Ad image

ಬೀರು ಬೇಸಿಗೆಯಲ್ಲಿ ಬೇಕೇ ಬೇಕು ಎಳನೀರು , ಅದರ ಉಪಯೋಗಗಳು

Vijayanagara Vani
ಬೀರು ಬೇಸಿಗೆಯಲ್ಲಿ ಬೇಕೇ ಬೇಕು ಎಳನೀರು , ಅದರ ಉಪಯೋಗಗಳು

ತೆಂಗಿನಮರದಲ್ಲಿ ಪೂರ್ಣ ಬಲಿತಿಲ್ಲದ, ಹೆಚ್ಚು ನೀರನ್ನೇ ಹೊಂದಿರುವ ಭಾರವಾಗಿರುವ ಕಾಯಿಗಳು ಎಳನೀರು. ಇದನ್ನು ಶೀಯಾಳ, ಬೊಂಡ ಎಂಬ ಹೆಸರಿನಿಂದಲೂ ಕರೆಯುತ್ತಾರೆ. ಆರೋಗ್ಯಪಾಲನೆ ಮತ್ತು ಚೈತನ್ಯವೃದ್ಧಿಗೆ ನೈಸರ್ಗಿಕವಾಗಿ ದೊರೆಯುವ ಶಕ್ತಿವರ್ಧಕ ಪಾನೀಯ ಎಂಬುದಾಗಿ ಇಡೀ ವಿಶ್ವ ಇಂದು ಅರಿತಿದೆ. ಆದುದರಿಂದ ಆರೋಗ್ಯ ಸರಿ ಇರಲಿ ಅಥವಾ ಇಲ್ಲದಿರಲಿ,  ಆರೋಗ್ಯದ ಬಗ್ಗೆ ಯಾರು ಹೆಚ್ಚು ಕಾಳಜಿ ಹೊಂದಿರುತ್ತಾರೋ ಅಂಥವರಿಗೆ ಇದು ನಿತ್ಯದ ಪಾನೀಯವಾಗಿದೆ ಎಂದರೆ ಅತಿಶಯೋಕ್ತಿಯಲ್ಲ.

ಇಡೀ ಕುಟುಂಬ ಸದಸ್ಯರ ಅಗತ್ಯ ಪೌಷ್ಠಿಕಾಂಶದ ಬೇಡಿಕೆಗಳನ್ನು ಈಡೇರಿಸಲು ಬಯಸುವ, ಕುಟುಂಬ ಸ್ವಾಸ್ಥ್ಯದ ಬಗ್ಗೆ ವಿಶೇಷ ಕಾಳಜಿಯುಳ್ಳ ವ್ಯಕ್ತಿಗಳಿಗೆ ಎಳನೀರು ದಿನನಿತ್ಯದ ಅಗತ್ಯವಾಗಿದೆ. ಯಾವುದೇ ರಾಸಾಯನಿಕಗಳನ್ನು ಒಳಗೊಂಡಿರದ, ಕೃತಕಬಣ್ಣ, ವಾಸನೆಗಳಿಂದ ಮುಕ್ತವಾದ, ಆಬಾಲ ವೃದ್ಧರಿಗೆ ನೀಡಬಹುದಾದ, ಅತ್ಯಂತ ಸುರಕ್ಷಿತ, ಶಕ್ತಿವರ್ಧನೆಯ ಪೇಯ ಈ ಎಳನೀರು.

