Ad image

ತುಪ್ಪದ ಮಹಿಮೆಯ ಅರಿಯದೆ ಬೆಪ್ಪರಾಗದಿರಿ

Vijayanagara Vani
ತುಪ್ಪದ ಮಹಿಮೆಯ ಅರಿಯದೆ ಬೆಪ್ಪರಾಗದಿರಿ
ಆ ಹೆಣ್ಣು ಮಗಳು ಚರ್ಮದ ತೊಂದರೆಯಿಂದ ಬಳಲುತ್ತಿದ್ದಳು. ಎಕ್ಸಿಮಾದಂತೆ ಕಾಣುವ ತುಸು ಅಗಲವಾದ ಕೆಂಪಾದ ದೊಡ್ಡ ದೊಡ್ಡ ಕಲೆಗಳು ಆಕೆಯ ದೇಹದ ಎಲ್ಲೆಡೆ ಉಂಟಾಗಿತ್ತು. ಒಂದೇ ಸಮನೆ ನವೆಯಾಗುತ್ತಿತ್ತು. ಬಾಧೆಯನ್ನು ತಾಳಲಾರದೆ ಆಕೆ ಹಲವಾರು ವೈದ್ಯರನ್ನು ಭೇಟಿಯಾದರೂ ಕೂಡ ಪರಿಣಾಮ ಶೂನ್ಯವಾಗಿತ್ತು.
ಕೇಳಿದ ಎಲ್ಲ ಕಡೆಯಿಂದಲೂ ಕೇವಲ ಕಾಟನ್ ಬಟ್ಟೆಗಳನ್ನು ಧರಿಸುವ ಮತ್ತು ಯಾವುದೇ ರೀತಿಯಲ್ಲೂ ಬಿಸಿಲಿನಲ್ಲಿ ಓಡಾಡದಿರಲು ವೈದ್ಯರು ಸಲಹೆ ನೀಡಿದರು. ತನ್ನ ತೊಂದರೆಯ ಉಪಶಮನಕ್ಕಾಗಿ ಆಕೆ ಭೇಟಿಯಾಗದ ವೈದ್ಯರು ಇರಲಿಲ್ಲ, ತೆಗೆದುಕೊಳ್ಳಲಾಗದ ಔಷಧಿ ಚಿಕಿತ್ಸೆಗಳಿರಲಿಲ್ಲ. ಅಂತಿಮವಾಗಿ ಅದೊಂದು ದಿನ ಅಡುಗೆ ಮನೆಯಲ್ಲಿ ಏನೋ ಕೆಲಸ ಮಾಡುತ್ತಿರುವಾಗ ಆಕೆ ಈ ಹಿಂದೆ ಸ್ನೇಹಿತರು ಸಲಹೆ ನೀಡಿದಂತೆ ಆಕಳ ತುಪ್ಪವನ್ನು ಕಲೆಗಳು ಇದ್ದ ಜಾಗಕ್ಕೆಲ್ಲ ಸವರಿದಳು. ಸ್ವಲ್ಪಮಟ್ಟಿಗೆ ಉಪಶಮನ ದೊರೆತಂತಾಗಿ ಆಕೆ ಪ್ರತಿದಿನ ಒಂದೆರಡು ಚಮಚ ತುಪ್ಪದಿಂದ ತನ್ನ ದೇಹದ ಮೇಲೆ ಉಂಟಾಗುವ ಕೆಂಪು ಬಣ್ಣದ ಕಲೆಗಳಿಗೆ ಮಸಾಜ್ ಮಾಡಲಾರಂಭಿಸಿದಳು…. . ಆಶ್ಚರ್ಯವೆಂದರೆ ಕೆಲವೇ ದಿನಗಳಲ್ಲಿ ಆಕೆಯ ತೊಂದರೆ ಸಂಪೂರ್ಣ ಗುಣಮುಖವಾಯಿತು. ಈಗಲೂ ಕೂಡ ಪ್ರತಿದಿನವೂ ಆಕೆ ತುಪ್ಪವನ್ನು ಬಳಸುತ್ತಿದ್ದಾಳೆ.
