ರಾಷ್ಟ್ರಪ್ರಶಸ್ತಿ ವಿಜೇತ ನಟ ಮತ್ತು ನಿರ್ದೇಶಕ ರಿಷಬ್ ಶೆಟ್ಟಿ ಹಾಗೂ ಖ್ಯಾತ ನಿರ್ದೇಶಕ ಸಂದೀಪ್ ಸಿಂಗ್ ಜೊತೆಯಾಗಿ ಭಾರತ ದೇಶ ಕಂಡ ಮಹಾವೀರ ರಾಜ ಛತ್ರಪತಿ ಶಿವಾಜಿ ಕತೆಯನ್ನೊಳಗೊಂಡ ಮ್ಯಾಗ್ನಸ್ ಓಪನ್ ಆಕ್ಷನ್ ಡ್ರಾಮಾ “ದಿ ಪ್ರೈಡ್ ಆಫ್ ಭಾರತ್: ಛತ್ರಪತಿ ಶಿವಾಜಿ ಮಹಾರಾಜ್” ಸಿನಿಮಾ ಮಾಡುತ್ತಿದ್ದಾರೆ.
ಕಾಂತಾರ ಸಿನಿಮಾದಿಂದ ರಾಷ್ಟ್ರಾದ್ಯಂತ ಜನಪ್ರೀತಿ ಗಳಿಸಿರುವ ರಿಷಬ್ ಶೆಟ್ಟಿ ಅವರು ಮೂರು ಮೆಗಾ ಸಿನಿಮಾಗಳಲ್ಲಿ ನಟಿಸುತ್ತಿರುವ ಏಕೈಕ ನಟ ಎಂಬ ಖ್ಯಾತಿಗೆ ಒಳಗಾಗಿದ್ದಾರೆ. 2025ರಲ್ಲಿ ಅವರ ನಟನೆ ನಿರ್ದೇಶನದ ಕಾಂತಾರ ಅಧ್ಯಾಯ 1, 2026ರಲ್ಲಿ ಅವರು ನಟಿಸುತ್ತಿರುವ ಜೈ ಹನುಮಾನ್ ಮತ್ತು 2027ರಲ್ಲಿ ದ ಪ್ರೈಡ್ ಆಫ್ ಭಾರತ್: ಛತ್ರಪತಿ ಶಿವಾಜಿ ಮಹಾರಾಜ್ ಬಿಡುಗಡೆಯಾಗಲಿದೆ. ಲಾರ್ಜರ್ ದ್ಯಾನ್ ಲೈಫ್ ಕತೆಗಳನ್ನು ಹೇಳುವ ಈ ಆಕರ್ಷಕ ಸಿನಿಮಾಗಳ ಮೂಲಕ ರಿಷಬ್ ಶೆಟ್ಟಿ ಭಾರತೀಯ ಸಿನಿಮಾದ ಮಹತ್ವದ ಶಕ್ತಿಯಾಗಿ ಬೆಳೆಯಲಿದ್ದಾರೆ.
ಇನ್ನು ಸಂದೀಪ್ ಸಿಂಗಿ ವಿಚಾರಕ್ಕೆ ಬಂದರೆ ಅವರು ಮೇರಿ ಕೋಮ್, ಸರಬ್ಜಿತ್, ವೀರ್ ಸಾವರ್ಕರ್, ರಾಮಲೀಲಾ, ಸರಬ್ಜಿತ್, ಬಾಜಿರಾವ್ ಮಸ್ತಾನಿ ಸಿನಿಮಾಗಳ ಹಿಂದಿನ ಶಕ್ತಿಯಾಗಿ ಕೆಲಸ ಮಾಡಿದ್ದಾರೆ. ಕಿರುಚಿತ್ರ ಸಫೇದ್ ಅನ್ನು ನಿರ್ದೇಶಿಸಿದ್ದಾರೆ. ಅಂಥಾ ಪ್ರತಿಭಾವಂತ ಇದೀಗ ಈ ಐತಿಹಾಸಿಕ ಮಹಾಕಾವ್ಯವನ್ನು ನಿರ್ದೇಶಿಸಲಿದ್ದಾರೆ. ರಿಷಬ್ ಶೆಟ್ಟಿ ಅವರು ಹಲವು ಪೀಳಿಗೆಗಳಿಗೆ ಸ್ಫೂರ್ತಿಯಾದ ಮಹಾಯೋಧ ಮಹಾರಾಜನ ಪಾತ್ರಕ್ಕೆ ಜೀವ ತುಂಬಲಿದ್ದಾರೆ.
