Ad image

ಆಹಾರ ಸೇವಿಸಲು ಬಳಸುವ ವಿವಿಧ ಲೋಹದ ಪಾತ್ರೆಗಳು

Vijayanagara Vani
ಆಹಾರ ಸೇವಿಸಲು ಬಳಸುವ ವಿವಿಧ ಲೋಹದ ಪಾತ್ರೆಗಳು

ಹಿಂದಿನ ರಾಜ ಮಹಾರಾಜರು ಬೆಳ್ಳಿ ತಟ್ಟೆಯಲ್ಲಿ ಚಿನ್ನದ ಪಾತ್ರೆಗಳಲ್ಲಿ ಆಹಾರವನ್ನು ಸೇವಿಸುತ್ತಿದ್ದರು ಎಂದು ಕೇಳಿದಾಗ ಹೌದೇ? ಎಂದು ಮೂಗಿಗೆ ಬೆರಳಿಡುವ ನಾವು ಯಾರನ್ನಾದ್ರೂ ಶ್ರೀಮಂತರು ಎಂದು ಹೇಳಬೇಕಾದರೆ ಚಿನ್ನದ ಚಮಚ ಬಾಯಲ್ಲಿಟ್ಟುಕೊಂಡು ಹುಟ್ಟಿದ್ದಾನೆ ಎಂದು ಹೇಳುತ್ತೇವೆ.

- Advertisement -
Ad imageAd image

ಅಸಲಿಗೆ ಈ ಚಿನ್ನ, ಬೆಳ್ಳಿ, ತಾಮ್ರ, ಹಿತ್ತಾಳೆ, ಸೀಸ ಕಬ್ಬಿಣ ಮುಂತಾದ ಲೋಹಗಳ ಪಾತ್ರೆಗಳಿಂದ ತಯಾರಿಸಿದ ಆಹಾರವನ್ನು ಯಾರು ಯಾವಾಗ ಮತ್ತು ಹೇಗೆ ಸೇವಿಸಲು ಪ್ರಾರಂಭಿಸಿದರು, ಯಾವ ಯಾವ ಪಾತ್ರೆಗಳನ್ನು ಬಳಸುವ ಮೂಲಕ ಆರೋಗ್ಯವನ್ನು ಕಾಯ್ದುಕೊಳ್ಳಬಹುದು ಯಾವುದನ್ನು ಬಳಸುವುದರಿಂದ ಹಾನಿಯಾಗುತ್ತದೆ ಎಂಬುದರ ಕುರಿತು ತುಸು ಅರಿಯೋಣ.

ಪ್ರಾಚೀನ ಶಿಲಾಯುಗದ ಕಾಲದಲ್ಲಿ ಮನುಷ್ಯನಿಗೆ ಬೆಂಕಿಯ ಪರಿಚಯವೇ ಇಲ್ಲದ ಸಮಯದಲ್ಲಿ ಆತ ಆಹಾರವನ್ನು ಹಸಿಯಾಗಿಯೇ ತಿನ್ನುತ್ತಿದ್ದ. ಮುಂದೆ ನಾಗರಿಕತೆ ಬೆಳೆದಂತೆ ಆತ ಮಣ್ಣಿನಿಂದ ತಯಾರಿಸಿದ ಪಾತ್ರೆಗಳನ್ನು ಬಳಸಲಾರಂಭಿಸಿದ….ಕ್ರಮ ಕ್ರಮೇಣ ತಾಮ್ರ, ಹಿತ್ತಾಳೆಯಂತಹ ಲೋಹದ ಪಾತ್ರೆಗಳು ನಂತರ ಉಳ್ಳವರ ಆಸಕ್ತಿಗನುಗುಣವಾಗಿ ಬೆಳ್ಳಿ ಬಂಗಾರದ ಪಾತ್ರೆಗಳು ಬಳಕೆಗೆ ಬಂದವು.