ಮತ್ತೋರ್ವ ಹೆಣ್ಣು ಮಗಳಿಗೆ ವಿಪರೀತ ಸೀನು, ಅಲರ್ಜಿ ತೊಂದರೆಗಳು ಉಂಟಾಗಿ ಅಂದರೆ ಅನುಭವಿಸುತ್ತಿರುವಾಗ ಆಕೆಯ ಮಾವನವರು ನೀಡಿದ ಸಲಹೆಯಂತೆ ಹಳೆಯ ಹಸುವಿನ ತುಪ್ಪಕ್ಕೆ ಪಚ್ಚ ಕರ್ಪೂರವನ್ನು ಹಾಕಿ ಚೆನ್ನಾಗಿ ಕಲಸಿದ ಮಿಶ್ರಣಕ್ಕೆ ಪ್ರತಿದಿನ ರಾತ್ರಿ ಮಲಗುವಾಗ ಮೂಗಿನ ಎರಡೂ ಹೊರಳೆಗಳ ಆಳಕ್ಕೆ ತಲುಪುವಂತೆ ಒಂದೊಂದು ಹನಿ ತುಪ್ಪವನ್ನು ಹಾಕಿಕೊಂಡಳು ( ಇಲ್ಲವೇ ಸವರಿ). ಕೆಲವೇ ದಿನಗಳಲ್ಲಿ ಆಕೆ ತನಗುಂಟಾದ ಅಲರ್ಜಿ ತೊಂದರೆಯಿಂದ ಪಾರಾದಳು.
ಪತಿ ತೀರಿಕೊಂಡು ಕೇವಲ ನಾಲ್ಕೈದು ದಿನಗಳಾಗಿದ್ದು ಆ ಸಂದರ್ಭದಲ್ಲಿ ಮುಖದ ಒಂದು ಭಾಗದಲ್ಲಿ ಅದು ಮೂಗಿನ ಕೆಳಗೆ ಕಪ್ಪಾದ ಕಲೆಯೊಂದು ಆಕೆಗೆ ಗೋಚರವಾಯಿತು.. ಕೊಂಚ ಉರಿತವನ್ನು ಹೊಂದಿದ್ದರೂ ವೈದ್ಯಕೀಯ ಚಿಕಿತ್ಸೆ ಪಡೆಯಲು ಚರ್ಮ ತಜ್ಞರಲ್ಲಿ ಹೋಗುವ ಅವಕಾಶವೇ ಇಲ್ಲದ ಪರಿಸ್ಥಿತಿಯಲ್ಲಿ ತನ್ನಕ್ಕನ ಸಲಹೆಯಂತೆ ಕೊಂಚ ತುಪ್ಪವನ್ನು ಹಾಕಿ ಸವರಿಕೊಂಡಾಗ ಈ ತೊಂದರೆಯಿಂದ ಆಕೆಗೆ ಸಮಾಧಾನ ಮತ್ತು ಉಪಶಮನ ಒಟ್ಟಿಗೆ ದೊರೆಯಿತು.
ತೀವ್ರ ಬೆನ್ನು ನೋವಿನಿಂದ ಬಳಲುತ್ತಿದ್ದ ಮಹಿಳೆಗೆ ಆಕಳ/ಹಸು ತುಪ್ಪವನ್ನು ದೈನಂದಿನ ಆಹಾರ ಸೇವನೆಯ ಭಾಗವನ್ನಾಗಿಸಿಕೊಂಡಾಗ ಆಕೆಯ ಬೆನ್ನು ನೋವು ಹೇಳಹೆಸರಿಲ್ಲದಂತೆ ಕೆಲವೇ ದಿನಗಳಲ್ಲಿ ಮಾಯವಾಯಿತು.
ಮಲಬದ್ಧತೆಯಿಂದ ನರಳುತ್ತಿದ್ದ ಆ ವ್ಯಕ್ತಿಗೆ ಪ್ರತಿದಿನ ರಾತ್ರಿ ಬಿಸಿ ನೀರಿನಲ್ಲಿ ಒಂದು ಚಮಚ ತುಪ್ಪವನ್ನು ಹಾಕಿ ಸೇವಿಸಲು ಹೇಳಿದರು. ದೈನಂದಿನ ತುಪ್ಪದ ಸೇವನೆ ಆತ ಬಳಲುತ್ತಿದ್ದ ತೊಂದರೆಯಿಂದ ಮುಕ್ತಗೊಳಿಸಿತು.
