ವಿಸ್ಮಯ ಜಗತ್ತು

Vijayanagara Vani
ವಿಸ್ಮಯ ಜಗತ್ತು

ನಮ್ಮ ಸುತ್ತಮುತ್ತಲಿನ  ಬಯಲು ಸೀಮೆಗಳಲ್ಲಿ ಹಲವು ಜಾತಿಯ, ಬಣ್ಣದ ಪಕ್ಷಿಗಳು ಕಾಣಸಿಗುತ್ತವೆ. ಸೌಂದರ್ಯವೇ ರೂಪುಗೊಂಡು ಪಕ್ಷಿಗಳ ಮೇಲೆ ಹರಿದಿದೆಯೇನೋ ಎಂಬಂತೆ ಬಣ್ಣ ಬಣ್ಣದ ಗರಿಗಳಲ್ಲಿ, ವಿವಿಧ ಆಕಾರಗಳಲ್ಲಿ, ವೈವಿಧ್ಯಮಯವಾಗಿ ಚಿಲಿಪಿಲಿ ಗುಟ್ಟುತ್ತಾ ಹಾರಾಡುತ್ತಿರುತ್ತವೆ. ಅವುಗಳನ್ನು ನೋಡಿದಾಕ್ಷಣ ಮೈ-ಮನ ಪುಳಕಗೊಳ್ಳುತ್ತದೆ.

ಪಕ್ಷಿಗಳೇ ಹಾಗೆ ಅವುಗಳ ಅಂದಚೆಂದ, ಹಾರಾಟ, ಕುಣಿದಾಟ, ಗೂಡು ಕಟ್ಟುವಿಕೆ, ಮರಿಮಾಡುವಿಕೆ, ಆಹಾರ ಕ್ರಮ ಹೀಗೆ ಎಲ್ಲವೂ ಒಂದು ಜಾತಿಯ ಪಕ್ಷಿಗಿಂತ ಮತ್ತೊಂದು ಜಾತಿಯ ಪಕ್ಷಿಗೆ ವ್ಯತ್ಯಾಸವಿರುತ್ತವೆ. ಬಹಳಷ್ಟು ಪಕ್ಷಿಗಳು ಚಿಲಿಪಿಲಿ ಗುಟ್ಟಿದರೂ ಕೆಲವು ಪಕ್ಷಿಗಳ ಕೂಗುವುದಂತು ವಿಶಿಷ್ಟವಾಗಿರುತ್ತವೆ, ಜತೆಗೆ ವಿಚಿತ್ರವೂ ಆಗಿರುತ್ತದೆ. ಇನ್ನು ಗೂಡು ಕಟ್ಟುವುದರಲ್ಲಂತೂ ಒಂದೊಂದು ಪಕ್ಷಿಗಳು ಒಂದೊಂದು ರೀತಿಯಲ್ಲಿ ಕಟ್ಟುತ್ತವೆ. ಕೆಲವು ಸರಳವಾಗಿ ಕಟ್ಟಿದರೆ, ಮತ್ತೆ ಕೆಲವು ಪಕ್ಷಿಗಳಂತೂ ಜಾಣ್ಮೆ ಮತ್ತು ಕಲಾ ನೈಪುಣ್ಯತೆಯನ್ನು ಪ್ರದರ್ಶಿಸುತ್ತವೆ.

ಸುಂದರ ಒನಪು ಒಯ್ಯಾರದ ಭದ್ರ ಗೂಡು ಅದರಲ್ಲೂ ನೋಡಲು ಹೆಚ್ಚು ಆಕರ್ಷಣೀಯವಾಗಿರದೆ, ಪುಟಾಣಿಯಾಗಿದ್ದುಕೊಂಡೇ ಗೂಡು ಕಟ್ಟುವಿಕೆಯಲ್ಲಿ ಮಾತ್ರ ತನ್ನ ಸಮಯಾರಿಲ್ಲ ಎಂದು ಜಗತ್ತಿಗೆ ಸಾರಿ ಹೇಳುವ ಪಕ್ಷಿಯೊಂದಿದ್ದರೆ ಅದು ಗೀಜುಗ ಎಂದು ನಿಸ್ಸಂದೇಹವಾಗಿ ಹೇಳಬಹುದು. ಏಕೆಂದರೆ ಗೂಡುಕಟ್ಟುವಿಕೆಯಲ್ಲಂತು ಇದರ ಮುಂದೆ ಯಾವ ಪಕ್ಷಿಯೂ ಸಮಾನವಲ್ಲ. ನೋಡುಗರನ್ನು ಹುಬ್ಬೇರಿಸುವಂತೆ ಮತ್ತು ತಮ್ಮ ಸುರಕ್ಷತೆಗೆ ಒತ್ತು ನೀಡಿ ಗೂಡು ನಿರ್ಮಿಸುವ ಚಾಣಕ್ಷ್ಯತೆ ಈ ಹಕ್ಕಿಯನ್ನು ಹೊರತುಪಡಿಸಿದರೆ ಇಷ್ಟೊಂದು ಸುಂದರವಾಗಿ ಒನಪು ಒಯ್ಯಾರದಿಂದ ಕೂಡಿದ ಭದ್ರವಾದ ಗೂಡನ್ನು ಬೇರೆ ಯಾವ ಪಕ್ಷಿಯೂ ಕಟ್ಟಲಾರವು ಎಂಬುದನ್ನು ನಾವು ಒಪ್ಪಿಕೊಳ್ಳಲೇ ಬೇಕಾಗುತ್ತದೆ.

