ತೆಕ್ಕಲಕೋಟೆ, ಸೆ.24: “ಒನ್ ಮಂತ್ ಒನ್ ವಿಸಿಟ್” ಕಾರ್ಯಕ್ರಮದ ಅಂಗವಾಗಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಬೋಯಕೇರಿ ಹಾಗೂ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಉಪ್ಪರವಾಡಿ ವಿದ್ಯಾರ್ಥಿಗಳು ತೆಕ್ಕಲಕೋಟೆ ಕೇಂದ್ರ ಗ್ರಂಥಾಲಯಕ್ಕೆ ಶೈಕ್ಷಣಿಕ ಭೇಟಿ ನೀಡಿದರು.
ಕಾರ್ಯಕ್ರಮದ ಭಾಗವಾಗಿ ಜೂನ್ ತಿಂಗಳಲ್ಲಿ ಕಸ ವಿಲೇವಾರಿ ಘಟಕಕ್ಕೆ ಹಾಗೂ ಜುಲೈ ತಿಂಗಳಲ್ಲಿ ತೆಕ್ಕಲಕೋಟೆ ಪೊಲೀಸ್ ಠಾಣೆಗೆ ವಿದ್ಯಾರ್ಥಿಗಳು ಭೇಟಿ ನೀಡಿದ್ದರು. ಇದರ ಮುಂದುವರಿದ ಭಾಗವಾಗಿ ಸೆಪ್ಟೆಂಬರ್ ತಿಂಗಳ ಶೈಕ್ಷಣಿಕ ಭೇಟಿ ಕೇಂದ್ರ ಗ್ರಂಥಾಲಯದಲ್ಲಿ ನಡೆಯಿತು.
ಶಾಲೆಗಳ ಮುಖ್ಯಗುರು ದುರುಗೇಶ ಕೆ. ನೇತೃತ್ವದಲ್ಲಿ ನಡೆದ ಭೇಟಿಯಲ್ಲಿ ಗ್ರಂಥಪಾಲಕ ಜಗದೇವಪ್ಪ ಹಾಗೂ ಗ್ರಂಥಾಲಯ ಸಿಬ್ಬಂದಿ ಕಾಡಸಿದ್ದಪ್ಪ ಅವರು ವಿದ್ಯಾರ್ಥಿಗಳಿಗೆ ಗ್ರಂಥಾಲಯದ ಮಹತ್ವ, ಪುಸ್ತಕಗಳ ಬಳಕೆ ಹಾಗೂ ಓದುವ ಅಭ್ಯಾಸದ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಅತಿಥಿ ಶಿಕ್ಷಕರಾದ ಶೇಖರಣ, ರೇವಣಸಿದ್ದ, ಹುಚ್ಚಿರಪ್ಪ ಹಾಗೂ ಮುಖ್ಯಗುರು ದುರುಗೇಶ ಕೆ. ಅವರನ್ನು ಗ್ರಂಥಪಾಲಕ ಜಗದೇವಪ್ಪ ಅವರು ವಿವಿಧ ಕೃತಿಗಳನ್ನು ಕೊಡುಗೆಯಾಗಿ ನೀಡಿ ಗೌರವಿಸಿದರು.
ವಿದ್ಯಾರ್ಥಿಗಳು ಗ್ರಂಥಾಲಯದ ವಿವಿಧ ವಿಭಾಗಗಳನ್ನು ವೀಕ್ಷಿಸಿ, ಪುಸ್ತಕಗಳ ಕುರಿತು ಆಸಕ್ತಿಯಿಂದ ಮಾಹಿತಿ ಪಡೆದುಕೊಂಡರು.