Ad image

ಸೂರ್ಯ ಕುಮಾರ್ ಶತಕ ಪ್ರತಾಪ ಹೈದರಾಬಾದ್ ವಿರುದ್ಧ ಮುಂಬೈಗೆ 7 ವಿಕೆಟ್ ಜಯ

Vijayanagara Vani
ಸೂರ್ಯ ಕುಮಾರ್ ಶತಕ ಪ್ರತಾಪ ಹೈದರಾಬಾದ್ ವಿರುದ್ಧ ಮುಂಬೈಗೆ 7 ವಿಕೆಟ್ ಜಯ

ಮುಂಬಯಿ: ಇಲ್ಲಿನ ವಾಂಖೆಡೆ ಸ್ಟೇಡಿಯಂನಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದ ಮುಂಬೈ ಇಂಡಿಯನ್ಸ್ ತಂಡ ಸನ್‌ರೈಸರ್ ಹೈದರಾಬಾದ್‌ ತಂಡದ ವಿರುದ್ಧ 7 ವಿಕೆಟ್ ಭರ್ಜರಿ ಜಯ ಸಾಧಿಸಿದೆ.

ಹಾರ್ದಿಕ್‌ ಪಾಂಡ್ಯ ಮತ್ತು ಪೀಯೂಷ್‌ ಚಾವ್ಲಾ ಅವರ ಬಿಗು ದಾಳಿಯಿಂದಾಗಿ ಮುಂಬೈ ಇಂಡಿಯನ್ಸ್‌ ತಂಡವು ಸೋಮವಾರದ ಐಪಿಎಲ್‌ ಪಂದ್ಯದಲ್ಲಿ ಸನ್‌ರೈಸರ್ ಹೈದರಾಬಾದ್‌ ತಂಡದ ಮೊತ್ತವನ್ನು 8 ವಿಕೆಟಿಗೆ 173 ರನ್ನಿಗೆ ನಿಯಂತ್ರಿಸಿತು.ಮುಂಬೈ ಸೂರ್ಯ ಕುಮಾರ್ ಯಾದವ್ ಅವರ ಭರ್ಜರಿ ಶತಕದ ನೆರವಿನಿಂದ 17.2 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 174 ರನ್ ಗಳಿಸಿ ಅಮೋಘ ಜಯ ತನ್ನದಾಗಿಸಿಕೊಂಡಿತು.ಹೈದರಾಬಾದ್‌ ಆಡಿದ 11 ನೇ ಪಂದ್ಯದಲ್ಲಿ 5 ನೇ ಸೋಲು ಅನುಭವಿಸಿತು. ಮುಂಬೈ 12 ನೇ ಪಂದ್ಯದಲ್ಲಿ 4 ನೇ ಗೆಲುವು ಸಾಧಿಸಿತು. ಅಂಕಪಟ್ಟಿಯಲ್ಲಿ 9 ನೇ ಸ್ಥಾನಕ್ಕೆ ಬಂದಿತು.

ಕೊನೆಯ ಸ್ಥಾನಕ್ಕೆ ಗುಜರಾತ್ ಟೈಟಾನ್ಸ್ ಜಾರಿದೆ.31 ರನ್ ಗೆ 3 ವಿಕೆಟ್ ಕಳೆದುಕೊಂಡ ಮುಂಬೈ ಪಾಲಿಗೆ ಸೂರ್ಯ ಬಳಕು ಚೆಲ್ಲಿದರು. ಸೂರ್ಯ 51 ಎಸೆತಗಳಿಂದ 102 ರನ್ ಗಳಿಸಿ ಅಜೇಯರಾಗಿ ಉಳಿದರು. 12 ಬೌಂಡರಿ ಮತ್ತು ಆಕರ್ಷಕ 6 ಸಿಕ್ಸರ್ ಸಿಡಿಸಿದರು. ಸೂರ್ಯ ಅವರಿಗೆ ಸಾಥ್ ನೀಡಿದ ತಿಲಕ್ ವರ್ಮ ಔಟಾಗದೆ 37 ರನ್ ಗಳಿಸಿದರು.ಬೃಹತ್‌ ಮೊತ್ತ ಪೇರಿಸುವ ನಿರೀಕ್ಷೆಯಲ್ಲಿದ್ದ ಹೈದರಾಬಾದ್‌ ತಂಡಕ್ಕೆ ಮುಂಬೈ ಬೌಲರ್‌ಗಳು ಕಡಿವಾಣ ಹಾಕಲು ಯಶಸ್ವಿಯಾದರು. ಇದರಿಂದಾಗಿ ಆಗಾಗ್ಗೆ ವಿಕೆಟ್‌ ಕಳೆದುಕೊಂಡ ಹೈದರಾಬಾದ್‌ ಒತ್ತಡಕ್ಕೆ ಸಿಲುಕಿತು.ಆದರೂ ಆರಂಭಿಕ ಟ್ರ್ಯಾವಿಸ್‌ ಹೆಡ್‌ ಮತ್ತು ಕೊನೆ ಹಂತದಲ್ಲಿ ನಾಯಕ ಪ್ಯಾಟ್‌ ಕಮಿನ್ಸ್‌ ಅವರ ಬಿರುಸಿನ ಆಟದಿಂದಾಗಿ ಹೈದರಾಬಾದ್‌ ಉತ್ತಮ ಮೊತ್ತ ಪೇರಿಸುವಂತಾಯಿತು.

