ಇಂದಿನ ಬೆಳಗಾವಿ ಮತ್ತು ಧಾರವಾಡ ನಗರಗಳ ಮಧ್ಯದಲ್ಲಿರುವ ಸಣ್ಣ ಪ್ರದೇಶವೇ ಕಿತ್ತೂರು ಸಂಸ್ಥಾನ. ಸುಮಾರು 250 ವರ್ಷಕ್ಕೂ ಹೆಚ್ಚು ಕಾಲ ರಾಜಧಾನಿಯಾಗಿ ಮೆರೆದ ಊರು ಕಿತ್ತೂರು ಇಂದಿನ ಬೆಳಗಾವಿ, ಕಾರವಾರ, ಧಾರವಾಡ,ಕಿತ್ತೂರು, ಖಾನಾಪುರ, ಕಲಘಟಗಿ, ಮನೋಳಿ ಮತ್ತು ನರಗುಂದ ಪ್ರದೇಶಗಳನ್ನು ಒಳಗೊಂಡ ರಾಜ್ಯವಾಗಿತ್ತು. ವಿಜಾಪುರದ ಆದಿಲಶಾಹಿಗಳ ಬಳಿ ಕಾರ್ಯ ನಿರ್ವಹಿಸುತ್ತಿದ್ದ ಹಿರೇಮಲ್ಲ ಶೆಟ್ಟಿ ಎಂಬ ಸೇನಾನಿಗೆ ರಾಜರು ಹುಬ್ಬಳ್ಳಿಯ ಈ ಭಾಗವನ್ನು ಬಳುವಳಿಯಾಗಿ ನೀಡಿದರು ಮುಂದೆ ಆತನ ಉತ್ತರಾಧಿಕಾರಿಯಾದ ಅಲ್ಲಪ್ಪ ಗೌಡನು ಗೀಜಗನಹಳ್ಳಿ ಎಂದು ಕರೆಯಲ್ಪಡುತ್ತಿದ್ದ ಹಳ್ಳಿಗೆ ರಾಜಧಾನಿಯನ್ನು ಸ್ಥಳಾಂತರಿಸಿ ಅದನ್ನು ಕಿತ್ತೂರು ಎಂದು ಕರೆದನು.
ಕಿತ್ತೂರು ಸಂಸ್ಥಾನವನ್ನು ಆಳಿದ ರಾಜರಲ್ಲಿಯೇ ಅತ್ಯಂತ ಯಶಸ್ವಿ ಆಡಳಿತಗಾರ ಮಲ್ಲಸರ್ಜ. ಸುಧರ್ಮಿಯೂ, ಶೂರನೂ , ನೀತಿವಂತನೂ ಆಗಿದ್ದ ಮಲ್ಲಸರ್ಜನು ಕಿತ್ತೂರು ರಾಜ್ಯವನ್ನು ಸುಮಾರು 34 ವರ್ಷಗಳ ಕಾಲ ಆಳ್ವಿಕೆ ನಡೆಸಿದನು. ಮಲ್ಲಸರ್ಜನ ಮೊದಲ ಹೆಂಡತಿ ರುದ್ರಮ್ಮ. ಎರಡನೆಯ ಪತ್ನಿಯೇ ನಮ್ಮ ಸ್ವಾತಂತ್ರದ ಸಂಗ್ರಾಮದ ಮೇರು ಮುಕುಟಮಣಿ ಕಿತ್ತೂರು ರಾಣಿ ಚೆನ್ನಮ್ಮ.
ಕಾಕತಿಯ ದೇಸಾಯಿಯವರಾದ ಧೂಳಪ್ಪ ಗೌಡರ ಮಗಳು ಚೆನ್ನಮ್ಮ. ಸ್ವಭಾವತಃ ಸ್ತ್ರೀಪರ ಚಿಂತಕರಾದ ಧೂಳಪ್ಪಗೌಡರು ತಮ್ಮ ಮಗಳು ಚೆನ್ನಮ್ಮಳನ್ನು ಸಾಹಿತ್ಯ, ಸಂಗೀತ, ಸಂಸ್ಕೃತಿ, ಇತಿಹಾಸದಂತಹ ಸಾಂಪ್ರದಾಯಿಕ ವಿದ್ಯೆಗಳ ಜೊತೆ ಜೊತೆಗೆ ಬಿಲ್ವಿದ್ಯೆ, ಕುದುರೆ ಸವಾರಿ, ಕತ್ತಿವರಸೆ, ಭರ್ಜಿ ಎಸೆತಗಳಂತಹ ಯುದ್ಧವಿದ್ಯೆಗಳಲ್ಲಿಯೂ ತರಬೇತಿ ಕೊಡಿಸಿದರು. ಮುಂದೆ ಕಿತ್ತೂರಿನ ರಾಜನಾದ ಮಲ್ಲಸರ್ಜನಿಗೆ ವಿವಾಹ ಮಾಡಿಕೊಟ್ಟರು.
