Ad image

ವಿದ್ಯಾರ್ಹತೆ ಮತ್ತು ದೃಢತೆ

Vijayanagara Vani
ವಿದ್ಯಾರ್ಹತೆ ಮತ್ತು ದೃಢತೆ

ಬ್ಯಾಂಕ್ ನಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಆಗಿದ್ದ ಆತ ಮೆದು ಸ್ವಭಾವದವರಾಗಿದ್ದು ತನ್ನ ಪತ್ನಿ ಮತ್ತು ಮಕ್ಕಳ ಮೇಲೆ ವಿಪರೀತ ಪ್ರೀತಿ ಮತ್ತು ಕಾಳಜಿಯನ್ನು ಹೊಂದಿದ್ದರು. ಆಕೆ ಕೂಡ ಬಿ ಎಸ್ ಸಿ ಪದವೀಧರೆ. ಮನೆವಾರ್ತೆ ನೋಡಿಕೊಂಡಿ ದ್ದಳು.

- Advertisement -
Ad imageAd image

ತನ್ನ ಮಕ್ಕಳನ್ನು ನನ್ನ ಬಳಿ ತರಬೇತಿಗೆ ಕರೆತಂದ ದಂಪತಿಗಳು ಮುಂದೆ ಆಕೆ ನನ್ನ ಫಿಟ್ನೆಸ್ ಸೆಂಟರ್ ನಲ್ಲಿ ಯೋಗ ಮತ್ತು ಜಿಮ್ ತರಗತಿಗಳಿಗೆ ಸೇರಿಕೊಂಡಳು. ಹೊಸ ಬಟ್ಟೆಗಳನ್ನು ಕಿವಿಯೋಲೆಗಳನ್ನು ಧರಿಸಿ ಚೆನ್ನಾಗಿ ಅಲಂಕಾರ ಮಾಡಿಕೊಳ್ಳುವ ಆಕೆ ನನ್ನ ಸರಳ ಜೀವನ ಶೈಲಿಗೆ ‘ಎಲ್ಲಾ ಇದ್ದು ಇಲ್ದಂಗೆ ಇರ್ತೀರಿ… ಉಟ್ಟು ತೊಟ್ಟು ಮಾಡೋದಕ್ಕೆ ಏನು ಧಾಡಿ’ ಎಂದು ಛೇಡಿಸುತ್ತಿದ್ದಳು.
ಆಕೆಯ ತಮಾಷೆಯನ್ನು, ಪ್ರೀತಿಯ ಹೀಗಳಿಕೆಯನ್ನು
ನಕ್ಕು ತೇಲಿಸಿ ಬಿಡುತ್ತಿದ್ದೆ.

