Ad image

ನಿರ್ದೇಶಕ ‘ಮಂಡ್ಯದ ಗಂಡು’ ಖ್ಯಾತಿಯ ಎ.ಟಿ.ರಘು ನಿಧನ

Vijayanagara Vani
ನಿರ್ದೇಶಕ ‘ಮಂಡ್ಯದ ಗಂಡು’ ಖ್ಯಾತಿಯ  ಎ.ಟಿ.ರಘು  ನಿಧನ
  ಬೆಳ್ಳಿತೆರೆಯ ಖ್ಯಾತ ನಿರ್ದೇಶಕ ಹಾಗೂ ಹಿರಿಯ ನಟ ನಿಧನರಾಗಿದ್ದು, ಇಡೀ ಚಿತ್ರರಂಗಕ್ಕೆ ಶಾಕ್‌ ನೀಡಿದೆ. ರೆಬೆಲ್‌ ಸ್ಟಾರ್‌ ಅಂಬರೀಷ್‌ ಅವರ ನೆಚ್ಚಿನ ಡೈರೆಕ್ಟರ್‌ ಎಂದು ಕರೆಸಿಕೊಂಡಿದ್ದ ನಿರ್ದೇಶಕ ಎ.ಟಿ.ರಘು ಅವರು ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ರಘು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಹಲೋಕ ತ್ಯಜಿಸಿದ್ದಾರೆ. ರೆಬೆಲ್‌ ಸ್ಟಾರ್‌ ಅಂಬರೀಶ್‌ ಅವರ ಹಿಟ್‌ ಸಿನಿಮಾ ಮಂಡ್ಯದ ಗಂಡು ಸೇರಿದಂತೆ 55ಕ್ಕೂ ಹೆಚ್ಚು ಸಿನಿಮಾಗಳನ್ನು ಎ.ಟಿ ರಘು ಅವರು ನಿರ್ದೇಶಿಸಿದ್ದರು
 ಖ್ಯಾತ ಕನ್ನಡ ಚಿತ್ರ ನಿರ್ದೇಶಕ ಎ.ಟಿ. ರಘು ಅವರು 76 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ‘ಮಂಡ್ಯದ ಗಂಡು’ ಸೇರಿದಂತೆ 55ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿದ ಅವರು ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅವರ ನಿಧನದಿಂದ ಚಿತ್ರರಂಗ ಶೋಕ ಸಾಗರದಲ್ಲಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸಿನಿಪ್ರಿಯರು ಪ್ರಾರ್ಥಿಸಿದ್ದಾರೆ.
ಎ.ಟಿ. ರಘು ಅವರಿಗೆ 76 ವರ್ಷ ವಯಸ್ಸಾಗಿತ್ತು. ಗುರುವಾರ (ಮಾರ್ಚ್​ 20) ರಾತ್ರಿ ಅವರು ನಿಧನ ಹೊಂದಿದ್ದಾರೆ. ತೀವ್ರ ಅನಾರೋಗ್ಯದಿಂದ ರಘು ಬಳಲುತ್ತಾ ಇದ್ದರು. ನಿರಂತರವಾಗಿ ಅವರು ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದರು. ಸದ್ಯ ಬೆಂಗಳೂರಿನ ಆರ್​ಟಿ ನಗರದ ಮಠದಹಳ್ಳಿಯಲ್ಲಿ ಅವರ ಪಾರ್ಥಿವ ಶರೀರ ಇಡಲಾಗಿದೆ. ಇಂದು (ಮಾರ್ಚ್ 21) ಮದ್ಯಾಹ್ನ 2 ಗಂಟೆ ಬಳಿಕ ಹೆಬ್ಬಾಳದ ಚಿತಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ. ಅವರು ಪತ್ನಿ ಹಾಗೂ ಮಗಳನ್ನು ಅಗಲಿದ್ದಾರೆ.
ಎಟಿ ರಘು ಅವರು ಹುಟ್ಟಿದ್ದು ಕೊಡಗಿನಲ್ಲಿ. ಕೊಡವ ಸಮುದಾಯಕ್ಕೆ ಸೇರಿದ ಅವರು ಚಿತ್ರರಂಗದ ಬಗ್ಗೆ ಆಸಕ್ತಿ ಬೆಳೆಸಿಕೊಂಡರು. ಚಿತ್ರರಂಗದಲ್ಲಿ ನಿರ್ದೇಶಕನಾಗಿ, ನಿರ್ಮಾಪಕರನಾಗಿ, ಚಿತ್ರಕಥೆ ಬರಹಗಾರನಾಗಿ ಗುರುತಿಸಿಕೊಂಡರು. ಅವರು ಕನ್ನಡ ಮಾತ್ರವಲ್ಲದೆ ಹಿಂದಿಯಲ್ಲೂ ಸಿನಿಮಾ ನಿರ್ದೇಶನ ಮಾಡಿದ್ದಾರೆ.
1980ರಲ್ಲಿ ರಿಲೀಸ್ ಆದ ‘ನ್ಯಾಯ ನೀತಿ ಧರ್ಮ’ ಅವರ ನಿರ್ದೇಶನದ ಮೊದಲ ಸಿನಿಮಾ. ಅಂಬರೀಷ್, ಆರತಿ, ದ್ವಾರಕೀಶ್ ಅವರು ಚಿತ್ರದಲ್ಲಿ ನಟಿಸಿದರು. ಈ ಸಿನಿಮಾ ಮೂಲಕ ಅಂಬರೀಷ್ ಜೊತೆ ರಘು ಅವರಿಗೆ ಒಳ್ಳೆಯ ಒಡನಾಟ ಬೆಳೆಯಿತು. ಅಂಬರೀಷ್ ನಟನೆಯ ‘ಆಶ’, ‘ಅವಳ ನೆರಳು’, ‘ಮಂಡ್ಯದ ಗಂಡು’, ‘ಮಿಡಿದ ಹೃದಯಗಳು’ ಸೇರಿ 27 ಸಿನಿಮಾಗಳನ್ನು ರಘು ನಿರ್ದೇಶನ ಮಾಡಿದ್ದರು ಅನ್ನೋದು ವಿಶೇಷ.
ಎ.ಟಿ. ರಘು ಅವರು ಹಿಂದಿ, ಮಲಯಾಳಂ ಚಿತ್ರರಂಗದಲ್ಲೂ ಕೆಲಸ ಮಾಡಿದ್ದಾರೆ. ‘ಆಶ’ ಚಿತ್ರವನ್ನು ಅವರು ಹಿಂದಿಗೆ ‘ಮೆರಿ ಅದಾಲತ್’ ಹೆಸರಿನಲ್ಲಿ ರಿಮೇಕ್ ಮಾಡಿದರು. ಇದರಲ್ಲಿ ರಜನಿಕಾಂತ್ ಅವರು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾ 1984ರಲ್ಲಿ ರಿಲೀಸ್ ಆಯಿತು.

Share This Article
error: Content is protected !!
";