ ಅಭಿಯಾನ, ತೀವ್ರ ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅತಿಸಾರ ರೋಗವು 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಸಾವಿಗೆ ಮೂರನೇ ಪ್ರಮುಖ ಕಾರಣವಾಗಿದೆ. ಅತಿಸಾರವು ಹಲವಾರು ದಿನಗಳವರೆಗೆ ಇರುತ್ತದೆ ಎಂದು ತಿಳಿಸಿದ ಅವರು ಮಕ್ಕಳ ಆರೋಗ್ಯವೇ ನಮ್ಮ ಆಸ್ತಿಯಾಗಿದ್ದು, ಸ್ವಚ್ಛತೆಗೆ ಹೆಚ್ಚು ಗಮನವಹಿಸಿ ಅತಿಸಾರ ಭೇದಿಗೆ ತುತ್ತಾಗದಂತೆ ಪೋಷಕರು ಹೆಚ್ಚು ಜಾಗೃತಿ ವಹಿಸಬೇಕು ಎಂದು ಸಲಹೆ ನೀಡಿದರು.
ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ ಮಾತನಾಡಿ, ಅತಿಸಾರವು ಸಾಮಾನ್ಯವಾಗಿ ಕರುಳಿನಲ್ಲಿನ ಸೋಂಕಿನ ಲಕ್ಷಣವಾಗಿದೆ. ಇದು ವಿವಿಧ ಬ್ಯಾಕ್ಟೀರಿಯಾ, ವೈರಲ್ ಮತ್ತು ಪರಾವಲಂಬಿ ಜೀವಿಗಳಿಂದ ಉಂಟಾಗಬಹುದು. ಸೋಂಕು ಕಲುಷಿತ ಆಹಾರ ಅಥವಾ ಕುಡಿಯುವ ನೀರಿನ ಮೂಲಕ ಅಥವಾ ಕಳಪೆ ನೈರ್ಮಲ್ಯದ ಪರಿಣಾಮವಾಗಿ ವ್ಯಕ್ತಿಯಿಂದ ವ್ಯಕ್ತಿಗೆ ಹರಡುತ್ತದೆ. ಸುರಕ್ಷಿತ ಕುಡಿಯುವ ನೀರು, ಸುಧಾರಿತ ನೈರ್ಮಲ್ಯದ ಬಳಕೆ ಮತ್ತು ಸಾಬೂನಿನಿಂದ ಕೈ ತೊಳೆಯುವುದು ಸೇರಿದಂತೆ ಅತಿಸಾರ ತಡೆಗಟ್ಟುವ ಮಧ್ಯಸ್ಥಿಕೆಗಳು ರೋಗದ ಅಪಾಯ ಕಡಿಮೆ ಮಾಡಬಹುದು ಎಂದು ಹೇಳಿದರು.
ಕ್ಷೇತ್ರ ಅರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ ಅವರು ಕೈ ತೊಳೆಯುವ ವಿಧಾನ, ಉಪ್ಪು ಸಕ್ಕರೆ, ಓ.ಆರ್.ಎಸ್. ದ್ರಾವಣ ಸಿದ್ದಪಡಿಸುವ ಪ್ರಾತ್ಯಕ್ಷಿಕೆ ನೀಡಿದರು.
ಕಾರ್ಯಕ್ರಮದಲ್ಲಿ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಕೆ.ನಂದೀಶ್, ಸುಪ್ರಿತಾ, ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿಗಳಾದ ವಿನ್ಸಿ, ಸಿ.ರೂಪ, ಆಶಾ, ಉಷಾ, ಆಶಾ ಕಾರ್ಯಕರ್ತೆಯರಾದ ಪ್ರಿಯ, ಅಮೃತ, ಮಂಜುಳಾ, ನೇತ್ರ, ಸಂದ್ಯಾ, ಗಣಕ ನಿರ್ವಾಹಕರಾದ ಐಶ್ವರ್ಯ ತಾಯಿ ಮಕ್ಕಳು ಸೇರಿದಂತೆ ಮತ್ತಿತರರು ಇದ್ದರು
Share This Article
error: Content is protected !!
";