ಸಿರುಗುಪ್ಪ, ಸೆ.26: ಸಿರುಗುಪ್ಪ ತಾಲೂಕು ಅನುದಾನ ರಹಿತ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟದ ವತಿಯಿಂದ ಸೆ.27ರಂದು ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ಆದರ್ಶ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿದೆ.
ನಗರದ ಶ್ರೀಶೈಲ ಪೀಠದ ಶಿವಶಕ್ತಿ ಸಾಂಸ್ಕೃತಿಕ ಭವನದಲ್ಲಿ ಭಾನುವಾರ ನಡೆಯಲಿರುವ ಕಾರ್ಯಕ್ರಮಕ್ಕೆ ಶ್ರೀಧರಗಡ್ಡೆಯ ಶ್ರೀ ಜಗದ್ಗುರು ಕೊಟ್ಟೂರು ಸ್ವಾಮಿ ಸಂಸ್ಥಾನ ಶಾಖಾ ಮಠದ ನಿಯೋಜಿತ ಉತ್ತರಾಧಿಕಾರಿ ಪೂಜ್ಯಶ್ರೀ ಮರಿಕೊಟ್ಟೂರು ದೇಶಿಕರು ದಿವ್ಯ ಸಾನಿಧ್ಯ ವಹಿಸಲಿದ್ದಾರೆ.
ಸಿರುಗುಪ್ಪ ತಾಲೂಕು ಅನುದಾನ ರಹಿತ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟದ ಅಧ್ಯಕ್ಷ ಡಾ. ಎಚ್. ಗೋಪಾಲ್ ತಾಳೂರು ಅಧ್ಯಕ್ಷತೆ ವಹಿಸಲಿದ್ದಾರೆ. ಬಳ್ಳಾರಿಯ ಪ್ರೇರಣಾತ್ಮಕ ಭಾಷಣಕಾರ ಹಾಗೂ ವ್ಯಕ್ತಿತ್ವ ಅಭಿವೃದ್ಧಿ ತರಬೇತುದಾರ ವಿಶ್ವನಾಥ್ ಮುಖ್ಯ ಉಪನ್ಯಾಸ ನೀಡಲಿದ್ದಾರೆ.
ಕ್ಷೇತ್ರ ಶಿಕ್ಷಣಾಧಿಕಾರಿ ಎಚ್. ಗುರಪ್ಪ ಸೇರಿದಂತೆ ವಿವಿಧ ಗಣ್ಯರು, ವಿಶೇಷ ಆಹ್ವಾನಿತರು ಹಾಗೂ ಮುಖ್ಯ ಅತಿಥಿಗಳು ಭಾಗವಹಿಸಲಿದ್ದಾರೆ.
ಒಕ್ಕೂಟದ ಎಲ್ಲಾ ಪದಾಧಿಕಾರಿಗಳು, ಖಾಸಗಿ ಶಾಲಾ ಆಡಳಿತ ಮಂಡಳಿಗಳ ಅಧ್ಯಕ್ಷರು, ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕ ವೃಂದದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಅಧ್ಯಕ್ಷ ಡಾ. ಎಚ್. ಗೋಪಾಲ್ ತಾಳೂರು ಹಾಗೂ ಪ್ರಧಾನ ಕಾರ್ಯದರ್ಶಿ ಬಿ.ಇ. ಮಧುವನ್ ಮನವಿ ಮಾಡಿದ್ದಾರೆ.