Ad image

ಅ ಪುಟ್ಟ ಮುಗ್ದ ಮನಸಿನ ನಗು ಜಿವನವೇ ಬದಲಿದ ಕತೆ

Vijayanagara Vani
ಅ ಪುಟ್ಟ ಮುಗ್ದ  ಮನಸಿನ ನಗು  ಜಿವನವೇ ಬದಲಿದ ಕತೆ

5 ವರ್ಷದ ಆ ಮಗುವನ್ನು ಆಕೆಯ ತಾಯಿ ಬ್ರೆಡ್ ತರಲು ಬೇಕರಿಗೆ ಕಳುಹಿಸಿದಳು. ಆದರೆ ಆಕೆ ಬೇಕರಿಯನ್ನೇ ಮನೆಗೆ ತಂದಳು. ಆದುದಿಷ್ಟೇ.

- Advertisement -
Ad imageAd image

ತನ್ನ ತಾಯಿ ಹೇಳಿದಂತೆ ಬೇಕರಿಗೆ ಹೋದ ಆ ಪುಟ್ಟ ಮಗು ಬೇಕರಿಯಿಂದ ಒಂದು ಪೌಂಡ್ ಬ್ರೆಡ್ ತೆಗೆದುಕೊಂಡು ಮನೆಗೆ ಮರಳುತ್ತಿತ್ತು. ಶಾಲೆ ಮುಗಿಸಿ ಮನೆಗೆ ಮರಳುತ್ತಿದ್ದ ಆಕೆಯ ಚಿಕ್ಕಪ್ಪ ತನ್ನ ಮೊಬೈಲಿನಲ್ಲಿ ಆಕೆಯ ಒಂದು ಫೋಟೋ ತೆಗೆದ. ಕೈಯಲ್ಲಿ ಬ್ರೆಡ್ ಪ್ಯಾಕೆಟ್ ಹಿಡಿದು ಮಣ್ಣಿನ ರಸ್ತೆಯಲ್ಲಿ ಓಡಿ ಹೊರಟಿದ್ದ ಮಗುವಿನಲ್ಲಿ ವಿಶ್ವವನ್ನು ಜಯಿಸಿದಂತಹ ಮುಗ್ದ ಸಂತೋಷವನ್ನು ಕಂಡುಕೊಂಡ ಚಿಕ್ಕಪ್ಪ ತಾನು ತೆಗೆದ ಈ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ. ಅಲ್ಬಾನಿ ಬ್ರೆಡ್ ಕೈಯಲ್ಲಿ ಹಿಡಿದ ಈ ಫೋಟೋ ವೈರಲ್ ಆಗಿ ಮಗುವಿನ ಮುಖದಲ್ಲಿನ ಸಂತಸ ಜನರ ಮನಸೂರೆಗೊಂಡಿತು.

ತಾವು ಬ್ರೆಡ್ ನ ಜಾಹೀರಾತಿನಲ್ಲಿ ಇಂಥದ್ದೇ ಫೋಟೋವನ್ನು ನೋಡಲು ಬಯಸುವುದಾಗಿ ಜನಾಭಿಪ್ರಾಯ ರೂಪುಗೊಂಡು ಕೆಲವೇ ದಿನಗಳಲ್ಲಿ
ಅಲ್ಬೇನಿಯ ಎಲ್ಲಾ ಪ್ರಕಟಣಾ ಫಲಕಗಳ ಮೇಲೆ ಟ್ರಕ್ ಗಳ ಮೇಲೆ ಆಕೆಯ ಚಿತ್ರ ರಾರಾಜಿಸಿತು.
ಲೆಥುಕುಕನ್ಯಾ ಮಮಾಜಿ (Lethukukhanya Mjaji) ಎಂಬ ಐದು ವರ್ಷದ ಈ ಬಾಲೆ ಸೌತ್ ಆಫ್ರಿಕಾದ ಮನ ಸೆಳೆಯುವ ನಗುವಿನ ಒಡತಿಯಾದಳು.