ಅತ್ಯುತ್ತಮ ಆಡಳಿತಗಾರನಾಗಿದ್ದ ಮಲ್ಲಸರ್ಜನಿಂದ ಯಾವತ್ತಿದ್ದರೂ ತನ್ನ ಅರಸೊತ್ತಿಗೆಗೆ ಅಪಾಯ ಎಂಬ ಭಯದಿಂದ ಮರಾಠರ ಪೇಶ್ವೆ ಬಾಜಿರಾಯನು ಮಲ್ಲಸರ್ಜನನ್ನು ಬಂದು ಭೇಟಿಯಾಗಲು ಕೇಳಿಕೊಂಡನು. ಹೀಗೆ ಭೇಟಿಯಾಗಲು ಬಂದ ಮಲ್ಲಸರ್ಜನನ್ನು ಮೋಸದಿಂದ ಪುಣೆಯ ಮುಧೋಳಕರ ವಾಡದಲ್ಲಿ ಸೆರೆಹಿಡಿದು ಚಿತ್ರಹಿಂಸೆಗೆ ಗುರಿಪಡಿಸಿದನು. ಪರಿಣಾಮವಾಗಿ ಕಿತ್ತೂರನ್ನು ತಲುಪುವ ಮೊದಲೇ ಕ್ರಿ.ಶ.೧೮೧೬ರಲ್ಲಿ ಮಲ್ಲಸರ್ಜನು ಮರಣಕ್ಕೀಡಾದನು. ಆತನ ಹಿಂದೆ ಆತನ ಇಬ್ಬರು ಪತ್ನಿಯರು ಮತ್ತು ಮೊದಲ ಪತ್ನಿ ರುದ್ರಮ್ಮನ ಮಗ ಶಿವಲಿಂಗಸರ್ಜ ಮಾತ್ರವೇ ಇದ್ದರು.
ಶೋಕದಲ್ಲಿ ಮುಳುಗಿದ ಕಿತ್ತೂರನ್ನು ಅರಾಜಕವಾಗದಂತೆ ಎತ್ತಿ ಹಿಡಿದಳು ಚೆನ್ನಮ್ಮ. ಶಿವಲಿಂಗ ರುದ್ರಸರ್ಜನಿಗೆ ಚೆನ್ನಮ್ಮ ಪಟ್ಟ ಕಟ್ಟಿದಳು. ಮುಂದೆ 1816 ರಿಂದ 1824ರವರೆಗೂ ರಾಜ್ಯಭಾರ ಮಾಡಿದ ಶಿವಲಿಂಗ ರುದ್ರಸರ್ಜನ ಆರೋಗ್ಯ ನಿಧಾನವಾಗಿ ಕೆಡಲಾರಂಭಿಸಿತು. ಮುಂದಾಲೋಚನೆಯಿಂದ ಚೆನ್ನಮ್ಮ ಮಾಸ್ತ ಮರಡಿಯ ಬಾಳಪ್ಪ ಗೌಡರ ಮಗ ಶಿವಲಿಂಗಪ್ಪನನ್ನು ದತ್ತಕ ತೆಗೆದುಕೊಂಡಳು. ಶಿವಲಿಂಗ ರುದ್ರಸರ್ಜ ಮರಣ ಹೊಂದಿದ ನಂತರ ಚೆನ್ನಮ್ಮ ದತ್ತಕ ಪುತ್ರನು ಇನ್ನೂ ಚಿಕ್ಕವನಾಗಿದ್ದರಿಂದ ಆತನಿಗೆ ಯುವರಾಜ ಪಟ್ಟಾಭಿಷೇಕ ಮಾಡಿದರೂ ರಾಜ್ಯದ ಸಮಸ್ತ ಹೊಣೆಗಾರಿಕೆಯನ್ನು ಹೊತ್ತು ಕೊಳ್ಳಬೇಕಾಯಿತು. ಇದೇ ಸಮಯದಲ್ಲಿ ಬ್ರಿಟಿಷರು ಜಾರಿಗೆ ತಂದ “ದತ್ತು ಮಕ್ಕಳಿಗೆ ಹಕ್ಕಿಲ್ಲ” ಎಂಬ ಪದ್ಧತಿಯು