ಚಿನ್ನ… ಹಳದಿ ಲೋಹ ಎಂದೇ ಕರೆಯಲ್ಪಡುವ ಚಿನ್ನ ಒಂದು ಬಿಸಿಯಾದ ಲೋಹವಾಗಿದ್ದು ಚಿನ್ನದ ಪಾತ್ರೆಯಲ್ಲಿ ಆಹಾರ ತಯಾರಿಕೆ ಮತ್ತು ಆಹಾರ ಸೇವನೆಗಳು ದೇಹದ ಒಳಗಿನ ಮತ್ತು ಹೊರಗಿನ ಭಾಗಗಳನ್ನು ಅತ್ಯಂತ ಗಟ್ಟಿಗೊಳಿಸುತ್ತವೆ. ಮಲಗಿರುವಾಗಲು ಕಣ್ಣಿನ ದೃಷ್ಟಿಯನ್ನು ಹೆಚ್ಚಿಸುವಷ್ಟು ಶಕ್ತಿಯನ್ನು ನೀಡುತ್ತವೆ.

ಬೆಳ್ಳಿ….. ಬೆಳ್ಳಿಯು ತಂಪಾದ ಲೋಹವಾಗಿದ್ದು ಈ ಪಾತ್ರೆಗಳನ್ನು ಬಳಸುವವರ ದೇಹಕ್ಕೆ ತಣ್ಣನೆಯ ಅನುಭವವನ್ನು ನೀಡುತ್ತದೆ. ಬೆಳ್ಳಿಯ ಪಾತ್ರೆಗಳಲ್ಲಿ ಆಹಾರವನ್ನು ತಯಾರಿಸುವುದು ಮತ್ತು ಸೇವಿಸುವುದರಿಂದ ವ್ಯಕ್ತಿಯ ಬುದ್ಧಿಮತ್ತೆ ಚುರುಕಾಗುತ್ತದೆ, ಆರೋಗ್ಯ ಸುಧಾರಿಸುತ್ತದೆ ದೃಷ್ಟಿಯು ಇನ್ನಷ್ಟು ಪ್ರಖರವಾಗುತ್ತದೆ ಪಿತ್ತಕೋಶದ ಎಲ್ಲ ತೊಂದರೆಗಳನ್ನು ನಿವಾರಿಸುತ್ತದೆ. ಕೆಮ್ಮು ಮತ್ತು ವಾಯು ಬಾಧೆಗೆ ಬೆಳ್ಳಿ ಪಾತ್ರೆಯ ಆಹಾರ ಸೇವನೆ ಉತ್ತಮ ಮದ್ದಾಗಬಲ್ಲದು.

ಕಂಚು
ಕಂಚಿನಂತಹ ಧ್ವನಿ, ಕಂಚಿನ ಕಂಠ ಎಂದೆಲ್ಲಾ ಕೇಳಿದ್ದೇವಷ್ಟೇ. ಕಂಚಿನಷ್ಟು ತೀಕ್ಷ್ಣವಾದ ಜಾಣ್ಮೆ ಮತ್ತು ಶುದ್ಧವಾದ ರಕ್ತವನ್ನು ಹೊಂದಲು ಕಂಚಿನ ಪಾತ್ರೆಗಳನ್ನು ತಟ್ಟೆ ಲೋಟಗಳನ್ನು ಬಳಸಬೇಕು. ರಕ್ತದೊತ್ತಡವನ್ನು ಕಡಿಮೆ ಮಾಡುವ ಶಕ್ತಿ ಕಂಚಿಗಿದ್ದು ಉದರ ವಿಕಾರಗಳಿಗೆ ಒಳ್ಳೆಯ ಮದ್ದಾಗಬಲ್ಲದು. ಆದರೆ ಹುಳಿ ಪದಾರ್ಥಗಳನ್ನು ಕಂಚಿನ ಪಾತ್ರೆಯಲ್ಲಿ ಇಡಬಾರದು. ಈ ಲೋಹದೊಂದಿಗೆ ಹುಳಿ ಪದಾರ್ಥಗಳು ರಾಸಾಯನಿಕ ಕ್ರಿಯೆಗೆ ಒಳಪಟ್ಟು ಆಹಾರವನ್ನು ವಿಷಮಯವಾಗಿಸುತ್ತವೆ. ಆಹಾರದಲ್ಲಿನ ಕೇವಲ ಮೂರು ಶೇಕಡಾ ಜೀವಸತ್ವಗಳನ್ನು ಮಾತ್ರ ನಾಶ ಮಾಡುವ ಗುಣ ಕಂಚಿನ ಪಾತ್ರೆಗಿದೆ.