ಪುಟ್ಟ ಹಕ್ಕಿಯಿಂದ ದೊಡ್ಡಗೂಡು ಹಾಗೆನೋಡಿದರೆ ಗೀಜುಗ ಪಕ್ಷಿಯು ಗಾತ್ರದಲ್ಲಿ ಹಿರಿದಾಗಿರದೆ ಗುಬ್ಬಚ್ಚಿಯಷ್ಟಿದ್ದು, ಸ್ವಲ್ಪ ಹಸಿರು ಬಣ್ಣವನ್ನು ಹೊಂದಿದೆ. ಆದರೆ ಹತ್ತಿರದಿಂದ ಇದನ್ನು ನೋಡಿದ್ದೇ ಆದರೆ ಇಷ್ಟು ಚಿಕ್ಕ ಪಕ್ಷಿ ಅಷ್ಟು ದೊಡ್ಡದಾದ ಗೂಡು ಕಟ್ಟಲು ಸಾಧ್ಯವೇ ಎಂಬ ಪ್ರಶ್ನೆಗಳು ನಮ್ಮಲ್ಲಿ ಮೂಡುವುದು ಸಹಜ. ಆದರೆ ಜಾಣ್ಮೆ, ಕಲಾತ್ಮಕತೆ ಮತ್ತು ಶ್ರಮಕ್ಕೆ ಈ ಪಕ್ಷಿಗಳು ಹೆಸರುವಾಸಿಯಾಗಿದ್ದು, ಗಾತ್ರ ಚಿಕ್ಕದಾದರೂ ಪಕ್ಷಿಸಂಕುಲಗಳಲ್ಲೇ ಬೃಹತ್ ಅರಮನೆಯಂತಹ ಗೂಡನ್ನು ಕಟ್ಟಿ ಮಹಾರಾಜ-ರಾಣಿಯರಂತೆ ಅದರಲ್ಲಿ ವಾಸಿಸುತ್ತವೆ.

ಗುಂಪಾಗಿ ಬದುಕಲು ಬಯಸುವ ಗೀಜುಗ ಹೆಚ್ಚು ದೊಡ್ಡದಾಗಿರದ, ಗುಂಪಾಗಿ ಬೆಳೆಯುವ ಪೊದೆಗಳ ನಡುವೆ ಇರುವ ಮುಳ್ಳನ್ನು ಹೊಂದಿರುವ ಮರಗಳನ್ನು ಗೂಡುಕಟ್ಟಲು ಆಯ್ಕೆ ಮಾಡಿಕೊಳ್ಳುವ ಪಕ್ಷಿಗಳು ಗುಂಪಾಗಿರಲು ಬಯಸುತ್ತವೆ. ಜತೆಗೆ ಮನುಷ್ಯರು ಹತ್ತಿರ ಬಾರದ ಮುಳ್ಳಿನ ಪೊದೆಯಂತಹ ಜಾಗವನ್ನು ಜತೆಗೆ ಸುತ್ತಮುತ್ತ ಭತ್ತದಂತಹ ಬೆಳೆ ಬೆಳೆಯುವ ಜಾಗವನ್ನು ಹುಡುಕಿಕೊಳ್ಳುತ್ತವೆ. ಗಂಡು ಹಕ್ಕಿಯು ಮರದ ಕೊಂಬೆಯಿಂದ ತೂಗಾಡುವಂತೆ ಉದ್ದನೆಯ ಗೂಡನ್ನು ಕಟ್ಟುತ್ತವೆ. ಗೂಡನ್ನು ಕಟ್ಟಲು ಆರಂಭಿಸಿ ಅರ್ಧ ಮುಗಿದ ಬಳಿಕ ಹೆಣ್ಣು ಹಕ್ಕಿ ಅದನ್ನು ಒಪ್ಪಿದರೆ ಮಾತ್ರ ಮುಂದುವರಿಸುತ್ತದೆಯಂತೆ.

