Ad image

॥ ಸೂರ್ಯಸುಗುಣಾರ್ಯ ಶ್ರೀವಿಜಯೀಂದ್ರತೀರ್ಥರು |

Vijayanagara Vani
॥ ಸೂರ್ಯಸುಗುಣಾರ್ಯ ಶ್ರೀವಿಜಯೀಂದ್ರತೀರ್ಥರು |

ಶ್ರೀಮದಾಚಾರ್ಯರ ಸತ್ಪರಂಪರೆಯಲ್ಲಿ ವಿರಾಜಮಾನರಾದ ಶ್ರೀವಿಜಯೀಂದ್ರತೀರ್ಥ ಶ್ರೀಪಾದಂಗಳವರ ವ್ಯಕ್ತಿತ್ವ ಅಪೂರ್ವವಾದುದು. ಮಾಧ್ವವಾಜ್ಞಯಕ್ಕೆ ಶ್ರೀವಿಜಯಿಂದ್ರತೀರ್ಥರ ಕೊಡುಗೆ ಅಪಾರ. 104 ಗ್ರಂಥಗಳನ್ನು ರಚಿಸುವ ಮೂಲಕ ಮಾಧ್ವಸಿದ್ಧಾಂತವನ್ನು ಭದ್ರಬುನಾದಿಯ ಮೇಲೆ ತಂದರೆಂದರೆ ಅತಿಶಯೋಕ್ತಿಯಾಗಲಾರದು.

ಶ್ರೀವಿಜಯೀಂದ್ರರ ಜನನ ಕ್ರಿ.ಶ. 1517ರಲ್ಲಿ ಪೂರ್ವಾಶ್ರಮದ ಹೆಸರು ವಿಠಲಾಚಾರ್ಯರು, ವಿಠಲಾಚಾರ್ಯರು ಇನ್ನೂ ಬಾಲಕರಿರುವಾಗಲೇ ಅತಿ ಮೇಧಾವಿಗಳಾಗಿದ್ದರು. ವಿಜಯನಗರದ ವಿಶ್ವವಿದ್ಯಾಲಯಕ್ಕೆ ಓದಲು ಬಂದ ವಿಠಲಾಚಾರ್ಯರನ್ನು ನೋಡಿ ಗುರು ವ್ಯಾಸಮುನಿಗಳು ಆನಂದ ಪಟ್ಟರು. ವಿಠಲಾಚಾರ್ಯರನ್ನು ತಮ್ಮ ಹತ್ತಿರವೇ ಇರಿಸಿಕೊಂಡರು. ವೇದಾಂಗ, ನ್ಯಾಯ, ಇತಿಹಾಸ, ಮೀಮಾಂಸಾದಿ ಸಕಲ ಶಾಸ್ತ್ರಗಳಲ್ಲಿ ಪರಂಗತರನ್ನಾಗಿ ಮಾಡಿದರು. ವೇದಾಂತ ಅಭಿಧಾನದಿಂದ ಅವರ ಕೈಯೇ ಮೇಲು. ಶ್ರೀವ್ಯಾಸರಾಜರು ‘ವಿಷ್ಣುತೀರ್ಥ’ ರೆಂಬ ಅಭಿಮಾನದಿಂದ ವಿಠಲಾಚಾರ್ಯರಿಗೆ ಸನ್ಯಾಸಾಶ್ರಮ ಅನುಗ್ರಹಿಸಿದ್ದು ಅವರ 8ನೇ ವರ್ಷದಲ್ಲಿ, ಶ್ರೀವ್ಯಾಸರಾಜರಲ್ಲಿ ವಿದ್ಯಾಭ್ಯಾಸ ಕ್ರಿ.ಶ. 1522 ರಿಂದ 1535 ರವರೆಗೆ.

