ಚಳ್ಳೆಹಣ್ಣು ಎಂಬ ನುಡಿಗಟ್ಟನ್ನು ಬಳಸಿರುತ್ತೇವೆ. ಆದರೆ ನಮ್ಮಲ್ಲಿ ಬಹಳಷ್ಟು ಜನರಿಗೆ ಚಳ್ಳೆಹಣ್ಣು ಎಂದರೆ ಯಾವುದು, ಆ ರೀತಿ ಒಂದು ಹಣ್ಣು ಇದೆ ಎಂಬುದೇ ತಿಳಿದಿಲ್ಲವೆನ್ನಬಹುದು.
ಚಳ್ಳೆ ಹಣ್ಣು ( ಕಾರ್ಡಿಯಾ ಮೈಕ್ಸಾ) ಕರ್ನಾಟಕದ ಬಹುತೇಕ ಭಾಗಗಳಲ್ಲಿ ಹಿಂದೆ ಸಾಮಾನ್ಯವಾಗಿ ಕಂಡು ಬರುತ್ತಿದ್ದ ಮರ. ಆದರೆ ಇತ್ತೀಚೆಗೆ ಇದರ ವ್ಯಾಪನೆಯ ಪ್ರಮಾಣ ತುಂಬಾ ಕಡಿಮೆಯಾಗಿದೆ ಎನ್ನಬಹುದು. ಆಡುಭಾಷೆಯಲ್ಲಿ ಗೊಣ್ಣೆಹಣ್ಣು, ಸುಂಬಳ ಹಣ್ಣು ಎಂದು ಕರೆಯಲ್ಪಡುವ ಈ ಹಣ್ಣು, ಆ ಪದಕ್ಕೆ ಅನ್ವರ್ಥದಂತಿದೆ. ಮೇಲಿನ ಸಿಪ್ಪೆ ತೆಗೆದರೆ ಅಂಟು ಅಂಟಾಗಿ, ಜಿಗುಟಾದ ಲೋಳೆಯಂತಹ ಜಾರುವ ಗುಣವನ್ನು ಹೊಂದಿರುವ ಈ ಹಣ್ಣಿನ ತಿರುಳು ಚಳ್ಳೆಹಣ್ಣು ಎಂಬ ನುಡಿಗಟ್ಟಿಗೆ ಸರಿಯಾಗಿ ಹೊಂದುವ ಹೋಲಿಕೆ.
ಕೋತಿ, ಅಳಿಲಿನಂತಹ ಮರವಾಸಿ ಪ್ರಾಣಿಗಳು ಹಾಗೂ ಹಲವು ಹತ್ತು ಪಕ್ಷಿಗಳಿಗೆ ಭೂರಿಭೋಜನ ಒದಗಿಸುವ ಈ ಹಣ್ಣುಗಳು ಹೆಚ್ಚೆಚ್ಚು ಇದ್ದಷ್ಟು ವನ್ಯಜೀವಿಗಳಿಗೆ ಬಹಳ ಉಪಕಾರಿ. ಆದರೆ ಬದಲಾದ ಕೃಷಿ ಮಾದರಿಯಲ್ಲಿ, ಗೋಮಾಳ, ಕೆರೆಮಾಳ, ರಾಜಕಾಲುವೆ, ಕರಾಬು ಜಮೀನು ಸೇರಿ ಚೂರು ಜಾಗವನ್ನು ಬಿಡದೆ ಕೃಷಿ ಅಥವಾ ಇತರ ಉಪಯೋಗಕ್ಕೆ ಬಳಸುತ್ತಿರುವ ನಾವುಗಳು ಈ ಮರಗಳನ್ನು ಅಪರೂಪವಾಗಿಸಿದ್ದೇವೆ. ಈ ಮರಗಳ ವಿಶೇಷವೆಂದರೆ ಇವು ಹಳ್ಳದ ಮಗ್ಗಲು, ಇರುವಲ್ಲಿಯೇ ಹೆಚ್ಚಾಗಿ ಬೆಳೆಯುವುದು.