ಬೆಂಗಳೂರು: ಇಲ್ಲಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆಯುತ್ತಿರುವ ರೋಚಕ ಐಪಿಎಲ್ ಹಣಾಹಣಿಯಲ್ಲಿ ಭರ್ಜರಿಯಾಗಿ ಗೆಲ್ಲಲೇ ಬೇಕಾದ ಒತ್ತಡದಲ್ಲಿದ್ದ ಆರ್ ಸಿಬಿಯು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 27 ರನ್ ಗಳ ಅಧಿಕಾರಯುತ ಜಯ ಸಾಧಿಸಿ ಪ್ಲೇ ಆಫ್ ಪ್ರವೇಶಿಸಿದೆ.
ಅಮೋಘ ಹೋರಾಟ ಸಂಘಟಿಸಿ ದ ಆರ್ ಸಿಬಿ +0.459 ರನ್ ರೇಟ್ ಹೊಂದಿ ಮುಂದಿನ ಸುತ್ತು ಪ್ರವೇಶಿಸಿದೆ.
ಚೆನ್ನೈ ಸೂಪರ್ ಕಿಂಗ್ಸ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಆರ್ ಸಿಬಿ 219 ರನ್ ಗಳ ಭರ್ಜರಿ ಗುರಿ ಮುಂದಿಟ್ಟಿತು. ಗುರಿ ಬೆನ್ನಟ್ಟಿದ ಚೆನ್ನೈ ರಚಿನ್ ರವೀಂದ್ರ, ರೆಹಾನೆ, ಧೋನಿ, ಜಡೇಜ ಅವರ ಹೋರಾಟದ ನಡುವೆಯೂ 7 ವಿಕೆಟ್ ನಷ್ಟಕ್ಕೆ 191 ರನ್ ಗಳಿಸಲಷ್ಟೇ ಶಕ್ತವಾಗಿ ಹೊರ ಬಿದ್ದಿತು.
ಸಮಯಕ್ಕೆ ಸರಿಯಾಗಿ ಪಂದ್ಯ ಆರಂಭವಾಯಿತು ಆದರೆ 3 ಓವರ್ ಆಗುವಷ್ಟರಲ್ಲಿ ನಿರೀಕ್ಷೆಯಂತೆ ಮಳೆ ಅಡ್ಡಿ ಪಡಿಸಿತು. ಆರ್ ಸಿಬಿ 31 ರನ್ ಗಳಿಸಿತ್ತು. ಕೊಹ್ಲಿ 19 ರನ್ ಮತ್ತು ನಾಯಕ ಫ್ಲೆಸಿಸ್ 12 ರನ್ ಗಳಿಸಿ ಆಟವಾಡುತ್ತಿದ್ದ ವೇಳೆ ಕೆಲ ಹೊತ್ತು ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಿತು. ಬಳಿಕ ಆರಂಭವಾದ ಪಂದ್ಯ ಸರಾಗವಾಗಿ ಸಾಗಿತು.
ಅಮೋಘ ಆಟವಾಡಿದ ಕೊಹ್ಲಿ 29 ಎಸೆತದಲ್ಲಿ 47 ರನ್ ಕೊಡುಗೆ ಸಲ್ಲಿಸಿ ಔಟಾದರು.3 ಬೌಂಡರಿ ಮತ್ತು 4 ಆಕರ್ಷಕ ಸಿಕ್ಸರ್ ಸಿಡಿಸಿದರು. ಸಾಥ್ ನೀಡಿದ ನಾಯಕ ಫ್ಲೆಸಿಸ್ 39 ಎಸೆತಗಳಲ್ಲಿ 54 ರನ್ ಗಳಿಸಿದ್ದ ವೇಳೆ ನಾನ್ ಸ್ಟ್ರೈಕರ್ಸ್ ನಲ್ಲಿದ್ದ ವೇಳೆ ಅನಿರೀಕ್ಷಿತ ರನ್ ಔಟಾಗುವ ಮೂಲಕ ನಿರಾಶರಾದರು.