ಜನಾಗ್ರಹದ ಮೇರೆಗೆ ಅಲ್ಬಾನಿಯಲ್ಲಿ ಆಕೆಯ ಸುಂದರವಾದ ನಗುವಿನ ಭಾವಚಿತ್ರ ರಾರಾಜಿಸಿ ಅಲ್ಬಾನಿ ಬ್ರೆಡ್ ಕಂಪನಿಯವರು ಆಕೆಯ ಪಾಲಕರನ್ನು ಭೇಟಿಯಾದರು. ಆಕೆಯ ತಾಯಿಗೆ ಒಂದು ಮನೆಯನ್ನು ಕೊಡ ಮಾಡಿದ ಕಂಪನಿ ಪುಟ್ಟ ಬಾಲಕಿಯ ಪದವಿಯವರೆಗಿನ ವಿದ್ಯಾಭ್ಯಾಸದ ಖರ್ಚು ವೆಚ್ಚವನ್ನು ತಾವೇ ಭರಿಸುವುದಾಗಿ ಹೇಳಿದರು. ಸುಂದರ ನಗುವಿನ ಪುಟ್ಟ ಒಡತಿ ಇದೀಗ ಅಲ್ಬಾನಿ ಬ್ರೆಡ್ ನ ಪ್ರಚಾರ ರಾಯಭಾರಿಯಾಗಿದ್ದು
ಒಂದು ಪುಟ್ಟ ನಗು ಏನೆಲ್ಲಾ ಅದ್ಭುತಗಳನ್ನು ಸಾಧಿಸಬಹುದು ಎಂಬುದಕ್ಕೆ ಉದಾಹರಣೆಯಾಗಿ ನಿಂತಿದ್ದಾಳೆ.
ಬದುಕಿನ ವೈಚಿತ್ರಗಳೇ ಹೀಗೆ ಅಲ್ಲವೇ ಸ್ನೇಹಿತರೆ?

” ಸ್ಮೈಲ್ ಇಸ್ ದಿ ಓನ್ಲಿ ಆರ್ನಮೆಂಟ್ ದಟ್ ಕಾಸ್ಟ್ ನಥಿಂಗ್ ಬಟ್ ವಿನ್ಸ್ ಎವರಿಥಿಂಗ್” ಎಂಬ ಮಾತನ್ನು ನಾವಿಲ್ಲಿ ನೆನೆಯಬಹುದು. ನಗೆ ಎಂಬ ಆಭರಣವನ್ನು
ಧರಿಸಲು ನಾವು ಏನೇನು ಖರ್ಚು ಮಾಡಬೇಕಾಗಿಲ್ಲ ಆದರೆ ಏನೆಲ್ಲವನ್ನು ಗಳಿಸಬಹುದು ಎಂಬ ಮಾತು ಪುಟ್ಟ ಬಾಲಕಿಯ ವಿಷಯದಲ್ಲಿ ಅಕ್ಷರಶಹ ನಿಜವಾಗಿದೆ.

ಒಡೆದು ಹೋದ ಮನಗಳನ್ನು ಒಂದುಗೂಡಿಸುವಲ್ಲಿ
ನಗೆಯು ಫೆವಿಕಾಲ್ನಂತೆ ಕೆಲಸ ಮಾಡುತ್ತದೆ. ಇಬ್ಬರು ಸಂಪೂರ್ಣ ಅಪರಿಚಿತರಲ್ಲಿ ಪರಿಚಿತ ಭಾವವನ್ನು ಸೃಷ್ಟಿಸಲು ನಗೆಯ ಮ್ಯಾಜಿಕ್ ಸಾಕು. ಕಡು ಕಷ್ಟದ ಗಳಿಗೆಗಳಲ್ಲಿ ತಿಳಿ ಹಾಸ್ಯದ ಬೆಳಕು ಮುಖದಲ್ಲಿ ಮಂದಹಾಸವನ್ನು ತರಬಲ್ಲದು. ಗಂಡ ಮಕ್ಕಳ ತಮಾಷೆಗೆ ನಸು ಮುನಿಸಿಕೊಂಡ ಅಮ್ಮನ ಮುಖದಲ್ಲಿ ಪ್ರೀತಿಯ ಮಾತೊಂದು ನಗೆ ತರಿಸಬಲ್ಲದು.

ಎಂತದ್ದೇ ಘನ, ಗಂಭೀರ ವಿಷಯಗಳನ್ನು ಚರ್ಚಿಸುವಾಗಲೂ ಚತುರ ಮಾತಿನ ಪುಟ್ಟ ಚಟಾಕಿ ನಗೆಯುಕ್ಕಿಸಿ ವಾತಾವರಣವನ್ನು ಹಗುರಗೊಳಿಸಬಲ್ಲದು.
ಮಗುವಿನ ಮುಗ್ಧ ಸುಂದರ ನಗು ಮನೋಲ್ಲಾಸಕ್ಕೆ ಕಾರಣವಾದರೆ ಪ್ರಕೃತಿಯ ಸುಂದರ ಚಿತ್ರಣ ಮನಕ್ಕೆ ಆಹ್ಲಾದವನ್ನು ನೀಡಿ ತುಟಿಯನ್ನು ಅರಳಿಸಬಲ್ಲದು.