ಬಿರುಸಿನ ಆರಂಭ ಹೈದರಾಬಾದ್‌ ಎಂದಿನಂತೆ ಬಿರುಸಿನ ಆಟ ಆರಂಭಿಸಿತು. ಸ್ಫೋಟಕ ಖ್ಯಾತಿಯ ಟ್ರ್ಯಾವಿಸ್‌ ಹೆಡ್‌ ಮತ್ತು ಅಭಿಷೇಕ್‌ ಶರ್ಮ 5.5 ಓವರ್‌ಗಳಲ್ಲಿ ಮೊದಲ ವಿಕೆಟಿಗೆ 56 ರನ್‌ ಪೇರಿಸಿದ್ದರು. ಈ ಜೋಡಿ ಮುರಿದ ಬಳಿಕ ತಂಡ ಒತ್ತಡಕ್ಕೆ ಸಿಲುಕಿತು. 96 ರನ್‌ ಗಳಿಸುವಷ್ಟರಲ್ಲಿ ತಂಡ 5 ವಿಕೆಟ್‌ ಕಳೆದು ಕೊಂಡು ಒದ್ದಾಡುತ್ತಿತ್ತು. ಈ ನಡುವೆ ತಂಡ 30 ಎಸೆತಗಳಲ್ಲಿ 48 ರನ್‌ ಗಳಿಸಿದ ಹೆಡ್‌ ಅವರನ್ನು ಕಳೆದುಕೊಂಡಿತ್ತು.ಕೊನೆ ಹಂತದಲ್ಲಿ ನಾಯಕ ಪ್ಯಾಟ್‌ ಕಮಿನ್ಸ್‌ ಸಿಡಿದ ಕಾರಣ ತಂಡದ ಮೊತ್ತ 170ರ ಗಡಿ ದಾಟುವಂತಾಯಿತು.ಅವರು ಮುರಿಯದ 9ನೇ ವಿಕೆಟಿಗೆ ಸನ್ವೀರ್‌ ಸಿಂಗ್‌ ಜತೆ 37 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡರು. ಕಮಿನ್ಸ್‌ 17 ಎಸೆತಗಳಿಂದ 35 ರನ್‌ ಹೊಡೆದರು. ಬಿಗು ದಾಳಿ ಸಂಘಟಿಸಿದ ಹಾರ್ದಿಕ್‌ ಪಾಂಡ್ಯ ಮತ್ತು ಚಾವ್ಲಾ ತಲಾ ಮೂರು ವಿಕೆಟ್‌ ಕಿತ್ತು ಗಮನ ಸೆಳೆದರು.

ಹೈದರಾಬಾದ್‌ ಮತ್ತು ಮುಂಬೈ ಈ ಮೊದಲು ಪರಸ್ಪರ ಮುಖಾಮುಖಿಯಾಗಿದ್ದಾಗ ಹೈದರಾಬಾದ್‌ ಅದ್ಭುತವಾಗಿ ಆಡಿ ಕೇವಲ ಮೂರು ವಿಕೆಟಿಗೆ 277 ರನ್‌ ಪೇರಿಸಿತ್ತು. ಆದರೆ ಈ ಸಲ ತಂಡವು ಮುಂಬೈಯ ನಿಖರ ದಾಳಿಗೆ ರನ್‌ ಗಳಿಸಲು ಒದ್ದಾಡಿತು.ಕಾಂಬೋಜ್‌ ಪದಾರ್ಪಣೆಐದು ಬಾರಿಯ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ತಂಡವು ಈ ಪಂದ್ಯಕ್ಕಾಗಿ 23ರ ಆಲ್‌ರೌಂಡರ್‌ ಅನ್ಶುಲ್‌ ಕಾಂಬೋಜ್‌ ಅವರನ್ನು ವೇಗಿ ಗೆರಾಲ್ಡ್‌ ಕೋಟ್ಜಿ ಅವರ ಬದಲಿಗೆ ತಂಡದಲ್ಲಿ ಸೇರಿಸಿಕೊಂಡಿದೆ. ಈ ಮೂಲಕ ಕಾಂಬೋಜ್‌ ಐಪಿಎಲ್‌ ಪದಾರ್ಪಣೆಗೈದರು.ಹೈದರಾಬಾದ್‌ ತಂಡ ಈ ಪಂದ್ಯಕ್ಕಾಗಿ ಮಾಯಾಂಕ್‌ ಅಗರ್ವಾಲ್‌ ಅವರನ್ನು ತಂಡಕ್ಕೆ ಸೇರಿಸಿಕೊಂಡಿತ್ತು.

Share This Article
error: Content is protected !!
";