ಇನ್ನು ಇತ್ತೀಚಿನ ದಿನಮಾನಗಳಲ್ಲಿ ಅತಿಯಾದ ಪಿಷ್ಟ ಪದಾರ್ಥಗಳ ಸೇವನೆಯಿಂದ ಉಂಟಾಗುತ್ತಿರುವ ರಕ್ತದೊತ್ತಡಕ್ಕೆ ಪರಿಹಾರವಾಗಿ ನಾವು ಸೇವಿಸುವ ಪ್ರತಿಯೊಂದು ಆಹಾರ ಪದಾರ್ಥಕ್ಕೆ ಅದರಲ್ಲೂ ಚಪಾತಿ, ಉಪ್ಪಿಟ್ಟು, ಅನ್ನದ ಅಡುಗೆಗಳನ್ನು ಸೇವಿಸುವ ಮುನ್ನ ಆಹಾರ ಪದಾರ್ಥಗಳಿಗೆ ಕನಿಷ್ಠ ಒಂದರ್ಧ ಚಮಚವಾದರೂ ತುಪ್ಪವನ್ನು ಹಾಕಿಕೊಂಡು ಆಹಾರ ಸೇವಿಸುವ ಮೂಲಕ ರಕ್ತದೊತ್ತಡವನ್ನು ನಿಯಂತ್ರಣಕ್ಕೆ ತರಬಹುದು.
ಮೇಲಿನ ಎಲ್ಲ ಕಾರಣಗಳಿಂದ ನಮ್ಮ ಆಯುರ್ವೇದ ಪಂಡಿತರು ಹಸುವಿನ ತುಪ್ಪವನ್ನು ಅತ್ಯಂತ ಶ್ರೇಷ್ಠವಾದ ಔಷಧೀಯ ಪದಾರ್ಥ ಎಂದು ಹೇಳುತ್ತಾರೆ. ಬಹಳಷ್ಟು ಆರೋಗ್ಯದ ಪ್ರಯೋಜನಗಳನ್ನು ಹೊಂದಿರುವ ತುಪ್ಪದ ಸೇವನೆ ಅನೇಕ ತೊಂದರೆಗಳಿಗೆ ಪರಿಹಾರವಾಗಿ ಕಾಣುತ್ತದೆ.
ನಿಧಾನವಾದ ಉರಿಯಲ್ಲಿ ಹಾಲನ್ನು ಕಾಯಿಸಿ ಅದರ ಕೆನೆ ತೆಗೆದು ಇಲ್ಲವೇ ಮೊಸರನ್ನು ಮಾಡಿ, ಆ ಮೊಸರನ್ನು ಚೆನ್ನಾಗಿ ಕಡೆದು ಮಜ್ಜಿಗೆಯನ್ನು ಮಾಡಿದಾಗ ತೇಲುವ ಬೆಣ್ಣೆಯನ್ನು ಮಜ್ಜಿಗೆಯಿಂದ ಬೇರ್ಪಡಿಸಿ ಸಂಗ್ರಹಿಸಿ ನಂತರ ಹದವಾದ ಮಂದ ಉರಿಯಲ್ಲಿ ಅದನ್ನು ಕಾಯಿಸಿ ಬೆಣ್ಣೆಯಲ್ಲಿರುವ ನೀರಿನ ಅಂಶವನ್ನು ಆವಿಯಾಗಿಸಿ ಶುದ್ಧವಾದ ತುಪ್ಪವನ್ನು ನಾವು ಪಡೆಯಬಹುದು. ಅತ್ಯಂತ ದುಬಾರಿಯಾಗಿರುವ ತುಪ್ಪವನ್ನು ಮಾರುಕಟ್ಟೆಯಲ್ಲಿ ಖರೀದಿಸುವ ತುಪ್ಪ ನೂರು ಶೇಕಡ ಶುದ್ಧವಾಗಿರುತ್ತದೆ ಎಂಬುದು ಖಾತ್ರಿಯಲ್ಲವಾದ್ದರಿಂದ….ಮನೆಯಲ್ಲಿ ತೆಗೆದು ಬಳಸುವುದು ವಿಹಿತ.
ಕಾಂತಿಯುತ ಮತ್ತು ಆರೋಗ್ಯಕರ ಚರ್ಮವನ್ನು ಪಡೆಯಲು ಅವಶ್ಯಕತೆವಾಗಿದ್ದು ನಮ್ಮ ದೇಹದ ಜೀರ್ಣಾಂಗ ವ್ಯವಸ್ಥೆಯನ್ನು ಸರಿಪಡಿಸುವ ನಿಟ್ಟಿನಲ್ಲಿಯೂ ಕೂಡ ತುಪ್ಪದ ಸೇವನೆ ಅವಶ್ಯಕವಾಗಿದೆ.
