Ad image

ವಿಧಾನ ಪರಿಷತ್ ಚುನಾವಣೆ ಘೋಷಣೆ: ನೀತಿ ನಿಯಮಗಳು ಕೇಳಗಿನಂತಿವೆ

Vijayanagara Vani
ವಿಧಾನ ಪರಿಷತ್ ಚುನಾವಣೆ ಘೋಷಣೆ: ನೀತಿ ನಿಯಮಗಳು ಕೇಳಗಿನಂತಿವೆ

ಕೇಂದ್ರ ಚುನಾವಣಾ ಆಯೋಗ ಲೋಕಸಭೆ ಚುನಾವಣೆ ಹೊತ್ತಿನಲ್ಲಿಯೇ ಕರ್ನಾಟಕ ವಿಧಾನ ಪರಿಷತ್ತಿನ 6 ಕ್ಷೇತ್ರಗಳಿಗೆ ಚುನಾವಣೆ ದಿನಾಂಕ ಘೋಷಣೆ ಮಾಡಿದೆ. ವೇಳಾಪಟ್ಟಿಯ ಪ್ರಕಾರ ಜೂನ್ 3ರಂದು ಮತದಾನ ನಡೆಯಲಿದ್ದು, ಜೂನ್ 6ರಂದು ಮತ ಎಣಿಕೆ ನಡೆಯಲಿದೆ.

- Advertisement -
Ad imageAd image

ಈಶಾನ್ಯ ಪದವೀಧರ, ನೈರುತ್ಯ ಪದವೀಧರ, ಬೆಂಗಳೂರು ಪದವೀಧರ ಕ್ಷೇತ್ರಗಳು ಮತ್ತು ಆಗ್ನೇಯ ಶಿಕ್ಷಕರು, ನೈರುತ್ಯ ಶಿಕ್ಷಕರು, ದಕ್ಷಿಣ ಶಿಕ್ಷಕರು ಸೇರಿ ಒಟ್ಟು 6 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಮೇ 9ರಂದು ಅಧಿಸೂಚನೆ ಹೊರಡಿಸಲಾಗುತ್ತದೆ. ಮೇ 16 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ.

ಯಾರು ಚುನಾವಣೆಗೆ ಸ್ಪರ್ಧಿಸಬಹುದು: ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸುವ ವ್ಯಕ್ತಿಗಳ ವಯಸ್ಸು 30 ವರ್ಷಗಳಿಗೆ ಕಡಿಮೆ ಇರಕೂಡದು ಮತ್ತು ಅವರು ಕರ್ನಾಟಕದ ಯಾವುದಾದರು ಒಂದು ವಿಧಾನಸಭಾ ಕ್ಷೇತ್ರದಲ್ಲಿ ಮತದಾರರಾಗಿರಬೇಕು ಮತ್ತು ಅವರು ಯಾವುದೇ ಕಾನೂನಿನ ಅಡಿಯಲ್ಲಿ ಅನರ್ಹರಾಗಿರಬಾರದು. ಚಾಲ್ತಿಯಲ್ಲಿರುವ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ನೋಂದಾಯಿತವಾಗಿರುವ ಬಗ್ಗೆ ಸಂಬಂಧಿಸಿದ ಮತದಾರರ ನೋಂದಣಾಧಿಕಾರಿ/ ಸಹಾಯಕ ಮತದಾರರ ನೋಂದಣಾಧಿಕಾರಿಗಳಿಂದ ಪಡೆದ ಮತದಾರರ ಪಟ್ಟಿಯ ದೃಢೀಕೃತ ನಕಲನ್ನು ಹಾಜರುಪಡಿಸಬೇಕು. ಚುನಾವಣೆಗೆ ಸ್ಪರ್ಧಿಸಲು ಇಚ್ಚಿಸುವ ಅಭ್ಯರ್ಥಿಗಳು ಮೇ 9ರಿಂದ ಮೇ 16 ರ ತನಕ (ಸಾರ್ವತ್ರಿಕ ರಜಾ ದಿನಗಳನ್ನು ಹೊರತುಪಡಿಸಿ) ಆಯಾ ವಿಭಾಗದ ವ್ಯಾಪ್ತಿಯ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ನಾಮಪತ್ರ ಸಲ್ಲಿಸಬಹುದು.

