- ನಮ್ಮ ನಿಸರ್ಗ ಒಂದು ಯೋಜಿತ ವ್ಯವಸ್ಥೆ. ಭೂಮಿಯ ಮೇಲಿನ ಲಕ್ಷಾಂತರ ಕೋಟಿ ಜೀವರಾಶಿಗಳು ಬದುಕಲು ಅನುವಾಗುವಷ್ಟು ಅನುಕೂಲವನ್ನು ಭೂಮಿ ಮತ್ತು ಭೂಮಿಯ ಸುತ್ತಲಿನ ವಾತಾವರಣ ನಮಗೆ ನೀಡಿದೆ.ನಮ್ಮ ಈ ವಾತಾವರಣದ ಯಾವ ಕಣವು ವ್ಯರ್ಥವಲ್ಲ ಇಲ್ಲಿರುವ ಎಲ್ಲಾ ಜೀವಿಗಳು ಮತ್ತು ಭೌತಿಕವಸ್ತುಗಳು ಪರಸ್ಪರ ಪೂರಕವಾದವುಗಳು.ಸೌರ ಕುಟುಂಬದಲ್ಲಿ ಜೀವಿಗಳಿರುವ ಏಕೈಕ ಗ್ರಹ ನಮ್ಮ ಭೂಮಿ. ಅದಕ್ಕಾಗಿ ಭೂಮಿ ಒಂದು ಅನನ್ಯ ಮಂತೆ ಗ್ರಹ. ಬೇರೆ ಗೆಲಾಕ್ಸಿಗಳಲ್ಲಿ ಜೀವಿಗಳಿರಬಹುದೆಂಬ ಊಹೆ/ಅನುಮಾನವಿದ್ದರೂ ಅವು ನಮ್ಮಂತೆ ಇರಬಹುದೆಂಬ ನಂಬಿಕೇನೂ ವಿಜ್ಞಾನಿಗಳಿಗಿಲ್ಲ. ಇರಲಿ.. ಆದರೆ ಭೂಮಿ ಜೀವಿಗಳು ವಿಕಾಸಹೊಂದಲು ಅಚ್ಚುಕಟ್ಟಾದ ಸ್ಥಳವೆಂದು ನಮ್ಮೆಲ್ಲರ ಗಮನಕ್ಕೆ ಬಂದಿದೆ. ಇಂತಹ ನಿಸರ್ಗದತ್ತ ವ್ಯವಸ್ಥೆಯ ಮೇಲೆ ಮಾನವರ ದಾಳಿ ಸದಾ ನಡೆಯುತ್ತಿದೆ. ಇದರಿಂದ ಪರಿಸರ ಹಾಳಾಗುತ್ತಿದೆ. ಅದರಲ್ಲೂ ಬಹು ಮುಖ್ಯವಾಗಿ “ಓಜೋನ್” ಪದರ.
ಓಜೋನ್ ಪದರ ಇದು ಸೂರ್ಯನಿಂದ ಬರುವ ಹೆಚ್ಚಿನ ನೇರಳಾತೀತ ವಿಕಿರಣವನ್ನು ಹೀರಿಕೊಳ್ಳುತ್ತದೆ. ಇದು ಭೂಮಿಯ ವಾಯುಮಂಡಲದ ಒಂದು ಪ್ರದೇಶವಾಗಿದೆ.ಇದು ಭೂಮಿಯಿಂದ ಸುಮಾರು 15 ರಿಂದ 35 ಕಿ.ಮೀ. ಎತ್ತರದಲ್ಲಿದೆ. ಇದರ ದಪ್ಪ (ಸಾಂದ್ರತೆ) ಕಾಲೋಚಿತವಾಗಿ ಮತ್ತು ಭೌಗೋಳಿಕವಾಗಿ ಬದಲಾಗುತ್ತಿರುತ್ತದೆ. ಓಜೋನ್ ಎಂಬುದು ಒಂದು ಅನಿಲ, ಓ3- ಆಮ್ಲಜನಕದ 3 ಅಣುಗಳಿಂದಾದ ಅನಿಲ, ಓಜೋನ್ ಪದರನ್ನು 1913ರಲ್ಲಿ ಫ್ರೆಂಚ್ ಭೌತಶಾಸ್ತ್ರಜ್ಞರಾದ ಚಾರ್ಲ್ಸ್ ಫ್ಯಾಬ್ರಿ ಮತ್ತು ಹೆನ್ರಿ ಬ್ಯುಸನ್ ಕಂಡುಹಿಡಿದರು.