ತಾಮ್ರ
ಕುಡಿಯುವ ನೀರನ್ನು ಬಹಳಷ್ಟು ಮನೆಗಳಲ್ಲಿ ತಾಮ್ರದ ಪಾತ್ರೆಗಳಲ್ಲಿ ಸಂಗ್ರಹಿಸಿಡಲಾಗುತ್ತದೆ. ರಕ್ತದ ಶುದ್ಧೀಕರಣಕ್ಕೆ, ಒಳ್ಳೆಯ ನೆನಪಿನ ಶಕ್ತಿಗೆ, ಪಿತ್ತಕೋಶಕ್ಕೆ ಸಂಬಂಧಪಟ್ಟ ಎಲ್ಲ ಕಾಯಿಲೆಗಳಿಂದ ದೂರವಿರಲು ತಾಮ್ರದ ಪಾತ್ರೆಯ ಬಳಕೆ ಅತ್ಯಂತ ಒಳ್ಳೆಯದು. ಕಾಯಿಲೆ ರಹಿತ ಜೀವನ ನಡೆಸಬೇಕೆಂದು ಇಚ್ಛಿಸುವ ವ್ಯಕ್ತಿ ತಾಮ್ರದ ತಂಬಿಗೆಯಲ್ಲಿ ತುಂಬಿಟ್ಟ ನೀರನ್ನು ಕುಡಿಯುವುದು ಬಲು ವಿಹಿತ. ತಾಮ್ರದ ಪಾತ್ರೆಯು ನೀರಿನಲ್ಲಿರುವ ಕಲ್ಮಶಗಳನ್ನು ನಿವಾರಿಸಿ ನೀರನ್ನು ಶುದ್ಧೀಕರಿಸುತ್ತದೆ.
ಆದ್ದರಿಂದ ಕಡ್ಡಾಯವಾಗಿ ನೀರನ್ನು ತಾಮ್ರದ ಪಾತ್ರೆಯಲ್ಲಿ ಶೇಖರಿಸಿ ಇಡಬೇಕು ಆದರೆ ಹಾಲನ್ನು ಮಾತ್ರ ತಾಮ್ರದ ಪಾತ್ರೆಯಲ್ಲಿ ಶೇಖರಿಸಿಡುವುದಾಗಲಿ, ಬಳಸುವುದಾಗಲಿ ಮಾಡಬಾರದು. ತಾಮ್ರದ ಪಾತ್ರೆಯಲ್ಲಿನ ಹಾಲು ದೇಹದ ಆರೋಗ್ಯಕ್ಕೆ ಒಳ್ಳೆಯದಲ್ಲ.

ಹಿತ್ತಾಳೆ
ಆಹಾರವನ್ನು ಹಿತ್ತಾಳೆಯ ಪಾತ್ರೆಯಲ್ಲಿ ತಯಾರಿಸುವುದು ಮತ್ತು ಹಿತ್ತಾಳೆಯ ತಟ್ಟೆಗಳನ್ನು ಬಳಸುವುದು ಕೀಟ ಸಂಬಂಧಿ ಕಾಯಿಲೆಗಳಿಂದ ದೂರವಿಡುತ್ತದೆ. ಕಫ ಮತ್ತು ವಾತ ಸಂಬಂಧಿ ಕಾಯಿಲೆಗಳು ಕೂಡ ಇದರಿಂದ ದೂರವಾಗುತ್ತವೆ. ಹಿತ್ತಾಳೆಯ ಪಾತ್ರೆಗಳಲ್ಲಿ ಆಹಾರವನ್ನು ತಯಾರಿಸುವುದರಿಂದ ಜೀವಸತ್ವಗಳ ನಾಶ ಕೇವಲ ಏಳು ಶೇಕಡ ಮಾತ್ರ ಇರುತ್ತದೆ.

