Ad image

ಭಾರತೀಯ ವೇದ ಪಾಠ ಶಾಲೆಗಳು

Vijayanagara Vani
ಭಾರತೀಯ ವೇದ ಪಾಠ ಶಾಲೆಗಳು
T

ಇಡೀ ಜಗತ್ತಿನ ನಾಗರಿಕತೆ ಆಗ ತಾನೇ ಎದ್ದು ಕುಳಿತು ಕಣ್ಣು ಬಿಡುತ್ತಿರುವಾಗ ಭಾರತ ದೇಶ ವೇದಗಳ ಮೂಲಕ ವಿಜ್ಞಾನ, ತಂತ್ರಜ್ಞಾನ, ಬಾಹ್ಯಾಕಾಶ ಅರ್ಥಾತ್ ಖಗೋಲ, ಭೂಗೋಳ, ಜ್ಯೋತಿಷ್ಯ ಶಾಸ್ತ್ರ, ಗಣಿತಶಾಸ್ತ್ರ, ಆರೋಗ್ಯ ಶಾಸ್ತ್ರ ಮತ್ತು ಜಾಮಿತಿಗಳ ಕುರಿತು ವೇದ, ಉಪನಿಷತ್ತು ಪುರಾಣಗಳ ಮೂಲಕ ತಿಳುವಳಿಕೆ ನೀಡುವಷ್ಟು ಪಂಡಿತರನ್ನು ಜ್ಞಾನಿಗಳನ್ನು ಹೊಂದಿತ್ತು. ಇಂದಿಗೂ ಕೂಡ ನಮ್ಮ ವೇದಗಳಲ್ಲಿ ಅಡಗಿರುವ ವೈಜ್ಞಾನಿಕ ಸತ್ಯಗಳು ಗಣಿತದ ಸೂತ್ರಗಳು ಬೆಕ್ಕಸ ಬೆರಗಾಗಿಸುತ್ತವೆ.

ಭಾರತದ ವೈದಿಕ ಸಾಹಿತ್ಯದಲ್ಲಿ ಶ್ರುತಿ ಮತ್ತು ಸ್ಮೃತಿ ಎಂಬ ಎರಡು ವಿಧಗಳಿದ್ದು …ಶ್ರುತಿಯು ಒಬ್ಬರಿಂದ ಒಬ್ಬರಿಗೆ ಅಂದರೆ ಬಾಯಿಂದ ಬಾಯಿಗೆ ತಲತಲಾಂತರವಾಗಿ ಹೇಳುತ್ತಾ ಬಂದ ಜ್ಞಾನ. ಸ್ಮೃತಿಯು ನೆನಪಿನಲ್ಲಿ ಇಟ್ಟುಕೊಳ್ಳುವಂತಹ ಜ್ಞಾನ. ಈ ಸ್ಮೃತಿಯಲ್ಲಿ
1.ಹದಿನೆಂಟುಪುರಾಣಗಳು ಮತ್ತು ಭಾಗವತ,
2.ಧರ್ಮ-ಶಾಸ್ತ್ರ,
3.ತಂತ್ರಗಳು,
4.ಇತಿಹಾಸ (ರಾಮಾಯಣ ಮತ್ತು ಮಹಾಭಾರತ)
5.ಶ್ರೀಮದ್ಭಗವದ್ಗೀತೆ
ಎಂದು ಐದು ವಿಭಾಗಗಳಿವೆ.
ಇತಿಹಾಸವು ರಾಮಾಯಣ ಮತ್ತು ಮಹಾಭಾರತ ಕಾವ್ಯಗಳನ್ನು ಒಳಗೊಂಡಿದ್ದರೆ, ಶ್ರೀಮದ್ ಭಗವದ್ಗೀತೆಯಲ್ಲಿ ಮತ್ತೆ ಎರಡು ವಿಧಾನಗಳಿವೆ. ಭಾಗವತ ಭಗವದ್ಗೀತೆಯನ್ನು ಆಚಾರ್ಯರು ಮತ್ತು ಜಗದ್ಗುರುಗಳು ಬರೆದಿದ್ದಾರೆ.ರಸಿಕರು, ಭಕ್ತರು, ಸಂತರು ಬರೆದ ಭಗವದ್ಗೀತೆಗಳ ಸಾಲು ಸಾಲು ಹೊತ್ತಿಗೆಗಳು ನಮ್ಮ ಭಾರತೀಯ ಆಧ್ಯಾತ್ಮಿಕತೆಯ ಗ್ರಂಥ ಭಂಡಾರವನ್ನು ಶ್ರೀಮಂತ ಗೊಳಿಸಿವೆ.