ಈ ಪ್ರಕ್ರಿಯೆಯಲ್ಲಿ ಒಂದನ್ನು ವಿಜ್ಞಾನಿಗಳು ಗಮನಿಸಿದರು, ಸೂರ್ಯನಿಂದ ಬರುವ ವಿಕಿರಣಗಳನ್ನು ಅಧ್ಯಯನ ಮಾಡುವಾಗ ಅವು ಭೂಮಿಯನ್ನು ತಲುಪಿದಾಗ ವಿಕಿರಣವು 5500-6000 ಕೆಲ್ವಿನ್ ತಾಪಮಾನಹೊಂದಿರುವ ಕಪ್ಪುದೇಹ (ಬ್ಲಾಕ್ ಬಾಡಿ ರೇಡಿಯೇಷನ್) ವರ್ಣಪಟಲಕ್ಕೆ ಹೊಂದಿಕೆಯಾದದ್ದು ಕಂಡುಬಂತು. ಆದರೆ ವರ್ಣಪಟಲದ ಒಂದು ತುದಿಯ ಆಚೆ ನೇರಳಾತೀತ ತುದಿಯಲ್ಲಿ ಸುಮಾರು 310 ಎನ್‌ಎಂ ತರಂಗಾಂತದ ಕೆಳಗೆ ಯಾವುದೇ ವಿಕಿರಣ ಇರಲಿಲ್ಲ.ಕಾಣೆಯಾದ ವಿಕಿರಣವನ್ನು ವಾತಾವರಣದಲ್ಲಿ ಯಾವುದೋ ಅಂಶ ಹೀರಿಕೊಳ್ಳುತ್ತಿದೆ ಎಂದು ತೀರ್ಮಾನಕ್ಕೆ ಬಂದರು. ಸಂಶೋಧನೆಯನಂತರ ಆ ಕಾಣೆಯಾದ ವಿಕಿರಣದ ವರ್ಣಪಟಲವನ್ನು ಒಂದು ಅನಿಲ ಹೀರಿಕೊಳ್ಳುತ್ತದೆ ಅದುವೇ “ಓಜೋನ್‌ಗೆ” ಹೋಲಿಕೆಯಾಯಿತು. ದಿನಗಳಂತೆ ಓಜೋನ್ ಬಗ್ಗೆ ಅನೇಕ ಸಂಶೋಧನೆಗಳು ಆರಂಭವಾದವು. ಇದರ ಗುಣಲಕ್ಷಣಗಳನ್ನು ಬ್ರಟೀಷ್ ಹವಾಮಾನತಜ್ಞ ಜಿ ಎಂಬಿ ಡಾಟ್ಸನ್ ಅವರು ಸ್ಪೆಕೋ ಫೋಟೋಮೀಟರ್ (ಡಾಬಸ್ಟ್ರೀಟರ್) ನ್ನು ಅಭಿವೃದ್ಧಿ ಪಡಿಸಿದರು. ಇದರ ಉಪಯೋಗವೇನೆಂದರೆ ನೆಲದಮೇಲಿಂದಲೇ ವಾಯುಮಂಡಲದ ಓಜೋನ್‌ನ್ನು ಅಳೆಯಬಹುದಾಗಿದೆ. ಇದರಿಂದ ಓಜೋನ್ ವೀಕ್ಷಣೆ ಮಾಡಲಾಯಿತು, ವಾತಾವರಣದಲ್ಲಿ ಅದರ ಬದಲಾವಣೆ, ಸಾಂಧ್ರತೆ ಮತ್ತು ತೀವ್ರತೆಯನ್ನು ಅಧ್ಯನ ಮಾಡಿದರು.ಎರಡು ವಿಧದ ಯು.ವಿ ತರಂಗಾಂತರಗಳ ತೀವ್ರತೆಯ ಅನುಪಾತವನ್ನು ಅಧ್ಯಯನ ಮಾಡಿದರು.