ಕಿತ್ತೂರು ಸಂಸ್ಥಾನಕ್ಕೆ ಕುತ್ತು ತಂದಿತು. ಲಾರ್ಡ್ ಡಾಲ್ ಹೌಸಿಯ ಕಾಯ್ದೆಯ ಪ್ರಕಾರ ಅಂದಿನ ಧಾರವಾಡದ ಕಲೆಕ್ಟರ್ ಆಗಿದ್ದ ಥ್ಯಾಕರೆ ಎಂಬ ಬ್ರಿಟಿಷ್ ಅಧಿಕಾರಿ ಕಿತ್ತೂರಿನ ಶಿವಲಿಂಗಪ್ಪನ ದತ್ತಕವನ್ನು ಅಸಿಂಧುವೆಂದು ಘೋಷಿಸಿದನು. ಇದರಿಂದ ಸಿಡಿಮಿಡಿಗೊಂಡ ಚೆನ್ನಮ್ಮನ ನಮ್ಮ ರಾಜ್ಯದ ವಿಷಯಕ್ಕೆ ತಲೆ ಹಾಕಲು ಬ್ರಿಟಿಷರು ಯಾರು? ಅವರಿಗೆ ನಾವು ಕಪ್ಪವನ್ನು ಕೊಡಬೇಕು ಮತ್ತು ಅವರ ಪರವಾನಿಗೆಯನ್ನು ಏಕೆ ಪಡೆಯಬೇಕು ಎಂದು ದಿಟ್ಟತನದಿಂದ ಪ್ರಶ್ನಿಸಿದಳು.
ಆದರೆ ಥ್ಯಾಕರೆ ಸಾಹೇಬನು ಮಲ್ಲಮ್ಮನ ವಿರುದ್ಧ ಕಿತ್ತೂರಿನ ಮಲ್ಲಪ್ಪ ಶೆಟ್ಟಿ ಮತ್ತು ಹಾವೇರಿಯ ವೆಂಕಟರಾಯರನ್ನು ಬಳಸಿಕೊಂಡು ಪಿತೂರಿಯನ್ನು ಆರಂಭಿಸಿದನು. ವೈಯುಕ್ತಿಕ ಹಿತ ಸಾಧನೆ ಮತ್ತು ಹಣದ ಆಸೆಗೆ ಒಳಗಾದ ಮಲ್ಲಪ್ಪ ಶೆಟ್ಟಿ ಮತ್ತು ವೆಂಕಟರಾಯರು ಥ್ಯಾಕರೆಗೆ ಕಿತ್ತೂರು ಸಂಸ್ಥಾನದ ಎಲ್ಲಾ ಒಳಗುಟ್ಟುಗಳನ್ನು ಹೇಳಿಕೊಟ್ಟರು. ಜೊತೆ ಜೊತೆಗೆ ಥ್ಯಾಕರೆಯು ಮಲ್ಲಮ್ಮನ ವಿರುದ್ಧ ಪುಣೆಯಲ್ಲಿದ್ದ ಡೆಕ್ಕನ್ ಕಮಿಷನರ್ ಚಾಪ್ಲಿನ್ ಗೆ ಇಲ್ಲಸಲ್ಲದ ವಿಷಯಗಳನ್ನು ಪತ್ರದಲ್ಲಿ ಬರೆದು ತಿಳಿಸಿದ. ಇತ್ತ ಮಲ್ಲಪ್ಪ ಶೆಟ್ಟಿಯ ಸಹಾಯದಿಂದ ಅರಮನೆಯ ತುಂಬಾ ಗೂಢಚಾರರನ್ನು
ನೇಮಿಸಿದನಲ್ಲದೇ ರಾಣಿ ರುದ್ರಮ್ಮ ದೇವಿ ಮತ್ತು ಚನ್ನಮ್ಮರ ಮಧ್ಯದಲ್ಲಿ ಮನಸ್ತಾಪವನ್ನು ತಂದಿರಿಸಿದ. ರಾಣಿ ಚೆನ್ನಮ್ಮನು ಸಾರ್ವಜನಿಕರನ್ನು ಭೇಟಿಯಾಗದಂತೆ ನಿರ್ಬಂಧ ವಿಧಿಸಿದ.