ಇನ್ನು ಶೃತಿ ವಿಭಾಗಕ್ಕೆ ಬಂದರೆ ಋಗ್ವೇದ, ಯಜುರ್ವೇದ, ಸಾಮವೇದ ಮತ್ತು ಅಥರ್ವಣ ವೇದ ಎಂಬ ನಾಲ್ಕು ವಿಧಗಳಿದ್ದು ಆ ವೇದಗಳನ್ನು ಮತ್ತೆ ವೇದಾಂಗ, ಉಪ ವೇದ,ಮತ್ತು ಸಂಹಿತ, ಬ್ರಾಹ್ಮಣ, ಅರಣ್ಯಕ ಎಂದು ವಿಭಾಗಿಸಿದ್ದಾರೆ. ವೇದಾಂಗದಲ್ಲಿ… ವ್ಯಾಕರಣ, ಜ್ಯೋತಿಷ್ಯ, ನಿರುಕ್ತ, ಶಿಕ್ಷಾ,ಚಂದ, ಕಲ್ಪಸೂತ್ರ ಎಂಬ ವಿಭಾಗಗಳಿದ್ದರೆ ಉಪ ವೇದದಲ್ಲಿ ಅರ್ಥವೇದ, ಧನುರ್ವೇದ, ಗಂಧರ್ವ ವೇದ ಮತ್ತು ಆಯುರ್ವೇದ ಎಂಬ ವಿಧಗಳಿವೆ.
ಪರಂಪರಾನುಗತವಾಗಿ ನಮ್ಮ ಸಂಸ್ಕೃತಿ ಮತ್ತು ಜೀವನ ಶೈಲಿಯನ್ನು ನಮಗೆ ತಿಳಿಸಿಕೊಡುವ ಗುರುಗಳನ್ನು ಋಷಿಗಳೆಂದು ಕರೆಯುತ್ತೇವೆ ಮತ್ತು ಹಾಗೆ ಪರಂಪರಾನುಗತವಾಗಿ ಪಾಲಿಸುವ ಧರ್ಮವನ್ನು ಸನಾತನ ಧರ್ಮವೆಂದು ಕರೆಯುತ್ತಾರೆ. ಋಷಿಗಳು ಮಹಾನ್ ಸಂತರು ತಮ್ಮ ತಪಸ್ಸಿನ ಬಲದಿಂದ ಅಂತಿಮ ಸತ್ಯ ಮತ್ತು ಆಧ್ಯಾತ್ಮಿಕ ಜ್ಞಾನವನ್ನು ಪಡೆದವರು. ಸಾಧನೆಯ ಮೂಲಕ ಸಿದ್ಧಿಯನ್ನು ಪಡೆದವರು ತಮ್ಮ ಅದ್ಭುತ ಜ್ಞಾನವನ್ನು ವೇದಗಳಲ್ಲಿ, ಮಂತ್ರಗಳಲ್ಲಿ, ಸಂಹಿತೆಗಳಲ್ಲಿ ಮತ್ತು ಸೂತ್ರಗಳಲ್ಲಿ ರಚಿಸಿದವರು.
ಅಪಾರಜ್ಞಾನ ರಾಶಿಯನ್ನು ಹೊಂದಿದ ಋಷಿಗಳು… ಯಾವುದೇ ಆಧುನಿಕ ಉಪಕರಣಗಳ ಸಹಾಯವಿಲ್ಲದೆಯೇ ಬ್ರಹ್ಮಾಂಡ ಮತ್ತು ಸೃಷ್ಟಿಯ ರಹಸ್ಯಗಳನ್ನು ಕಂಡುಹಿಡಿದ ಅತಿ ದೊಡ್ಡ ವಿಜ್ಞಾನಿಗಳಾಗಿದ್ದರು. ನಿಜವಾಗಿಯೂ ಅವರೇ ಮೊತ್ತ ಮೊದಲ ವಿಜ್ಞಾನಿಗಳು. ಭೌತವಿಜ್ಞಾನ, ಸಸ್ಯ ವಿಜ್ಞಾನ, ವೈದ್ಯಕೀಯ ಶಸ್ತ್ರಚಿಕಿತ್ಸೆ, ತಾಂತ್ರಿಕತೆ, ನಿರ್ಮಾಣ ಶಾಸ್ತ್ರ, ಶಿಲ್ಪ ಶಾಸ್ತ್ರ ಕಲೆ, ಶಿಕ್ಷಣ, ಬೋಧನೆ ಮತ್ತು ಆಧ್ಯಾತ್ಮಿಕ ಕ್ಷೇತ್ರದಲ್ಲಿ ಅಪಾರ ಪರಿಣತಿಯನ್ನು ಸಾಧಿಸಿದ್ದರು ಈ ಸಂತ ವಿಜ್ಞಾನಿಗಳು. ಈ ಸಂತ ವಿಜ್ಞಾನಿಗಳಲ್ಲಿ ಬಾಹ್ಯಾಕಾಶ ಮತ್ತು ಖಗೋಳ ಶಾಸ್ತ್ರದ ಜ್ಞಾನ ಭಂಡಾರವೇ ಅಡಗಿತ್ತು. ಅವರ ಜ್ಞಾನವು ಸೈದ್ಧಾಂತಿಕವಾಗಿ ಮಾತ್ರವಲ್ಲದೆ ಪ್ರಾಯೋಗಿಕವಾಗಿಯೂ ಜೀವನದ ಪ್ರತಿ ಹಂತದಲ್ಲಿ ಉಪಯೋಗಿಸಲ್ಪಟ್ಟಿದ್ದವು.
ಋಷಿ ಮುನಿಗಳು ಸಂತರು ಅರಿತಿದ್ದ ಈ ಜ್ಞಾನದ ಅಪಾರ ಭಂಡಾರವನ್ನು ಆಧ್ಯಾತ್ಮ ವಿಜ್ಞಾನವೆಂದೂ ಸನಾತನ ಧರ್ಮವೆಂದು ಕರೆದರು. ಸನಾತನ ಧರ್ಮದ ನಿಜವಾದ ಅರ್ಥ ಸರಿಯಾದದ್ದನ್ನೇ ಮಾಡಬೇಕೆಂಬ ಅಲಿಖಿತ ಕಾನೂನು ನಿಯಮ. ಪ್ರತಿ ಹಂತದಲ್ಲೂ ಜ್ಞಾನಿಗಳು ಭಾರತದ ಆಧ್ಯಾತ್ಮ ಪರಂಪರೆಯನ್ನು ಪೋಷಿಸಿ, ಬೆಳಸಿ, ವಿಶ್ಲೇಷಿಸಿ, ಹೊಸತನ್ನು ಸೇರಿಸಿದರು. ಪ್ರತಿ ಯುಗದಲ್ಲೂ ಒಬ್ಬೊಬ್ಬ ಮಹಾನ್ ವ್ಯಕ್ತಿಗಳು ತಮ್ಮದೇ ಆದ ಕೊಡುಗೆಗಳನ್ನು ಈ ಸನಾತನ ಧರ್ಮಕ್ಕೆ ನೀಡಿದರು. ಸಂಸ್ಕೃತ ಭಾಷೆಯ ಮೇಲೆ ಅಪಾರ ಹಿಡಿತವನ್ನು ಸಾಧಿಸಿದ್ದ ಋಷಿಮುನಿಗಳು ತಮ್ಮ ಜ್ಞಾನವನ್ನು ಇಡೀ ಜಗತ್ತಿಗೆ ತಿಳಿಯಪಡಿಸಲು ವೇದಗಳನ್ನು ಆವಿಷ್ಕರಿಸಿದರು. ಈ ವೇದಗಳು ಪರಂಪರಾನುಗತವಾಗಿ ಗುರುಗಳಿಂದ ಶಿಷ್ಯರಿಗೆ ಜ್ಞಾನವನ್ನು ಧಾರೆಯೆರೆಯುತ್ತಿವೆ.