ಈ ಸಿನಿಮಾ ಅದ್ಭುತ ವಿಎಫ್ಎಕ್ಸ್ ದೃಶ್ಯಾವಳಿಗಳನ್ನು ಹೊಂದಿರಲಿದ್ದು, ಆ ಕಾಲದ ಅತ್ಯಪೂರ್ವ ದೃಶ್ಯಗಳನ್ನು ತೆರೆಮೇಲೆ ಕಾಣಿಸಲಿದೆ. ಪ್ರಪಂಚದಾದ್ಯಂತದ ಇರುವ ಉನ್ನತ ದರ್ಜೆಯ ತಂತ್ರಜ್ಞರು ಈ ಸಿನಿಮಾಗೆ ಕೆಲಸ ಮಾಡಲಿದ್ದಾರೆ. ಎಲ್ಲಾ ಶ್ರೇಷ್ಠ ಸಿನಿಮಾ ವ್ಯಾಮೋಹಿಗಳು ಸೇರಿಕೊಂಡು ಮೊಘಲ್ ಆಕ್ರಮಣಕಾರರನ್ನು ಮಂಡಿ ಮೇಲೆ ಕೂರಿಸಿದ, ಇತಿಹಾಸವನ್ನು ಮರುರೂಪಿಸಿದ ಭಾರತದ ಶ್ರೇಷ್ಠ ರಾಜನ ಕತೆಯನ್ನು ಹೇಳಲಿದ್ದಾರೆ.
ಈ ಕುರಿತು ಮಾತನಾಡಿದ ಸಂದೀಪ್ ಸಿಂಗ್ ಅವರು, “ಛತ್ರಪತಿ ಶಿವಾಜಿ ಪಾತ್ರಕ್ಕೆ ನನ್ನ ಮೊದಲ ಮತ್ತು ಏಕೈಕ ಆಯ್ಕೆ ರಿಷಬ್ ಶೆಟ್ಟಿ ಆಗಿದ್ದರು. ಅವರು ನಿಛತ್ರಪತಿ ಶಿವಾಜಿ ಮಹಾರಾಜರ ಶಕ್ತಿ, ಚೈತನ್ಯ ಮತ್ತು ಶೌರ್ಯವನ್ನು ತೆರೆಯ ಮೇಲೆ ಸಾಕಾರಗೊಳಿಸಲಿದ್ದಾರೆ. ಈ ಸಿನಿಮಾ ನನ್ನ ಹಲವು ವರ್ಷಗಳ ಕನಸು. ಇದೀಗ ಈ ಕತೆಯನ್ನು ತೆರೆಯ ಮೇಲೆ ತರುತ್ತಿರುವುದು ನನಗೆ ದೊರೆತಿರುವ ಗೌರವ ಎಂದು ಭಾವಿಸುತ್ತೇನೆ. ದೊಡ್ಡ ಮಟ್ಟದಲ್ಲಿ, ಹಿಂದೆಂದೂ ಕಂಡಿರದ ರೀತಿಯಲ್ಲಿ, ಅತ್ಯಪೂರ್ವ ಆಕ್ಷನ್ ಕೊರಿಯೋಗ್ರಫಿಯೊಂದಿಗೆ ಈ ಸಿನಿಮಾವನ್ನು ತೆರೆ ಮೇಲೆ ತರಲಾಗುವುದು. ಈ ಸಿನಿಮಾ ಭಾರತೀಯ ಚಿತ್ರರಂಗವನ್ನು ನಿಜಕ್ಕೂ ಜಾಗತಿಕ ಮಟ್ಟಕ್ಕೆ ತಲುಪಿಸಲು ನೆರವಾಗುವಂತೆ ಮೂಡಿಬರಲಿದೆ” ಎಂದು ಹೇಳಿದರು.
2027ರ ಜನವರಿ 21 ರಂದು ಬಹುಭಾಷೆಯಲ್ಲಿ “ದಿ ಪ್ರೈಡ್ ಆಫ್ ಭಾರತ್: ಛತ್ರಪತಿ ಶಿವಾಜಿ ಮಹಾರಾಜ್” ಸಿನಿಮಾ ಜಾಗತಿಕವಾಗಿ ಬಿಡುಗಡೆಯಾಗಲಿದೆ. ಆ ಮೂಲಕ ಹೊಸ ಇತಿಹಾಸ ಬರೆಯಲಿದೆ.