ಮಸ್ಕಿ: ತಾಲೂಕಿನ ಸರ್ಕಾರಿ ಕೊಟೆಕಲ್ ಶಾಲೆಯಲ್ಲಿ ಶಿಕ್ಷಕರೊಬ್ಬರು ಮದ್ಯಪಾನ ಮಾಡಿ ಶಾಲೆಗೆ ಆಗಮಿಸಿ, ವಿದ್ಯಾರ್ಥಿಗಳ ಎದುರೇ ನಿಯಂತ್ರಣ ಕಳೆದುಕೊಂಡು ತೂರಾಡಿದ ಘಟನೆ ಶನಿವಾರ ಬೆಳಿಗ್ಗೆ ನಡೆದಿದೆ. ಶಿಕ್ಷಕರ ಇಂತಹ ವರ್ತನೆಗೆ ವಿದ್ಯಾರ್ಥಿಗಳ ಪಾಲಕರು ಹಾಗೂ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿ, ಶಿಕ್ಷಣ ಇಲಾಖೆಯು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಶನಿವಾರ ಬೆಳಿಗ್ಗೆ ತರಗತಿಗಳು ಆರಂಭವಾಗುವ ಮುನ್ನ ಶಾಲೆಯಲ್ಲಿ ಪ್ರಾರ್ಥನೆ ನಡೆಯುತ್ತಿದ್ದ ವೇಳೆ ಶಿಕ್ಷಕ ಹನುಮಂತಪ್ಪ ಎಂಬವರು ಪಾನಮತ್ತ ಸ್ಥಿತಿಯಲ್ಲಿ ಶಾಲೆಗೆ ಆಗಮಿಸಿದ್ದರು ಎನ್ನಲಾಗಿದೆ. ಜೋಲಿ ಹೊಡೆಯುತ್ತಾ ಸರಿಯಾಗಿ ನಿಲ್ಲಲೂ ಸಾಧ್ಯವಾಗದೆ ತೂರಾಡುತ್ತಿದ್ದುದನ್ನು ಗಮನಿಸಿದ ವಿದ್ಯಾರ್ಥಿಗಳು ಆತಂಕಗೊಂಡು ಇತರೆ ಶಿಕ್ಷಕರಿಗೆ ವಿಷಯ ತಿಳಿಸಿದ್ದಾರೆ.
ಘಟನೆಯ ಸುದ್ದಿ ಪಾಲಕರಿಗೆ ತಿಳಿಯುತ್ತಿದ್ದಂತೆ ಕೆಲವರು ಶಾಲೆಗೆ ಆಗಮಿಸಿ ಶಿಕ್ಷಕನ ವರ್ತನೆಯನ್ನು ತೀವ್ರವಾಗಿ ಖಂಡಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ. ಶಿಕ್ಷಕರು ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕಾದವರು. ಆದರೆ, ಶಾಲೆಯಲ್ಲೇ ಪಾನಮತ್ತ ಸ್ಥಿತಿಯಲ್ಲಿ ಕಾಣಿಸಿಕೊಳ್ಳುವುದು ಮಕ್ಕಳ ಶೈಕ್ಷಣಿಕ ವಾತಾವರಣದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ, ಶಿಕ್ಷಕರು ಪ್ರತಿನಿತ್ಯವೂ ಮದ್ಯಪಾನ ಮಾಡಿ ಶಾಲೆಗೆ ಬರುತ್ತಾರೆ ಎಂದು ಕೆಲವು ವಿದ್ಯಾರ್ಥಿಗಳು ಪಾಲಕರಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ಈ ಆರೋಪ ನಿಜವೇ ಎಂಬುದನ್ನು ಶಿಕ್ಷಣ ಇಲಾಖೆ ಸಮಗ್ರವಾಗಿ ಪರಿಶೀಲಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಶಾಲೆಯಂತಹ ಪವಿತ್ರ ಶೈಕ್ಷಣಿಕ ಸ್ಥಳದಲ್ಲಿ ಶಿಕ್ಷಕರೊಬ್ಬರು ಕರ್ತವ್ಯದ ವೇಳೆಯಲ್ಲಿ ಪಾನಮತ್ತ ಸ್ಥಿತಿಯಲ್ಲಿ ಕಾಣಿಸಿಕೊಂಡಿರುವ ಆರೋಪವನ್ನು ಇಲಾಖೆ ಗಂಭೀರವಾಗಿ ಪರಿಗಣಿಸಬೇಕಾಗಿದೆ. ವಿದ್ಯಾರ್ಥಿಗಳ ಸುರಕ್ಷತೆ, ಶಿಸ್ತು ಹಾಗೂ ಶಿಕ್ಷಣದ ಗುಣಮಟ್ಟದ ದೃಷ್ಟಿಯಿಂದ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಆರೋಪ ಸತ್ಯವೆಂದು ದೃಢಪಟ್ಟರೆ ನಿಯಮಾನುಸಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂಬುದು ಪಾಲಕರು ಹಾಗೂ ಗ್ರಾಮಸ್ಥರ ಒತ್ತಾಯವಾಗಿದೆ