ಡಾಟ್ಸನ್ ಮೀಟರ್: ವಾತಾವರಣದಲ್ಲಿ ಓಜೋನ್ ಎಲ್ಲಾ ಕಡೆ ಒಂದೇರೀತಿ ಪ್ಯಾಕ್
ಅಗಿರುವುದಿಲ್ಲ, ಅದು ಚದುರಿಹೋಗಿರುತ್ತದೆ. ಆ ಓಜೋನ್‌ನನ್ನು ಗಟ್ಟಿಮಾಡಿ ಒಂದು ಕಾಲಮ್‌ಗೆ ತಂದರೆ ಆ ಕಾಲಮ್‌ನಲ್ಲಿ ಎಷ್ಟು ಓಜೋನ್ ಇರುತ್ತದೆ ಎಂಬ ಅಳತೆಯನ್ನು ಡಬ್ಲಿನ್ ಮೀಟರ್ ತಿಳಿಸುತ್ತದೆ.ವಾತಾವರಣದಲ್ಲಿ ಓಜೋನ್ ಸರಾಸರಿ ಪ್ರಮಾಣವು 300 ಡಾಲ್ಸನ್ ಘಟಕಗಳಾಗಿದ್ದು (ಇದು ಒಂದು ಅಳತೆ: 300 ಡಾಟ್ಸನ್ ಘಟಕಗಳು ಎಂದರೆ 3 ಮಿಲಿಮೀಟರ್‌ಗಳ ದಪ್ಪನೆಯ ಪದರಿಗೆ ಸಮ ) ಇದರ ಅಂದಾಜು ದಪ್ಪ ನಮ್ಮ ಸಾಧಾರಣ ಎರಡು ನಾಣ್ಯಗಳನ್ನು ಒಂದರಮೇಲೊಂದು ಇಟ್ಟರೆ ಆಗುವ ಎತ್ತರ, ಅಂಟಾರ್ಕ್ಸಿಟಿಕಾ ಭೂ ಖಂಡದ ಮೇಲೆ ಓಜೋನ್ ಪದರಿಗೆ ರಂಧ್ರ ಬಿದ್ದಿದೆ ಎಂದು ವಿಜ್ಞಾನಿ ಫಾರ್‌ಮನ್ ವರದಿ ಮಾಡಿದನು. ಅನಿಲಕ್ಕೆ ರಂಧ್ರ ಬೀಳುವ ಸಾಧ್ಯತೆ ಇಲ್ಲ, ಇಲ್ಲಿ ರಂಧ್ರ ಎಂದರೆ ಓಜೋನ್ ಅನಿಲದ ಸಾಂಧ್ರತೆ ಕಡಿಮೆ ಇರುವುದು ಎಂದು ಅರ್ಥ, ಪ್ರಯುಕ್ತ ಅಂಟಾರ್ಕ್ಟಿಟಿಕಾ ಭೂ ಖಂಡದ ಮೇಲೆ ಓಜೋನ್ ಪದರಿನಲ್ಲಿ ನೂರು ಡಾಟ್ಸನ್ ಘಟಗಳಿದ್ದವು ಅಂದರೆ ಒಂದು ಮಿಲಿ ಮೀಟರ್ ದಪ್ಪ ಇತ್ತು ಎಂದು ಅರ್ಥ.ಭೂಮಿಯ ಮೇಲಿಂದ ವಾತಾವರಣದಲ್ಲಿರುವ ಓಜೋನ್ ಸರಿ ಸುಮಾರು ಕೆಲವು ಕಡೆ 20 ಕಿ.ಮೀ ನಿಂದ 40 ಕಿಮೀ ಹೀಗೆ ದಪ್ಪದಾಗಿ ವಿರಳವಾಗಿರುತ್ತದೆ. ಅದನ್ನು ಭೂಮಿಯ ವಾತಾವರಣದಲ್ಲಿ ಒತ್ತಡದಲ್ಲಿಟ್ಟು ಹಿಂಡಿದರೆ 3 ಮಿಲಿ ಮೀಟರ್ ಆಗುತ್ತದೆ. ಹೀಗೆ ಉಂಟಾಗುವ (ಕಾಟನ್ ಕ್ಯಾಂಡಿಯನ್ನು ಹಿಂಡಿ ಗಟ್ಟಿಯಾಗಿ ಮಾಡಿದಾಗ ಆಗುವ ಸ್ಥಿತಿ) ಸಾಂಧ್ರತೆ ಹೆಚ್ಚಿರುವ ಅನಿಲದ ಅಳತೆಯೇ ಡಾಬಸ್ ಯೂನಿಟ್. ಒಂದು ಡಾಬಸ್ ಯೂನಿಟ್ ಎಂದರೆ 0.01 ಮಿಮೀ ದಪ್ಪ. ಇದರಿಂದ ವಾತಾವರಣದಲ್ಲಿ ಪರಿಸರದ ಮೇಲೆ ಮಾನವನ ದಾಳಿಯಿಂದ ಆಗುತ್ತಿರವ ಹಾನಿಯಿಂದ ಹಾಳಾಗುತ್ತಿರುವ ಓಜೋನ್ ಪದರಿನ ಬಗ್ಗೆ ಎಚ್ಚರಿಕೆವಹಿಸಲು ಅನುಕೂಲವಾಗಿದೆ.