ಗುರುಕುಲದಲ್ಲಿ ಮುನಿಗಳು ತಮ್ಮ ಶಿಷ್ಯರಿಗೆ ಲೋಹವಿಜ್ಞಾನ, ಬಾಹ್ಯಾಕಾಶ ವಿಜ್ಞಾನ, ದಿಕ್ಸೂಚಿ, ಅಂತರಿಕ್ಷ ವಿದ್ಯೆ, ಪ್ರಕೃತಿ, ಸೌರವ್ಯೂಹ, ಚಂದ್ರ ವ್ಯೂಹ, ಹವಾಮಾನ, ಸೌರ ಶಕ್ತಿ, ಹಗಲು ರಾತ್ರಿಗಳ ಅಧ್ಯಯನ, ಆಕಾಶ ಕಾಯಗಳ ಕುರಿತ ಅಧ್ಯಯನ, ಭೂಗೋಳ, ಸಮಯ, ಭೂತಳ ಮತ್ತು ಗಣಿಗಾರಿಕೆ, ಮುತ್ತು ರತ್ನಗಳ ಕುರಿತ ಜ್ಞಾನ, ಗುರುತ್ವಾಕರ್ಷಣೆ, ಸಂವಹನ, ವೈಮಾನಿಕ ವಿದ್ಯೆ, ಪ್ರಕಾಶ ವಿದ್ಯೆ,ಜಲ ಯಾನ ವಿದ್ಯೆ, ಯುದ್ಧ ಸಾಮಗ್ರಿಗಳ ತಯಾರಿಕೆ ಮತ್ತು ಬಳಸುವ ಶಾಸ್ತ್ರ, ಸಸ್ಯಶಾಸ್ತ್ರ, ಪ್ರಾಣಿ ಶಾಸ್ತ್ರ ಮತ್ತು ವಸ್ತುಶಾಸ್ತ್ರಗಳನ್ನು ಕಲಿಸುತ್ತಿದ್ದರು.