ಹೀಗೆಯೇ ಕೆಲ ದಿನಗಳ ನಂತರ ಆಕೆ ಸುಮ್ಮನೆ ಕುಳಿತೊಡನೆ ನನ್ನನ್ನು ನೆನಪಿಸಿಕೊಂಡು ‘ಅವರು ಹೀಗೆ ಸುಮ್ನೆ ಕುಳಿತುಕೊಳ್ಳುತ್ತಾರಾ? ಮತ್ತೆ ನಾನು ಯಾಕೆ ಕೂತ್ಕೋಬೇಕು’ ಎಂದು ಮನೆಯ ಹಲವಾರು ಕೆಲಸಗಳನ್ನು ತಾನೇ ಮಾಡಿಕೊಳ್ಳುವುದನ್ನು ಹೇಳಿ”ರೀ ನಾನು ನಿಮ್ಮಂಗೆ ಆಗ್ತಾ ಇದ್ದೀನಿ” ಅಂತ ಸಂತಸ ಪಡುತ್ತಿದ್ದಳು ನಮ್ಮೊಂದಿಗೆ ಯೋಗ ಮತ್ತು ಜಿಮ್ಗಳಲ್ಲಿ ಬೆವರು ಹರಿಸುವುದು, ನನ್ನ ತರಬೇತಿಗಳಲ್ಲಿ ಪಾಲ್ಗೊಳ್ಳುವುದು ಹೀಗೆ ನಮ್ಮ ಎಲ್ಲ ಚಟುವಟಿಕೆಗಳಲ್ಲಿ ತಾನು ಭಾಗಿಯಾಗುತ್ತಿದ್ದಳು. ಇಷ್ಟಲ್ಲದೇ ಪ್ರತಿ ವರ್ಷ ಶ್ರಾವಣದ ಶನಿವಾರಗಳಲ್ಲಿ ನಾವು ಹೋಗುವ 12 ಕಿಲೋಮೀಟರ್ ದೂರದ ಪಾದಯಾತ್ರೆಗೂ ನಮ್ಮ ಜೊತೆಗೂಡುತ್ತಿದ್ದಳು.
ಸ್ವಲ್ಪ ಹೆಚ್ಛೇ ಕಪ್ಪುಬಣ್ಣವನ್ನು, ಅಷ್ಟೇನೂ ಲಕ್ಷಣವಲ್ಲದ, ಕುಳ್ಳಗಿನ ಆದರೆ ಮಟ್ಟಸವಾದ ಆಕೆಯನ್ನು ಅತ್ಯಂತ ಪ್ರೀತಿಯಿಂದ ಅನುನಯಿಸುವ ಪತಿಯನ್ನು ನೋಡಿ ನಾವೆಲ್ಲ ಸೋಜಿಗಪಡುತ್ತಿದ್ದೆವು
. ಮೊದಮೊದಲು ನಾವು ಯಾಕೆ ಅಷ್ಟೊಂದು ದಣಿಯಬೇಕು, ಅಷ್ಟೊಂದ್ ಕೆಲಸ ಯಾಕೆ ಮಾಡಬೇಕು ಎನ್ನುತ್ತಿದ್ದ ಆಕೆ ನಿಧಾನವಾಗಿ ಪರಿಶ್ರಮ ಜೀವಿಯಾಗಿ ಬದಲಾದಳು. ಒಂದು ಶನಿವಾರದ ಮಧ್ಯಾಹ್ನ ನಾನು ತರಗತಿಗಳನ್ನು ತೆಗೆದುಕೊಳ್ಳುವಾಗ ಮಕ್ಕಳನ್ನು ತರಗತಿಗೆ ಬಿಡಲು ಬಂದ ಆಕೆ “ಪಕ್ಕದ ಮನೆಗೆ ಸ್ವಾಮೀಜಿ ಬಂದಿದ್ದರು, ಅದಕ್ಕೆ ಸೀರೆ ಉಟ್ಟಿದೀನಿ ನೋಡಿ ಹೇಗ್ ಕಾಣ್ತೀನಿ” ಎಂದು ತೋರಿಸಿ ಮಾತನಾಡಿ ಹೊರಟು ಹೋದರು. ಸ್ವಲ್ಪ ಸಮಯದಲ್ಲಿಯೇ ಆಕೆಯ ಪಕ್ಕದ ಮನೆಯಲ್ಲಿದ್ದ ನನ್ನ ಇನ್ನೋರ್ವ ಸ್ನೇಹಿತೆ ಕರೆ ಮಾಡಿ ಆಕೆ ನಮ್ಮ ತರಗತಿಗೆ ಬಂದ ಸಮಯದಲ್ಲಿ ಆಕೆಯ ಪತಿ ಊಟ ಮಾಡಿ ತುಸು ವಿಶ್ರಾಂತಿಗೆ ಜಾರಿದ್ದವರು ಎದ್ದು ನಿಲ್ಲುತ್ತಲೇ ತೀವ್ರ ಹೃದಯಾಘಾತವಾಗಿರುವ ವಿಷಯವನ್ನು ತಿಳಿಸಿ ಪಕ್ಕದ ಮನೆಯವರೆಲ್ಲ ಆಸ್ಪತ್ರೆಗೆ ಕರೆದೊಯ್ದಿರುವುದಾಗಿಯೂ ಆತ ಉಳಿದಿರುವ ಸಾಧ್ಯತೆಗಳು ಕಡಿಮೆ ಎಂದು ಹೇಳಿದಳು.