ಓಜೋನ್ ಪದರಿನ ಜನನ: ಭೂಮಿಯ ಮೇಲಿನ ಜೀವಿಗಳು ಹುಟ್ಟಲು ಮತ್ತು ಬದುಕಲು
ಅನೇಕ ರೀತಿಯಲ್ಲಿ ಓಜೋನ್ ಪದರು ಕಾರಣವಾಗಿದೆ. ಇದು ವಾತಾವರಣದಲ್ಲಿ ನಡೆಯುವ ಅನೇಕ ಪ್ರಕ್ರಿಯೆಗಳ ಮೂಲಕ ಲಕ್ಷಾಂತರ ವರ್ಷಗಳ ಹಿಂದೆ ಅಸ್ಥಿತ್ವಕ್ಕೆ ಬಂದಿದೆ.ಓಜೋನ್ ರಕ್ಷಾಕವಚದ ನಂತರ ಜೀವಿಗಳು ಉದಯಿಸಿರ ಬೇಕು.ವಾಯುಮಂಡಲದಲ್ಲಿರುವ ಎರಡು ಆಮ್ಲಜನಕ ಅಣುಗಳನ್ನು ಸೂರ್ಯನಿಂದ ಬರುವ ನೇರಳಾತೀತ ಕಿರಣಗಳಿಂದ ಹೊಡೆದಾಗ ಓಜೋನ್ (ಒ3) ತಯಾರಾಗುತ್ತದೆ. ನೇರಳಾತೀತ ಕಿರಣ ಓಜೋನ್‌ನ್ನು ಹೊಡೆದಾಗ ಅದು ಒ2 ನ ಅಣುವಾಗಿ ಮತ್ತು ಆಮ್ಲಜನಕದ ಪ್ರತ್ಯೇಕ ಅಣುವಾಗಿ ವಿಭಜನೆಯಾಗುತ್ತದೆ. ಇದನ್ನು ಓಜೋನ್_ಆಮ್ಲಜನಕದ ಚಕ್ರ ಎಂದು ಕರೆಯಲಾಗುತ್ತದೆ. ಇದು ನಿರಂತರವಾಗಿ ನಡೆಯುವ ಪ್ರಕ್ರಿಯೆ. ಇದನ್ನು 1930ರಲ್ಲಿ ಬ್ರಿಟೀಷ್ ಭೌತಶಾಸ್ತ್ರಜ್ಞ ಸಿಡ್ನಿ ಚಾಪ್ಟನ್ ಕಂಡುಹಿಡಿದರು.