ಎಳನೀರಿನ ವಿಶೇಷ ಗುಣಗಳು-

  • ಯಾವದೇ ಹೊರಗಿನ ಅಂಶಗಳು ಸೇರ್ಪಡೆಯಾಗಲು ಅವಕಾಶವಿಲ್ಲದ ಕಾರಣ ನಿಸರ್ಗದತ್ತವಾಗಿ ಶೇಖರವಾಗಿದ್ದುದರಿಂದ ಇದು ನಿಶ್ಕಲ್ಮಷ.
  • ದ್ವಿತೀಯ ಮಹಾಯುದ್ಧದ ಸಮಯದಲ್ಲಿ ಪೆಸಿಫಿಕ್ ಸಾಗರ ಪ್ರದೇಶಗಳಲ್ಲಿ, ಗಾಯಗೊಂಡ ಯೋಧರಿಗೆ     ತುರ್ತು ಪ್ಲಾಸ್ಮಾ ನೀಡಿಕೆಗಾಗಿ ನೇರವಾಗಿ ಎಳನೀರನ್ನು ಸೇರಿಸುತ್ತಿದ್ದರೆಂಬುದು ಆಶ್ಚರ್ಯಕರವಾದರೂ     ಸತ್ಯವಾಗಿದೆ.
  • ಹಾಲಿಗಿಂತ ಕಡಿಮೆ ಕೊಬ್ಬಿನಾಂಶ ಹೊಂದಿದೆ, ಕೊಲೆಸ್ಟ್ರಾಲ್ ಅಂಶದಿಂದ ಸಂಪೂರ್ಣ ಮುಕ್ತವಾಗಿದ್ದು, ಶರೀರಕ್ಕೆ ಅಗತ್ಯವಿರುವ HDL ಎಂಬ ಒಳ್ಳೆಯ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಿಸಲು ಸಹಾಯಕವಾಗಿದೆ.
  • ನಮ್ಮ ದೇಹಕ್ಕೆ ಅತ್ಯಗತ್ಯವಾದ ವಿಟಾಮಿನ್, ಇತರೆ ಖನಿಜಾಂಶಗಳನ್ನು ಹೊಂದಿರುವುದರಿಂದ ಆರೋಗ್ಯದಾಯಕ ಟಾನಿಕ್ ಇದಾಗಿದೆ.
  • ಆಹ್ಲಾದಕರ ಪಾನೀಯ ಮತ್ತು ಒಂದು ಬಾಳೆ ಹಣ್ಣಿನಲ್ಲಿರುವುದಕ್ಕಿಂತ ಹೆಚ್ಚಿನ ಪ್ರಮಾಣದ ಪೊಟಾಷಿಯಂ ಒಳಗೊಂಡಿದೆ.
  • ಆಹ್ಲಾದ, ಶಕ್ತಿನೀಡವ ಪಾನೀಯಗಳಿಗಿಂತ ಕಡಿಮೆ ಸೋಡಿಯಂ ಹೊಂದಿದೆ.
  • ಹೃದಯಕ್ಕೆ ಸಂಬಂಧಿಸಿದ ತೊಂದರೆಗಳು ಮತ್ತು ದೇಹದ ಜಲಾಂಶ ನಷ್ಟವಾಗುವಿಕೆಯನ್ನು ಕಡಿಮೆ ಮಾಡುತ್ತದೆ.
  • ಸಂಸ್ಕರಿಸಿದ ಸಕ್ಕರೆಗೆ ಬದಲಾಗಿ ನೈಸರ್ಗಿಕ ಸಕ್ಕರೆ ಅಂಶ ಮತ್ತು ರುಚಿ ಹೊಂದಿದೆ.
  • ಎಳನೀರನ್ನು ಕುಡಿಯುವುದರಿಂದ ರಕ್ತಸಂಚಾರ ಸರಾಗವಾಗಿ ನಡೆಯುತ್ತದಾದ್ದರಿಂದ ಇದು ಜೀವಜಲವೂ ಹೌದು.
  • ಬೇಸಿಗೆಯ ಬಿಸಿಲಿನ ಝಳದಿಂದ ತತ್ತರಿಸಿ ಹೋದವರ ಶರೀರಕ್ಕೆ ತಂಪು ನೀಡಿ ದೇಹದ ಸಮತೋಲನವನ್ನು ಕಾಪಾಡುತ್ತದೆ.
  • ಯಾರೇ ಕುಡಿದರೂ ಯಾವುದೇ ಅಡ್ಡಪರಿಣಾಮಗಳಿಲ್ಲ.
