ಧಾರವಾಡ ನವೆಂಬರ್ 29:* ಹುಬ್ಬಳ್ಳಿಯ ಅಮೋಘ ಕಲ್ಯಾಣಮಠ ಎಂಬುವವರು ಎದುರದಾರರಾದ ಗ್ಲ್ಯಾಮ್ ರೀಟೇಲ್ ಪ್ರೈ. ಲಿ.ನ ವೆಬಸೈಟಿನ ಮುಖಾಂತರ ದಿ:19/05/2024 ರಂದು ಕಾರಿಗೆ ಸಂಬಂಧಪಟ್ಟ ವಸ್ತುಗಳನ್ನು ಖರೀದಿಸಲು ಬಯಸಿದ್ದರು. ಇಬ್ಬರೂ ಮಧ್ಯೆ ಒಪ್ಪಂದದಂತೆ ಅದರ ಒಟ್ಟು ಮೊತ್ತ ರೂ.70,000/- ಅಂತಾ ನಿಗದಿಯಾಗಿತ್ತು. ಎದುರುದಾರರು ಮೇಲಿನ ಮೊತ್ತದ 50% ಪಾವತಿಸುವಂತೆ ದೂರುದಾರರಿಗೆ ಹೇಳಿದ್ದರು. ಅದರಂತೆ ದೂರುದಾರರು ಎದುರುದಾರರ ಬ್ಯಾಂಕ್ ಖಾತೆಗೆ ಪೇಟಿಯಮ್ ಮುಖಾಂತರ ರೂ.35,000/- ಹಣವನ್ನು ಪಾವತಿಸಿದ್ದರು. ಎದುರುದಾರರು ಮುಂದಿನ 10-15 ದಿನಗಳಲ್ಲಿ ವಸ್ತುಗಳನ್ನು ಕಳುಹಿಸುವುದಾಗಿ ಹೇಳಿದ್ದರು. ಆದರೆ ಇವತ್ತಿನವರೆಗೂ ಯಾವುದೇ ವಸ್ತುಗಳನ್ನು ದೂರುದಾರರಿಗೆ ಕಳುಹಿಸಿರುವುದಿಲ್ಲ ಮತ್ತು ಹಣವನ್ನು ಸಹ ಮರಳಿ ಕೊಟ್ಟಿರಲಿಲ್ಲ. ದೂರುದಾರ/ಗ್ರಾಹಕ ಎದುರುದಾರರ ಈ ನಡಾವಳಿಕೆ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಹೇಳಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರುದಾರರು ದಿ:20.08.2024ರಂದು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ. ಭೂತೆ ಹಾಗೂ ವಿಶಾಲಾಕ್ಷಿ. ಬೋಳಶೆಟ್ಟಿ ಮತ್ತು ಪ್ರಭು. ಹಿರೇಮಠ ಸದಸ್ಯರು, ದೂರುದಾರರು ತಮ್ಮ ಪ್ರಕರಣ ಸಾಬೀತು ಪಡಿಸಲು ಹಾಜರುಪಡಿಸಿದ ದಾಖಲೆಗಳನ್ನು ಪರಿಶೀಲಿಸಿದ ಆಯೋಗ ದೂರುದಾರರು ದಿ:19/05/2024ರಂದು ಎದುರುದಾರರ ವೆಬ್ ಸೈಟ್ ಮುಖಾಂತರ ಕಾರಿಗೆ ಸಂಬಂಧಪಟ್ಟಂತಹ ವಸ್ತುಗಳನ್ನು ಖರೀದಿಸುವ ಸಲುವಾಗಿ 50% ಹಣ ಪಾವತಿಸಿರುವುದು ದಾಖಲೆಗಳ ಮುಖಾಂತರ ಕಂಡುಬಂದಿರುತ್ತದೆ ಮತ್ತು ದೂರುದಾರ ಹಾಗೂ ಎದುರುದಾರರ ವಾಟ್ಸ್ಪ್ ಸಂದೇಶಗಳ ಮುಖಾಂತರ ಎದುರುದಾರರು ವಸ್ತುಗಳ ವಿವರಣೆ ಮತ್ತು ಅವುಗಳ ಬೆಲೆ ಮತ್ತು ಹಣ ಪಾವತಿಸಲು ಕಳುಹಿಸಿದ ಯು.ಪಿ.ಆಯ್ ಅನ್ನು ಕಳುಹಿಸಿರುವುದು ಮತ್ತು ಹಣ ಪಾವತಿಸಿದ್ದನ್ನು ಒಪ್ಪಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಎದುರುದಾರರು ದೂರುದಾರರ ವಸ್ತುಗಳನ್ನು ಕಳುಹಿಸದೇ ಸೇವಾ ನ್ಯೂನ್ಯತೆ ಎಸಗಿದ್ದಾರೆಂದು ಅಭಿಪ್ರಾಪಟ್ಟು ದೂರುದಾರರು ಪಾವತಿ ಮಾಡಿದಂತಹ ರೂ.35,000/-ಗಳನ್ನು ದಿ:19/05/2024 ರಿಂದ ಶೇ10% ರಂತೆ ಬಡ್ಡಿ ಲೆಕ್ಕ ಹಾಕಿ ಪೂರ್ತಿ ಹಣ ಸಂದಾಯವಾಗುವವರೆಗೆ ದೂರುದಾರರಿಗೆ ಕೊಡುವಂತೆ ಆದೇಶಿಸಿದೆ. ದೂರುದಾರರಿಗೆ ಆಗಿರುವ ಮಾನಸಿಕ ಹಿಂಸೆ ಮತ್ತು ತೊಂದರೆಗೆ ರೂ.25,000/- ಪರಿಹಾರ ಹಾಗೂ ರೂ.10,000/- ಪ್ರಕರಣದ ಖರ್ಚು ವೆಚ್ಚ ಒಂದು ತಿಂಗಳೊಳಗಾಗಿ ದೂರುದಾರರಿಗೆ ಕೊಡುವಂತೆ ಎದುರುದಾರರಾದ ಗ್ಲ್ಯಾಮ ರೀಟೇಲ್ ಪ್ರೈ. ಲಿ. ಗೆ ಆಯೋಗ ನಿರ್ದೇಶಿಸಿದೆ.