ತುಪ್ಪದಲ್ಲಿರುವ ಜಿಡ್ಡಿನ ಅಂಶವು ನೈಸರ್ಗಿಕ ಮಾಯಿಶ್ಚರೈಸರ್ ಆಗಿದ್ದು ದೇಹವನ್ನು ತಣ್ಣಗೆ ಇಡುವಲ್ಲಿ ಮತ್ತು ಚರ್ಮವನ್ನು ಸೂಕ್ಷ್ಮ ಮತ್ತು ನುಣು ಪಾದ ಕಾಂತಿಯುತ ಚರ್ಮವನ್ನು ಹೊಂದಲು ಸಹಾಯಕ.
*ತುಪ್ಪದಲ್ಲಿ ಉತ್ಕರ್ಷಣ ನಿರೋಧಕ ಶಕ್ತಿಗಳು ಅಧಿಕವಾಗಿ ಇರುವುದರಿಂದ ಪ್ರತಿದಿನವೂ ತುಪ್ಪವನ್ನು ಸೇವನೆ ಮಾಡುವ ಮೂಲಕ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು.
*ಬೇರೆ ಯಾವುದೇ ಆಹಾರ ಪದಾರ್ಥಗಳಲ್ಲಿ ಅಷ್ಟಾಗಿ ಇರದ ಆದರೆ ತುಪ್ಪದಲ್ಲಿ ಹೇರಳವಾಗಿ ಇರುವ ಒಮೆಗಾ 3 ಫ್ಯಾಟ್ಟಿ ಆಸಿಡ್ ಗಳು ದೇಹದಲ್ಲಿ ಸಂಗ್ರಹವಾಗುವ ಕೆಟ್ಟ ಕೊಬ್ಬಿನ ಅಂಶಗಳನ್ನು ತೊಡೆದು ಹಾಕಿ ಒಳ್ಳೆಯ ಕೊಲೆಸ್ಟ್ರಾಲನ್ನು ಸಂರಕ್ಷಿಸುತ್ತದೆ. ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುವ ತುಪ್ಪದ ಸೇವನೆ ಅತ್ಯುತ್ತಮವಾದ ಆಯ್ಕೆ.
ತುಪ್ಪದಲ್ಲಿರುವ ಮಧ್ಯಮ ಸರಪಳಿಯ ಕೊಬ್ಬಿನ ಆಮ್ಲಗಳು ಸೇವಿಸಿದ ಆಹಾರವನ್ನು ಬೇಗನೆ ಜೀರ್ಣವಾಗಿಸಿ ತ್ವರಿತವಾಗಿ ಶಕ್ತಿಯನ್ನು ಒದಗಿಸುತ್ತವೆ. ಇದರಿಂದ ಚಯಾಪಚಯ ಕ್ರಿಯೆಯು ಸರಿಯಾದ ಪ್ರಮಾಣದಲ್ಲಿ ನಡೆದು ದೇಹದ ತೂಕ ನಷ್ಟಕ್ಕೆ ಅನುಕೂಲವಾಗುತ್ತದೆ. ತುಪ್ಪದ ಸೇವನೆಯಿಂದ ಮೆದುಳು ಹೆಚ್ಚು ಕ್ರಿಯಾಶೀಲವಾಗಿರುತ್ತದೆ. ನಮ್ಮ ಸಾಂಪ್ರದಾಯಿಕ ಆಹಾರ ಪದಾರ್ಥದಲ್ಲಿ ಅದರಲ್ಲಿ ವಿಶೇಷವಾಗಿ ಸಿಹಿಯಲ್ಲಿ ತುಪ್ಪವನ್ನು ಕಡ್ಡಾಯವಾಗಿ ಬಳಸುವ ಮೂಲಕ ಅಜೀರ್ಣ, ಹೊಟ್ಟೆ ಭಾರದಂತಹ ತೊಂದರೆಗಳಿಂದ ತಪ್ಪಿಸಿಕೊಳ್ಳಬಹುದು. ಅಲ್ಲದೆ ಸುಲಭವಾಗಿ ಜೀವನವಾಗಲು ತುಪ್ಪ ಸಹಾಯಕ.
* ಇನ್ನು ಚಳಿಗಾಲದಲ್ಲಿ ಅತಿಯಾದ ಶ್ರೀತ ಗಾಳಿಯಿಂದಾಗಿ ಮನುಷ್ಯನ ತ್ವಚೆ ಒಣಗಿ ಶುಷ್ಕವಾಗುತ್ತದೆ. ಇಂತಹ ಸಮಯದಲ್ಲಿ ಒಡೆದ ಹಿಮ್ಮಡಿ, ಶುಷ್ಕ ಚರ್ಮದ ಸಮಸ್ಯೆಯಿಂದ ನಿವಾರಣೆ ಪಡೆಯಲು ತುಪ್ಪ ಅತ್ಯವಶ್ಯಕ.