ಓಜೋನ್ ಪದರು ಹಾನಿಗೆ ಕಾರಣಗಳು: ನಾಗರೀಕತೆ ಮತ್ತು ಜನಸಂಖ್ಯೆ ಹೆಚ್ಚಾದಂತೆಲ್ಲಾ ನಾವೆಲ್ಲಾ ಐಷರಾಮಿ ಬದುಕಿಗೆ ಒಗ್ಗಿಕೊಂಡಿದ್ದೇವೆ. ಜೀವನದ ಪ್ರತಿ ಹಂತದಲ್ಲೂ ತಂತ್ರಜ್ಞಾನದ ಪ್ರಭಾವ ಅವಿಭಾಜ್ಯ ಅಂಗವಾಗಿದೆ. ವಾಹನಗಳು, ಹವಾನಿಯಂತ್ರಕಗಳು, ಕಾರ್ಖಾನೆಗಳು, ಕೃಷಿಯಲ್ಲಿ ಬಳಸುವ ಕ್ರಿಮಿನಾಶಕ, ಮತ್ತು ರಾಸಾಯನಿಕ ಗೊಬ್ಬರಗಳಲ್ಲಿನ ವಿಷಕಾರಿ ಅಂಶಗಳು ಲೋಹ ರಕ್ಷಕ ವರ್ಣಗಳಲ್ಲಿ ಸೇರಿರುವ ಅಂದರೆ ಹಾಲೋನ್ ಮತ್ತು ಮೀಥೇಲ್ ಅಲ್ಲದೆ
ಕ್ಲೋರೋಫ್ಲೋರೋ ಕಾರ್ಬನ್ಸ್. ಸಾರಜನಕದ ಆಕ್ಸೆಡ್‌ಗಳು ಮತ್ತು ಮೀಥೇನ್ ಬೋಮೈಡ್ ನಂತಹ ರಾಸಾಯನಿಕಗಳು ಓಜೋನ್ ಪದರಿಗೆ ಹಾನಿ ಮಾಡುತ್ತಿವೆ. ಇತ್ತೀಚಿನ ವೈಜ್ಞಾನಿಕ ಕ್ಷೇತ್ರದಲ್ಲಿ ರಾಕೇಟ್ ಮತ್ತು ಉಪಗ್ರಹಗಳಿಂದ ಉಂಟಾಗುವ ಮಾಲಿನ್ಯವೂ ಓಜೋನ್ ಪದರಿಗೆ ಹಾನಿಯಾಗುತ್ತಿದೆ.ಭಾಮಿಯ ವಾತಾವರಣಕ್ಕೆ ಮರು ಪ್ರವೇಶಿಸಿದ ನಂತರ ಉರಿಯುವ ಉಪಗ್ರಹಗಳು ಅಲ್ಯೂಮಿನಿಯಮ್ ಆಕ್ಸೆಡ್ ನ್ಯಾನೋಪಾರ್ಟಿಕಲ್‌ಗಳನ್ನು ಉತ್ಪಾದಿಸುತ್ತದೆ ಅದು ವಾತಾವರಣದಲ್ಲಿ ದಶಕಗಳವರಗೆ ಉಳಿಯುತ್ತದೆ.2022ರ ಅಂದಾಜು ಪ್ರಕಾರ 17 ಮೆಟ್ರಿಕ್ ಟನ್‌ಗಳಷ್ಟು, ಅಂದರೆ ಒಂದು ಅಂದಾಜು ಏನೆಂದರೆ 250ಕೆಜಿ ತೂಕದ ಉಪಗ್ರಹವು 30 ಕೆಜಿ ತೂಕದ ನ್ಯಾನೋಪಾರ್ಟಿಕಲ್‌ಗಳನ್ನು ಸೃಜಿಸಬಲ್ಲದು. ಇದೂ ಸಹ ಓಜೋನ್ ಪದರಿನ ಹಾನಿಗೆ ಕಾರಣವೆನಿಸಿದೆ.