ಕಬ್ಬಿಣ
ದೇಹದ ಶಕ್ತಿ,ಸಾಮರ್ಥ್ಯಗಳನ್ನು ಹೆಚ್ಚಿಸಲು ಅವಶ್ಯಕತೆಗಳನ್ನು ಹೊಂದಲು ಕಬ್ಬಿಣದ ಪಾತ್ರೆಯಲ್ಲಿ ಆಹಾರವನ್ನು ತಯಾರಿಸುವುದು ಮತ್ತು ಬಳಸುವುದು ಅತ್ಯಂತ ಒಳ್ಳೆಯದು. ಕಬ್ಬಿಣ ಹಲವಾರು ಕಾಯಿಲೆಗಳನ್ನು ಗುಣಪಡಿಸುತ್ತದೆ. ಪಾಂಡು ರೋಗ ಎಂದು ಕರೆಯಲ್ಪಡುವ ತೊಂದರೆಯನ್ನು ಗುಣಪಡಿಸುವ ಶಕ್ತಿ ಕಬ್ಬಿಣಕ್ಕಿದೆ. ದೇಹದಲ್ಲಿ ಬಾವು ಮತ್ತು ಹಳದಿಗಟ್ಟುವಿಕೆಯನ್ನು ಕಬ್ಬಿಣದ ಬಳಕೆ ತಡೆಗಟ್ಟುತ್ತದೆ. ಕಾಮಾಲೆಯಂತಹ ಹಳದಿ ಕಾಮಣಿಯಂತಹ ಖಾಯಿಲೆಗಳನ್ನು ತಡೆಗಟ್ಟುತ್ತದೆ. ಕಬ್ಬಿಣದ ಹಂಚುಗಳ ಬಳಕೆ ನಮ್ಮಲ್ಲಿ ಅತಿ ಹೆಚ್ಚು. ನಮ್ಮ ತಾಯಂದಿರು ಕಬ್ಬಿಣದ ಪಾತ್ರೆಯಲ್ಲಿ ಮೆಹಂದಿ ಪುಡಿಯನ್ನು ಮತ್ತಿತರ ಕೆಲ ಸಾಮಗ್ರಿಗಳೊಂದಿಗೆ ರಾತ್ರಿ ಹೊತ್ತಿನಲ್ಲಿ ನೆನೆ ಇಟ್ಟು
ಮುಂಜಾನೆ ತಲೆಗೆ ಹಚ್ಚುವ ಮೂಲಕ ತಮ್ಮ ತಲೆ ಕೂದಲಿಗೆ ಕಬ್ಬಿಣದ ಅಂಶವನ್ನು ಪಡೆದುಕೊಳ್ಳುತ್ತಾರೆ ಆದರೆ ಕಬ್ಬಿಣದ ತಟ್ಟೆಯಲ್ಲಿ ಊಟ ಮಾಡಬಾರದು. ಕಬ್ಬಿಣದ ತಟ್ಟೆಯಲ್ಲಿ ಊಟ ಮಾಡುವುದರಿಂದ ಮೆದುಳು ಹಾನಿಗೊಳಗಾಗುತ್ತದೆ ಮತ್ತು ಜಾಣ್ಮೆ ಕಡಿಮೆಯಾಗುತ್ತದೆ.

