ಮಾಸ್ಕೋ, 9 : ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಬಾಂಧವ್ಯ ವೃದ್ಧಿಯಲ್ಲಿ ಅಸಾಧಾರಣ ಸೇವೆಗಾಗಿ ರಷ್ಯಾ ಅಧ್ಯಕ್ಷ ಪ್ಲಾಡಿಮಿರ್ ಪುಟಿನ್ ಅವರು ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಷ್ಯಾದ ಅತ್ಯುನ್ನತ ನಾಗರಿಕ ಪ್ರಶಸ್ತಿ ‘ಆರ್ಡರ್ ಆಫ್ ಸೇಂಟ್ ಆಂಡೂ ದಿ ಅಪೊಸ್ಟಲ್’ ಪ್ರದಾನ ಮಾಡಿದರು.”ನನಗೆ ಆರ್ಡರ್ ಆಫ್ ಸೇಂಟ್ ಆಂಡ್ರ ದಿ ಅಪೊಸ್ಟಲ್’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ನಾನು ಅದನ್ನು ಭಾರತದ ಜನರಿಗೆ ಅರ್ಪಿಸುತ್ತೇನೆ” ಎಂದು ಪ್ರಧಾನಿ ಮೋದಿ ಮಾಸ್ಕೋದಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿದ ನಂತರ Xನಲ್ಲಿ ಪೋಸ್ಟ್ ಮಾಡಿದ್ದಾರೆ. ರಷ್ಯಾ ಮತ್ತು ಭಾರತದ ನಡುವಿನ ವಿಶೇಷ ಕಾರ್ಯತಂತ್ರದ ಪಾಲುದಾರಿಕೆ ಮತ್ತು
ಉಭಯ ದೇಶಗಳ ನಡುವಿನ ಸ್ನೇಹಪರ ಸಂಬಂಧ ವೃದ್ಧಿಗೆ ನೀಡಿದ ವಿಶಿಷ್ಟ ಕೊಡುಗೆಗಾಗಿ ಪ್ರಧಾನಿ ಮೋದಿಗೆ ಈ ಪ್ರಶಸ್ತಿ ನೀಡಲಾಗಿದೆ. ಯೇಸುವಿನ ಮೊದಲ ಅಪೊಸ್ಟಲ್ ಮತ್ತು ರಷ್ಯಾದ ಪೋಷಕ ಸಂತ ಆಂಡ್ರ ಅವರ
ಗೌರವಾರ್ಥವಾಗಿ 1693 ರಲ್ಲಿ ಜಾರ್ ಪೀಟರ್ ದಿ ಗ್ರೇಟ್ ಈ ಪ್ರಶಸ್ತಿಯನ್ನು ಸ್ಥಾಪಿಸಿದರು. ಇದನ್ನು ರಷ್ಯಾದ ಅತ್ಯುನ್ನತ ನಾಗರಿಕ ಸೇವೆ ಅಥವಾ ಮಿಲಿಟರಿ ಸೇವೆಗೆ ಮಾತ್ರ ನೀಡಲಾಗುತ್ತದೆ.