ಕೋಪಗೊಳ್ಳಲು ಮನುಷ್ಯನ 52 ಸ್ನಾಯುಗಳು ಗಂಭೀರವಾಗಿ ಕಾರ್ಯನಿರ್ವಹಿಸಿದರೆ ನಗಲು ಕೇವಲ 14 ಸ್ನಾಯುಗಳು ಸಾಕು ಎಂಬ ವೈಜ್ಞಾನಿಕ ಸತ್ಯವು ನಗೆಯ ಮಹತ್ವವನ್ನು ನಮಗೆ ತಿಳಿಸಿಕೊಡುತ್ತದೆ. ನಗೆ ಮನದ ಮಲಿನತೆಯನ್ನು ಕಳೆಯುತ್ತದೆ.

ನಗೆಯಲ್ಲಿಯೂ ಹಲ ವಿಧಗಳು.
ಕೊಂಚವೇ ತುಟಿಯನ್ನು ಬಿರಿದು ನಕ್ಕ ನಗು ನಸುನಗು, ಮಂದಹಾಸ ಎಂದು ಕರೆಸಿಕೊಂಡರೆ, ಜೋರಾದ ನಗುವನ್ನು ಸಂತಸದ ನಗೆ ಎಂದು ಕರೆಯಬಹುದು. ಬಾಯಿ ತೆರೆದು ಗಹಗಹಿಸಿ ನಕ್ಕರೆ ಅಟ್ಟಹಾಸದ ನಗೆ ಎಂದೂ,ತುಟಿಯನ್ನು ಓರೆಗೊಳಿಸಿ ನಕ್ಕರೆ ವ್ಯಂಗ್ಯದ ನಗು ಎಂದು ಹೇಳಬಹುದು, ಬೇರೆಯವರನ್ನು ಹಾಸ್ಯ ಮಾಡಿ ಅಣಕಿಸಿ ನಗುವುದನ್ನು ಕುಹಕದ ನಗು ಎಂದು ಹೇಳಿದರೆ ತುಟಿಯನ್ನು ಬಿರಿಯದೆ ಹೋದರೂ ಕೇವಲ ಕಣ್ಣ ನೋಟದಲ್ಲಿ ಭಾವನೆಗಳ ವ್ಯಕ್ತಪಡಿಸುವ ನಗುವನ್ನು ನಿರ್ಲಿಪ್ತ ನಗು ಎಂದು ಹೇಳಬಹುದು. ಪರಿಚಯವಾದ ಕೂಡಲೇ ಕೈ ಕುಲುಕಿ ಮುಖದಲ್ಲಿ ನಗೆಯನ್ನು ಅರಳಿಸುವ ಬಗೆಯನ್ನು ಸೌಹಾರ್ದದ ನಗೆ ಎಂದು ಪರಿಗಣಿಸಿದರೆ,ಕಣ್ಣಂಚಲ್ಲಿ ನೀರು ಮುಖದಲ್ಲಿನ ನಗುವನ್ನು ಆನಂದ ಭಾಷ್ವ, ಸಂತಸದ ಕಣ್ಣೀರು ಎಂದು ವರ್ಣಿಸುತ್ತಾರೆ. ಬಹುಶಹ ಮನುಷ್ಯ ಜೀವಿತದ ಅತ್ಯಂತ ಸುಂದರವಾದ ಆನಂದಭಾಷ್ಪದ ಗಳಿಗೆಗಳು ಕೆಲವೇ ಇದ್ದರೂ ಕೂಡ ಅವುಗಳು ತರುವ ಸಂತಸ ಚಿರಕಾಲ ಮನದಲ್ಲಿ ಮನೆ ಮಾಡುತ್ತವೆ.

ತಮ್ಮ ಹಳೆಯ ಕಷ್ಟದ ದಿನಗಳನ್ನು ನೆನೆದು, ಬದುಕು ಒಡ್ಡಿದ ಬಡತನದ, ಸಂಕಷ್ಟದ ಸವಾಲುಗಳನ್ನು ತಾವು ಎದುರಿಸಿದ ಪರಿಯನ್ನು ಹೇಳುವ ವೃದ್ಧರ ಮುಖದಲ್ಲಿ ತೃಪ್ತಿಯ ನಗೆ ಮನೆ ಮಾಡಿರುತ್ತದೆ.
ಮತ್ತೆ ಕೆಲ ಅಜ್ಞಾನಿಗಳು ಬೇರೆಯವರ ಮನ ನೋಯಿಸುವಂತೆ ಮಾತಾಡಿ ಅಣಗಿಸಿ ವ್ಯಂಗ್ಯದ ನಗೆ ಬೀರುತ್ತಾರೆ. ಒಬ್ಬರನ್ನು ನೋಯಿಸಿ ಸಂತಸ ಪಡುವ ಮನಸ್ಥಿತಿ ಒಳ್ಳೆಯದಲ್ಲ.
ನಗೆಯು ನಮ್ಮ ಮೈಮನಗಳಲ್ಲಿನ ಜಡತೆಯನ್ನು ತೊಡೆದು ಹಾಕಿ ಹೊಸ ಉತ್ಸಾಹವನ್ನು ತುಂಬುತ್ತದೆ ಎನ್ನುವ ಕಾರಣಕ್ಕಾಗಿಯೇ ಜನರ ನಾಡಿ ಮಿಡಿತವನ್ನು ಅರಿತ ದೃಶ್ಯ ಮಾಧ್ಯಮಗಳಲ್ಲಿ ಹಾಸ್ಯ ಕಾರ್ಯಕ್ರಮಗಳು ಹರಟೆಗಳು ಪ್ರಸಾರವಾದರೆ, ಆಕಾಶವಾಣಿಗಳು ಕೂಡ ಹಿಂದೆ ಬಿದ್ದಿಲ್ಲ. ಕಳೆದ ಹಲವಾರು ದಶಕಗಳಿಂದ ಉತ್ತಮ ಗುಣಮಟ್ಟದ ಹಾಸ್ಯ ಕಾರ್ಯಕ್ರಮಗಳನ್ನು ಬಾನುಲಿ ಮಾಧ್ಯಮಗಳು ಕೂಡ ಪ್ರಸಾರ ಮಾಡುತ್ತಲೇ ಇವೆ.
ಇನ್ನು ಜಾತ್ರೆ,ಸಮ್ಮೇಳನ ಉತ್ಸವ ಮುಂತಾದ ಕಾರ್ಯಕ್ರಮಗಳಲ್ಲಿ ಉಳಿದೆಲ್ಲ ಕಾರ್ಯಕ್ರಮಗಳು ಒಂದು ತೂಕವಾದರೆ ಹಾಸ್ಯ ಕಾರ್ಯಕ್ರಮಗಳದ್ದೇ ಮತ್ತೊಂದು ತೂಕ.

ರಾಜ ಮಹಾರಾಜರ ಕಾಲದಲ್ಲಿ ರಾಜನ ಆಸ್ಥಾನದಲ್ಲಿ ವಿದೂಷಕರು ಎಂಬ ನಗಿಸುವ ವರ್ಗವೇ ಇತ್ತು. ಬಸವಣ್ಣನವರ ಕಾಲದಲ್ಲಿ ನಗೆ ಮಾರಿ ತಂದೆ ತನ್ನ ಹಾಸ್ಯ ಚಟಾಕಿಗಳಿಂದ ಸ್ವತಹ ದೇವಾನುದೇವತೆಗಳಾದ ಶಿವ ಪಾರ್ವತಿಯರಿಗೆ ನಗೆ
ಉಕ್ಕಿಸಿ ತನ್ನ ಕಾಯಕವನ್ನು ನಿರ್ವಹಿಸಿದ ಖ್ಯಾತಿಯನ್ನು ಪಡೆದಿದ್ದಾನೆ. ಸರ್ಕಸ್ಗಳಲ್ಲಿಯೂ ಕೂಡ ಜೋಕರ್ಗಳು ತಮ್ಮ ವಿಭಿನ್ನ ಶೈಲಿಯ ಭಾವ ಭಂಗಿ ಮತ್ತು ಮಾತುಗಳಿಂದ ನಗೆಯನ್ನು ಉಕ್ಕಿಸುತ್ತಾರೆ. ಈ ಹಿಂದೆ ದುಡ್ಡು ಕೊಟ್ಟು ನಗಿಸುವವರನ್ನು ಕರೆಸಿಕೊಳ್ಳುತ್ತಾರೆ ಎಂಬ ವಿಷಯವನ್ನು ಸೋಜಿಗದಂತೆ ನೋಡುತ್ತಿದ್ದ ಜನ ಇದೀಗ ಬದಲಾದ ಕಾಲಘಟ್ಟದಲ್ಲಿ ಕಾಫಿ ಶಾಪ್ಗಳಲ್ಲಿ, ಕಾಕ್ಟೇಲ್ ಬಾರ್ ಗಳಲ್ಲಿ, ಔದ್ಯೋಗಿಕ ಕಾರ್ಯಕ್ರಮಗಳಲ್ಲಿ ಹರಟೆಯ ಮೂಲಕ ನಗೆಯನ್ನು ಉಕ್ಕಿಸುವ ಮಾತಿನ ಮೋಡಿಗಾರರನ್ನು ಕರೆಸಿ ಮನರಂಜನೆ ನೀಡುತ್ತಿದ್ದಾರೆ.

ನಗೆ ಎಂಬುದು ಸಾಂಕ್ರಾಮಿಕ. ಪರಿಚಯವಿರಲಿ ಇಲ್ಲದಿರಲಿ ಮುಗ್ಧವಾದ ನಗೆ ಎಲ್ಲರಲ್ಲಿ ಪಸರಿಸಲಿ ಎಂಬ ಆಶಾಭಾವದೊಂದಿಗೆ

ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ

Share This Article
error: Content is protected !!
";