ಆ ಬಳಿಕ ರಜತ್ ಪಾಟೀದಾರ್ 23 ಎಸೆತಗಳಲ್ಲಿ 41 ರನ್ ಗಳಿಸಿ ಕ್ಯಾಚಿತ್ತು ನಿರ್ಗಮಿಸಿದರು. ದಿನೇಶ್ ಕಾರ್ತಿಕ್ 6 ಎಸೆತದಲ್ಲಿ 14 ರನ್ ಕೊಡುಗೆ ನೀಡಿದರು. ಉತ್ತಮ ಆಟವಾಡಿದ ಕ್ಯಾಮರೂನ್ ಗ್ರೀನ್ 17 ಎಸೆತದಲ್ಲಿ 38 ರನ್ ಗಳಿಸಿ ಔಟಾಗದೆ ಉಳಿದರು.
ಕೊನೆಯಲ್ಲಿ ಬಂದ ಮ್ಯಾಕ್ಸ್ ವೆಲ್ 5 ಎಸೆತದಲ್ಲಿ 16 ರನ್ ಗಳಿಸಿ ಔಟಾದರು. 5 ವಿಕೆಟ್ ನಷ್ಟಕ್ಕೆ 218 ರನ್ ಕಲೆ ಹಾಕಿತು.
ಬೌಂಡರಿ ಲೈನ್ ನಲ್ಲಿ ಡೇರಿಲ್ ಮಿಚೆಲ್ ಎರಡು ಅದ್ಭುತ ಕ್ಯಾಚ್ ಪಡೆದರು. ಒಂದು ಕ್ಯಾಚನ್ನು ಕೈಚೆಲ್ಲಿದರು. ಕೊಹ್ಲಿ ಅವರ ಕ್ಯಾಚ್ ಮೊದಲನೆಯದಾಗಿದ್ದರೆ, ಅದೇ ರೀತಿ ಪಾಟೀದಾರ್ ಅವರ ಕ್ಯಾಚ್ ಕೂಡ ಪಡೆದರು. ಕ್ಯಾಮರೂನ್ ಗ್ರೀನ್ ಅವರ ಸುಲಭ ಕ್ಯಾಚ್ ಕೈಚೆಲ್ಲಿದರು.
ಗುರಿ ಬೆನ್ನಟ್ಟಿದ ಚೆನ್ನೈ ಮೊದಲ ಎಸೆತದಲ್ಲೇ ವಿಕೆಟ್ ಕಳೆದುಕೊಂಡಿತು.
ನಾಯಕ ರುತುರಾಜ್ ಅವರು ಮ್ಯಾಕ್ಸ್ ವೆಲ್ ಎಸೆದ ಚೆಂಡನ್ನು ಯಶ್ ದಯಾಳ್ ಕೈಗಿತ್ತು ನಿರ್ಗಮಿಸಿದರು. ಆ ಬಳಿಕ ಡೇರಿಲ್ ಮಿಚೆಲ್ ಕೂಡ 4 ರನ್ ಗಳಿಸಿ ನಿರ್ಗಮಿಸಿದರು.
ರಚಿನ್ ರವೀಂದ್ರ ಮತ್ತು ಅಜಿಂಕ್ಯ ರಹಾನೆ ಉತ್ತಮ ಜತೆಯಾಟವಾಡಿದರು. ರೆಹಾನೆ 33(22 ಎಸೆತ) ಗಳಿಸಿ ನಿರ್ಗಮಿಸಿದರು.
ರಚಿನ್ ರವೀಂದ್ರ ರನ್ ಔಟ್ ಅನಗತ್ಯ ರನ್ ಔಟ್ ಆದರು. 37 ಎಸೆತಗಳಲ್ಲಿ 61 ರನ್ ಗಳಿಸಿದ್ದರು. ಶಿವಂ ದುಬೆ 7 ರನ್ ಗೆ ನಿರ್ಗಮಿಸಿದರು. ಜಡೇಜ ಔಟಾಗದೆ 42 ರನ್ ಗಳಿಸಲಿದರು. ಧೋನಿ 25 ರನ್ ಗಳಿಸಿ ಔಟಾದರು.