ಯಾವುದಕ್ಕೂ ಅಂಜದ ಕಿತ್ತೂರು ರಾಣಿ ಚೆನ್ನಮ್ಮ 1824ರಲ್ಲಿ ತಮ್ಮೆಲ್ಲ ಮುಖಂಡರನ್ನು, ಸೈನಿಕರನ್ನು ಮತ್ತು ಸಾರ್ವಜನಿಕರನ್ನು ಸೇರಿಸಿ ಕಿತ್ತೂರು ರಾಜ್ಯ ಮತ್ತು ಅದರ ಮೇಲಿನ ಒಡೆತನ ಕೇವಲ ತಮ್ಮದು ಮಾತ್ರ.. ಕಿತ್ತೂರಿನ ಮೇಲೆ ಕಣ್ಣು ಹಾಕಿದವರ ವಿರುದ್ಧ ನಾವು ಹೋರಾಡುವ ಎಂದು ಹುರಿದುಂಬಿಸಿದಳು. ಚೆನ್ನಮ್ಮನ ಸ್ಪೂರ್ತಿದಾಯಕ ಮಾತುಗಳಿಂದ ಪ್ರಭಾವಿತರಾದ ಎಲ್ಲರೂ ಕಿತ್ತೂರಿನ ಸ್ವಾತಂತ್ರ್ಯಕ್ಕಾಗಿ ಕಟಿಬದ್ಧರಾದರು. ಅತ್ಯಂತ ವೀರ ಸ್ವಾತಂತ್ರ್ಯ ಯೋಧರ ಪಡೆಯೇ ಕಿತ್ತೂರಿನಲ್ಲಿ ತಯಾರಾಯಿತು, ಆದರೆ ಯುದ್ಧದಲ್ಲಿ ಆಸ್ತಿಪಾಸ್ತಿ ನಷ್ಟವಾಗಬಾರದು ಎಂದು ರಾಣಿ ಚೆನ್ನಮ್ಮ ಸಂಧಾನದ ಪ್ರಯತ್ನವನ್ನು ಕೂಡ ಮಾಡುತ್ತಿದ್ದಳು . ಆದರೆ ಆಕೆಯ ಪ್ರಯತ್ನ ನಿಷ್ಫಲವಾಯಿತು. 1824ರ ಅಕ್ಟೋಬರ್ 23 ರಂದು ಥ್ಯಾಕರೆಯ ಸೈನ್ಯ ಕಿತ್ತೂರಿನ ಕೋಟೆಗೆ ಮುತ್ತಿಗೆ ಹಾಕಿತ್ತು. ಅದು ಹಿಂದುಗಳ ಪಾಲಿನ ಅತಿ ದೊಡ್ಡ ಹಬ್ಬ ಮಹಾನವಮಿಯ ದಿನ. ಚೆನ್ನಮ್ಮನ ಸಂಗೊಳ್ಳಿ, ಅಂಬಡಗಟ್ಟಿ, ಅಂಕಲಗಿ, ಹೆಗ್ಗೇರಿ, ಹೂಲಿ ಮುಂತಾದೆಡೆಗಳಿಂದ ಸೈನಿಕ ಸಹಾಯ ದೊರೆಯಿತು.