ಇದರ ಜೊತೆ ಜೊತೆಗೆ ವ್ಯಾವಸಾಯಿಕ ಮತ್ತು ವಾಣಿಜ್ಯ ವಿದ್ಯೆಗಳಾಗಿ ವಾಣಿಜ್ಯ, ಔಷಧ ಶಾಸ್ತ್ರ, ಶಲ್ಯ ಕರ್ಮ ಮತ್ತು ಚಿಕಿತ್ಸೆ, ಕೃಷಿ, ಪಶು ಪಾಲನೆ, ಪಕ್ಷಿ ಪಾಲನೆ, ಪಶು ಪ್ರಶಿಕ್ಷಣ, ಯಂತ್ರಕಾರ, ರಥಕಾರ, ಸುವರ್ಣಕಾರ, ವಸ್ತ್ರಕಾರ, ಕುಂಭಕಾರ, ಲೋಹಕಾರ, ತಕ್ಷಕ(ಟಾಕ್ಸಿಸಿಟಿ ಅಂದರೆ ವಿಷ ವಸ್ತುಗಳ ಕುರಿತ ಅಧ್ಯಯನ), ಬಣ್ಣಗಾರ, ರವಾನೆಗಾರ, ಕಟ್ಟಡ ನಿರ್ಮಾಣಕಾರ, ಪಾಕವಿದ್ಯ, ವಾಹನ ಚಾಲನೆ, ನದಿ ಜಲ ಪ್ರಬಂಧಕ, ಸೂಚಿಕಾರ, ಗೋಶಾಲೆ ಪ್ರಬಂಧಕ, ಉದ್ಯಾನ ಪಾಲ, ವನಪಾಲ, ನಾಪಿತ, ಅರ್ಥಶಾಸ್ತ್ರ, ತರ್ಕಶಾಸ್ತ್ರ, ನ್ಯಾಯಶಾಸ್ತ್ರ, ನೌಕಾಶಾಸ್ತ್ರ, ರಸಾಯನಶಾಸ್ತ್ರ, ಬ್ರಹ್ಮ ವಿದ್ಯಾ, ನ್ಯಾಯ ವೈದ್ಯ ಶಾಸ್ತ್ರ, ಮತ್ತು ಕ್ರವ್ಯಾದ (ಮರಣ ನಂತರ ದೇಹವನ್ನು ಕೊಯ್ದು ಅಂಗಾಂಗಗಳನ್ನು ವಿಸ್ತೃತವಾಗಿ ಅಧ್ಯಯನ ಮಾಡುವ ವಿಧಾನ) ಹೀಗೆ ಹತ್ತು ಹಲವು ವಿದ್ಯೆಗಳನ್ನು ಸಾವಿರಾರು ವರ್ಷಗಳ ಕಾಲ ತಲತಲಾಂತರವಾಗಿ ಜ್ಞಾನವು ಹರಿದು ಬಂದಿದೆ.
ಭಾರತದ ಪುಣ್ಯ ಭೂಮಿಯಲ್ಲಿ ಆವಿಷ್ಕಾರಗಳು ಆಧ್ಯಾತ್ಮಿಕತೆ ವಿಜ್ಞಾನ ತಂತ್ರಜ್ಞಾನ ಗಣಿತ ವಿಭಾಗಗಳಲ್ಲಿ ಅತ್ಯದ್ಭುತ ಸಾಧನೆ ಮೆರೆದವರು ನೂರಾರು ಋಷಿಮುನಿಗಳು. ಅವುಗಳನ್ನು ತಲತಲಾಂತರವಾಗಿ ತಮ್ಮ ಶಿಷ್ಯ ಪರಂಪರೆಗೆ ಹಂಚಿದವರು ಸಾವಿರಾರು ಜನರು. ಹೀಗೆ ಕಲಿತ ವಿದ್ಯೆಯನ್ನು ವಿವಿಧ ಕ್ಷೇತ್ರಗಳಲ್ಲಿ ಬಳಸಿ ಅಭ್ಯುದಯ ಭಾರತವನ್ನು ಬೆಳೆಸಿದವರು ಲಕ್ಷ ಕೋಟಿ ಜನ. ಇಂಥ ಚರಿತ್ರಾರ್ಹ ವಸುದೈವ ಕುಟುಂಬದಲ್ಲಿ ಬಾಳಿ ಬದುಕುತ್ತಿರುವ ಭಾರತೀಯತೆಯ ಕಿರೀಟ ಹೊತ್ತ ನಾವುಗಳು ಧನ್ಯರು.

*ಧಂ ನಮ ಋಷಿಭ್ಯಃ ಪೂರ್ವಜೇಭ್ಯಃ ಪಥಿಕೃದಭ್ಯಃ *

ನಮಗೆ ನಮ್ಮ ಪೂರ್ವಜರ ರೂಪದಲ್ಲಿ ಬಂದು ಸತ್ಯ ಮತ್ತು ಧರ್ಮದ ಮಾರ್ಗವನ್ನು ತೋರಿಸಿದ ಎಲ್ಲಾ ಋಷಿ ಮುನಿ ಸಂತರಿಗೆ ನಮನಗಳು.

ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ ಗದಗ್

Share This Article
error: Content is protected !!
";