ತೀವ್ರ ದಿಗ್ಭ್ರಮೆಗೆ ಒಳಗಾದ ನಾನು ತರಗತಿಗಳನ್ನು ಕ್ಯಾನ್ಸಲ್ ಮಾಡಿ, ನನ್ನ ಪತಿಗೆ ವಿಷಯ ತಿಳಿಸಿದೆ.ಆಸ್ಪತ್ರೆಗೆ ಹೋದಾಗ ಆತ ತೀರಿ ಹೋಗಿದ್ದನ್ನು ವೈದ್ಯರು ಕನ್ಫರ್ಮ್ ಮಾಡಿದರು.
ನಿಧಾನವಾಗಿ ಆಕೆಯ ಫೋನ್ ಪಡೆದು ಆಕೆಯ ತಂದೆ, ಮೈದುನ ಮುಂತಾದವರಿಗೆ ಕರೆ ಮಾಡಿ ವಿಷಯವನ್ನು ತಿಳಿಸಿದೆವು. ಮನೆಗೆ ಹೋಗಿ ಅವಶ್ಯಕ ಬಟ್ಟೆ ಬರೆಗಳನ್ನು ತೆಗೆದುಕೊಳ್ಳಲು ಆಕೆ ಮತ್ತು ಆಕೆಯ ಹಿರಿಮಗಳೊಂದಿಗೆ ನಾವು ಹೋದಾಗ ಆಕೆಗೆ ತನ್ನ ಪತಿ ತೀರಿರಬಹುದೆಂಬ ಅಂದಾಜಾಗಿ ಜೋರಾಗಿ ಅಳಲಾರಂಭಿಸಿದಳು.

ಆಸ್ಪತ್ರೆಗೆ ಮರಳಿ ಆಕೆಯ ಪತಿಯ ಶವವನ್ನು ಆತನ ಸಹೋದ್ಯೋಗಿಗಳು ವಾಹನ ಒಂದರಲ್ಲಿ ಕರೆದೊಯ್ಯಲು ವ್ಯವಸ್ಥೆ ಮಾಡಿದರೆ ನಮ್ಮ ವಾಹನದಲ್ಲಿ ಆಕೆ ಮತ್ತು ಆಕೆಯ ಮಕ್ಕಳನ್ನು ಆಕೆಯ ಪಕ್ಕದ ಮನೆಯವರೊಂದಿಗೆ ನನ್ನ ಮಗನೊಂದಿಗೆ ಕಳುಹಿಸಲು ನನ್ನ ಪತಿ ಸಜ್ಜು ಮಾಡಿದರು . ಕೇವಲ 19ರ ಹರೆಯದ ನನ್ನ ಮಗ,ನನ್ನ ಸೋದರ ಸಂಬಂಧಿ ಮತ್ತು ಪಕ್ಕದ ಮನೆಯ ಓರ್ವ ಅಜ್ಜಿ ಅವರ ಜೊತೆಗಿದ್ದರು.

ಮುಂದೆ ಪತಿಯ ದಿನಕರ್ಮಗಳೆಲ್ಲ ಮುಗಿದ ಮೇಲೆ ಆಕೆ ಮತ್ತೆ ಮರಳಿ ಬಂದಳು. ಪದವೀಧರೆಯಾದ ಆಕೆಗೆ ಪತಿಯ ನೌಕರಿಯನ್ನು ಪಡೆಯಲು ಅವಶ್ಯಕವಾದ ಯಾವುದೇ ರೀತಿಯ ದಾಖಲಾತಿಗಳಿರಲಿಲ್ಲ. ಬ್ಯಾಂಕ್ ಉದ್ಯೋಗಿಯಾಗಿದ್ದರೂ ಕೂಡ ಆಕೆಯ ಪತಿ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಗಳೇನನ್ನೂ( ಮೂರು ವರ್ಷಕ್ಕೊಮ್ಮೆ ಬದಲಾಯಿಸುವ ಬೇಕು ಎನ್ನುವ ಕಾರಣಕ್ಕೆ ) ಹೊಂದಿರಲಿಲ್ಲ ಎಂದರೆ ನಂಬುತ್ತೀರಾ?

ಮತ್ತೆ ಹಲವಾರು ದಿನಗಳ ಕಾಲ ಓಡಾಡಿ ಆಕೆಗೆ ಬೇಕಾದ ಎಲ್ಲ ದಾಖಲೆಪತ್ರಗಳನ್ನು ಮಾಡಿಸಿ ಕೊಟ್ಟ ಮೇಲೆ ಆಕೆಯ ಪತಿ ಕೆಲಸ ಮಾಡುತ್ತಿದ್ದ ಬ್ಯಾಂಕಿನ ಶಾಖೆಯೊಂದು ಆಕೆಯ ತವರೂರಲ್ಲಿದ್ದು ಅಲ್ಲಿಯೇ ನೌಕರಿ ಪಡೆದಳು.