ಥ್ಯಾಕರೆ ಸಾಹೇಬನು ಕಿತ್ತೂರಿನ ಕೋಟೆಯನ್ನು ಬಿಟ್ಟುಕೊಡಲು ಕೇವಲ 20 ನಿಮಿಷಗಳ ಸಮಯಾವಕಾಶ ನೀಡಿ, ತನ್ನ ಸೇನೆಯ ಕ್ಯಾಪ್ಟನ್ ಬ್ಲಾಕ್ ನಿಗೆ ಹೇಳಿ ತುಪಾಕಿಗಳನ್ನು ಇಡಿಸಿದನು. ಥ್ಯಾಕರೆ ಎಚ್ಚರವನ್ನು ಕೇಳಿ ಸ್ವಾತಂತ್ರ್ಯ ಪ್ರೇಮಿಗಳಾದ ಸಂಗೊಳ್ಳಿ ರಾಯಣ್ಣ, ಗುರುಸಿದ್ದಪ್ಪ ಅಮಟೂರು, ಬಾಳಪ್ಪರ ನೇತೃತ್ವದಲ್ಲಿ ಕಿತ್ತೂರಿನ ರಾಣಿ ಚೆನ್ನಮ್ಮ ‘ಹರ ಹರ ಮಹಾದೇವ’ ಎಂಬ ಜಯ ಘೋಷ ಮಾಡುತ್ತಾ ಬ್ರಿಟಿಷ್ ಸೈನ್ಯದ ವಿರುದ್ಧ ತನ್ನ ಸೈನ್ಯವನ್ನು ಹುರಿದುಂಬಿಸುತ್ತ ಖಡ್ಗ ಚಲಾಯಿಸಿದಳು. ಅಂದಿನ ಆ ಸಮಯದ ಚೆನ್ನಮ್ಮನ ಆವೇಶವನ್ನು ಕಂಡ ಪ್ರತ್ಯಕ್ಷ ದರ್ಶಿ ಗಳು ಹೀಗೆಂದು ಬರೆದರು
ಕಿತ್ತೂರು ಚೆನ್ನಮ್ಮ ಸುತ್ತೂರ ಒಡತ್ಯಾಗೀ
ಕತ್ತಿ ಕವಚಗಳ ಉಡುಪುಟ್ಟು
ಅಬ್ಬರದಿ ಬತ್ತಲಗುದುರಿ ಜಿಗದಾಳ
ಕಿತ್ತೂರಿನ ಸೈನ್ಯವನ್ನು, ಅವರ ಕೆಚ್ಚನ್ನು ಎದುರಿಸಲಾರದೆ ಇಂಗ್ಲೀಷರ ಸೈನ್ಯ ನುಚ್ಚು ನೂರಾಗಿ ಹೋಯಿತು. ಥ್ಯಾಕರೆಯು ರಾಣಿಗೆ ಗುಂಡಿಟ್ಟು ಸಾಯಿಸಲು ನೋಡಿದಾಗ ರಾಣಿಯ ಅಂಗರಕ್ಷಕ ಅಮಟೂರು ಬಾಳಪ್ಪ ಥ್ಯಾಕರೆಯ ಮೇಲೆ ಗುಂಡು ಹಾರಿಸಿ ಆತನನ್ನು ನೆಲಕ್ಕೊರಗಿಸಿದ. ಬ್ರಿಟಿಷ್ ಸೈನಿಕರನ್ನು ಸೆರೆಯಲ್ಲಿರಿಸಿದರು. ಆಗ ಪುಣೆಯಲ್ಲಿದ್ದ ಚಾಪ್ಲಿನ್ಗೆ ಈ ಸುದ್ದಿ ತಿಳಿದು ಆತುರದ ನಿರ್ಧಾರ ಮಾಡದೆ ತನ್ನ ಸೈನಿಕರನ್ನು ಬಿಡುಗಡೆಗೊಳಿಸುವಂತೆ ಕೇಳಿಕೊಂಡ. ಇದಕ್ಕೆ ಉತ್ತರವಾಗಿ ಚೆನ್ನಮ್ಮ ತನ್ನ ಕಿತ್ತೂರಿನ ಆಡಳಿತದಲ್ಲಿ ಕೈ ಹಾಕದಿದ್ದರೆ ಮಾತ್ರ ಮಾತನಾಡುವುದಾಗಿ ಹೇಳಿ ಕಳಿಸಿದಳು ಜೊತೆ ಜೊತೆಗೆ ಚಾಪ್ಲಿನ್ ನ ದ್ವಿಮುಖ ನೀತಿಯನ್ನು ಅರಿತ ಆಕೆ ಯುದ್ಧದ ಮರು ತಯಾರಿಗೆ ತೊಡಗಿದ್ದಳು. ರಕ್ತಪಾತವಾಗದಂತೆ ಎರಡು ಕಡೆಯ ನಾಯಕರು ಸಂಧಾನವನ್ನು ಮಾಡಲು ಚೆನ್ನಮ್ಮ ಪ್ರಯತ್ನಿಸಿದರು ಸಾಧ್ಯವಾಗಲಿಲ್ಲ ಮತ್ತೆ ಅಗಾಧ ಸೈನ್ಯದೊಂದಿಗೆ ಬ್ರಿಟಿಷರು ಕಿತ್ತೂರಿನ ಮೇಲೆ ದಾಳಿ ಮಾಡಿದರು . ಆಗ ಚೆನ್ನಮ್ಮನ ಅತ್ಯಂತ ನಂಬಿಗಸ್ತ ಬಂಟನಾದ ಗುರುಸಿದ್ದಪ್ಪನನ್ನು ಸೆರೆ ಹಿಡಿದ ಬ್ರಿಟಿಷರು ಚೆನ್ನಮ್ಮನನ್ನು ಸೆರೆ ಹಿಡಿದು ಬೈಲಹೊಂಗಲದ ಜೈಲಿನಲ್ಲಿ ಇಟ್ಟರು.
