ರಾಜ್ಯದಲ್ಲಿ ಮಳೆ ಆರ್ಭಟ ಆರಂಭವಾಗಿದೆ. ಬೆಂಗಳೂರು, ದಕ್ಷಿಣ ಕನ್ನಡ ಸೇರಿಸದಂತೆ ಹಲವು ಭಾಗಗಳಲ್ಲಿ ಮಳೆ ಸುರಿಯುತ್ತಿದೆ. ಇದೆ ವೇಳೆ ಉಡುಪಿಗೆ, ಬೀಚ್‌ಗಳಿಗೆ ಹೋಗುವವರಿಗೆ ಬೇಸರದ ಸಂಗತಿಯೊಂದಿದೆ. ಉಡುಪಿಯ ಮಲ್ಪೆ ಬೀಚ್‌ನಲ್ಲಿ ಪ್ರವಾಸಿಗರಿಗೆ ನಿಷೇಧ ಹೇರಲಾಗಿದೆ.
ಮಳೆಗಾಲದಲ್ಲಿ ಬೀಚ್‌ಗಳು, ಮಳೆಯ ಸಂಭ್ರಮವನ್ನು ಕಣ್ಣು ತುಂಬಿಕೊಳ್ಳಲು ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಮಲೆನಾಡು, ಕರಾವಳಿ ಭಾಗಗಳಿಗೆ ಭೇಟಿ ನೀಡುತ್ತಾರೆ. ಮಳೆಗಾಲದಲ್ಲಿ ಸಮುದ್ರಗಳ ಅಬ್ಬರ ಜೋರಾಗಿರುತ್ತದೆ. ಕಡಲ ತೀರಗಳಲ್ಲಿ ಪ್ರವಾಸಿಗರು ಹೋಗುವುದು ಸರಿಯಲ್ಲ. ಈ ಬಗ್ಗೆ ಸ್ಥಳೀಯ ಪೊಲೀಸರು ಎಚ್ಚರಿಕೆ ನೀಡುತ್ತಿರುತ್ತಾರೆ. ಆದರೂ ಕೂಡ ಪ್ರವಾಸಿಗರು ಎಚ್ಚರ ವಹಿಸುವುದಿಲ್ಲ.
ಮಲ್ಪೆ ಬೀಚ್‌ಗೆ ಪ್ರವಾಸಿಗರಿಗೆ ನಿಷೇಧ ಉಡುಪಿ ಜಿಲ್ಲೆಯ ಪ್ರಮುಖ ಪ್ರವಾಸಿ ಸ್ಥಳವಾದ ಮಲ್ಪೆ ಬೀಚ್‌ನಲ್ಲಿ ಯಾವುದೇ ಅಪಾಯ ಸಂಭವಿಸದಂತೆ ತಡೆಯಲು ಸುಮಾರು ಒಂದು ಕಿಲೋಮೀಟರ್ ಉದ್ದಕ್ಕೆ ಏಳು ಅಡಿ ಎತ್ತರದ ಬಲೆ ಅಳವಡಿಸಿ ಸದ್ಯಕ್ಕೆ ತಡೆ ಬೇಲಿ ನಿರ್ಮಿಸಲಾಗಿದೆ. ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ಉಡುಪಿ ಜಿಲ್ಲಾಡಳಿತ ಮತ್ತು ಮಲ್ಪೆ ಬೀಚ್ ಅಭಿವೃದ್ಧಿ ಸಮಿತಿ ಅನೇಕ ಕ್ರಮಗಳನ್ನು ಕೈಗೊಂಡಿವೆ
ತಡೆ ಬೇಲಿ ಹಾಕುವ ಜೊತೆಗೆ ಅಲ್ಲಲ್ಲಿ ಜೊತೆಗೆ ಎಚ್ಚರಿಕೆಯ ಕೆಂಪು ಬಾವುಟಗಳನ್ನು ಹಾಕಲಾಗಿದೆ. ಜೊತೆಗೆ ಪ್ರವಾಸಿಗರು ಹೆಚ್ಚಾಗಿ ಓಡಾಡುವ ಆಯಕಟ್ಟಿನ ಜಾಗದಲ್ಲಿ ಬೀಚ್ ಪ್ರವೇಶ ನಿಷೇಧ ಎಂಬ ಎಚ್ಚರಿಕೆ ಫಲಕಗಳನ್ನು ಕೂಡ ಅಳವಡಿಸಲಾಗಿದೆ. ಹಾಗಿದ್ದು, ಏನಾದರೂ ಪ್ರವಾಸಿಗರು ಬೀಚ್‌ಗೆ ಕಾಲಿಟ್ಟರೆ ಅವರಿಗಾಗಿ ಜೀವ ರಕ್ಷಕ ಪಡೆಯ ಸದಸ್ಯರು ಬೀಚ್‌ನಲ್ಲಿ ಕಾವಲು ಕಾಯುತ್ತಿದ್ದಾರೆ.
ಮಲ್ಪೆ ಬೀಚ್‌ನಲ್ಲಿ ನಿಯಮ ಪಾಳಿಸದ ಪ್ರವಾಸಿಗರು ಭಾನುವಾರ ಪೂರ್ತಿ ನಿರಂತರ ಮಳೆಯ ನಡುವೆಯೂ ಮುಂಗಾರು ಹಂಗಾಮಿನ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ನೀಡಿದ ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ನಿರ್ಲಕ್ಷಿಸಿ ಗಣನೀಯ ಸಂಖ್ಯೆಯಲ್ಲಿ ಪ್ರವಾಸಿಗರು ಮಲ್ಪೆ ಬೀಚ್‌ಗೆ ಆಗಮಿಸಿದ್ದರು. ಹಲವಾರು ನಿರ್ಬಂಧಗಳು ಮತ್ತು ಸಲಹೆಗಳ ಹೊರತಾಗಿಯೂ, ಅನೇಕ ಪ್ರವಾಸಿಗರು ನೀರಿಗೆ ಇಳಿಯುತ್ತಿದ್ದರು. ಜಿಲ್ಲಾಡಳಿತ ನೀಡಿದ ಸುರಕ್ಷತಾ ಮುನ್ನೆಚ್ಚರಿಕೆಗಳ ಹೊರತಾಗಿಯೂ, ಪ್ರವಾಸಿಗರು ಸುರಕ್ಷತಾ ಕ್ರಮಗಳನ್ನು ನಿರ್ಲಕ್ಷಿಸಿ ಸೀ ವಾಕ್ ವೇ ಬಳಿ ನೀರಿಗೆ ಪ್ರವೇಶಿಸಿದ್ದಾರೆ. ಬೀಚ್‌ನಲ್ಲಿ ಇರುವ ಜೀವರಕ್ಷಕರು ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಅಪಾಯಕಾರಿ ಮಾನ್ಸೂನ್ ಅವಧಿಯಲ್ಲಿ ಪ್ರವಾಸಿಗರು ನೀರಿಗೆ ಪ್ರವೇಶಿಸುವುದನ್ನು ತಡೆಯಲು ಸ್ಥಳೀಯ ಪೊಲೀಸರ ಸಹಾಯವನ್ನು ಕೋರಿದ್ದಾರೆ.