ಸ್ಟೀಲ್
ಪ್ರಸ್ತುತ ದಿನಮಾನಗಳಲ್ಲಿ ಅತ್ಯಂತ ಜನಪ್ರಿಯವಾಗಿರುವ ಸ್ಟೀಲ್ ಪಾತ್ರೆ, ಲೋಟ, ತಟ್ಟೆ ಮತ್ತು ಇತರ ದಿನೋಪಯೋಗಿ ವಸ್ತುಗಳು ಬಳಕೆ ಹಾನಿಕರವಲ್ಲ. ಬಿಸಿ, ತಂಪು ಮತ್ತು ರಾಸಾಯನಿಕ ಕ್ರಿಯೆಗಳಿಗೆ ಅವು ಪ್ರತಿಕ್ರಿಯಿಸುವುದಿಲ್ಲ. ಈ ಪಾತ್ರೆಗಳ ಬಳಕೆಯಿಂದ ಯಾವುದೇ ರೀತಿಯ ಲಾಭವಿಲ್ಲವಾದರೂ ಹಾನಿ ಕೂಡ ಇಲ್ಲ. ಸುಮಾರು ಮೂರು ನಾಲ್ಕು ದಶಕಗಳ ಹಿಂದೆ ಮನೆ ಮನೆಯಲ್ಲಿ ತಮ್ಮ ಹೊಳಪಿನಿಂದ ಕಾಲಿರಿಸಿದ ಈ ಸ್ಟೀಲ್ ಸಾಮಾನುಗಳು ಇಂದಿಗೂ ತಮ್ಮ ಜನಪ್ರಿಯತೆಯನ್ನು ಕಳೆದುಕೊಳ್ಳದೆ ಇಂದಿಗೂ ನೆಗ್ಗದೆ, ಕುಗ್ಗದೆ, ಹಿಗ್ಗದೆ ಕಾರ್ಯನಿರತವಾಗಿದೆ.

ಅಲ್ಯೂಮಿನಿಯಂ
ಬಾಕ್ಸೈಟ್ ನಿಂದ ತಯಾರಾಗಿರುವ ಅಲ್ಯೂಮಿನಿಯಂ ಪಾತ್ರೆಗಳು ತಟ್ಟೆ ಲೋಟಗಳು ಬಳಸಲು ಯೋಗ್ಯವಲ್ಲ. ಈ ಹಿಂದಿನಿಂದಲೂ ಹಗುರವಾಗಿರುವ ಕಾರಣ ಮತ್ತು ಅತ್ಯಂತ ಕಡಿಮೆ ಬೆಲೆಯಲ್ಲಿ ದೊರೆಯುತ್ತವೆ ಎಂಬ ಕಾರಣಕ್ಕೆ ಇಂದಿಗೂ ಹಲವಾರು ಮನೆಗಳಲ್ಲಿ ತಮ್ಮ ಸ್ಥಾನವನ್ನು ಬಿಟ್ಟುಕೊಡದ ಅಲ್ಯೂಮಿನಿಯಂ ಪಾತ್ರೆಗಳ ಬಳಕೆ ಆರೋಗ್ಯಕ್ಕೆ ಒಳ್ಳೆಯದಲ್ಲ. ದೇಹಾರೋಗ್ಯವನ್ನು ಕಸಿಯುವ ಆಹಾರದಲ್ಲಿರುವ ಕಬ್ಬಿಣ ಮತ್ತು ಕ್ಯಾಲ್ಸಿಯಂ ಅಂಶವನ್ನು ಕರಗಿಸುವ ಶಕ್ತಿ ಅಲ್ಯೂಮಿನಿಯಂ ಪಾತ್ರೆಗಳಿಗಿದೆ. ಅಲುಮಿನಿಯಂ ಪಾತ್ರೆಗಳ ಬಳಕೆಯಿಂದ ಎಲುಬುಗಳು ಕ್ಷೀಣಿಸುವ, ಮಾನಸಿಕ ಅಸ್ವಸ್ಥತೆಗೊಳಗಾಗುವ ಪಿತ್ತಕೋಶ ಮತ್ತು ನರವ್ಯೂಹ ತೊಂದರೆಗೊಳಗಾಗುವ ಸಾಧ್ಯತೆ ಹೆಚ್ಚು. ಮೂತ್ರಕೋಶ ವೈಫಲ್ಯಕ್ಕೂ ಹಲವು ಬಾರಿ ಅಲ್ಯೂಮಿನಿಯಂ ಬಳಕೆ ಕಾರಣವಾಗುತ್ತದೆ. ಕ್ಷಯ ರೋಗ,ಅಸ್ತಮಾ, ಉಗ್ಗುವಿಕೆಯಂತಹ ಸಮಸ್ಯೆಗಳಿಗೆ ಅಲ್ಯುಮಿನಿಯಂ ಕಾರಣವಾಗುತ್ತದೆ.ಆಹಾರ ತಯಾರಿಸಲು ಅಲುಮಿನಿಯಂ ಪಾತ್ರೆಯನ್ನು ಬಳಸುವುದರಿಂದ ಆಹಾರದಲ್ಲಿನ ಶೇಕಡ 87 ರಷ್ಟು ಜೀವಸತ್ವಗಳು ನಾಶವಾಗುತ್ತವೆ ಎಂದರೆ ನಿಮಗೆ ಅಲುಮಿನಿಯಂ ಪಾತ್ರೆಯ ಬಳಕೆಯ ಅಡ್ಡ ಪರಿಣಾಮಗಳ ಗಂಭೀರತೆಯ ಅರಿವಾಗಬಹುದು.