ಸೆರೆಯಲ್ಲಿದ್ದಾಗಲೂ ಕೂಡ ಚೆನ್ನಮ್ಮ ತನ್ನ ಆತ್ಮಸ್ಥೈರ್ಯವನ್ನು ಕಳೆದುಕೊಳ್ಳಲಿಲ್ಲ. ಆಧ್ಯಾತ್ಮ, ಶಿವ ಪೂಜೆ, ಪ್ರಾರ್ಥನೆ ಪಾರಾಯಣಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಳು. ಸಂಗೊಳ್ಳಿ ರಾಯಣ್ಣನನ್ನು ಮೊದಲ್ಗೊಂಡು ಆಕೆಯ ನಿಕಟವರ್ತಿ ಬಂಟರು ಆಗಾಗ ಮಾರುವೇಷದಲ್ಲಿ ಆಕೆಯನ್ನು ಬಂದು ಭೇಟಿಯಾಗುತ್ತಿದ್ದರು. ದಿನಗಳು,ವರ್ಷಗಳುರುಳಿದವು ಆದರೆ ಸ್ವಾತಂತ್ರ್ಯದ ಯಾವ ಆಶಯವು ಈಡೇರಲಿಲ್ಲ. ಇಂಗ್ಲಿಷರ ಪ್ರಾಬಲ್ಯ ಹೆಚ್ಚಾಗುತ್ತಾ ಹೋದಂತೆ ಕಿತ್ತೂರಿನ ಸ್ವಾತಂತ್ರ್ಯದ ಕನಸು ಕನಸಾಗಿಯೇ ಉಳಿದು ಹೋಗಬಹುದು ಎಂಬ ನೋವಿನಲ್ಲಿ ಚೆನ್ನಮ್ಮ ಕುಗ್ಗತೊಡಗಿದಳು. ಇದೇ ದುಃಖದಲ್ಲಿ ರಾಣಿ ಚೆನ್ನಮ್ಮ 1829 ಫೆಬ್ರುವರಿ 22ರಂದು ಮರಣ ಹೊಂದಿದಳು.
ಭಾರತದ ಸ್ವಾತಂತ್ರ್ಯ ಇತಿಹಾಸದ ಸುವರ್ಣ ಪುಟಗಳಲ್ಲಿ ಚೆನ್ನಮ್ಮ ಸ್ಥಾನ ಪಡೆದಿದ್ದಾಳೆ ಸ್ಥಾನ ಪಡೆದಿದ್ದಾಳೆ. 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ 30 ವರ್ಷ ಮುಂಚೆಯೇ ಚೆನ್ನಮ್ಮ ಕಿತ್ತೂರಿನ ಸ್ವಾತಂತ್ರ್ಯಕ್ಕಾಗಿ ಹೋರಾಡಿದಳು. ಚೆನ್ನಮ್ಮ ಸ್ವಾತಂತ್ರ್ಯದ ಕಿಚ್ಚು ಸಹಸ್ರಾರು ಜನರನ್ನು ಹುರಿದುಂಬಿಸಿ ಸ್ವಾತಂತ್ರ್ಯದ ಮಹಾಯಜ್ಞಕ್ಕೆ ಸಮಿತ್ತಾಗಿಸಿತು. ಕಿತ್ತೂರು ಚೆನ್ನಮ್ಮನ ಈ ಬಲಿದಾನ ಶತಶತಮಾನಗಳ ಕಾಲ ಕನ್ನಡ ನಾಡು ನೆನಪಿಡುತ್ತದೆ. ಚೆನ್ನಮ್ಮನ ಸ್ವಾತಂತ್ರ್ಯದ ಕಿಚ್ಚು, ಶೌರ್ಯ, ದೇಶಭಕ್ತಿ ನಮ್ಮ ಯುವಜನಾಂಗಕ್ಕೆ ಮಾದರಿಯಾಗಲಿ ಎಂಬ ಆಶಯದೊಂದಿಗೆ
ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್