* ತುಪ್ಪದಲ್ಲಿರುವ ರೋಗನಿರೋಧಕ ಶಕ್ತಿಯು ದೇಹವನ್ನು ಬೆಚ್ಚಗೆ ಇಡುವ ಮೂಲಕ ಚಳಿಯನ್ನು ತಡೆದುಕೊಳ್ಳುವ ಶಕ್ತಿಯನ್ನು ದೇಹಕ್ಕೆ ನೀಡುತ್ತದೆ. ತುಪ್ಪದಲ್ಲಿರುವ ಕೊಬ್ಬಿನ ಅಂಶ ಒಳ್ಳೆಯದು…. ಆದರೆ ಬಹಳಷ್ಟು ಜನರು ತುಪ್ಪ ತಿನ್ನುವುದರಿಂದ ದಪ್ಪಗಾಗುತ್ತೇವೆ ಎಂದು ತುಪ್ಪದ ಬಳಕೆಯನ್ನು ಕೈಬಿಡುತ್ತಾರೆ.
* ಇನ್ನು ಮೂಳೆಗಳ ಕೀಲುಗಳ ತೊಂದರೆಯಿಂದ ಪಾರಾಗಲು ದೇಹಕ್ಕೆ ಅತ್ಯವಶ್ಯಕವಾದ ಜಿಡ್ಡನ್ನು ಪೂರೈಸಲು ತುಪ್ಪದ ಬಳಕೆ ಅತ್ಯವಶ್ಯಕ.
* ವಾಹನಗಳಿಗೆ ಯಂತ್ರಗಳಿಗೆ ಗ್ರೀಸ್, ಎಣ್ಣೆಯಂತಹ
ಜಿಡ್ಡನ್ನು ಸವರುವ ಮೂಲಕ ನಾವು ಅವುಗಳು ಹೆಚ್ಚಿನ ರೀತಿಯಲ್ಲಿ ಸವಕಳಿಯಾಗುವುದನ್ನು ತಡೆಯುತ್ತೇವೆ. . ತುಪ್ಪದ ಬಳಕೆಯನ್ನು ಮಾಡುವುದರಿಂದ ಕೂಡ ನಾವು ಇದೇ ರೀತಿಯ ಲಾಭವನ್ನು ಹೊಂದುತ್ತೇವೆ.
* ವಿಟಮಿನ್ ಎ ಡಿ ಇ ಮತ್ತು ಕೆ ಗಳು ಸಮೃದ್ಧವಾಗಿ ಇರುವ ತುಪ್ಪದ ಬಳಕೆ ಮಾಡುವ ಮೂಲಕ ದಟ್ಟವಾದ ಕೂದಲನ್ನು ಪಡೆಯಬಹುದು. ತುಪ್ಪದಲ್ಲಿರುವ ಫ್ಯಾಟಿ ಆಸಿಡ್ ಗಳು ಕೂಡ ಕೂದಲ ಬೆಳವಣಿಗೆಗೆ ಅವಶ್ಯಕವಾದ ಆಕರಗಳನ್ನು ಒದಗಿಸುತ್ತದೆ.
ಅರೆ ತಲೆನೋವು ಮತ್ತು ಸೈನಸ್ ತೊಂದರೆಗಳಿಂದ ಪಾರಾಗಲು ತುಪ್ಪ ರಾಮಬಾಣದಂತೆ ಕಾರ್ಯನಿರ್ವಹಿಸುತ್ತದೆ.
ಸಂಸ್ಕೃತದಲ್ಲಿ ಫೃತ ಎಂದು ಕರೆಯಲ್ಪಡುವ ಈ ತುಪ್ಪವು ಆಯುರ್ವೇದ ಔಷಧಿಯ ರೂಪದಲ್ಲಿ, ಅಡುಗೆಯಲ್ಲಿ ಒಗ್ಗರಣೆಗೆ, ಪಿಷ್ಟ ಪದಾರ್ಥಗಳ ಮೇಲೆ ಸವರುವ ಮೂಲಕ ಇಲ್ಲವೇ ಹಾಕಿಕೊಂಡು ಆಹಾರವನ್ನು ಸೇವಿಸುವ ಮೂಲಕ ನಿಮ್ಮ ಆರೋಗ್ಯವನ್ನು ಕಾಯ್ದುಕೊಳ್ಳಿ.
ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ ಗದಗ್

Share This Article
error: Content is protected !!
";