ಮಣ್ಣಿನ ಪಾತ್ರೆಗಳು.
ನಮ್ಮ ಹಿಂದಿನ ಹಿರಿಯರು ಮೂಢರಲ್ಲ ಎಂಬುದಕ್ಕೆ ಸಾಕ್ಷಿ ಮಣ್ಣಿನ ಪಾತ್ರೆಗಳು. ಮಣ್ಣಿಂದಲೇ ಹುಟ್ಟಿ ಮಣ್ಣಲ್ಲೇ ಮಣ್ಣಾಗುವ ಮಣ್ಣಿನ ಪಾತ್ರೆಗಳ ಬಳಕೆ ಅತ್ಯಂತ ಶ್ರೇಷ್ಠ. ಎಲ್ಲ ಕಾಯಿಲೆಗಳನ್ನು ದೂರವಿಡುವ ಮಣ್ಣಿನ ಪಾತ್ರೆಗಳು, ಗಡಿಗೆ, ಕುಡಿಕೆಗಳಲ್ಲಿ ಆಹಾರ ತಯಾರಿಸಿದರೆ ಅದರಲ್ಲಿನ ಜೀವಸತ್ವಗಳನ್ನು ಸಂಪೂರ್ಣವಾಗಿ ಹಾಗೆಯೇ ಉಳಿಸುತ್ತವೆ. ಹಲವಾರು ಕಾಯಿಲೆಗಳನ್ನು ಗುಣಪಡಿಸುವ ಶಕ್ತಿಯು ಮಣ್ಣಿನ ಪಾತ್ರೆಗಳಿಗಿದೆ ಎಂಬುದನ್ನು ಇಂದಿನ ಆಧುನಿಕ ವಿಜ್ಞಾನವು ಪುಷ್ಟೀಕರಿಸುತ್ತದೆ.
ಆಯುರ್ವೇದದ ಪ್ರಕಾರ ಪೋಷಕಾಂಶಗಳು ರುಚಿಕರವಾದ ಆಹಾರವನ್ನು ತಯಾರಿಸುವ ನಿಟ್ಟಿನಲ್ಲಿ ನಿಧಾನವಾಗಿ ಬೇಯುವ ಪ್ರಕ್ರಿಯೆಯನ್ನು ಹೊಂದಿರುವ ಮಣ್ಣಿನ ಪಾತ್ರೆಗಳು ಆರೋಗ್ಯದ ದೃಷ್ಟಿಯಿಂದ ಬಹಳ ಉತ್ತಮ ಆಯ್ಕೆ. ಸಂಪೂರ್ಣ ಆರೋಗ್ಯ ಲಾಭಗಳನ್ನು ಕೊಡುವ ಮಣ್ಣಿನ ಪಾತ್ರೆಗಳ ಬಳಕೆಯನ್ನು ಹಾಲು ಮತ್ತು ಹಾಲಿನ ಇತರ ಪದಾರ್ಥಗಳನ್ನು ಕಾಪಿಡಲು ಬಳಸುವುದು ಅತ್ಯುತ್ತಮ. ಮಣ್ಣಿನ ಪಾತ್ರೆಯಲ್ಲಿ ತಯಾರಿಸಲಾಗುವ ಆಹಾರ ನೂರು ಶೇಕಡ ಜೀವ ಸತ್ವಗಳನ್ನು ಆಹಾರದಲ್ಲಿ ಉಳಿಸಿ ಆಹಾರಕ್ಕೆ ವಿಶಿಷ್ಟ ರುಚಿ ಮತ್ತು ಸ್ವಾದವನ್ನು ನೀಡುತ್ತದೆ.