ಶ್ರೀವ್ಯಾಸರಾಜರಿಂದ ಸನ್ಯಾಸ್ತರಾಗಿದ್ದ ಶ್ರೀ.ವಿಷ್ಣುತೀರ್ಥರನ್ನು ಸ್ವೀಕರಿಸಿ ದಂಡಪಲ್ಲಟ, ಮಂತ್ರಮುದ್ರಾದಾರಣೆ, ಗುರೂಪದೇಶಾದಿಗಳಿಂದ ಅವರನ್ನು ‘ಶ್ರೀವಿಜಯೀಂದ್ರತೀರ್ಥ’ ರೆಂಬ ಅಭಿಧಾನದಿಂದ ಶ್ರೀಸುರೇಂದ್ರತೀರ್ಥರು 1530 ರಲ್ಲಿ ತಮ್ಮ ಶಿಷ್ಯರನ್ನಾಗಿ ಮಾಡಿಕೊಂಡರು.

ಶ್ರೀಸುರೇಂದ್ರತೀರ್ಥರೊಡನೆ ಹೊರಟು ಕುಂಭಕೋಣಕ್ಕೆ ಬಂದು ಅಲ್ಲಿ ವೀರಶೈವ ಸನ್ಯಾಸಿಗಳನ್ನು ವಾದದಲ್ಲಿ ಜಯಿಸಿದರು. ವಿಜಯನಗರದ ಅರಸರ ತಂಜಾವೂರು ಮಾಂಡಲಿಕನ ಆಡಳಿತಕ್ಕೆ ಸೇರಿದ್ದ ಕುಂಭಕೋಣ ಸಕಲ ಸಂಪತ್ಪರಿತವಾಗಿತ್ತು. ಅಲ್ಲಿ ಸುಪ್ರಸಿದ್ಧ ಪಂಡಿತರು ವಾಸಿಸುತ್ತಿದರು. ವಿದ್ಯೆಗೆ ದಕ್ಷಿಣಕಾಶಿ ಎಂದು ಅದು ಪಖ್ಯಾತವಾಗಿತ್ತು. ಶೈವಾದೈತ ಮತಾಚಾರ್ಯರಾದ ಅಪ್ಪಯ್ಯದೀಕ್ಷಿತರು ಅಲ್ಲೆ ನೆಲೆಸಿದ್ದರು. ವಿಜಯನಗರದ ಅರಸರಿಂದ ಮನ್ನಣೆ ಪಡೆದ ‘ಎಮ್ಮೆ ಬಸವ’ ಎಂಬ ವೀರಶೈವ ಮಠಾಧಿಪತಿ ಬಹಳ ಅಟಹಾಸದಿಂದ ಕುಂಭಕೋಣದಲ್ಲೇ ಇರುತ್ತಿದ್ದುದ್ದಲ್ಲದೆ ಅಲ್ಲಿಯೇ ಕುಂಭೇಶ್ವರಾದಿ ದೇವಾಲಯಗಳ ಅಧಿಕಾರವನ್ನೆಲ್ಲ ತಾನೇ ವಹಿಸಿದ್ದ. ಅವನನ್ನು ಎದುರಿಸುವ ಧೈರ್ಯ ಯಾರಿಗೂ ಇರಲಿಲ್ಲ. ಶ್ರೀಗಳವರು ವ್ಯಾಕಾರ್ಥಕ್ಕಾಗಿ ಹೇಳಿಕಳುಹಿಸಿದ ವಿಷಯ ಕೇಳಿ ಅವರೆಲ್ಲರಿಗೂ ಆನಂದವಾಯಿತು. ಶ್ರೀಗಳವರನ್ನೇ ಅಲ್ಪಕಾಲದಲ್ಲೇ ಸೋಲಿಸಬಹುದೆಂದು ಜಂಬಕೊಚ್ಚಿಕೊಂಡ. ವ್ಯಾಕಾರ್ಥ ವಿಚಾರವಾಗಬೇಕೆಂದು ವ್ಯವಸ್ಥೆಯಾಯಿತು. ಸೋತವನು ಗೆದ್ದವರ ಶಿಷ್ಯರಾಗಬೇಕೆಂದು ಸಮಯ ಬಂಧವಾಯಿತು. ಆ ಊರಿನ ಪಂಡಿತರೆಲ್ಲ ಬಂದು ಸೇರಿದರು. ಚರ್ಚೆ ಆರಂಭವಾಯಿತು.