ಕತ್ತಲೆ ಓಡಿಸಲು ಮಿಂಚುಹುಳ ಬಳಕೆ ಈ ಗೂಡನ್ನು ಕಟ್ಟಲು ನೊದೆಹುಲ್ಲು, ಗರಿ ಮುಂದಾದವುಗಳನ್ನು ಉಪಯೋಗಿಸುತ್ತವೆ. ಸುಮಾರು ಎರಡು ಅಡಿಯಷ್ಟು ಉದ್ದವಾಗಿರುವ ಗೂಡನ್ನು ಮೇಲೆ ಮತ್ತು ಕೆಳಗೆ ಚಿಕ್ಕದಾಗಿ ಮಧ್ಯೆ ದೊಡ್ಡದಾಗಿ ಅಂದರೆ ಸುತ್ತಳತೆ ಅಗಲವಾಗಿ ಇರುವಂತೆ ಕಟ್ಟುತ್ತವೆ. ಗುಂಪಾಗಿ ವಾಸಿಸುವ ಇವು ಗೂಡಿನೊಳಗೆ ಆರಾಮಾಗಿ ಕುಳಿತುಕೊಳ್ಳಲು ಅನುಕೂಲವಾಗುವಂತೆ ರೇಷ್ಮೆಯಷ್ಟು ಮೃದುವಾದ ವಡಕೆ ಎಂಬ ಹೂವನ್ನು ತಂದು ಹಾಕುತ್ತವೆ. ಇವುಗಳ ಮತ್ತೊಂದು ವಿಶೇಷತೆ ಏನೆಂದರೆ ಗೂಡಿನ ಕತ್ತಲೆಯನ್ನು ಹೋಗಲಾಡಿಸಲು ಮಿಂಚು ಹುಳುವನ್ನು ತಂದು ಜೇಡಿ ಮಣ್ಣಿನಿಂದ ಅಂಟಿಸುತ್ತವೆಯಂತೆ. ಆದರೆ ಗೂಡಿನ ಸೌಂದರ್ಯ ನೋಡಿ ಯಾರಾದರೂ ಮನುಷ್ಯರು ಸ್ಪರ್ಶಿಸಿದರೆ ಭಯದಿಂದ ಮತ್ತೆ ಆ ಗೂಡಿನತ್ತ ಬರುವುದಿಲ್ಲವಂತೆ.

ನಾಪತ್ತೆಯಾಗುತ್ತಿರುವ ಗೀಜುಗನ ಗೂಡುಗಳು ಮೊದಲೆಲ್ಲ ಕೆಲವರು ಈ ಗೂಡುಗಳನ್ನು ಕಸಿದು ತಂದು ಮಾರಾಟ ಮಾಡುವುದು, ಮನೆಯ ಮುಂದೆ ಅಲಂಕಾರಕ್ಕಾಗಿ ನೇತು ಹಾಕುವುದು ಹೀಗೆ ಮಾಡುತ್ತಿದ್ದರು. ಆದರೆ ಈಗ ಅದಕ್ಕೆಲ್ಲ ಕಡಿವಾಣ ಬಿದ್ದಿದೆ. ಜತೆಗೆ ಬಯಲು ಸೀಮೆಯ ನದಿ ತಟ, ಕಾಲುವೆಗಳ ಬದಿಯ ಕುರುಚಲು ಕಾಡುಗಳಲ್ಲಿ ಎಲ್ಲೆಂದರಲ್ಲಿ ಗೀಜುಗದ ಗೂಡುಗಳು ಕಾಣಿಸುತ್ತಿದ್ದವು. ಆದರೆ ಈಗ ಮೊದಲಿನಂತೆ ಅವುಗಳು ಕಾಣಿಸುತ್ತಿಲ್ಲ ಎಂಬುದೇ ಬೇಸರದ ಸಂಗತಿಯಾಗಿದೆ. ಈ ಹಿಂದೆ ಮಂಡ್ಯ ಜಿಲ್ಲೆಯ ತೊಣ್ಣೂರು ಕೆರೆಗೆ ತೆರಳಿದವರಿಗೆ ಇಲ್ಲಿನ ಕೆರೆ ಬದಿಯ ಮರಗಳಲ್ಲಿ ಇವುಗಳ ಗೂಡುಗಳು ಕಾಣಿಸುತ್ತಿದ್ದವು. ಈಗ ವಿರಳವಾಗುತ್ತಿದೆ. ಈ ಪಕ್ಷಿಗಳು ಕೂಡ ವಿನಾಸದ ಅಂಚಿಗೆ ಬಂದು ತಲುಪುತ್ತಿರುವುದು ಬೇಸರ ಸಂಗತಿಯಾಗಿದೆ.

WhatsApp Group Join Now
Telegram Group Join Now
Share This Article
error: Content is protected !!