ಭಾರತದ ಶ್ರೀಸಾಮಾನ್ಯನಿಗೆ ಚಿನ್ನ ಮತ್ತು ಬೆಳ್ಳಿಯ ಆಭರಣಗಳೇ ಗಗನಕುಸುಮವಾಗಿದ್ದು ಇನ್ನು ಚಿನ್ನ ಬೆಳ್ಳಿಯ ಪಾತ್ರೆಗಳಲ್ಲಿ ಆಹಾರ ಸೇವಿಸುವುದು ಕನಸಿನ ಮಾತು. ಆದ್ದರಿಂದ ಈ ಯೋಚನೆಯನ್ನು ಕೈಬಿಡೋಣ.
ಕಂಚು ತಾಮ್ರ ಮತ್ತು ಹಿತ್ತಾಳೆಯ ಪಾತ್ರೆಗಳು ಈ ಹಿಂದೆ ನಮ್ಮ ಹಿರಿಯರು ಬಳಸುತ್ತಿದ್ದು ಇದೀಗ ಅವುಗಳ ಭಾರದ ಕಾರಣ ಮತ್ತು ನಿರ್ವಹಣೆಯ ದೃಷ್ಟಿಯಿಂದ ಕೈ ಬಿಡಲಾಗಿದೆ. ಈ ಪಾತ್ರೆಗಳು ಸದಾ ಫಳ ಫಳ ಹೊಳೆಯುತ್ತಿರಬೇಕು ಎಂಬ ದೃಷ್ಟಿಯಿಂದ ಪ್ರತಿದಿನವೂ ನೀರನ್ನು ಶೇಖರಿಸುವ ಪಾತ್ರೆಗಳನ್ನು ಲೋಟಗಳನ್ನು ತೊಳೆದು ತನ್ಮೂಲಕ ಹೆಚ್ಚಿನ ಹಾನಿಗಳನ್ನು ನಮ್ಮ ತಾಯಂದಿರು ಮಾಡಿಕೊಳ್ಳುತ್ತಿದ್ದಾರೆ. ಈ ಹಿಂದೆ ನಮ್ಮ ಹಿರಿಯರು ವಾರಕ್ಕೊಮ್ಮೆ ತಾಮ್ರದ ಹಂಡೆ ತಪ್ಪೇಲಿಗಳನ್ನು ಸುಮ್ಮನೆ ಕೈಯಾಡಿಸಿ ತೊಳೆದರೆ ಅಮಾವಾಸ್ಯೆ ಮತ್ತು ಹುಣ್ಣಿಮೆಗೆ ಮಾತ್ರ ಹುಣಸೆ ಹಣ್ಣು ಮತ್ತು ಉಪ್ಪನ್ನು ಹಚ್ಚಿ ತಿಕ್ಕಿ ತೊಳೆಯುತ್ತಿದ್ದರು. ಆದರೆ ಎಲ್ಲವೂ ಫಳ ಫಳಿಸಬೇಕು ಎಂಬ ಭ್ರಮೆಯಲ್ಲಿ ಮಹಿಳೆಯರು ಪ್ರತಿದಿನವೂ ತೊಳೆದು ನಮಗೆ ಅವಶ್ಯಕತೆ ಇರುವ ಎರಡು ಶೇಕಡ ಅಂಶಕ್ಕಿಂತ ಹೆಚ್ಚು ಸರಿಸುಮಾರು ಶೇಕಡ 40ರಷ್ಟು ಈ ಲೋಹಗಳು ನಮ್ಮ ಹೊಟ್ಟೆಯನ್ನು ಸೇರುವ ಮೂಲಕ ಇನ್ನಿಲ್ಲದ ಅವಾಂತರವನ್ನು ಸೃಷ್ಟಿಸಲು ಕಾರಣರಾಗಿದ್ದಾರೆ.
ಇದು ಸಲ್ಲದು. ತಾಮ್ರ ಹಿತ್ತಾಳೆ ಮತ್ತು ಕಂಚಿನ ಪಾತ್ರೆಗಳನ್ನು ಬಳಸುವ ಆಸಕ್ತಿ ಮತ್ತು ಆಸೆ ನಿಮಗಿದ್ದರೆ, ಅವುಗಳನ್ನು ತಿಕ್ಕುವ ತೊಳೆಯುವ ಮತ್ತು ನಿರ್ವಹಿಸುವ ದೃಷ್ಟಿಯಲ್ಲಿ ನಮ್ಮ ಪುರಾತನರ ಹಾದಿಯನ್ನು ಅನುಸರಿಸಬೇಕು.

