ಸುಂದರವಾಗಿ ಕಾಣಿಸಿಕೊಳ್ಳಬೇಕು ಎನ್ನುವುದು ಎಲ್ಲರ ಆಸೆಯಾಗಿರುತ್ತದೆ. ಕೆಲವರು ನೈಸರ್ಗಿಕವಾಗಿ ಕೆಲವು ಟಿಪ್ಸ್‌ಗಳನ್ನು ಫಾಲೋ ಮಾಡಿ ತಮ್ಮ ಸೌಂದರ್ಯವನ್ನು ಕಾಪಾಡಿಕೊಂಡರೆ, ಇನ್ನೂ ಕೆಲವರು ಅತಿಯಾಗಿ ಕೃತಕ ಚಿಕಿತ್ಸೆಗಳಿಂದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳವ ಅಭ್ಯಾಸ ರೂಢಿಸಿಕೊಂಡಿರುತ್ತಾರೆ. ಕೇವಲ ಮಹಿಳೆಯರು ಮಾತ್ರವಲ್ಲ..ಪುರುಷರು ಕೂಡ ಇದಕ್ಕೆ ಹೊರತಲ್ಲ.
ಸ್ಪಾ, ಬ್ಯೂಟಿಪಾಲರ್ ಅಥವಾ ಸ್ಕಿನ್ ಕೇರ್ ಸೆಂಟರ್‌ನಲ್ಲಿ ಸಿಗುವ ಚಿಕಿತ್ಸೆಯನ್ನು ಪಡೆದು ಮುಖದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಕೆಲವರು ಪ್ರಯತ್ನಿಸುತ್ತಾರೆ. ಆದರೆ ಈ ರೀತಿಯ ಕೆಲವು ಚಿಕಿತ್ಸೆ ಜೀವಕ್ಕೆ ಆಪತ್ತು ತರಬಹುದು. ಇಂಥಹದ್ದೇ ಆಘಾತಕಾರಿ ಘಟನೆಯೊಂದು ನಡೆಸಿದ್ದು, ಫೇಶಿಯಲ್ ಮಾಡಿಸಿಕೊಂಡ ಮೂವರು ಮಹಿಳೆಯರಿಗೆ ಎಚ್‌ಐವಿ ತಗುಲಿದೆ ಎಂಬ ಆಘಾತಕಾರಿ ವಿಚಾರ ವರದಿಯಾಗಿದೆ.
ಮುಖದ ಸೌಂದರ್ಯ ಹೆಚ್ಚಿಸಿಕೊಳ್ಳಲು ಮಾಡಿಸಿಕೊಂಡ ಫೇಶಿಯಲ್ ಮುಖಾಂತರ ಮಹಿಳೆಯರಿಗೆ ಎಚ್‌ಐವಿ ರೋಗ ತಗುಲಿದೆ. ಅಮೆರಿಕದ ನ್ಯೂ ಮೆಕ್ಸಿಕೋ ಸ್ಪಾದಲ್ಲಿ ಕಾಸ್ಕೆಟಿಕ್ ಇಂಜೆಕ್ಷನ್ ಪ್ರೊಸೀಜರ್ ಮೂಲಕ ಮಾಡಿದ ವ್ಯಾಂಪೈರ್ ಫೇಶಿಯಲ್ ಮಾಡಿಸಿಕೊಂಡ ಮಹಿಳೆಯರಿಗೆ ಎಚ್‌ಐವಿ ಬಂದಿದ್ದು, ಮಹಿಳೆಯರು ಜಾಗ್ರತೆ ವಹಿಸುವಂತೆ ಅಮೆರಿಕದ ರೋಗ ನಿಯಂತ್ರಣ ಕೇಂದ್ರವು ಮಾಹಿತಿ ನೀಡಿದೆ. ವ್ಯಾಂಪೈರ್ ಫೇಶಿಯಲ್ ಅನ್ನು ರಕ್ತಪಿಶಾಚಿ ಫೇಶಿಯಲ್ ಎಂದೂ ಸಹ ಕರೆಯಲಾಗುತ್ತದೆ. ಸೂಜಿ ಅಥವಾ ಇಂಜೆಕ್ಷನ್ ಬಳಸಿ ಮಹಿಳೆಯರ ಮುಖದ ಮೇಲಿನ ಸುಕ್ಕು ಮಾಯಮಾಡುವುದು ಹಾಗೂ ವಯಸ್ಸಾಗಿರುವುದು ಕಾಣದಂತೆ ಮಾಡುವ ವಿಧಾನವೇ ವ್ಯಾಂಪೈರ್ ಫೇಶಿಯಲ್ ಆಗಿದೆ. 40 ವರ್ಷ ದಾಟಿದ ಹೆಚ್ಚಿನ ಮಹಿಳೆಯರು ಇದನ್ನು ಮಾಡಿಸಿಕೊಳ್ಳುತ್ತಾರೆ. ತಮ್ಮ ವಯಸ್ಸನ್ನು ಮರೆಮಾಚಲು ಹಾಗೂ ಮುಖದ ಸೌಂದರ್ಯವನ್ನು ಯುವತಿಯರಂತೆ ಕಾಪಾಡಿಕೊಳ್ಳಲು ವಿದೇಶದಲ್ಲಿ ಅನೇಕ ಮಹಿಳೆಯರು ಈ ಫೇಶಿಯಲ್ ಮೊರೆ ಹೋಗುತ್ತಾರೆ.
ಇದು ಬಹಳ ಕಡಿಮೆ ಬೆಲೆಗೆ ಸಿಗುವ ಫೇಶಿಯಲ್ ಆಗಿದ್ದು, ಇದನ್ನು ಒಮ್ಮೆ ಮಾಡಿಸಿಕೊಂಡರೆ ಕೆಲವೇ ಸಮಯದಲ್ಲಿ ಮುಖದ ಮೇಲಿನ ಸುಕ್ಕು ಮಾಯವಾಗುತ್ತದೆ. ಹೀಗಾಗಿ ಹೆಚ್ಚಿನ ಜನರು ಮಾಡಿಸಿಕೊಳ್ಳುತ್ತಾರೆ. ಆದರೆ ಚಿರ ಯೌವನದ ಸೌಂದರ್ಯ ಪಡೆಯಲು ಹೋದ ಮಹಿಳೆಯರು ಈಗ ಜೀವಕ್ಕೆ ಕುತ್ತು ತಂದುಕೊಂಡಿದ್ದು, ಕಾಯಿಲೆಗೆ ತುತ್ತಾಗಿದ್ದಾರೆ.ಇನ್ನು ವ್ಯಾಂಪೈರ್ ಫೇಶಿಯಲ್‌ಲ್ಲಿ ಕಾಸ್ಮೆಟಿಕ್ ಇಂಜೆಕ್ಷನ್ ಪ್ರಕ್ರಿಯೆಯಲ್ಲಿ ಮಹಿಳೆಯರಿಗೆ ಹೆಚ್ಐವಿ ಸೋಂಕು ತಗುಲಿರಬಹುದು ಎಂದು ಅಂದಾಜಿಸಲಾಗಿದೆ. ಹೀಗಾಗಿ ತ್ವಚೆಯ ಸೌಂದರ್ಯಕ್ಕಾಗಿ ಮಾರು ಹೋಗದೇ ಚಿಕಿತ್ಸೆಗಳನ್ನು ಪಡೆಯುವಾಗ ಎಚ್ಚರವಹಿಸಬೇಕಾಗಿದೆ.