ಶೈವ ಸನ್ಯಾಸಿಯು ಉತ್ತಮ ಪಂಡಿತನೇ. ಅವನು ಅನೇಕ ಪುರಾಣಗಳ, ಶಾಸ್ತ್ರಗಳ ಆಧಾರದಿಂದ ಯುಕ್ತಿ ವಿನ್ಯಾಸ, ಮಾಡಿ ತನ್ನ ಮತವನ್ನು ಸ್ಥಾಪಿತಸತೊಡಗಿದ್ದ. ಶ್ರೀಗಳವರು ಅವನ ವಾದಗಳನ್ನೆಲ್ಲ ಖಂಡಿಸಿ ವಾದಿಸಿದರು. ಹನ್ನೊಂದು ದಿನಗಳವರೆಗೆ ವಾದ-ವಿವಾದ ನಡೆಯಿತು.

ಕೊನೆಗೆ ವೀರಶೈವ ಸನ್ಯಾಸಿಯ ಪಕ್ಷ ಬಲಹೀನವಾಗಿ ಅವನು ನಿರುತ್ತರನಾದ. ಸಮಯ ಬಂಧದ ಪ್ರಕಾರ ಅವನು ಶ್ರೀಗಳವರ ಶಿಷ್ಯನಾಗಬೇಕಿತ್ತು. ಆದರೆ ರಾತ್ರೋ ರಾತ್ರಿ ಆ ಸನ್ಯಾಸಿ ಹೇಳದೆ ಕೇಳದೆ ಅಲ್ಲಿಂದ ಮುಖ ಮರೆಸಿಕೊಂಡು ಓಡಿಹೋದ. ಅವನ ಸಂಸ್ಥಾನದ ಐಶ್ವರ್ಯ, ಗೌರವವೆಲ್ಲವೂ ಶ್ರೀಗಳವರಿಗೆ ಪ್ರಾಪ್ತವಾದವು. ಶ್ರೀಗಳವರು ಆ ಶೈವ ಮಠವನ್ನೇ ತಮ್ಮ ಮಠವನ್ನಾಗಿ ಮಾಡಿಕೊಂಡರು. ಕುಂಭೇಶ್ವರ ದೇವಸ್ಥಾನದಲ್ಲಿ ತಮ್ಮ ಅಧಿಕಾರವನ್ನು ಸ್ಥಾಪಿಸಿದರು.

ಮುಂದೆ ಇವರು ಆಂದ್ರ, ಕರ್ನಾಟಕ ದೇಶದಲ್ಲಿಯೂ ಸಂಚರಿಸಿದರು. ಹೋದೆಡೆಯಲೆಲ್ಲ ಮೀಮಾಂಸಾ, ನ್ಯಾಯ, ಜೋತಿಷ್ಯ, ಸಾಹಿತ್ಯ, ಆಯುರ್ವೇದಾದಿ ಎಲ್ಲ ದರ್ಶನಗಳಲ್ಲಿ ಪಂಡಿತರಾದ ವಾದಿಗಳನ್ನೆಲ್ಲ ಜಯಿಸಿದರು. ತಂತ್ರ, ಮಂತ್ರ ಬಲ್ಲ ತಾಂತ್ರಿಕರೂ ಶ್ರೀಗಳವರ ಮುಂದೆ ಮೂಕರಾದರು. ಹೀಗೆ ಸರ್ವತ್ರ ಚತುಃಷಷ್ಠಿ ವಿದ್ಯೆಗಳಲ್ಲೂ ಶ್ರೀಗಳವರು ಶ್ರೇಷ್ಠತೆ ಎನಿಸಿದರು. ಶ್ರೀಗಳವರ ಚುತುಃಷಷ್ಠಿ ಕಲೆಗಳಲ್ಲಿನ ಪಾಂಡಿತ್ಯ ಅಸಾಧಾರಣವಾದುದು. ಪರಕಾಯ ಪ್ರವೇಶ, ಆಕರ್ಷಣ, ಉಚ್ಚಾಟನ, ಜಲಸ್ತಂಭ, ಅಗ್ನಿಸ್ತಂಭವೇ ಮೊದಲಾದ ಅಮಾನುಷ ಕೃತ್ಯಗಳನ್ನು ಅರವತ್ತು ನಾಲ್ಕು ಕಲೆಗಳಲ್ಲನ್ನೆ ಸೇವಿಸಿದ್ದಾರೆ.