ಆಗಾಗ ಕರೆ ಮಾಡಿ ಮಾತನಾಡುವ ಆಕೆ ‘ಅಂದು ಸ್ವಭಾವತಹ ಸೋಂಬೇರಿ ಆಗಿರುತ್ತಿದ್ದ ತಾನು ಇಂದು ಬ್ಯಾಂಕನ ಕೆಲಸಗಳನ್ನು ಆರಾಮಾಗಿ ಮಾಡಿ ಮುಗಿಸುತ್ತಿರುವುದಾಗಿಯೂ, ಬದಲಿ ಕೆಲಸದ ವ್ಯವಸ್ಥೆಯನ್ನು ಮಾಡಿದಾಗ ಹಣಕಾಸಿನ ವ್ಯವಹಾರವನ್ನು ಕೂಡ ನಿರ್ವಹಿಸಿರುವುದನ್ನು ಸಂತಸದಿಂದಲೇ ಹೇಳಿಕೊಳ್ಳುತ್ತಾಳೆ.
ಅಂದು 5ನೇ ಮತ್ತು ಮೂರನೇ ತರಗತಿ ಓದುತ್ತಿದ್ದ ಇಬ್ಬರು ಹೆಣ್ಣು ಮಕ್ಕಳಲ್ಲಿ ಹಿರಿಯ ಮಗಳು ಇದೀಗ
ಬೆಂಗಳೂರಿನ ನರ್ಸಿಂಗ್ ಕಾಲೇಜಿನಲ್ಲಿ ಮೊದಲ ವರ್ಷದ ಪದವಿಯನ್ನು ಕಲಿಯುತ್ತಿದ್ದು ಎರಡನೇ ಮಗಳು ಕೂಡ ಬೆಂಗಳೂರಿನಲ್ಲಿಯೇ ಪಿಯುಸಿ ಮೊದಲ ವರ್ಷದಲ್ಲಿ ಓದುತ್ತಿದ್ದಾಳೆ. ತನ್ನನ್ನು ಅಪಾರವಾಗಿ ಪ್ರೀತಿಸುತ್ತಿದ್ದ ಪತಿ ತನ್ನೊಂದಿಗೆ ಇದ್ದಾನೆ ಮುಂದೆಯೂ ಇರುತ್ತಾನೆ ಎಂಬ ಭಾವದಲ್ಲಿ ಬದುಕುತ್ತಿರುವ ಆಕೆ ತನ್ನ ಮತ್ತು ಮಕ್ಕಳ ಬದುಕನ್ನು ಮತ್ತೆ ಕಟ್ಟಿಕೊಂಡಿದ್ದಾಳೆ.

ನೋಡಿದಿರಾ ಸ್ನೇಹಿತರೆ, ಬದುಕು ಬದಲಾಗುತ್ತದೆ ಎಷ್ಟೋ ಬಾರಿ ನಾವು ನಮ್ಮ ಬದುಕನ್ನು ಬಹಳ ಹಗುರವಾಗಿ ಸ್ವೀಕರಿಸುತ್ತೇವೆ, ವಿದ್ಯಾಭ್ಯಾಸದೆಡೆ ನಿರ್ಲಕ್ಷ ತೋರುತ್ತೇವೆ…. ಬದುಕು ಯಾವ ಹಂತದಲ್ಲಿಯಾದರೂ ನಮಗೆ ಕೈಕೊಡಬಹುದು. ಅಂತಹ ಸಮಯದಲ್ಲಿ ನಮಗೆ ನಮ್ಮ ವಿದ್ಯೆ ಮತ್ತು ದೃಢತೆಗಳು ಜೊತೆಯಾಗುತ್ತದೆ ಎಂಬುದಕ್ಕೆ ಮೇಲಿನ ಘಟನೆಯೇ ಸಾಕ್ಷಿ.

ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್

Share This Article
error: Content is protected !!
";