ನಾಮಪತ್ರಗಳ ನಮೂನೆಗಳನ್ನು ಪ್ರಾದೇಶಿಕ ಆಯುಕ್ತರ ಕಚೇರಿಯಿಂದ ಪಡೆಯಬಹುದು. ಈ ಚುನಾವಣೆಯಲ್ಲಿ ಸ್ಪರ್ಧಿಸಲಿಚ್ಛಿಸುವವರು 1951ರ ಪ್ರಜಾ ಪ್ರಾತಿನಿಧ್ಯ ಅಧಿನಿಯಮದ 33ನೇ ನಿಯಮದ ಪ್ರಕಾರ ಪ್ರತಿ ಅಭ್ಯರ್ಥಿಯ ನಾಮಪತ್ರದಲ್ಲಿ ಸಂಬಂಧಿಸಿದ ಕ್ಷೇತ್ರದ ಮತದಾರರ ಪಟ್ಟಿಯಲ್ಲಿರುವ ಕನಿಷ್ಠ 10 ಮತದಾರರು ಪ್ರಸ್ತಾಪಕರಾಗಿ (ಪ್ರೊಪೋಸರ್) ಸಹಿ ಮಾಡಿರಬೇಕು.

ಪ್ರತಿ ಅಭ್ಯರ್ಥಿ ರೂ.10 ಸಾವಿರ ಠೇವಣಿ ಮಾಡಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದವರು ರೂ. 5 ಸಾವಿರ ಠೇವಣಿ ಮಾಡಬೇಕು. ಅಭ್ಯರ್ಥಿಯು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿದ್ದಲ್ಲಿ ಸಕ್ಷಮ ಪ್ರಾಧಿಕಾರದಿಂದ ಪಡೆದ ಜಾತಿ ದೃಢೀಕರಣ ಪತ್ರ ಲಗತ್ತಿಸಬೇಕು. ಅಭ್ಯರ್ಥಿಗಳು ಭಾರತ ಚುನಾವಣಾ ಆಯೋಗ ನಿಗದಿಪಡಿಸಿರುವ ನಮೂನೆಯಲ್ಲಿ ನಾಮಪತ್ರ ಮತ್ತು ನಿಗಧಿಪಡಿಸಿದ ನಮೂನೆಗಳಲ್ಲಿ ನೋಟರಿಯವರಿಂದ ಪ್ರಮಾಣೀಕರಿಸಿದ ಪ್ರಮಾಣ ಪತ್ರವನ್ನು ನಾಮಪತ್ರದೊಂದಿಗೆ ಲಗತ್ತಿಸಿ ಸಲ್ಲಿಸಬೇಕು. ನಾಮಪತ್ರಗಳನ್ನು ಸಲ್ಲಿಸುವ ಅಭ್ಯರ್ಥಿಗಳು ರಾಜಕೀಯ ಪಕ್ಷಗಳಿಂದ ಸ್ಪರ್ಧಿಸಲು ಇಚ್ಛಿಸುವ ಸಂಬಂಧದಲ್ಲಿ ಆಯೋಗ ನಿಗಧಿಪಡಿಸಿರುವ ಪತ್ರ ಎಎ, ಬಿಬಿ ಗಳನ್ನು ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನಾಂಕವಾದ ಮೇ 16ರ ಮಧ್ಯಾಹ್ನ 3 ಗಂಟೆಯೊಳಗೆ ಸಲ್ಲಿಸಬೇಕು.

ಅಭ್ಯರ್ಥಿಗಳು ನಾಮಪತ್ರಗಳನ್ನು ಸಲ್ಲಿಸುವ ಸಂದರ್ಭದಲ್ಲಿ ಚುನಾವಣಾಧಿಕಾರಿಗಳ ಕಚೇರಿಗೆ ಅಭ್ಯರ್ಥಿ ಹಾಗೂ ಇತರೆ 4 ಜನ, ಅಂದರೆ ಅವರ ಸೂಚಕರು ಸೇರಿದಂತೆ ಒಟ್ಟು 5 ಜನರಿಗೆ ಮಾತ್ರ ಪ್ರವೇಶ ಇರುತ್ತದೆ.

Share This Article
error: Content is protected !!
";