ಸ್ಟೀಲ್ ಪಾತ್ರೆಯ ಬಳಕೆ ಅಷ್ಟೇನೂ ಅಪೇಕ್ಷಣೀಯವಲ್ಲವಾದರೂ ನಿರ್ವಹಣೆಯ ದೃಷ್ಟಿಯಿಂದ ಅವುಗಳನ್ನು ಬಳಸುತ್ತಿದ್ದರೆ ಸರಿ ಆದರೆ ಮನೆಗಳ ಮುಂದೆ ಮಾರಾಟಕ್ಕೆ ಬರುವ( ಅವರದೇನು ತಪ್ಪಿಲ್ಲ ಬಿಡಿ! ಅದವರ ಹೊಟ್ಟೆಪಾಡು) ಹಳೆಯ ಪಾತ್ರೆಗಳನ್ನು ಬಟ್ಟೆಗಳನ್ನು ಕೊಟ್ಟು ಚೌಕಾಸಿ ಮಾಡಿ ಮೇಲೊಂದಷ್ಟು ದುಡ್ಡು ಕೊಟ್ಟು ಕೊಂಡುಕೊಂಡು ಸಂತಸಪಡುವ ಹೆಣ್ಣು ಮಕ್ಕಳಿಗೆ ಕಿವಿಮಾತು….. “ಹತ್ತು ಹೆರುವಲ್ಲಿ ಒಂದು ಮುತ್ತು ಹೆತ್ತೆ” ಎಂಬಂತೆ ಅಗ್ಗದ ಹತ್ತು ಪಾತ್ರೆಗಳನ್ನು ಖರೀದಿಸುವ ಬದಲು ಒಂದೊಳ್ಳೆಯ ಸ್ಟೀಲ್ ಪಾತ್ರೆಯನ್ನು ಖರೀದಿಸಿ. ‘ಬಳಸಿಕೊಂಡೆವದನೆ ನಾವು ಅದಕು ಇದಕು ಎದಕು’ ಎಂದು ಹೆಮ್ಮೆಯಿಂದ ಹೇಳೋಣ.
ಅಷ್ಟೇನೂ ಆಕರ್ಷಣೀಯವಲ್ಲ ಎಂದು ತೋರಿದರೂ ಆಹಾರದ ಸ್ವಾದವನ್ನು ಉಳಿಸುವ, ಬೆಳೆಸುವ ಮಣ್ಣಿನ ಪಾತ್ರೆಗಳನ್ನು ಬಳಸುವ ಮೂಲಕ ನಮ್ಮ ಹಿರಿಯರ ಸಂಸ್ಕೃತಿಯನ್ನು ಎತ್ತಿ ಹಿಡಿಯೋಣ ಎಂದು ಆಶಿಸುತ್ತಾ

ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್

Share This Article
error: Content is protected !!
";