  • ದೂರಪ್ರಯಾಣಿಸುವಾಗ ಎಳನೀರು ಕೆಡುವ  ಭಯವಿಲ್ಲ, ಆದರೂ ಗೊಂಚಲಿನಿಂದ ಬೇರ್ಪಡಿಸಿದ ೨೪ ರಿಂದ ೩೬ ಗಂಟೆಗಳವರೆಗೆ ಮಾತ್ರ ಅದರ ತಾಜಾತನವಿರುತ್ತದೆ. ನಂತರ ಫ್ರಿಜ್‌ನಲ್ಲಿ ಇರಿಸಿದರೂ ತಾಜಾತನ ನಾಶವಾಗುತ್ತದೆ.
  • ದಿಢೀರ್ ಚೇತೋಹಾರಿ ಮತ್ತು ಅತ್ಯಂತ ಶಕ್ತಿದಾಯಕವಾದ್ದರಿಂದ ಅಶಕ್ತರಿಗೆ ಹೊಸ ಚೈತನ್ಯವನ್ನು ತುಂಬುತ್ತದೆ ಮತ್ತು ಹಣ್ಣಿನ ರಸಗಳಿಗಿಂತಲೂ ಹೆಚ್ಚು ಆರೋಗ್ಯಕರವಾಗಿದೆ.
  • ದಿನಪೂರ್ತಿ ಲವಲವಿಕೆಯಿಂದ ಕಾರ್ಯಮಗ್ನವಾಗಿರಲು ಉಪಯುಕ್ತ.
  • ಸಂಪೂರ್ಣವಾಗಿ ಔಷಧೀಯ ಗುಣಧರ್ಮಗಳನ್ನು ಒಳಗೊಂಡಿರುವುದರಿಂದ ಎಳನೀರನ್ನು ನಿಯಮಿತವಾಗಿ ಬಳಸಬಹುದು.
  • ಎಳನೀರಿನ ಔಷಧೀಯ ಗುಣಗಳು-
  • ಮೂತ್ರಲ ಮತ್ತು ಮೂತ್ರದಸೋಂಕನ್ನು ತಡೆಗಟ್ಟುವ ಗುಣ ಹೊಂದಿರುವ ಕಾರಣ ಕಿಡ್ನಿಕಲ್ಲುಗಳ ಸಂಭವವನ್ನು ಕಡಿಮೆ ಮಾಡುತ್ತದೆ.
  • ಕರುಳಿನ ಕಾರ್ಯವನ್ನು ಮತ್ತು ಪಚನಶಕ್ತಿಯನ್ನು ಹೆಚ್ಚಿಸುತ್ತದೆ. ಆದ್ದರಿಂದ ಶಿಶುಗಳಲ್ಲಿ ಪಚನಕ್ರಿಯೆಗೆ ಯಾ ಕರುಳಿನ ಸಮಸ್ಯೆಗೆ ತುಂಬಾ ಪರಿಣಾಮಕಾರಿಯಾಗಿದೆ.
  • ಆ್ಯಂಟಿಫಂಗಲ್, ಆ್ಯಂಟಿವೈರಲ್, ಆ್ಯಂಟಿಬ್ಯಾಕ್ಟೀರಿಯಲ್ ಗುಣಗಳನ್ನು ಹೊಂದಿದೆ.
  • ಅತಿಸಾರ\ಭೇದಿಯಿಂದ ಅಥವಾ ಇನ್ನಾವದೇ ಕಾರಣಗಳಿಂದ ಶರೀರದಲ್ಲಿ ನೀರಿನಂಶದ ಕೊರತೆ  ನೀಗಿಸಲು ಉಪಯುಕ್ತ. ಅಲ್ಲದೇ ಮಲಬದ್ಧತೆ ನಿವಾರಣೆಗೂ ಸಹಾಯಕ.
  • ದೇಹವನ್ನು ತಂಪಾಗಿಸುವ ಗುಣಹೊಂದಿರುವುದರಿಂದ ಬೇಸಿಗೆಯಲ್ಲಿ ಉಂಟಾಗುವ ಬೆವರುಸಾಲೆ, ಮೀಸಲ್ಸ್, ದಡಾರಗಳಿಂದ ಉಂಟಾಗುವ ಬೊಬ್ಬೆ (ಗುಳ್ಳೆ)ಗಳಿಗೆ ಎಳನೀರು ಲೇಪಿಸುವುದರಿಂದ ಕಡಿಮೆಯಾಗುತ್ತದೆ.
  • ಹೊಟ್ಟೆಯಲ್ಲಿರುವ ಕ್ರಿಮಿಗಳನ್ನು ನಾಶಮಾಡುತ್ತದೆ.
  • ಎಳನೀರಿನಲ್ಲಿರುವ ಸಲೈನ್ ಮತ್ತು ಅಲ್ಬುಮಿನ್ ಕಾಲರಾ ರೋಗಕ್ಕೆ ಅತ್ಯುಪಯುಕ್ತ ಔಷಧಿ.
  • ಖನಿಜ ವಿಷವನ್ನು ದೇಹದಿಂದ ಹೊರದಬ್ಬುತ್ತದೆ.

 

Share This Article
error: Content is protected !!
";