ಓಜೋನ್ ಪದರು ಹಾನಿಯಾದರೆ?: ಜಾಗತಿಕ ತಾಪಮಾನ ಹೆಚ್ಚಾಗುತ್ತದೆ, ಇದರಿಂದ ಜೀವಸಂಕುಲಕ್ಕೆ ಹಾನಿ ಉಂಟಾಗುತ್ತಿದೆ. ಓಜೋನ್ ಪದರು ಹಾನಿಯಾದರೆ ಅತಿನೇರಳೆ ಕಿರಣಗಳು ನೇರವಾಗಿ ಭೂಮಿಗೆ ಬರುತ್ತವೆ ಇದರಿಂದ ಮನುಷ್ಯನ ಚರ್ಮದ ಕ್ಯಾನ್ಸರ್‌ಗೆ ಕಾರಣವಾಗ ಬಹುದು ಮಾತ್ರವಲ್ಲ ಮನುಷ್ಯನ ರೋಗನಿರೋಧಕ ಶಕ್ತಿ ಕುಗ್ಗಿಸುತ್ತದೆ.ಸರ್ಪಸುತ್ತು, ದೃಷ್ಟಿಮಾಂಧ್ಯತೆ, ಅಸ್ತಮಾ, ಸಿಒಪಿಡಿ, ಕ್ಯಾಟರ್ಯಾಕ್ಸ್ ನಂತಹ ಸಮಸ್ಯೆಗಳು ಬರುತ್ತವೆ. ಪರಿಹಾರದ ದಾರಿಗಳು:1978ರಲ್ಲಿ ಯುನೈಟೆಡ್ ಸ್ಟೇಟ್ಸ್, ಕೆನಡಾ ಮತ್ತು ನಾರ್ವೆ ದೇಶಗಳು
ಓಜೋನ್ ಪದರನ್ನು ಹಾನಿಮಾಡುವ ಸಿ.ಎಫ್.ಸಿ. ಒಳಗೊಂಡಿರುವ ಏರೋಸೆಲ್‌ಗಳ ಸ್ಟೇಗಳ
ಮೇಲೆ ನಿಷೇಧವನ್ನು ಜಾರಿಗೊಳಿಸಿದವು.ಯು.ಎಸ್.ನಲ್ಲಿ 1985ರಲ್ಲಿ ಓಜೋನ್ ರಂಧ್ರ
ಕಂಡುಹಿಡಿದ ನಂತರ ಅಂತರ್‌ರಾಷ್ಟ್ರೀಯ ಒಪ್ಪಂದ ಮಾಂಟ್ರಿಯಲ್ ಒಡಂಬಡಿಕೆ
ಮಾತುಕತೆಯ ನಂತರ ಸಿ.ಎಫ್.ಸಿ ಉತ್ಪಾದನೆಯನ್ನು 1986ರಲ್ಲಿ ಮಿತಿಗೊಳಿಸಲಾಯಿತು.1995ರ
ನಂತರ ಸಿ.ಎಫ್.ಸಿ ಉತ್ಪಾದನೆಯನ್ನು ನಿಷೇಧಿಸಲು ಒಪ್ಪಂದವನ್ನು ತಿದ್ದುಪಡಿ ಮಾಡಲಾಯಿತು,
ಇದಕ್ಕೆ ಪ್ರಪಂಚದ 197 ದೇಶಗಳು ಸಹಿ ಹಾಕಿವೆ.2002ರ ನಂತರ ಓಜೋನ್ ಪದರಿನ ಸವಕಳಿ
ನಿಧಾನಗೊಂಡಿದೆ ಎಂದು ವಿಜ್ಞಾನಿಗಳ ಸಂಶೋಧನೆ ತಿಳಿಸುತ್ತಿದೆ. ಓಜೋನ್ ಪದರಿನ
ವಿನಾಶದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಸೆಪ್ಟೆಂಬರ್ 16ನ್ನು ವಿಶ್ವ ಓಜೋನ್
ದಿನವನ್ನಾಗಿ ಆಚರಿಸಲಾಗುತ್ತಿದೆ. ನಾವು ಪರಿಸರಕ್ಕೆ ಹಾನಿಮಾಡುವ ಅಭ್ಯಾಸಗಳನ್ನು
ಕಡಿಮೆಮಾಡಬೇಕಿದೆ. ಅದು ನಮ್ಮಿಂದಲೇ ಆರಂಭವಾಗಲಿ. ಮುಂದಿನ ಪೀಳಿಗೆಗೆ ಒಳ್ಳೇ ಪರಿಸರ ಉಳಿಸೋಣ.
ಡಾ|| ಯು ಶ್ರೀನಿವಾಸ ಮೂರ್ತಿ. ಉಪನ್ಯಾಸಕರು, ವಿಜ್ಞಾನ ಸಾಹಿತ್ಯ ಲೇಖಕರು “ವಿಚಾರ ಕುಟೀರ” ರಾಮನಗರ 1ನೇ ಕ್ರಾಸ್, ಅವಂಬಾವಿ20-583101
ಪೊ:7975983624