ದೈತ ವೇದಾಂತ ಪ್ರಪಂಚದಲ್ಲಿ ಅತಿಶಯ ಪ್ರಭಾವನ್ನು ಬೀರಿ, ಶ್ರೀಮನ್ಮಧ್ವಾಚಾರ್ಯರ ಪೀಠವನ್ನಲಂಕರಿಸಿ, ವೇದಾಂತ ಸಾಮ್ರಾಜ್ಯವನ್ನಾಳಿದ ಮಹಾಮಹಿಮರಲ್ಲಿ ಶ್ರೀವಿಜಯೀಂದ್ರತೀರ್ಥರು ಒಬ್ಬರಾಗಿದ್ದಾರೆ. ಅವರು ರಚನೆಯ (104) ಗ್ರಂಥಗಳು ಔಚಿತ್ಯಪೂರ್ಣವೂ ಅನುಪಮವೂ ಆಗಿರುತ್ತದೆ. ಅಂತಹ ಅನೇಕ ಗ್ರಂಥಗಳಲ್ಲಿ ‘ಸರ್ವಸಿದ್ಧಾಂತ ಸಾರಾ ವಿವೇಚನ’, ಗ್ರಂಥವು ಭಾರತೀಯ ತತ್ವಶಾಸ್ತ್ರ ಇತಿಹಾಸಕ್ಕೆ ಮಹತ್ಸವಾದ ಕೋಡುಗೆಯನ್ನಿತ್ತಿದೆ.

ಶ್ರೀವಿಜಯೀಂದ್ರರು ತಮ್ಮ 97ನೇ ವಯಸ್ಸಿನಲ್ಲಿ ಶ್ರೀಸುಧೀಂದ್ರರಿಗೆ ಮಹಾ ಸಂಸ್ಥಾನವನ್ನು ವಹಿಸಿಕೊಟ್ಟು ಕುಂಭಕೋಣದಲ್ಲಿ ಆನಂದ ನಾಮ ಸಂ|| ಜೇಷ್ಠ ಬಹುಳ ತ್ರಯೋದಶಿ (ಕ್ರಿ. 1614) ದಿನದಂದು ಬೃಂದಾವನಸ್ಥರಾದರು.

ರಾಯರ ಭಕ್ತರೆಲ್ಲರೂ ನಿತ್ಯವೂ ಗುರುಸ್ತೋತ್ರಹೇಳುವಾಗ ಶ್ರೀವಿಜಯೀಂದ್ರನ್ನು ಸ್ಮರಣೆ ಮಾಡದೆ ಇರುವುದಿಲ್ಲ. ಮಾಧ್ವ ಸಂಸ್ಥಾನದಲ್ಲಿ ಅವರ ಹೆಸರು ಅಮರ ಜ್ಯೋತಿಯಂತೆ ದೇದೀಪ್ಯ ಮಾನವಾದುದ್ದು.

(ಶ್ರೀವಿಜಯೀಂದ್ರತೀರ್ಥರ ಆರಾಧನೆಯ ಪ್ರಯುಕ್ತ ವಿಶೇಷ ಲೇಖನ)

* ಪ್ರಕಾಶ್ ಹುಣಸಿಗಿ ಬಳ್ಳಾರಿ

Share This Article
error: Content is protected !!
";