ರಾಯಚೂರು,ಮೇ.29 ವಸತಿ ನಿಲಯದ ವಿದ್ಯಾರ್ಥಿಗಳ ಆರೋಗ್ಯ ರಕ್ಷಣೆಯಲ್ಲಿ ವಸತಿ ನಿಲಯದ ಅಡುಗೆ ಸಿಬ್ಬಂದಿ ಮತ್ತು ಡಿ.ಗ್ರೂಪ್ ಸಿಬ್ಬಂದಿಯ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಅಡುಗೆ ತಯಾರಿಸುವಾಗ ಶುಚಿತ್ವದ ಬಗ್ಗೆ ಹೆಚ್ಚಿನ ಗಮನಹರಿಸುವುದು ಸಿಬ್ಬಂದಿಗಳ ಮತ್ತು ಪ್ರತಿಯೊಬ್ಬರ ಜವಾಬ್ದಾರಿಯಾಗಿರುತ್ತದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುರೇಂದ್ರಬಾಬು ಅವರು ಹೇಳಿದರು.
ಅವರು ಮೇ.29ರ(ಬುಧವಾರ) ನಗರದ ವಾಲ್ಮೀಕಿ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಖಾಯಂ ಹಾಗೂ ಹೊರಗುತ್ತಿಗೆ ಡಿ.ಗ್ರೂಪ್ ಸಿಬ್ಬಂದಿಗೆ ಅಡುಗೆ ತಯಾರಿಸುವ ಮತ್ತು ಸ್ವಚ್ಛತೆಯನ್ನು ಕಾಪಾಡುವ ಕುರಿತು ಒಂದು ದಿನದ ಕಾರ್ಯಾಗಾರವನ್ನು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳಲು ಸ್ವಚ್ಛತೆಯನ್ನು ಕಾಪಾಡುವುದು ಅತ್ಯಂತ ಮುಖ್ಯವಾಗಿದ್ದು, ಸ್ವಚ್ಛವಾದ, ಶುಚಿಯಾದ ಮತ್ತು ಬಿಸಿ ಆಹಾರವನ್ನು ವಿದ್ಯಾರ್ಥಿಗಳಿಗೆ ನೀಡಿದ್ದಲ್ಲಿ ಅವರ ಆರೋಗ್ಯವು ಉತ್ತಮವಾಗಿರುತ್ತದೆ. ಅಡುಗೆ ಹಾಗೂ ಡಿ.ಗ್ರೂಪ್ ಸಿಬ್ಬಂದಿ ಮೊದಲು ವೈಯಕ್ತಿಕ ಸ್ವಚ್ಛತೆಯನ್ನು ನೋಡಿಕೊಂಡು ಕರ್ತವ್ಯ ನಿರ್ವಹಿಸುವ ಸ್ಥಳದಲ್ಲಿಯೂ ಸ್ವಚ್ಛತೆಯನ್ನು ಕಾಪಾಡಲು ಮುಂದಾಗಬೇಕು ಎಂದರು.
ಇದೇ ವೇಳೆ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ರಾಜೇಂದ್ರ ಜಲ್ದಾರ ಪ್ರಾಸ್ತಾವಿಕವಾಗಿ ಮಾತನಾಡಿ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುವ ಅಡುಗೆ ಸಿಬ್ಬಂದಿ ಮತ್ತು ಡಿ.ಗ್ರೂಪ್ ಸಿಬ್ಬಂದಿ ಸ್ವಚ್ಛತೆಯ ಕುರಿತು ಕಾರ್ಯಾಗಾರದಲ್ಲಿ ನೀಡಲಾಗುವ ಸಲಹೆ ಸೂಚನೆಗಳನ್ನು ಸರಿಯಾದ ರೀತಿಯಲ್ಲಿ ತಿಳಿದುಕೊಂಡು ಕಾರ್ಯಾಗಾರದ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.
ನಂತರ ವರ್ಚುವಲ್ ಮೂಲಕ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ನಿರ್ದೇಶಕ ಬಿ.ಕಲ್ಲೇಶ ಅವರು ಮಾತನಾಡಿ, ವಿದ್ಯಾರ್ಥಿಗಳಿಗೆ ಅಡುಗೆ ಮಾಡಿ ಬಡಸುವುದು ಅತ್ಯಂತ ಜವಾಬ್ದಾರಿಯುತವಾದ ಕೆಲಸವಾಗಿದ್ದು, ಈ ನಿಟ್ಟಿನಲ್ಲಿ ಸಿಬ್ಬಂದಿಗಳು ಹೆಚ್ಚಿನ ಶ್ರಮ ವಹಿಸಿ ಕೆಲಸ ಮಾಡಬೇಕು ವಸತಿ ನಿಲಯದಲ್ಲಿರುವ ಶೌಚಾಲಯ ಮತ್ತು ಕೋಣೆಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದರು ವಿಡಿಯೋ ವಚುವಲ್ ಮೂಲಕ ಇಲಾಖೆಯ ಉಪನಿರ್ದೇಶಕ ರಾಜಕುಮಾರ ಅವರು ಇದ್ದರು.
ಇದೇ ವೇಳೆ ಹಿರಿಯ ಸಿಬ್ಬಂದಿ ಹಾಗೂ ಇಲಾಖೆಯಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ ಸಿಬ್ಬಂದಿಗೆ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಹೇಶ ಪೋತದಾರ, ಅಕ್ಷರ ದಾಸೋಹ ಅಧಿಕಾರಿ ಈರಣ್ಣ ಕೋಸಗಿ, ಅಗ್ನಿಶಾಮಕದಳದ ಅಧಿಕಾರಿ ಖಾಸಿಂ ಸಾಬ್, ಅಧಿಕಾರಿಗಳಾದ ವಿಜಯಲಕ್ಷಿö್ಮ, ರುಕ್ಮಿಣಿಬಾಯಿ, ಮಂಜುಳಾ, ರಾಘವೇಂದ್ರ, ಮಹಾಲಿಂಗಪ್ಪ, ಶರಣಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.